ಆಮಿರ್ ಖಾನ್ ಮೂರನೇ ಮದುವೆ ಆಗಿದ್ದಾರೆ. ಈ ಮದುವೆಗೆ ಅವರ ಇಬ್ಬರು ಮಾಜಿ ಪತ್ನಿಯರು ಗೈರಾಗಿರೋದು ದೊಡ್ಡ ಚರ್ಚೆ ಆಗಿತ್ತು. ಇದೀಗ ಅವರ ಆಪ್ತ ಕಿರಣ್ ರಾವ್ ಮತ್ತು ರೀನಾ ಇಬ್ಬರು ಯಾಕೆ ಮದುವೆಗೆ ಬಂದಿಲ್ಲ ಎಂಬ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು: ಬಾಲಿವುಡ್ ಸ್ಟಾರ್ ಆಮಿರ್ ಖಾನ್ (Aamir Khan) ದೀರ್ಘಕಾಲದ ಗೆಳತಿ ಗೌರಿ ಸ್ಪ್ರಾಟ್ (Gauri Spratt) ಜೊತೆ ಜುಲೈ 5 ರಂದು ವಿವಾಹವಾಗಿದ್ದಾರೆ. ಮುಂಬೈನ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ (Registered Marriage).
ಈ ಮದುವೆಗೆ ಆಮಿರ್ ಖಾನ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ (Reena Dutta) ಮತ್ತು ಕಿರಣ್ ರಾವ್ (Kiran Rao) ಗೈರಾಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆಮಿರ್ ಖಾನ್ ಆಪ್ತ ನಟ ಅಮಿನ್ ಹಾಜಿ (Amin Hajee) ಅವರು ಮದುವೆಗೆ ಯಾಕೆ ಬಂದಿಲ್ಲ ಅನ್ನೋ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿನ್ ಹಾಜಿ.. ಮದುವೆ ಸಮಯದಲ್ಲಿ ಕಿರಣ್ ರಾವ್ ಯುಕೆ (UK) ಯಲ್ಲಿದ್ದರು. ಅವರ ಮಗ ಆಜಾದ್ ಮದುವೆಗೆ ಬಂದಿದ್ದ ಎಂದಿದ್ದಾರೆ. ಇನ್ನು ಮೊದಲ ಪತ್ನಿ ರೀನಾ ದತ್ತಾ ಗೈರು ಹಾಜರಿಯ ಬಗ್ಗೆ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ದೂರವಿರುವುದು ಮತ್ತು ಅವರಿಗೆ ಅಗತ್ಯವಿರುವ ಸ್ಪೇಸ್ (Space) ನೀಡುವುದು ಸಹ ಪ್ರೀತಿ ಮತ್ತು ಗೌರವದ ಸಂಕೇತ. ಇಂತಹ ಪ್ರಮುಖ ದಿನದಂದು ಯಾರನ್ನೂ ಮುಜುಗರಕ್ಕೆ ಈಡುಮಾಡಲು ಆಮಿರ್ ಬಯಸುವುದಿಲ್ಲ. ಆಮಿರ್ ಖಾನ್ ಇಂದಿಗೂ ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಾನಿ ಫೌಂಡೇಶನ್ ಮೂಲಕ ಇಂದಿಗೂ ಅವರೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರಳ ಮದುವೆ
ಮದುವೆಯ ಸಂಭ್ರಮದ ಬಗ್ಗೆ ಹಂಚಿಕೊಂಡ ಅಮಿನ್, ಮದುವೆಯಲ್ಲಿ ಯಾವುದೇ ಸಾಂಪ್ರದಾಯಿಕ ಆಚರಣೆಗಳು, ಸಂಗೀತ ಅಥವಾ ಅದ್ದೂರಿ ಕಾರ್ಯಕ್ರಮಗಳು ಇರಲಿಲ್ಲ. ಆಮಿರ್ ಮನೆಯಲ್ಲೇ ಸರಳವಾಗಿ ನಡೆದಿತ್ತು. ಎರಡೂ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಒಟ್ಟಿಗೆ ಕುಳಿತು ಮಾತನಾಡಿದೆವು, ನಕ್ಕೆವು ಮತ್ತು ಸಮಯ ಕಳೆದೆವು. ಗೌರಿ ತಂದೆ ರಾಬರ್ಟ್ ಬಾಬ್ ಸೇರಿದಂತೆ ಅವರ ಕುಟುಂಬದವರು ಮದುವೆಯಲ್ಲಿ ಭಾಗವಹಿಸಿದ್ದರು. ಗೌರಿ ಕುಟುಂಬದವರು ಅತ್ಯಂತ ಸರಳ ಮತ್ತು ಪ್ರೀತಿಯುಳ್ಳವರು. ಅವರು ಆಮಿರ್ ಅವರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಅಮಿನ್ ಹೇಳಿದ್ದಾರೆ.
ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್
ಆಮಿರ್ ಖಾನ್ ಕಳೆದ ವರ್ಷ ತಮ್ಮ 60 ನೇ ಹುಟ್ಟುಹಬ್ಬದಂದು ಗೌರಿ ಸ್ಪ್ರಾಟ್ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು. ಕಳೆದ 18 ತಿಂಗಳುಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆಮಿರ್ ಖಾನ್ ಅವರಿಗೆ ಇದು ಮೂರನೇ ಮದುವೆಯಾಗಿದೆ. 1986ರಲ್ಲಿ ರೀನಾ ದತ್ತಾ ಅವರನ್ನು ಮದುವೆಯಾಗಿದ್ದ ಆಮಿರ್ 2002ರಲ್ಲಿ ವಿಚ್ಛೇದನ ಪಡೆದಿದ್ದರು (ಇವರಿಗೆ ಜುನೈದ್ ಮತ್ತು ಇರಾ ಎಂಬ ಮಕ್ಕಳಿದ್ದಾರೆ). ನಂತರ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಬೇರೆಯಾಗಿದ್ದರು (ಇವರಿಗೆ ಆಜಾದ್ ಎಂಬ ಮಗನಿದ್ದಾನೆ). ಗೌರಿ ಸ್ಪ್ರಾಟ್ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಅವರಿಗೆ ಹಿಂದಿನ ಮದುವೆಯಿಂದ ಕ್ವಿನ್ (5) ಎಂಬ ಮಗನಿದ್ದಾನೆ.


