ತಾಯಂದಿರ ದಿನದಂದು ಕನ್ನಡ ಚಿತ್ರರಂಗದ ತಾಯಿ-ಮಗಳು ಜೋಡಿಗಳನ್ನು ಸ್ಮರಿಸಲಾಗಿದೆ. ಮಾಲಾಶ್ರೀ-ಆರಾಧನಾ, ಶ್ರುತಿ-ಗೌರಿ, ಸುಧಾರಾಣಿ, ರಾಧಿಕಾ ಪಂಡಿತ್, ಅದಿತಿ ಪ್ರಭುದೇವ ಮುಂತಾದವರು ಯಶಸ್ವಿ ನಟಿಯರಾಗಿ, ತಾಯ್ತನದಲ್ಲೂ ಮಾದರಿಯಾಗಿದ್ದಾರೆ. ಮಾಲಾಶ್ರೀ ಕಷ್ಟದಲ್ಲೂ ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾರೆ.
ಇಂದು, 11 ಮೇ 2025 ರಂದು ವಿಶ್ವ ತಾಯಂದಿರ ದಿನ (Mothers Day). ಜಗತ್ತಿನಲ್ಲಿ ತಾಯಿಯ ಸ್ಥಾನ ವಿಶಿಷ್ಠ ಹಾಗೂ ವಿಶೇಷ ಎಂಬ ಪ್ರಜ್ಞೆ ಜಗತ್ತಿನ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಇದೆ. ಇಂದು ಎಲ್ಲಾ ಕಡೆ ತಾಯಂದಿರ ದಿನವನ್ನು ಆಚರಿಸುತ್ತಿದ್ದಾರೆ. ಜನಸಾಮಾನ್ಯರು, ಸಿನಿಮಾ ತಾರೆಯರು ಹಾಗೂ ಎಲ್ಲಾ ಕ್ಷೇತ್ರಗಳ ಪ್ರತಿಭಾನ್ವಿತರು ಎಂಬ ಯಾವುದೇ ಬೇಧ-ಭಾವ ಇಲ್ಲದೇ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಅದೇ ರೀತಿ ಕನ್ನಡದಲ್ಲಿ 'ಅಮ್ಮ-ಮಗಳು' ಸಿನಿಮಾ ತಾರೆಯರು ಇದ್ದಾರೆ. ಹಾಗಿದ್ದರೆ ಅವರು ಯಾರು? ಇಲ್ಲಿದೆ ನೋಡಿ ಸಣ್ಣ ಝಲಕ್..
ಮೊಟ್ಟಮೊದಲಿಗೆ, ಕನ್ನಡದ ಮೊಟ್ಟಮೊದಲ ಸೂಪರ್ ಸ್ಟಾರ್ ನಟಿ, 'ಕನಸಿನ ರಾಣಿ ಮಾಲಾಶ್ರೀ ಅವರಿಂದಲೇ ಪ್ರಾರಂಭಿಸಬಹುದು. ಮಾಲಾಶ್ರೀ ಹಾಗೂ ಆರಾಧನಾ ಇಬ್ಬರೂ ಸಿನಿಮಾ ತಾರೆಯರೇ ಆಗಿದ್ದಾರೆ. ಮಾಲಾಶ್ರೀ ಅವರ ಬಗ್ಗೆ ಹೇಳೋದಕ್ಕೇನೂ ಇಲ್ಲ. ಅವರನ್ನು ಇಡೀ ಕರ್ನಾಟಕ ನೋಡಿದೆ, ಆರಾಧಿಸಿದೆ. ಕನ್ನಡ ಚಿತ್ರರಂಗದಲ್ಲಿ 'ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಬರಲಿಕ್ಕಿಲ್ಲ' ಎಂಬಂತೆ ಮೆರೆದವರು ಮಾಲಾಶ್ರೀ. ಈಗ ಅವರ ಮಗಳು ಆರಾಧನಾ ಅವರು ಚಿತ್ರರಂಗಕ್ಕೆ ಬಂದಾಗಿದೆ. ಕನ್ನಡದಲ್ಲೇ ಮೊದಲು ಎಂಟ್ರಿ ಕೊಟ್ಟಿರುವ ಆರಾಧನಾ, ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಮಾಲಾಶ್ರೀ ಅವರ ಬಗ್ಗೆ ಹೇಳಲೇಬೇಕಾಗಿದ್ದು ಯಾಕೆಂದರೆ, ನಟಿ ಮಾಲಾಶ್ರೀ ಅವರು ನಟಿಯಾಗಿ ಮಿಂಚುತ್ತಿರುವಾಗಲೇ ಮದುವೆಯಾಗಿ ತಾಯ್ತನವನ್ನು ಕೂಡ ಸೂಕ್ತವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿದವರು. ಕೊರೋನಾ ಮಹಾಮಾರಿಯಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರೂ ತಮ್ಮ ಮಗಳು ಹಾಗೂ ಮಗನನ್ನು ಸಮರ್ಥ ರೀತಿಯಲ್ಲಿ ಜವಾಬ್ಧಾರಿಯಿಂದ ಪೋಷಿಸಿ, ಅವರಿಗೆ ಒಂದು ಸೂಕ್ತ ನೆಲೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ಕೂಡ ಪೋಷಕರ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಇಂದು, ವಿಶ್ವ ತಾಯಂದಿರ ದಿನದಂದು ಮಾಲಾಶ್ರೀ ಅವರನ್ನು ಸ್ಮರಿಸುವುದು ಸೂಕ್ತ ಎನ್ನಬಹುದು.
