Asianet Suvarna News Asianet Suvarna News

Dr.Vishnuvardhan Memorial; ಹೋರಾಟದ ಕತೆ ಹೇಳುವ ವಿಷ್ಣು ಸ್ಮಾರಕ, ಚಿತ್ರೋದ್ಯಮಕ್ಕೂ ಲಾಭ ನಿಶ್ಚಿತ

* ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ
* ಹೋರಾಟದ ಕತೆಯನ್ನು ತೆರೆದಿರಿಸಿದ ನಟ ಅನಿರುದ್ಧ್
* ಅಭಿಮಾನಿಗಳಲ್ಲಿಯೂ ವಿಶೆಷ ಮನವಿ
* ಸ್ಮಾರಕ ಒಂದು ಸ್ಫೂರ್ತಿಯ ಚಿಲುಮೆಯಾಗಿರಲಿದೆ 

Dr. Vishnuvardhan memorial Actor aniruddha jatkar Interview and clarification with Asianet Suvarna News mah
Author
Bengaluru, First Published Nov 12, 2021, 5:37 PM IST

ಬೆಂಗಳೂರು(ನ. 12)  ಸಾಹಸ ಸಿಂಹ ವಿಷ್ಣುವರ್ಧನ್ (Dr. Vishnuvardhan) ಸ್ಮಾರಕಕ್ಕೆ ಅಂತಿಮ ರೂಪ ಸಿಗುತ್ತಿದೆ.  ಮೈಸೂರಿನಲ್ಲಿ (Mysuru) ಸ್ಮಾರಕ (memorial) ನಿರ್ಮಾಣದ ಕಾರ್ಯವೂ ಆರಂಭವಾಗಿದೆ. ಈ ಬಗ್ಗೆ ನಟ ಅನಿರುದ್ಧ್ ಜಟ್ಕರ್ (Aniruddha Jatkar) ಏಷ್ಯಾನೆಟ್ ಸುವರ್ಣ ನ್ಯೂಸ್  ನೊಂದಿಗೆ  ಮಾತನಾಡಿ ಅನೇಕ ವಿಚಾರಗಳನ್ನು  ತಿಳಿಸಿದ್ದಾರೆ. ವಿಷ್ಣು ಸ್ಮಾರಕ್ಕಾಗಿ ಮಾಡಿದ ಹೋರಾಟ, ಅಲೆದಾಟ, ಶ್ರಮ ಎಲ್ಲದರ ಕತೆಯನ್ನು ತೆರೆದಿಡುತ್ತ ಹೋಗಿದ್ದಾರೆ. ಇದರ ಜತೆಗೆ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಯಾವ ಕಾರಣಕ್ಕೆ ಮೈಸೂರಿಗೆ ಹೋಗಬೇಕಾಗಿ ಬಂತು? ಅದೆಷ್ಟು ಕಚೇರಿಗಳನ್ನು ಅಲೆದಾಡಿದೆವು?   ವರ್ಷಗಳು ಉರುಳಿತೇ ವಿನಾ ಗೊಂದಲಗಳು ಮುಗಿಯಲಿಲ್ಲ ವಿಷ್ಣು ಸ್ಮಾರಕ ಒಂದು ಪೂಜಾ ಸ್ಥಳ ಮಾತ್ರವಲ್ಲದೆ ಅದೊಂದು ಕೊಡುಗೆಯಾಗಿ, ನಿದರ್ಶನವಾಗಿ ನಿಲ್ಲಬೇಕು ಎಂದ ಅನಿರುದ್ಧ್ ಹೋರಾಟದ ಪುಟಗಳನ್ನು ಒಂದೊಂದಾಗಿ ತೆರೆದಿರಿಸಿದರು. ಅವರ ಮಾತಿನಲ್ಲಿಯೇ  ಹೋರಾಟದ ಒಂದೊಂದು ಪುಟಗಳನ್ನು ಕೇಳೋಣ...

