ಇಂದು ಸಿನಿಮಾ ಆರಂಭಕ್ಕೂ ಮುನ್ನವೇ ಟೈಟಲ್ ರಿವೀಲ್, ಫಸ್ಟ್ ಲುಕ್ ಮತ್ತು ಪೋಸ್ಟರ್‌ಗಳ ಮೂಲಕ ಭಾರೀ ಪ್ರಚಾರ ನಡೆಯುತ್ತದೆ. ಆದರೆ 1986ರಲ್ಲಿ ತೆರೆಕಂಡ ಶಿವಣ್ಣ ಅಭಿನಯದ ಈ ಸಿನಿಮಾ ಚಿತ್ರೀಕರಣದಲ್ಲಿ ಅದಕ್ಕೆ ಹೆಸರೇ ಅಂತಿಮವಾಗಿರಲಿಲ್ಲ. ಈ ಚಿತ್ರ ಬಳಿಕ ತೆರೆಕಂಡು 38 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು.

ಬೆಂಗಳೂರು: ಇಂದಿನ ಸಿನಿಮಾ ಜಗತ್ತಿನಲ್ಲಿ ಚಿತ್ರವೊಂದು ಸೆಟ್ಟೇರುವ ಮುನ್ನವೇ ಟೈಟಲ್ ಅನೌನ್ಸ್‌ಮೆಂಟ್, ಫಸ್ಟ್ ಲುಕ್, ಮೋಷನ್ ಪೋಸ್ಟರ್ ಮತ್ತು ಹ್ಯಾಶ್‌ಟ್ಯಾಗ್ ಕ್ಯಾಂಪೇನ್ ಗಳ ಅಬ್ಬರ ಜೋರಾಗಿರುತ್ತದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದಕ್ಕಿಂತ, ಚಿತ್ರದ ಶೀರ್ಷಿಕೆ ಏನಿರಬಹುದು ಎಂಬುದೇ ದೊಡ್ಡ ಸುದ್ದಿಯಾಗುತ್ತದೆ. ಆದರೆ 1986ರಲ್ಲಿ ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಸಿನಿಮಾವೊಂದು, ಯಾವುದೇ ಹೆಸರಿಲ್ಲದೆಯೇ ಚಿತ್ರೀಕರಣ ಆರಂಭಿಸಿ ದಾಖಲೆ ಬರೆದಿತ್ತು ಎಂಬುದು ನಿಮಗೆ ಗೊತ್ತೇ? ಹೌದು, ಅದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ನಟಿ ಸುಧಾರಾಣಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಎವರ್‌ಗ್ರೀನ್ ಬ್ಲಾಕ್‌ಬಸ್ಟರ್ ಸಿನಿಮಾ ‘ಆನಂದ್’!

ಎರಡು ತಿಂಗಳಾದರೂ ಸಿಕ್ಕಿರಲಿಲ್ಲ ಚಿತ್ರಕ್ಕೆ ಹೆಸರು!

1986ರ ಫೆಬ್ರವರಿ 19ರಂದು ಈ ಚಿತ್ರದ ಮುಹೂರ್ತ ನೆರವೇರಿ, ಚಿತ್ರೀಕರಣ ಭರದಿಂದ ಸಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಶೂಟಿಂಗ್ ಶುರುವಾಗಿ ಬರೋಬ್ಬರಿ ಎರಡು ತಿಂಗಳು ಕಳೆದರೂ ಚಿತ್ರತಂಡಕ್ಕೆ ಸಿನಿಮಾಕ್ಕೆ ಸೂಕ್ತವಾದ ಒಂದು ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಹಾಗಂತ ಚಿತ್ರೀಕರಣವನ್ನು ನಿಲ್ಲಿಸಲಿಲ್ಲ ಅಥವಾ ಹೆಸರು ಹುಡುಕುವ ನೆಪದಲ್ಲಿ ತಿಂಗಳುಗಟ್ಟಲೆ ಸಭೆಗಳನ್ನು ನಡೆಸಲಿಲ್ಲ. ‘ಟೈಟಲ್ ರಿವೀಲ್ ಸದ್ಯದಲ್ಲೇ’ ಎಂಬ ಪೋಸ್ಟರ್‌ಗಳನ್ನೂ ಅಂಟಿಸಲಿಲ್ಲ. ಚಿತ್ರತಂಡ ಸದ್ದಿಲ್ಲದೆ ತನ್ನ ಕೆಲಸದಲ್ಲಿ ಮಗ್ನವಾಗಿತ್ತು.

ಪತ್ರಿಕೆಗಳಲ್ಲಿ ‘ಪ್ರೊಡಕ್ಷನ್ ನಂ. 4’ ಎಂದೇ ಪ್ರಕಟವಾಗುತ್ತಿದ್ದ ಜಾಹೀರಾತು!

