ಕರುನಾಡು ಕಂಡ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿರುವ ಡಾ.ರಾಜ್​ಕುಮಾರ್​ ರಾಜಕೀಯದಿಂದ ದೂರವೇ ಉಳಿದವರು. ಖುದ್ದು ಇಂದಿರಾಗಾಂಧಿ ಮನವಿ ಮಾಡಿಕೊಂಡ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಪಾರ್ವತಮ್ಮ ಅವರ ಸಹೋದರ ಚಿನ್ನೇಗೌಡ್ರು. 

ಕನ್ನಡ ಸಿನಿಮಾ ಇಂಡಸ್ಟ್ರಿ ಕಂಡ ಅಪರೂಪದ ಕಲಾವಿದ ಡಾ.ರಾಜ್​ಕುಮಾರ್​ ಎನ್ನೋದರಲ್ಲಿ ಎರಡು ಮಾತೇ ಇಲ್ಲ. ಇವರು ಯಾಕೆ ಭಿನ್ನ ಎನ್ನುವ ಬಗ್ಗೆ ಕೇಳಿದ್ರೆ ನೂರೆಂಟು ಉದಾಹರಣೆಗಳನ್ನು ಖುದ್ದು ಇಂಡಸ್ಟ್ರಿಯವರೇ ಕೊಟ್ಟಾರು. ಡಾ.ರಾಜ್​ಕುಮಾರ್​ ನಟನೆ ಮಾತ್ರವಲ್ಲದೇ ನೋಟದಲ್ಲಿಯೂ ಎಲ್ಲರನ್ನೂ ಮೋಡಿ ಮಾಡಿದಂಥವರು. ಅವರ ಸ್ಫುರದ್ರೂಪ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಕೇವಲ ನಾಲ್ಕನೆಯ ತರಗತಿ ಕಲಿತಿದ್ದರೂ, ಅವರ ಅಭಿನಯ, ನಿರರ್ಗಳ ಮಾತು, ಅವರ ಕಂಠ... ಇವೆಲ್ಲವುಗಳಿಂದ ಅವರು ಮನೆಮಾತಾದವರು. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದವರು. ಸಿನಿಮಾ, ನಟನೆ ಎಂದು ಯಾರ ಬಾಯಲ್ಲಿ ಬಂದರೂ ಅಲ್ಲಿ ಮೊದಲ ಹೆಸರು ಡಾ.ರಾಜ್​ ಅವರದ್ದೇ ಆಗಿರುತ್ತದೆ. ಇವರು ಭಿನ್ನ ಎನ್ನಿಸಿಕೊಳ್ಳಲು ಇನ್ನೊಂದು ಪ್ರಮುಖ ಕಾರಣ, ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗದ್ದು ಒಂದಾದರೆ, ರಾಜಕೀಯದ ಸಹವಾಸವೇ ಬೇಡ ಎಂದು ದೂರ ಉಳಿದದ್ದು.