2009 ರಲ್ಲಿ ವಿಷ್ಣುವರ್ಧನ್ ನಮ್ಮನ್ನು ಅಗಲಿದರು. ಅಭಿಮಾನ್ ಸ್ಟುಡಿಯೋದಲ್ಲಿ ಅಗ್ನಿ ಸಂಸ್ಕಾರ ನೆರೆವೇರಿತು. ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವ ಆಲೋಚನೆ ಇತ್ತು. ವಿಷ್ಣು ಸ್ಮಾರಕ ದೊಡ್ಡ ಮಟ್ಟದಲ್ಲಿಯೇ ಆಗಬೇಕು, ದೇವೇಗೌಡರ ಅಭಿಲಾಷೆಯೂ  ಇದೇ ಆಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಸಹ ಕರೆ ಮಾಡಿ ಹೇಳಿದರು. 

ವಿಷ್ಣುವರ್ಧನ್ ಸ್ಮಾರಕ ಮುಂದಿನ ಸೆಪ್ಟೆಂಬರ್‌ಗೆ ಮುಗಿಯುತ್ತೆ: ಅನಿರುದ್ಧ್

ಆದರೆ ಮರುದಿನ ಸ್ಟುಡಿಯೋ ಜಾಗಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್ ನಲ್ಲಿ ಇರುವುದು ಗೊತ್ತಾಯಿತು. ಪ್ರಕರಣ 2004  ರಿಂದಲೇ ಕೋರ್ಟ್ ನಲ್ಲಿ ಇತ್ತು. ನಮಗೆ ಈ ವಿಚಾರ ಗೊತ್ತಿರಲಿಲ್ಲ. ಹಾಗಾಗಿ ಇದಾದ ನಂತರ ಭಾರತಿ ಅಮ್ಮನವರೆ  ಸಾಹಸಸಿಂಹರ ಅಂತಿಮ ವಿಧಿ ವಿಧಾನ ನಡೆದ ಜಾಗದಲ್ಲಿ ತಮ್ಮ ಖರ್ಚಿನಲ್ಲಿಯೇ ಮಂಟಪ ನಿರ್ಮಾಣ ಮಾಡಿದರು.

ಸ್ಮಾರಕ ಆಗಬೇಕು ಎನ್ನುವ ಹೋರಾಟ ನಡೆಯುತ್ತಲೇ ಇತ್ತು. ಡಾ. ವಿಷ್ಣುವರ್ಧನ್ ಸ್ಮಾರಕ ಟ್ರಸ್ಟ್ ನಿರ್ಮಾಣ ಆಯಿತು. ಸ್ಮಾರಕ ನಿರ್ಮಾಣಕ್ಕೆಂದು ಹನ್ನೊಂದು ಕೋಟಿ ರೂ. ಹಣ ನಿಗದಿ ಮಾಡಿ ಇಡಲಾಯಿತು.  ರಾಜ್ಯದ ಸಿಎಂ ಟ್ರಸ್ಟ್ ಅಧ್ಯಕ್ಷರಾಗಿ ಇರುತ್ತಾರೆ.  ಭಾರತಿ ಅಮ್ಮ ಮತ್ತು ನಾನು(ಅನಿರುದ್ಧ್) ಸಹ ಟ್ರಸ್ಟಿಗಳಾಗಿದ್ದೇವೆ. ಎಲ್ಲ ಕಾರ್ಯಕ್ರಮಗಳು ಸರ್ಕಾರದ ನಿರ್ದೇಶನದಲ್ಲಿಯೇ ನಡೆಯುತ್ತವೆ. ನಾವು ಕುಟುಂಬಸ್ಥರಾಗಿರುವುದರಿಂದ ಅಲ್ಲೊಂದು ಗೌರವದ ಸ್ಥಾನವಿದೆ. 

