ಹೊಸ ಪ್ರತಿಭೆ, ಹೊಸಬರ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ಲಲು ಇದೀಗ ಸ್ಯಾಂಡಲ್ವುಡ್ ಹೊಸ ಕ ಮ್ಯೂಸಿಕ್ ಲಗ್ಗೆ ಇಟ್ಟಿದೆ. ತನ್ನ ಚೊಚ್ಚಲ ಯೋಜನೆಯಾಗಿ ‘1st ಲವ್ ಗುರು’ (1st Love Guru) ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.
ಬೆಂಗಳೂರು (ನ.02) ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸ್ಯಾಂಡಲ್ವುಡ್ಗೆ ಮತ್ತೊಂದು ನೂತನ ಆಡಿಯೋ ಸಂಸ್ಥೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ಚಿತ್ರರಂಗದ ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಪ್ರಚಾರಕರ್ತ ಪ್ರವೀಣ್ ಏಕಾಂತ ಸಾರಥ್ಯದ ‘ಕ ಪಿಚ್ಚರ್’ (ಕನ್ನಡ ಪಿಚ್ಚರ್) ಸಂಸ್ಥೆಯ ಮತ್ತೊಂದು ಹೊಸ ವಿಭಾಗವಾದ ‘ಕ ಮ್ಯೂಸಿಕ್’ (K Music) ಆಡಿಯೋ ಲೇಬಲ್ ಲೋಕಾರ್ಪಣೆಗೊಂಡಿದೆ. ನೂತನ ಪ್ರತಿಭೆಗಳು ಹಾಗೂ ಹೊಸ ಬಗೆಯ ತಂಡಗಳ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶ ಹೊಂದಿರುವ ಈ ಸಂಸ್ಥೆಯು, ತನ್ನ ಚೊಚ್ಚಲ ಯೋಜನೆಯಾಗಿ ‘1st ಲವ್ ಗುರು’ (1st Love Guru) ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.
ರಾಜ್ಯೋತ್ಸವದ ವಿಶೇಷ ಸಮಾರಂಭದಲ್ಲಿ ನಾದಬ್ರಹ್ಮ ಹಂಸಲೇಖ (Hamsalekha) ಅವರ ಅಮೃತವಾಣಿಯೊಂದಿಗೆ ಪ್ರಸಿದ್ಧ ಚಿತ್ರಸಾಹಿತಿ ಕವಿರಾಜ್ 'ಕ ಮ್ಯೂಸಿಕ್' ಆಡಿಯೋ ಲೇಬಲ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಶುಭಗಳಿಗೆಗೆ ನಿರ್ದೇಶಕ ಹಾಗೂ ಚಿತ್ರಸಾಹಿತಿ ಚೇತನ್ ಕುಮಾರ್ ಮತ್ತು ಯುವ ಸಾಹಿತಿ ನಾಗಾರ್ಜುನ್ ಶರ್ಮಾ ಸಾಕ್ಷಿಯಾದರು. ಇದೇ ವೇಳೆ '1st ಲವ್ ಗುರು' ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರ ಗುರುಗಳಾದ ಪ್ರಸಿದ್ಧ ಜಾದೂಗಾರ ರಮೇಶ್ (Magic Ramesh) ಅವರ ಮ್ಯಾಜಿಕ್ ಪ್ರದರ್ಶನದೊಂದಿಗೆ 'ಕ ಮ್ಯೂಸಿಕ್' ಲೋಗೋ ಹಾಗೂ ಚಿತ್ರದ ನಾಯಕ-ನಾಯಕಿಯರನ್ನು ವೇದಿಕೆ ಮೇಲೆ ವಿನೂತನವಾಗಿ ಪರಿಚಯಿಸಲಾಯಿತು.
ಯುವಮನ ಸೆಳೆಯುವ '1st ಲವ್ ಗುರು' ಟೈಟಲ್ ಟ್ರ್ಯಾಕ್:
'ಕ ಮ್ಯೂಸಿಕ್' ಸಂಸ್ಥೆಯ ಮೊದಲ ಬಿಡುಗಡೆಯಾಗಿ '1st ಲವ್ ಗುರು' ಚಿತ್ರದ ಟೈಟಲ್ ಹಾಡು "ಶುರು 1st ಲವ್ ಗುರು..." ಅನಾವರಣಗೊಂಡಿದೆ. ನೂತನ ಸಂಗೀತ ನಿರ್ದೇಶಕ ಮನೋಜವಂ ಆತ್ರೇಯ (Manojavam Athreya) ಅವರ ಮಾಧುರ್ಯಭರಿತ ನಾದ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಸಾಂಗ್ಗೆ ಪ್ರಮೋದ್ ಮರವಂತೆ (Pramod Maravanthe) ಸಾಹಿತ್ಯ ಬರೆದಿದ್ದಾರೆ. ಗಾಯಕರಾದ ವರುಣ್ ರಾಮಚಂದ್ರ ಹಾಗೂ ಸುರಭಿ ಈ ಗೀತೆಗೆ ಧ್ವನಿಯಾಗಿದ್ದಾರೆ. ಹದಿಹರೆಯದ ಪ್ರೇಮಿಗಳಾಗಿ ನಾಯಕ ಯುದೀತ್ ಶೆಟ್ಟಿ ಹಾಗೂ ನಾಯಕಿ ರಾಧ್ಯಾರಾಜ್ ಕಾಣಿಸಿಕೊಂಡಿದ್ದು, ಹಾಡು ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನವೆಂಬರ್ 27ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್
ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ (Guruprasad) ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೈಟಲ್ ಸಾಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರದಲ್ಲಿ ಹಿರಿಯ ನಟ ಶೋಭರಾಜ್, ಚಂದ್ರಕಲಾ ಮೋಹನ್, ಭಾಗ್ಯಶ್ರೀ, ಮ್ಯಾಜಿಕ್ ರಮೇಶ್, ಶ್ರೀಧರ್, ಡ್ರಾಮಾ ಜೂನಿಯರ್ ಮಹೇಂದ್ರ, ಪ್ರವೀಣ್ ಜೈನ್, ಗಜೇಂದ್ರ ಹಾಗೂ ಯುವ ಶೆಟ್ಟಿ ಒಳಗೊಂಡ ದೊಡ್ಡ ತಾರಾಗಣವಿದೆ.
ಚಿತ್ರಕ್ಕೆ ಛಾಯಾಗ್ರಹಕರಾಗಿ ಸತೀಶ್ ಜಿ ಹಾಗೂ ಹಿರಿಯ ಸಂಕಲನಕಾರ ಸುರೇಶ್ ಅರಸ್ (Suresh Urs) ಅವರ ಅನುಭವದ ಸ್ಪರ್ಶವಿದೆ. ‘ಕೆ.ಎಂ.ಜಿ ಪ್ರೊಡಕ್ಷನ್ಸ್’ (KMG Productions) ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ‘1st ಲವ್ ಗುರು’ ಸಿನಿಮಾ ನವೆಂಬರ್ 27ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.






