ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಚಿತ್ರದ ಭರ್ಜರಿ ವಿಶ್ವ ಪ್ರೀಮಿಯರ್ ನಡೆದಿದ್ದು, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರದ ಅದ್ದೂರಿ ದೃಶ್ಯ ವೈಭವ ಮತ್ತು ನಿರ್ಮಾಣದ ಪ್ರಮಾಣಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕಥೆಯ ನಿರೂಪಣೆ, ಉದ್ದ ಮತ್ತು ವೇಗದ ಕುರಿತು ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಶ್ ಅದೇನು ಹೇಳಿದ್ದಾರೆ ಗೊತ್ತಾ?

Ramayana' actor Yash says viewers will connect with both Rama and Ravana, Why? ‘ರಾಮಾಯಣ’ದಲ್ಲಿ ರಾಮ ಮತ್ತು ರಾವಣ ಇಬ್ಬರನ್ನೂ ಪ್ರೇಕ್ಷಕರು ಮೆಚ್ಚುತ್ತಾರೆ; ಎರಡೂ ದೃಷ್ಟಿಕೋನಗಳ ಅಗತ್ಯ ವಿವರಿಸಿದ ಯಶ್!

‘ರಾಮಾಯಣ’ ಸಿನಿಮಾ ಈ ವಾರಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಯಶ್ ಚಿತ್ರದ ಕಥೆ ಹಾಗೂ ಪಾತ್ರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಮ ಮತ್ತು ರಾವಣ ಇಬ್ಬರಲ್ಲೂ ಪ್ರೇಕ್ಷಕರು ತಮ್ಮನ್ನು ಕಂಡುಕೊಳ್ಳಬಹುದು ಎಂದು ಯಶ್ ಹೇಳಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾವಣನ ಪಾತ್ರದ ಮೂಲಕ ಯಶ್ ಹೊಸ ಆಯಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಟುಡೇ ಸ್ಟಾರ್ಸ್’ ಜೊತೆಗಿನ ಸಂದರ್ಶನದಲ್ಲಿ ರಣಬೀರ್ ಕಪೂರ್, ರವಿ ದುಬೆ ಹಾಗೂ ರಕುಲ್ ಪ್ರೀತ್ ಸಿಂಗ್ ಜೊತೆ ಭಾಗವಹಿಸಿದ ಯಶ್, ರಾಮಾಯಣದ ವಿಭಿನ್ನ ವ್ಯಾಖ್ಯಾನಗಳು ಮತ್ತು ರಾವಣನ ವ್ಯಕ್ತಿತ್ವದ ಕುರಿತು ಮಾತನಾಡಿದ್ದಾರೆ.

ರಾಮನ ದೃಷ್ಟಿಕೋನದಷ್ಟೇ ರಾವಣನ ನೋಟವೂ ಮುಖ್ಯ: ಯಶ್

‘ರಾಮಾಯಣ’ ಕಥೆಯು ಭಾರತದ ಪ್ರತಿಯೊಂದು ರಾಜ್ಯ, ಭಾಷೆ ಹಾಗೂ ಸಂಸ್ಕೃತಿಯಲ್ಲಿ ವಿಭಿನ್ನ ರೀತಿಯಲ್ಲಿ ನಿರೂಪಿಸಲ್ಪಟ್ಟಿದೆ ಎಂದು ಯಶ್ ಹೇಳಿದ್ದಾರೆ.