ಸರ್ಕಾರ ಹಿರಿಯ ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕೆಂದು ಇಪ್ಪತ್ತು ಎಕರೆ ಜಾಗವನ್ನು ನೀಡಿತ್ತು.  ಬಾಲಕೃಷ್ಣ ಅವರ ಮಗ ಅದರಲ್ಲಿ ಹತ್ತು ಎಕರೆ ಜಾಗ ಮಾರಿ ಆ ದುಡ್ಡಿನಲ್ಲಿ ಸ್ಟುಡಿಯೋ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದರು. ಅದರಂತೆ ಜಾಗ ಮಾರಾಟ ಮಾಡಲಾಯಿತು.  ಸರ್ಕಾರ ಅವರಿಗೆ ನೋಟಿಸ್ ಒಂದನ್ನು ಕಳಿಸಿ ಈ ಹಣದಲ್ಲಿ ಸ್ಟುಡಿಯೋ ಅಭಿವೃದ್ಧಿ ಮಾಡದಿದ್ದಲ್ಲಿ ಜಾಗ ವಶಕ್ಕೆ ಪಡೆಯಬಹುದು ಎಂಬ ಎಚ್ಚರಿಕೆಯನ್ನು ನೀಡಿತು.   ಈ ನಡುವೆ ಬಾಲಕೃಷ್ಣ ಅವರ ಮಗಳು ಗೀತಾ ಬಾಲಿ ಜಾಗದಲ್ಲಿ ತನ್ನದು ಪಾಲಿದೆ ಎಂದು ಕೋರ್ಟ್ ಮೊರೆ ಹೋದರು. ಈ ಪ್ರಕರಣವನ್ನು ಒಂದು ಅಂತ್ಯಕ್ಕೆ ತರಬೇಕು ಎಂದು ಪ್ರಯತ್ನಿಸಿದ ಮುಖ್ಯ ಕಾರ್ಯದರ್ಶಿಯವರನ್ನು ದಿಢೀರ್ ಎಂದು ವರ್ಗಾವಣೆ ಮಾಡಲಾಯಿತು. 

ಈ ನಡುವೆ ನಮಗೆ ಸ್ಮಾರಕ ನಿರ್ಮಾಣಕ್ಕೆಂದು ಎರಡು ಎಕರೆ ಬಿಟ್ಟು ಕೊಡಿ ಎಂದು ಕೇಳಿಕೊಂಡೆವು. ಇದಕ್ಕೆ ಗೀತಾ ಬಾಲಿ(ಬಾಲಕೃಷ್ಣ ಮಗಳು) ಯವರು ಒಪ್ಪಲಿಲ್ಲ. ಒಂದು ವೇಳೆ ಎರಡು ಎಕರೆ ಪ್ರತ್ಯೇಕ ಮಾಡಬೇಕು ಎಂದರೆ ಕೇಸ್ ಹಿಂದಕ್ಕೆ ಪಡೆಯಬೇಕಾಗುತ್ತದೆ. ಹಾಗಾಗಿ ಇಲ್ಲಿಯೂ ಗೊಂದಲ ಮುಂದುವರಿಯಿತು.  ಇದಕ್ಕೆ ಸಂಬಂಧಿಸಿ ಊಹಾಪೋಹಗಳು ಎದ್ದವು. ಸರ್ಕಾರವೂ ಜಾಗ ವಶಪಡಿಸಿಕೊಳ್ಳಲಿಲ್ಲ.. ಅತ್ತ ಪ್ರಕರಣವನ್ನು ವಾಪಸ್ ಪಡೆಯಲಿಲ್ಲ.. ಪ್ರತ್ಯೇಕವಾಗಿ ಎರಡು ಎಕರೆ ಸಿಗಲಿಲ್ಲ

ಬಾಳೆ ಬಂಗಾರ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಜೀವನ ಅನಾವರಣ

ಸರ್ಕಾರ ತೆಗೆದಿರಿಸಿರುವ ಹನ್ನೊಂದು ಕೋಟಿಯ ಬಗ್ಗೆ ಹುಟ್ಟಿದ ವದಂತಿಯೂ ಸತ್ಯಕ್ಕೆ ದೂರ.  ಆ ಹಣ ಏನಿದ್ದರೂ ಟ್ರಸ್ಟ್ ನಲ್ಲಿದೆ. ಅದರ ಮೂಲಕವೇ ಕೆಲಸವಾಗುತ್ತಿದೆ. ಸ್ಮಾರಕ  ನಿರ್ಮಾಣಕ್ಕೆ ಹಣದ ಕೊರತೆ ಇದೆ ಎಂಬ ರೂಮರ್ ಸಹ ಇದೆ. ದುಡ್ಡಿನ ಕೊರತೆಯೂ ಇಲ್ಲ.  ಸರ್ಕಾರವೇ ಎಲ್ಲವೂ ನೋಡಿಕೊಂಡು ಹೋಗುತ್ತಿದೆ. 