ಇಂದು ಬಹುತೇಕ ನಟರಿಗೂ, ರಾಜಕೀಯಕ್ಕೂ ಅವಿನಾಭಾವ ಸಂಬಂಧವಿದೆ. ರಾಜಕಿಯವೇ ಬೇಡ ಎಂದು ಭಾಷಣ ಮಾಡುವವರೂ ಅದೊಂದು ಹಂತದಲ್ಲಿ ಕುಟುಂಬವನ್ನಾದರೂ ರಾಜಕೀಯಕ್ಕೆ ತಂದು ಪರೋಕ್ಷವಾಗಿ ಅದರಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ. ಆದರೆ ಡಾ.ರಾಜ್​ ಮಾತ್ರ ಕೊನೆಯವರೆಗೂ ರಾಜಕೀಯದಿಂದ ದೂರವೇ ಉಳಿದವರು. ಅಂದು ಅವರು ಮನಸ್ಸು ಮಾಡಿದ್ದರೆ ಅತಿ ಸುಲಭದಲ್ಲಿ ರಾಜಕೀಯ ಧುರೀಣ ಆಗಬಹುದಿತ್ತು. ಲೋಕಸಭೆ, ವಿಧಾನಸಭೆಯ ಪ್ರವೇಶವೂ ಅವರಿಗೇನೂ ಅತ್ಯಂತ ಕಷ್ಟ ಅಂದಿನ ದಿನಗಳಲ್ಲಿ ಆಗೇ ಇರಲಿಲ್ಲ. ಆದರೆ ಒಂದು ಕುತೂಹಲದ ಸಂಗತಿ ಏನೆಂದರೆ, ಖುದ್ದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರೇ ಡಾ.ರಾಜ್​ ಬಳಿ ಬಂದು ಚಿಕ್ಕಮಗಳೂರಿನಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದರಂತೆ! ದಯವಿಟ್ಟು ತಮ್ಮ ಮಾತನ್ನು ನಡೆಸಿಕೊಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರಂತೆ. ಇದೀಗ ಈ ವಿಷಯವನ್ನು ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರ ಚಿನ್ನೇಗೌಡ್ರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡೇಲಿಮಾಧ್ಯಮ ಎನ್ನುವ ಯುಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ, ಚಿನ್ನೇಗೌಡ್ರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಡಾ.ರಾಜ್​ ಅವರಿಗೆ ಇದ್ದ ಅಭಿಮಾನ ಬಳಗ, ಅವರ ಕೀರ್ತಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಡಾ.ರಾಜ್​ಕುಮಾರ್​ ಅವರನ್ನು ನಿಲ್ಲಿಸಲು ತುಂಬಾ ಪ್ರಯತ್ನ ಪಟ್ಟಿದ್ದರು. ಅವರ ಆದೇಶದ ಮೇರೆಗೆ ಜಾರ್ಜ್​ ಫರ್ನಾಂಡಿಸ್​ ಬಂದು ತುಂಬಾ ಕೇಳಿಕೊಂಡರು. ಆದರೆ, ಅವರು ಸುತರಾಂ ಇದಕ್ಕೆ ಒಪ್ಪಲಿಲ್ಲ ಎಂದು ಚಿನ್ನೇಗೌಡ್ರು ಹೇಳಿದ್ದಾರೆ. ಅದೇ ಇನ್ನೊಂದು ಇಂಟರೆಸ್ಟಿಂಗ್​ ವಿಷ್ಯವನ್ನೂ ಇವರು ರಿವೀಲ್​ ಮಾಡಿದ್ದಾರೆ. ಅದೇನೆಂದರೆ, 'ಡಾ.ರಾಜ್​ಕುಮಾರ್​ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಾಗ ಅವರನ್ನು ಸನ್ಮಾನಿಸಲು ಇಂದಿರಾಗಾಂಧಿಯವರು ಕರೆದಿದ್ದರು. ಅಂದು ಬೇರೆ ಕಡೆ ರಾಜ್​ಕುಮಾರ್​ ಅವರಿಗೆ ಕಾರ್ಯಕ್ರಮ ಫಿಕ್ಸ್​ ಆಗಿತ್ತು. ಆದರೆ ಪ್ರಧಾನಿ ಕರೆದ ಮೇಲೆ ಹೋಗದೇ ಇರಲು ಆಗುವುದಿಲ್ಲ ಎಂದು ಹೋಗಿದ್ದರು. ನಾನೂ ಹೋಗಿದ್ದೆ. ಆದರೆ ಪ್ರಧಾನಿ ಬರುವುದು ಲೇಟ್​ ಆಯಿತು. ಇನ್ನೊಂದು ಕಡೆ ಫಂಕ್ಷನ್​ಗೆ ಹೋಗಬೇಕಾಗಿದ್ದರಿಂದ ಡಾ.ರಾಜ್​ಕುಮಾರ್​, ಇದೆಲ್ಲಾ ನಮಗೆ ಯಾಕೆ? ಅಲ್ಲಿ ಕಾರ್ಯಕ್ರಮಕ್ಕೆ ಲೇಟ್​ ಆಗತ್ತೆ, ಹೋಗೋಣ ಎಂದು ಎದ್ದೇಬಿಟ್ಟರು...' ಎಂದು ನೆನಪಿಸಿಕೊಂಡಿದ್ದಾರೆ.