"ರಾಮಾಯಣದ ವ್ಯಾಖ್ಯಾನಗಳು ಪ್ರತಿಯೊಂದು ರಾಜ್ಯದಲ್ಲೂ, ಭಾಷೆಯಲ್ಲೂ ವಿಭಿನ್ನವಾಗಿವೆ. ನಮ್ಮ ಸಂಸ್ಕೃತಿಯ ಸೌಂದರ್ಯವೆಂದರೆ ಕಥೆಯನ್ನು ಎಲ್ಲರ ದೃಷ್ಟಿಕೋನದಿಂದ ನೋಡುವುದು. ರಾವಣನ ಕಣ್ಣಿನಿಂದಲೂ ಈ ಕಥೆಯನ್ನು ನಿರೂಪಿಸಲು ಪ್ರಯತ್ನಿಸಲಾಗಿದೆ. ರಾವಣ ಒಬ್ಬ ಪಾಂಡಿತ್ಯಪೂರ್ಣ ವಿದ್ವಾಂಸ, ಸಂಗೀತಗಾರ ಮತ್ತು ಯೋಧ. ನಾವು ಏನನ್ನಾದರೂ ಸಾಧಿಸಲು ಜ್ಞಾನ ಹಾಗೂ ಕೌಶಲ್ಯ ಬೆಳೆಸಿಕೊಳ್ಳುತ್ತೇವೆ. ಅದನ್ನು ಸಾಧಿಸಿದ ಬಳಿಕ ಶಕ್ತಿಶಾಲಿಯಾಗುತ್ತೇವೆ. ಆದರೆ ಅದನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಕೆಲವು ನಿರ್ಧಾರಗಳು ಸರಣಿ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಕಥೆಯಲ್ಲಿ ಅದನ್ನು ಸುಂದರವಾಗಿ ತೋರಿಸಲಾಗಿದೆ. ರಾಮನಿಗೂ, ರಾವಣನಿಗೂ ಜನರು ತಮ್ಮನ್ನು ಹೋಲಿಸಿಕೊಳ್ಳಬಹುದು. ಆದರೆ ಜೀವನದ ಸನ್ನಿವೇಶಗಳನ್ನು ರಾಮ ಹೇಗೆ ನಿಭಾಯಿಸಿದ ಎಂಬುದನ್ನು ತೋರಿಸಲು ರಾವಣನ ಪಾತ್ರದ ಅಗತ್ಯವಿದೆ" ಎಂದು ಯಶ್ ವಿವರಿಸಿದ್ದಾರೆ.

‘ರಾಮಾಯಣ’ ಸಹ-ನಿರ್ಮಾಣಕ್ಕೆ ಯಶ್ ನಿರ್ಧಾರ

ನಟನೆಯ ಜೊತೆಗೆ ಯಶ್ ಈ ಸಿನಿಮಾದ ಸಹ-ನಿರ್ಮಾಪಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಭಾರತೀಯ ಸಿನಿಮಾಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಲು ಇದು ಸೂಕ್ತ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಕೊರಿಯನ್ ಸಿನಿಮಾಗಳು ಜಾಗತಿಕವಾಗಿ ತಮ್ಮದೇ ಆದ ಗುರುತು ಮೂಡಿಸುತ್ತಿವೆ. ಅದೇ ರೀತಿ ಭಾರತೀಯ ಸಿನಿಮಾಗಳಿಗೂ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಅರ್ಹತೆ ಇದೆ. ಈ ದೃಷ್ಟಿಕೋನದೊಂದಿಗೆ ನಾವೆಲ್ಲರೂ ಒಂದಾಗಿದ್ದೇವೆ" ಎಂದು ಯಶ್ ಹೇಳಿದ್ದಾರೆ.

ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ‘ರಾಮಾಯಣ: ಪಾರ್ಟ್ ಒನ್’

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ದುಬೆ ಮತ್ತು ರಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮ ಮತ್ತು ರಾವಣನ ನಡುವಿನ ಪೌರಾಣಿಕ ಸಂಘರ್ಷವೇ ಚಿತ್ರದ ಕಥೆಯ ಕೇಂದ್ರವಾಗಿದೆ.

ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಚಿತ್ರದ ಭರ್ಜರಿ ವಿಶ್ವ ಪ್ರೀಮಿಯರ್ ನಡೆದಿದ್ದು, ಅಂತರರಾಷ್ಟ್ರೀಯ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಚಿತ್ರದ ಅದ್ದೂರಿ ದೃಶ್ಯ ವೈಭವ ಮತ್ತು ನಿರ್ಮಾಣದ ಪ್ರಮಾಣಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕಥೆಯ ನಿರೂಪಣೆ, ಉದ್ದ ಮತ್ತು ವೇಗದ ಕುರಿತು ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ದೃಶ್ಯ ವೈಭವದ ಜೊತೆಗೆ ಭಾವನಾತ್ಮಕ ಆಳವನ್ನು ಚಿತ್ರ ಎಷ್ಟರ ಮಟ್ಟಿಗೆ ಸಮತೋಲನಗೊಳಿಸಿದೆ ಎಂಬ ಚರ್ಚೆಯೂ ನಡೆದಿದೆ. ಅಂದಹಾಗೆ, ‘ರಾಮಾಯಣ: ಪಾರ್ಟ್ ಒನ್’ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.