ಹನ್ನೊಂದು ಕೋಟಿ ಸರ್ಕಾರದ ದುಡ್ಡು.. ಜನರ ದುಡ್ಡು ಆಗಿರುವುದರಿಂದ  ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಒಂದು ಕೇಂದ್ರ ಸ್ಥಾಪನೆಗೂ ಪ್ರಯತ್ನ ಮಾಡಿದೆವು. ಇದಾದ ಮೇಲೆ ಅಭಿಮಾನ್ ಸ್ಟುಡಿಯೋದಲ್ಲಿ ಕಾನೂನು ತೊಡಕುಗಳು ಇದ್ದು ಸಾಧ್ಯವೇ ಇಲ್ಲ ಎಂದು ಸರ್ಕಾರ ಹೇಳಿತು.  ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲೇ ಇಲ್ಲ. ಬಾಲಕೃಷ್ಣ ಅವರ ಕುಟುಂಬಸ್ಥರ ಮನವೊಲಿಕೆ ಸಾಧ್ಯವಾಗಲಿಲ್ಲ. 

ಅಭಿಮಾನ್ ಸ್ಟುಡಿಯೋ ಆಗಲ್ಲ ಎಂದಾಗ ಅದರ ಪಕ್ಕದಲ್ಲಿಯೇ  ಬಿಜಿಎಸ್ ಕಾಲೇಜ್ ಸಮೀಪದ ಜಾಗ ತೋರಿಸಲಾಯಿತು. ಆದರೆ ಅದು ಅರಣ್ಯ ಇಲಾಖೆಯ ಸಂರಕ್ಷಿತ ಪ್ರದೇಶದಲ್ಲಿ ಬರುತ್ತದೆ ಎಂಬ ಮಾತು ಬಂತು.  ಈ ವೇಳೆ ಅಧಿಕಾರಿಗಳು ಇಲ್ಲ.. ನಿಮಗೆ ಜಾಗ ಮಾಡಿಸಿಕೊಡುತ್ತೇವೆ ಎಂದರು. ಈ ಹೋರಾಟದಲ್ಲಿಯೂ ಎರಡೂವರೆ ವರ್ಷ ಕಳೆದವು. ಹೊಸ ನೀಲ ನಕ್ಷೆ ಸಿದ್ಧ ಮಾಡಲಾಯಿತು. ಇನ್ನೇನು ಸ್ಮಾರಕದ ಕೆಲಸ ಆರಂಭಿಸಬೇಕು ಎಂದಾಗ ಪರಿಸರದ ಹೋರಾಟಗಾರರು ಸ್ಟೇ ತಂದರು! ತೆಂಗಿನ ತೋಟದಲ್ಲೊಂದು ಜಾಗ ತೋರಿಸಿದರು.. ಜನರೇ ಹೋಗಲು ಸಾಧ್ಯವಿರದ ಬೆಟ್ಟದ ಮೇಲಿನ ಜಾಗ ತೋರಿಸಿದರು... ಹೀಗೆ ಗೊಂದಲಗಳು ಮುಂದುವರಿಯುತ್ತ ದಿನ ಕಳೆಯುತ್ತಲೇ ಇತ್ತು. 

ಹಾಗಾಗಿ ಮೈಸೂರಿನ ಕಡೆ ಹೆಜ್ಜೆ ಇಡುವ ಮಾತು ಬಂತು. ವಿಷ್ಣುವರ್ಧನ್  ಹುಟ್ಟಿ ಬೆಳೆದಿದ್ದು ಮೈಸೂರು.. ಅವರ ಕೊನೆಯ ದಿನಗಳನ್ನು ಕಳೆದಿದ್ದು ಮೈಸೂರು ಹಾಗಾಗಿ ಮೈಸೂರಿಗೆ ತೆರಳಿ ಅಲ್ಲಿ ಸ್ಮಾರಕ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆಗಳು ಬಂದವು ಇದಾದ ಮೇಲೆ ಅಭಿಮಾನಿಗಳ ಜತೆಯೂ ಮಾತನಾಡಿದೆ.  ನಾವು ಆರುವರೆ ವರ್ಷ ಪ್ರಯತ್ನ ಮಾಡಿದೆವು. ಈಗ ನೀವು ಪ್ರಯತ್ನ ಮಾಡಿ ಎಂದು ಕೇಳಿಕೊಂಡೆ. ಅಭಿಮಾನಿಗಳು ಪ್ರಯತ್ನ ಪಟ್ಟರೂ ಏನೂ ಸಾಧ್ಯವಾಗಲಿಲ್ಲ. ಬಾಲಕೃಷ್ಣ ಅವರ ಮಕ್ಕಳ ಮನವೊಲಿಕೆ ಸಾಧ್ಯವಾಗಲೇ ಇಲ್ಲ. 