ಇನ್ನು ಶ್ರುತಿ ಹಾಗೂ ಮಗಳು ಗೌರಿ. ಶ್ರುತಿ ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಿಂಚು ಹರಿಸಿದ್ದಾರೆ. ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಸಿ, 'ಅಳುಮಂಜಿ' ಪಾತ್ರಕ್ಕೆ ಒಂದು ಕಾಲದಲ್ಲಿ ಬ್ರಾಂಡ್ ಕೂಡ ಆದವರು ನಟಿ ಶ್ರುತಿ. ಕೆಲವು ವರ್ಷಗಳ ಹಿಂದೆ ಬಿಗ್ ಬಾಸ್ ಗೆಲ್ಲುವ ಮೂಲಕವೂ ಸುದ್ದಿ ಮಾಡಿದ್ದಾರೆ. ಈಗ ಅವರ ಮಗಳು ಗೌರಿ ಸಹ ಸುದ್ದಿಯಲ್ಲಿ ಇದ್ದಾರೆ. ಸದ್ಯದಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲೂಬಹುದು. ಸದ್ಯಕ್ಕೆ ಆ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲದಿದ್ದರೂ ಶ್ರುತಿ ಮಗಳು ಗೌರಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರೆ ಆಶ್ಚರ್ಯವೇನೂ ಇಲ್ಲ.
ಇನ್ನು ಸುಧಾರಾಣಿ ಕೂಡ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ. ಈಗ ಅವರು ಕಿರುತೆರೆಯಲ್ಲಿ ತಮ್ಮ ನಟನೆಯನ್ನು ಮುಂದುವರಿಸಿದ್ದಾರೆ. ಹಾಗಂತ ಅವರು ಸಿನಿಮಾ ನಟನೆಯನ್ನು ಸಂಪೂರ್ಣವಾಗಿ ತೊರೆದಿದ್ದಾರೆ ಅಂತೇನೂ ಇಲ್ಲ. ಅವಕಾಶಗಳ ಕೊರತೆಯೋ ಅಥವಾ ಪಾತ್ರಗಳಲ್ಲಿ ನಟಿ ಸುಧಾರಾಣಿ ಅವರೇ ಚೂಸಿ ಆಗಿದ್ದಾರೋ, ಒಟ್ಟಿನಲ್ಲಿ ಇತ್ತೀಚೆಗೆ ನಟಿ ಸುಧಾರಾಣಿ ಸಿನಿಮಾಗಳಲ್ಲಿ ಈಗ ಅಷ್ಟೇನೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಕನ್ನಡ ಚಿತ್ರರಂಗದಲ್ಲಿ ಮಿಂಚಿ, ಬಳಿಕ ತಾಯಿಯಾಗಿ ತಮ್ಮ ಸ್ಥಾನವನ್ನು ಚೆನ್ನಾಗಿಯೇ ನಿಭಾಯಸಿದ್ದಾರೆ, ನಿಭಾಯಿಸುತ್ತಿದ್ದಾರೆ. ಸುಧಾರಾಣಿ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಉಳಿದಿದೆ, ಅದು ಅವರಿಷ್ಟ ಬಿಡಿ..!
ಇನ್ನು, ವಿಶ್ವ ತಾಯಂದಿರ ಈ ದಿನದಂದು ನಟಿಯರಾದ ರಾಧಿಕಾ ಪಂಡಿತ್ ಹಾಗು ಅದಿತಿ ಪ್ರಭುದೇವ ಅವರನ್ನು ಕೂಡ ನೆನಪಿಸಿಕೊಳ್ಳಬಹುದು. ಅವರು ಕೂಡ ಒಮ್ಮೆ ಚಿತ್ರರಂಗದಲ್ಲಿ ಮಿಂಚಿ ಈಗ ತಮ್ಮ ತಾಯಿ ಸ್ಥಾನವನ್ನು ಚೆನ್ನಾಗಿಯೆ ಅನುಭವಿಸುತ್ತ ಸಮಾಜಕ್ಕೆ ಮಾದರಿ ಆಗಿದ್ದಾರೆ ಎನ್ನಬಹುದು. ಈ ಪಟ್ಟಿಯಲ್ಲಿ ಇನ್ನೂ ಕೆಲವರನ್ನು ಸೇರಿಸಬಹುದು. ಹೇಳೋದಕ್ಕೆ ಸಾಕಷ್ಟಿದೆ, ಆದರೆ ಸಮಯದ ಅಭಾವವೂ ಇದೆ. ಅದೇನೇ ಇರಲಿ, ಸದ್ಯಕ್ಕೆ ವಿಶ್ವ ತಾಯಿಂದಿ ಈ ದಿನದಂದು 'ತಾಯಿ' ಎಂಬ ಪದಕ್ಕೆ, ಆ ಸ್ಥಾನಕ್ಕೆ ಸರಿಸಾಟಿ ಎಂಬುದು ಜಗತ್ತಿನಲ್ಲಿ ಮತ್ತೊಂದಿಲ್ಲ ಎಂದು ಹೇಳುವ ಮೂಲಕ ಈಗ ಈ ಸ್ಟೋರಿಗೆ ಫುಲ್ ಸ್ಟಾಪ್ ಇಡಬಹುದು.