ಇಂದು ನಾವು ಸ್ಟೈಲಾಗಿ ಅನ್‌ಟೈಟಲ್ಡ್ ಪ್ರಾಜೆಕ್ಟ್ ಎಂದು ಕರೆಯುವ ಪರಿಕಲ್ಪನೆಗೆ ಅಂದೇ ನಾಂದಿ ಹಾಡಲಾಗಿತ್ತು. ಪತ್ರಿಕೆಗಳಲ್ಲಿ ಈ ಚಿತ್ರದ ಫೋಟೋಗಳು ಇನ್ನೂ ಹೆಸರಿಡದ ಚಿತ್ರ ಎಂಬ ಶೀರ್ಷಿಕೆಯಡಿ ಪ್ರಕಟವಾಗುತ್ತಿದ್ದವು. ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರು ತಮ್ಮ ‘ದಾಕ್ಷಾಯಿಣಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಿಸಿದ್ದರು. ಇದು ಅವರ ಬ್ಯಾನರ್‌ನ ನಾಲ್ಕನೇ ಸಿನಿಮಾವಾಗಿದ್ದರಿಂದ, ಶೀರ್ಷಿಕೆ ಸಿಗುವವರೆಗೂ ಚಿತ್ರವನ್ನು ಸರಳವಾಗಿ ‘ಪ್ರೊಡಕ್ಷನ್ ನಂ. 4’ ಎಂದೇ ಗುರುತಿಸಲಾಗುತ್ತಿತ್ತು. 1986ರ ಯುಗಾದಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ‘ಕನ್ನಡಪ್ರಭ’ ಪತ್ರಿಕೆಗೆ ನೀಡಲಾಗಿದ್ದ ಜಾಹೀರಾತಿನಲ್ಲೂ ಯಾವುದೇ ಆಡಂಬರವಿಲ್ಲದೆ ಇದು ನಮ್ಮ ಪ್ರೊಡಕ್ಷನ್ ನಂ. 4 ಎಂದೇ ಪರಿಚಯಿಸಲಾಗಿತ್ತು.

ಹೆಸರಿಲ್ಲದೆ ಶುರುವಾಗಿ ಇತಿಹಾಸದಲ್ಲಿ ಅಜರಾಮರವಾದ ‘ಆನಂದ್’

ಮುಂದೆ ಈ ‘ಪ್ರೊಡಕ್ಷನ್ ನಂ. 4’ ಚಿತ್ರಕ್ಕೆ ‘ಆನಂದ್’ ಎಂಬ ಸುಂದರ ಶೀರ್ಷಿಕೆ ಇಡಲಾಯಿತು. ವಿಪರ್ಯಾಸವೆಂದರೆ, ಶೀರ್ಷಿಕೆ ಹುಡುಕಲು ಎರಡು ತಿಂಗಳು ಸಮಯ ತೆಗೆದುಕೊಂಡ ಈ ಸಿನಿಮಾ, ತನ್ನ ಹೆಸರನ್ನು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಸಿಕೊಂಡಿತು. 1986ರ ಜೂನ್ 19ರಂದು ತೆರೆಕಂಡ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬರೋಬ್ಬರಿ 38 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಭರ್ಜರಿ ಜಯಭೇರಿ ಬಾರಿಸಿತು.

ದಿಗ್ಗಜರ ಸಂಗಮವಿದ್ದ ಸಿನಿಮಾ

‘ಆನಂದ್’ ಚಿತ್ರದ ಅಭೂತಪೂರ್ವ ಯಶಸ್ಸಿನ ಹಿಂದೆ ಸ್ಯಾಂಡಲ್‌ವುಡ್‌ನ ದಿಗ್ಗಜರ ಶ್ರಮವಿತ್ತು. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿರ್ದೇಶನ ಮತ್ತು ಕಥೆ ಚಿತ್ರಕಿತ್ತು. ದಾಕ್ಷಾಯಿಣಿ ಕಂಬೈನ್ಸ್ ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ. ಚಿ. ಉದಯಶಂಕರ್ ಅವರ ಪೆನ್ನಿನಿಂದ ಮೂಡಿದ ಸಂಭಾಷಣೆ, ಚಿತ್ರಕಥೆ ಮತ್ತು ಸಾಹಿತ್ಯ ಜನಮನ ಗೆದ್ದಿದ್ದವು. ಶಂಕರ್-ಗಣೇಶ್ ಜೋಡಿಯ ಸುಮಧುರ ಸಂಗೀತ ಹಾಗೂ ಬಿ.ಸಿ. ಗೌರಿಶಂಕರ್ ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕೆ ಜೀವ ತುಂಬಿತ್ತು.

ಇಂದಿನ ಸಿನಿಮಾ ಪ್ರಚಾರಕ್ಕೆ ಒಂದು ಪಾಠ

ಕಾಲ ಬದಲಾಗಿದೆ, ಸಿನಿಮಾ ಪ್ರಚಾರದ ವೈಖರಿಯೂ ಬದಲಾಗಿದೆ. ಇಂದು ಸಿನಿಮಾ ಘೋಷಣೆಯಾದ ದಿನದಿಂದಲೇ ಪೋಸ್ಟರ್, ಟೀಸರ್, ಟ್ರೈಲರ್ ಅಪ್‌ಡೇಟ್‌ಗಳ ಮಳೆ ಸುರಿಸಲಾಗುತ್ತದೆ. ಆದರೆ ಅಂದಿನ ಕಾಲದಲ್ಲಿ ಪ್ರಚಾರಕ್ಕಿಂತ ಸಿನಿಮಾದ ಕಥೆ ಮತ್ತು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ನೂರು ಪೋಸ್ಟರ್, ಐವತ್ತು ಹ್ಯಾಶ್‌ಟ್ಯಾಗ್‌ಗಳ ನಡುವೆ 1986ರ ಈ ಹಳೆಯ ಜಾಹೀರಾತು ಒಂದು ದೊಡ್ಡ ಸತ್ಯವನ್ನು ನೆನಪಿಸುತ್ತದೆ. ಸಿನಿಮಾ ಗೆಲ್ಲಲು ದೊಡ್ಡ ಟೈಟಲ್ ಬೇಕಾಗಿಲ್ಲ, ಗಟ್ಟಿಯಾದ ಕಂಟೆಂಟ್ ಇದ್ದರೆ ಸಾಕು!