ಬನಶಂಕರಿಯಿಂದ ಉತ್ತರಹಳ್ಳಿ ಮಾರ್ಗವಾಗಿ ಕೆಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾ. ವಿಷ್ಣುವರ್ಧನ್ ಅವರ ಹೆಸರಿಡಲು ಸಾಕಷ್ಟು ಪರಿಶ್ರಮ ಪಡೆಬೇಕಾಗಿ ಬಂತು. ಈ ಸಂದರ್ಭದಲ್ಲಿ ಸಂಸದರಾಗಿದ್ದ ಅನಂತ್ ಕುಮಾರ್ ಅವರ ಸಹಕಾರವನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ. 

ಇನ್ನೊಂದು ವಿಚಾರವನ್ನು ಸ್ಪಷ್ಟ ಮಾಡಬೇಕಿದೆ. ಈಗ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗುತ್ತಿದೆ. ಅಗ್ನಿ ಸಂಸ್ಕಾರಕ್ಕೂ ಮಣ್ಣು ಮಾಡುವುದಕ್ಕೂ ವ್ಯತ್ಯಾಸವಿದ್ದು ಇಲ್ಲಿ ಸಮಾಧಿ ಸ್ಥಳಾಂತರ ಎನ್ನುವ ಮಾತು ಬರುವುದಿಲ್ಲ. ಅಂತ್ಯ ಸಂಸ್ಕಾರ ನೆರವೇರಿದ ಜಾಗದ ಅಭಿಮಾನ್ ಸ್ಟುಡಿಯೋದಲ್ಲಿನ ಮಂಟಪ ಹಾಗೆ ಇರಲಿದೆ.  ಸಾಹಸ ಸಿಂಹರ ವಿಭೂತಿಯನ್ನು ಇಟ್ಟು ಮೈಸೂರಿನಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಾಗಾಗಿ ಯಾರೂ ಸ್ಥಳಾಂತರ ಎಂದು ಭಾವಿಸಬಾರದು. 

ಮೈಸೂರಿಗೆ ತೆರಳಿ ಅಲ್ಲಿ ಜಾಗ ನೋಡಿದಾಗ ಅಲ್ಲಿಯೂ ಎರಡು ಕಡೆ ಸಮಸ್ಯೆಗಳು ಬಂದವು. ಈಗ ಸ್ಮಾರಕ ನಡೆಯುತ್ತಿರುವ ಜಾಗದ ಬಗ್ಗೆಯೂ ತಕರಾರುಗಳು ಬಂದವು. ರೈತರ ಹೆಸರಿನಲ್ಲಿ ಅರ್ಜಿಗಳು ದಾಖಲಾದವು. ಆದರೆ ನ್ಯಾಯಾಲಯದ ವಿಚಾರಣೆಗೆ ಯಾರೂ ಬರಲೇ ಇಲ್ಲ!

ಈ ನಡುವೆ ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿದರು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಸ್ಮಾರಕ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೋದಲ್ಲೇ ಜಾಗ ಮಾಡಿಕೊಡುತ್ತೇವೆ ಎಂದರು.  ಈಗಾಗಲೇ ಹಲವಾರು ಜಾಗ ನೋಡಿ ಆಗಿತ್ತು. ಆ ಕಾರಣಕ್ಕೆ ಕಂಠೀರವ ಬೇಡ ಮೈಸೂರೇ ಒಳ್ಳೆಯದು ಎಂದು ಭಾವಿಸಿದೆವು.  ಈ ನಡುವೆ ಆಗಿನ ಸರ್ಕಾರದಿಂದ ಬರುತ್ತಿದ್ದ ಸ್ಪಂದನೆಯೂ ನಿಂತು ಹೋಯಿತು.