ಅದಾದ ಬಳಿಕ, ಅಲ್ಲಿಂದ ಹೋಗುವಾಗ ನಡೆದ ಸ್ವಾರಸ್ಯಕರ ಘಟನೆಯನ್ನೂ ಹೇಳಿದ್ದಾರೆ. 'ಲೇಟಾಯಿತೆಂದು ಹೊರಡಲು ರೆಡಿಯಾದಾಗ ಅಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಬಂದು ರಾಜ್​ಕುಮಾರ್​ ಕೈಹಿಡಿದು, ರಾಜ್​ ಕುಮಾರ್​ ಜೀ ಎಂದೇ ಸಂಬೋಧಿಸಿ ಲೇಟಾದುದ್ದಕ್ಕೆ ಕ್ಷಮೆ ಕೋರಿದರು. ಅದನ್ನು ನೋಡಿ ಒಮ್ಮೆಲೇ ರಾಜ್​ ದಂಗಾಗಿ ಹೋದರು. ಪ್ರಧಾನಿಯೊಬ್ಬರು ಈ ರೀತಿ ಕೈಹಿಡಿದು ಕ್ಷಮೆ ಕೋರಿದ್ದು ಅಚ್ಚರಿ ತಂದಿತ್ತು' ಎಂದಿದ್ದಾರೆ ಚಿನ್ನೇಗೌಡ್ರು. ಅಷ್ಟಕ್ಕೂ, ಡಾ.ರಾಜ್​​ ಕನ್ನಡ ಸಿನಿಮಾ ಲೋಕಕ್ಕೆ ಹೊಸ ದಿಕ್ಕನ್ನು ತೋರಿಸಿದವರಲ್ಲಿ ಇವರು ಪ್ರಮುಖರು. ಇಂದಿನ ಬಹುತೇಕ ಚಿತ್ರಗಳು ಜನರ ಮನಸ್ಸಿನಲ್ಲಿ ನಾಲ್ಕೈದು ವರ್ಷ ನೆಲೆಯೂರಿದ್ದರೆ ಅದುವೇ ದೊಡ್ಡದು ಎನ್ನಿಸುವಂತೆ ಆಗಿದೆ. ಆದರೆ ಡಾ.ರಾಜ್​ಕುಮಾರ್​ ಅವರ ಅಭಿನಯದ ಬ್ಲ್ಯಾಕ್​ ಆ್ಯಂಡ್ ವೈಟ್​ ಯುಗದಿಂದ ಹಿಡಿದು ಅವರ ಕೊನೆಯ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಡೈಲಾಗ್​, ಹಾಡುಗಳು ಅಬ್ಬಾ ಒಂದೇ... ಎರಡೇ... ಅಂಥ ಅಪರೂಪದ ಕಲಾವಿದ ಡಾ.ರಾಜ್​. ಅವರು ಕೇವಲ ನಟ ಮಾತ್ರ ಆಗಿರದೇ ತಮ್ಮ ಪ್ರತಿಯೊಂದು ಚಿತ್ರಕ್ಕೂ, ಅದರಲ್ಲಿನ ಹಾಡುಗಳಿಗೆ ಹೇಗೆ ನ್ಯಾಯ ಒದಗಿಸುತ್ತಿದ್ದರು ಎಂದು ಸಿನಿ ಲೋಕದ ದಿಗ್ಗಜರೇ ನೆನಪಿಸಿಕೊಳ್ಳುತ್ತಾರೆ.

View post on Instagram