ಸಿನಿಮಾ ಪ್ರೇಮಿಗಳು ಈಗ ಎರಡು ಭಾಗವಾಗಿದ್ದಾರೆ. "ಹಣದ ವಿಚಾರ ಏನೇ ಇದ್ದರೂ, ಪ್ರಜ್ವಲ್ ಧ್ವನಿ ಇಲ್ಲದ 'ಕರಾವಳಿ' ಕರಾವಳಿಯಂತೆಯೇ ಇರುವುದಿಲ್ಲ" ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಕರಾವಳಿ' ಚಿತ್ರದ ಈ ವಿವಾದ ಈಗ ಹಾದಿ ಹಿಡಿದಿದೆ..
ಸ್ಯಾಂಡಲ್‌ವುಡ್‌ನಲ್ಲಿ 'ಕರಾವಳಿ' ಕಿಚ್ಚು: ಪ್ರಜ್ವಲ್ ಪರ ಕ್ರೇಜಿ ಕ್ವೀನ್! ಅಸಲಿ ಮ್ಯಾಟರ್ ಏನು?!
ಬೆಂಗಳೂರು: ಗಾಂಧಿನಗರದ ಗಲ್ಲಿಗಳಲ್ಲಿ ಈಗ ಒಂದೇ ಸುದ್ದಿ, ಅದು 'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯದ 'ಕರಾವಳಿ' ಸಿನಿಮಾದ್ದು! ಆದರೆ ಇದು ಸಿನಿಮಾದ ರಿಲೀಸ್ ಡೇಟ್ ಬಗ್ಗೆಯಲ್ಲ, ತೆರೆಯ ಹಿಂದೆ ನಡೆಯುತ್ತಿರುವ ಭೀಕರ 'ಡಬ್ಬಿಂಗ್ ದಂಗಲ್' ಬಗ್ಗೆ. ಈ ವಿವಾದಕ್ಕೆ ಈಗ ಸ್ಯಾಂಡಲ್‌ವುಡ್‌ನ 'ಕ್ರೇಜಿ ಕ್ವೀನ್' ರಕ್ಷಿತಾ ಪ್ರೇಮ್ (Rakshita Prem) ಎಂಟ್ರಿ ಕೊಟ್ಟಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ!
ಅಸಲಿಗೆ ಸಿನಿಮಾತಂಡದ ಕಿರಿಕ್‌ಗೆ ಕಾರಣ ಆಗಿದ್ದೇನು?
ಯಾವುದೇ ಒಬ್ಬ ನಟನಿಗೆ ತನ್ನ ಧ್ವನಿಯೇ ದೊಡ್ಡ ಆಸ್ತಿ. ಪ್ರಜ್ವಲ್ ದೇವರಾಜ್ ಅವರ ಖಡಕ್ ಧ್ವನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ 'ಕರಾವಳಿ' ಚಿತ್ರದ ಸಂಭಾವನೆ (Remuneration) ವಿಚಾರದಲ್ಲಿ ನಿರ್ಮಾಣ ಸಂಸ್ಥೆ ಮತ್ತು ನಟನ ನಡುವೆ ಕಿರಿಕ್ ಶುರುವಾಗಿದೆ ಎನ್ನಲಾಗಿದೆ. ಈ ಹಣದ ಜಗಳ ಎಷ್ಟು ತಾರಕಕ್ಕೇರಿದೆ ಎಂದರೆ, ಪ್ರಜ್ವಲ್ ಅವರ ಧ್ವನಿಯನ್ನೇ ಸಿನಿಮಾದಿಂದ ಕೈಬಿಟ್ಟು ಬೇರೆಯವರಿಂದ ಡಬ್ಬಿಂಗ್ ಮಾಡಿಸಲು ಚಿತ್ರತಂಡ ಮುಂದಾಗಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಈ ಸಂಗತಿಯೀಗ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡದ ಮಧ್ಯೆ ಮಹಾ ಕಾಳಗಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ನಡೆಯಲಿದೆ ಎಂಬುದನ್ನೂ ಸದ್ಯಕ್ಕೆ ಊಹಿಸಲೂ ಅಸಾಧ್ಯ ಎನ್ನುವಂತಾಗಿದೆ.
ರಕ್ಷಿತಾ ಪ್ರೇಮ್ 'ಪವರ್‌ಫುಲ್' ಬ್ಯಾಟಿಂಗ್!