ಈಗ ಮೈಸೂರಿನಲ್ಲಿ ಕೆಲಸ ನಡೆಯುತ್ತಿದೆ.  ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ.  ಮೂರುವರೆ ಎಕರೆ ಜಾಗದಲ್ಲಿ ಡಾ. ವಿಷ್ಣುವರ್ಧನ್ ಹೆಸರಿನಲ್ಲಿ  ಕಲಾವಿದರು ಮತ್ತು ತಂತ್ರಜ್ಞರಿಗೆ ತರಬೇತಿ ನೀಡಲು ಒಂದು ಕೇಂದ್ರ ನಿರ್ಮಾಣದ ಪ್ಯಯತ್ನ ನಡೆಯುತ್ತಿದೆ. ಫಿಲ್ಮ್ ಆಂಡ್ ಟೆವಿಲಿಷನ್  ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(ಪುಣೆ)ದ ಶಾಖೆ ನಿರ್ಮಾಣಕ್ಕೆ ಯತ್ನ ಸಾಗಿದೆ.

ಯಾರೋ ಬಂದು ವಿಷ್ಣುವರ್ಧನ್ ಜನ್ಮದಿನದ ಸಂದರ್ಭ ಎಲ್ಲೋ ಕುಳಿತು ಹೇಳಿಕೆ ಕೊಡುತ್ತಾರೆ. ವಿಷ್ಣು ಸ್ಮಾರಕ ಅಭಿಮಾನ್ ಸ್ಟುಡಿಯೋದಲ್ಲಿಯೇ ಆಗಬೇಕು ಎನ್ನುತ್ತಾರೆ. ನಾವೂ ಏಕಾಏಕಿ ಮೈಸೂರಿನ ಕಡೆ ತೆರಳಿಲ್ಲ. ಇಷ್ಟೆಲ್ಲ ಗೊಂದಲ ನಿವಾರಣೆ ಅಸಾಧ್ಯ ಎಂಬುದು ಅರಿತ ಮೇಲೆಯೇ ಮೈಸೂರಿಗೆ ತೆರಳಿದ್ದೇವೆ.   ಹಾಗಾಗಿ ಮಾತನಾಡುವ ಮುನ್ನ ಕೊಂಚ ಯೋಚನೆ ಮಾಡಿದರೆ ಒಳಿತು. ಕೆಲವು ಕಮೆಂಟ್ ಗಳು ಹೇಳಿಕೆಗಳು ನೋವು ತರಿಸುತ್ತವೆ.

ವಾಸ್ತುಶಿಲ್ಪಿಗಳ ಸ್ಪರ್ಧೆ ಆಯೋಜಿಸಿ ಅವರಲ್ಲಿ ಉತ್ತಮರಾದವರನ್ನು ಆಯ್ಕೆ ಮಾಡಿ ಸ್ಮಾರಕದ ಕೆಲಸ ಆರಂಭಿಸಿದ್ದೇವೆ. ಡಾ. ವಿಷ್ಣುವರ್ಧನ್ ಅವರ ವಿಭೂತಿಯನ್ನು ಇಟ್ಟು ಪ್ರತಿಷ್ಠಾಪನೆ ಮಾಡುತ್ತೇನೆ. ಪೂಜಾ ಸ್ಥಳ ಮಾತ್ರವಾಗಿರದೆ ಮುಂದಿನ ಪೀಳಿಗೆಗೂ ಇದೊಂದು ಮಾರ್ಗದರ್ಶನ ಕೇಂದ್ರವಾಗಿ ನಿಲ್ಲಲಿದೆ.

ಬೇರೆಯವರಿಗೆ ನಮ್ಮಿಂದ ಉಪಯೋಗ ಆಗಬೇಕು ಎನ್ನುವುದು ವಿಷ್ಣುವರ್ಧನ್ ಅವರ ನಿಲುವಾಗಿತ್ತು. ಅವರ ಸ್ಮಾರಕವೂ ಅದನ್ನೇ ಸಾರಲಿದೆ. ಚಿತ್ರೋದ್ಯಮಕ್ಕೂ ಇದರಿಂದ ಉಪಯೋಗ ಆಗುತ್ತದೆ.   ವಿಷ್ಣು ಸ್ಮಾರಕ ಸದಾ ಸ್ಫೂರ್ತಿಯ ಚಿಲುಮೆಯಾಗಿ ನಿಲ್ಲಲಿದೆ.

 

Follow Us:
Download App:
  • android
  • ios