ಈ ಕರಾವಳಿ ಸಿನಿಮಾ ಹಾಗೂ ವಿವಾದ ಬಗ್ಗೆ ಸ್ಯಾಂಡಲ್‌ವುಡ್‌ನ ಲೇಡಿ ಬಾಸ್ ರಕ್ಷಿತಾ ಪ್ರೇಮ್ ಈಗ ಧ್ವನಿ ಎತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗುಡುಗಿರುವ ಅವರು ಪ್ರಜ್ವಲ್ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ನಿರ್ದೇಶಕಿ ಸುನಯನಾ ಸುರೇಶ್ ಅವರ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಕ್ಷಿತಾ, ಚಿತ್ರರಂಗದ ಇಬ್ಬಗೆಯ ನೀತಿಯನ್ನು ಪ್ರಶ್ನಿಸಿದ್ದಾರೆ. ರಕ್ಷಿತಾ ಪ್ರೇಮ್ ಎಂಟ್ರಿ ಹಾಗೂ ಪೋಸ್ಟ್ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.
ರಕ್ಷಿತಾ ಅವರ ವಾದ ಇಷ್ಟೇ— "ಒಬ್ಬ ನಟನನ್ನು ಕೇವಲ ಅವರ ಮುಖದಿಂದ ಮಾತ್ರವಲ್ಲ, ಅವರ ಧ್ವನಿಯಿಂದಲೂ ಗುರುತಿಸಲಾಗುತ್ತದೆ. ಪಾತ್ರಕ್ಕಾಗಿ ಶ್ರಮ ಹಾಕಿದ ನಟನಿಂದ ಅವನ ಧ್ವನಿಯ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟು ಸರಿ?" ಎಂದು ಅವರು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಾಯಕಿಯರ ಅಥವಾ ಪೋಷಕ ನಟರ ಧ್ವನಿ ಬದಲಾದಾಗ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಒಬ್ಬ ಸ್ಟಾರ್ ನಟನ ವಿಷಯ ಬಂದಾಗ ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರ ಸಿಗಲೇಬೇಕಿದೆ ಎಂಬರ್ಥದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.
ಗೆಳೆಯನ ಬೆನ್ನಿಗೆ ನಿಂತ ಪನ್ನಗಾಭರಣ:
ಇತ್ತ ಪ್ರಜ್ವಲ್ ಅವರ ಆಪ್ತ ಗೆಳೆಯ, ನಿರ್ದೇಶಕ ಪನ್ನಗಾಭರಣ ಸಹ ಪ್ರಜ್ವಲ್ ದೇವರಾಜ್ ಪರವಾಗಿ ನಿಂತಿದ್ದಾರೆ. "ಸಂಭಾವನೆ ಎನ್ನುವುದು ವೃತ್ತಿಪರ ವಿಚಾರ, ಆದರೆ ನಟನ ಪ್ರತಿಭೆಯ ಮೇಲೆ ಈ ರೀತಿ ಗದಾಪ್ರಹಾರ ಮಾಡುವುದು ಸರಿಯಲ್ಲ" ಎಂದು ಅವರು ಕೂಡ ಪ್ರಜ್ವಲ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಸಿನಿಮಾರಂಗದಲ್ಲಿ ಈ ಚಿತ್ರದ ವಿವಾದದ ಮೂಲಕ ಹೊಸಹೊಸ ಚರ್ಚೆಗೆ ದಾರಿ ಆಗುತ್ತಿದೆ.
ಫ್ಯಾನ್ಸ್ ರಿಯಾಕ್ಷನ್ ಹೇಗಿದೆ?
ಸಿನಿಮಾ ಪ್ರೇಮಿಗಳು ಈಗ ಎರಡು ಭಾಗವಾಗಿದ್ದಾರೆ. "ಹಣದ ವಿಚಾರ ಏನೇ ಇದ್ದರೂ, ಪ್ರಜ್ವಲ್ ಧ್ವನಿ ಇಲ್ಲದ 'ಕರಾವಳಿ' ಕರಾವಳಿಯಂತೆಯೇ ಇರುವುದಿಲ್ಲ" ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ.
ಒಟ್ಟಿನಲ್ಲಿ, 'ಕರಾವಳಿ' ಚಿತ್ರದ ಈ ವಿವಾದ ಈಗ ಕೇವಲ ಒಂದು ಸಿನಿಮಾ ಡಬ್ಬಿಂಗ್ ವಿಚಾರವಾಗಿ ಉಳಿದಿಲ್ಲ. ಇದು ಕಲಾವಿದನ ಗೌರವ ಮತ್ತು ಹಣದ ನಡುವಿನ ದೊಡ್ಡ ಸಮರವಾಗಿ ಮಾರ್ಪಟ್ಟಿದೆ. ಇದೀಗ ಕನ್ನಡದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಎಂಟ್ರಿಯಿಂದ ಈ ವಿವಾದಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಈ ವಿವಾದ ಯಾವ ರೀತಿಯಲ್ಲಿ ಕೊನೆ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.


