41ನೇ ವಯಸ್ಸಿನಲ್ಲಿಯೇ ಅಸಂಖ್ಯ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ ಪುನೀತ್​ ರಾಜ್​ ಅವರ ಆಯಸ್ಸನ್ನು ಅಂದೇ ಬಹಿರಂಗಮಾಡಿದ್ದ ಚೌಡೇಶ್ವರಿ ದೇವಿ! ಪಾರ್ವತಮ್ಮನವರ ಸಹೋದರ ಬಿಚ್ಚಿಟ್ಟ ರಹಸ್ಯ... 

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ನಡುವೆಯೇ ಪುನೀತ್‌ ರಾಜ್ ಅವರಿಗೆ ಸೇರಿರುವ ವಿಡಿಯೋಗಳನ್ನು ಅಭಿಮಾನಿಗಳು ಶೇರ್‍‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಕಾಲನ ಕರೆ ಬಂದಾಗ ಹೋಗಲೇಬೇಕು ಎನ್ನುವುದು ವಿಧಿ ನಿಯಮ. ಅದಕ್ಕೆ ಇಂಥದ್ದೇ ಕಾರಣ ಬೇಕು ಅಂತನೇ ಇಲ್ಲ. ಸದೃಢವಾಗಿ, ಆರೋಗ್ಯದಿಂದ ಇದ್ದ ವ್ಯಕ್ತಿ ಅದ್ಯಾವುದೋ ಮಾಯೆಯಲ್ಲಿ ಇಹಲೋಕ ತ್ಯಜಿಸುವುದು ಇದೆ. ಇಲ್ಲಸಲ್ಲದ ಚಟ ಅಂಟಿಸಿಕೊಂಡು, ಬದುಕಿನುದ್ದಕ್ಕೂ ತಪ್ಪು ಮಾಡುತ್ತಲೇ ಇರುವ ವ್ಯಕ್ತಿ ದೀರ್ಘಾಯಸ್ಸು ಪಡೆಯುವುದೂ ಇದೆ. ಅದಕ್ಕಾಗಿಯೇ ಹೀಗೆ, ಹಾಗೆ ಅಂತೇನೂ ಸಾವಿನ ವಿಷಯದಲ್ಲಿ ಇಲ್ಲವೇ ಇಲ್ಲ ಎನ್ನುವುದು ನಿಜವಾದರೂ, ಸತ್ತ ಬಳಿಕ ಆ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುವುದು ಇದ್ದೇ ಇದೆ. ಅದರಲ್ಲಿಯೂ ಪುನೀತ್​ ರಾಜ್​ ಅವರ ನಿಧನ ಮಾತ್ರ ಜನರನ್ನು ಆಘಾತಕ್ಕೆ ತಳ್ಳಿದ್ದು ಸುಳ್ಳಲ್ಲ. ಇದೇ ವಿಷಯವಾಗಿ ಇದೀಗ ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರ ಚಿನ್ನೇಗೌಡ್ರು ಡೇಲಿ ಮಾಧ್ಯಮ ಎನ್ನುವ ಯುಟ್ಯೂಬ್​ ಚಾನೆಲ್​ನೊಂದಿಗೆ ಮಾತನಾಡಿದ್ದಾರೆ. ಪುನೀತ್​ ಅವರ ಆಯಸ್ಸಿನ ಬಗ್ಗೆ ಬಹಳ ಹಿಂದೆಯೇ ಚೌಡೇಶ್ವರಿ ದೇವಿ ಪೂಜೆಯ ಸಮಯದಲ್ಲಿ ಬಹಿರಂಗವಾಗಿದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ.

ಅಷ್ಟಕ್ಕೂ ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಪುನೀತ್​ ರಾಜ್​ ಅವರು ಗುರುತಿಸಿಕೊಂಡದ್ದು ಬಾಲನಟನಾಗಿ ಲೋಹಿತ್​ ಎಂಬ ಹೆಸರಿನಲ್ಲಿ. ಲೋಹಿತ್​ ಅವರ ಹುಟ್ಟು ಹೆಸರು. ಇದೇ ಹೆಸರನ್ನು ಬೆಂಗಳೂರಿನಲ್ಲಿ ಇರುವ ಫಾರ್ಮ್​ಗೆ ಲೋಹಿತ್​ ಫಾರ್ಮ್​ ಎಂದೇ ಹೆಸರು ಇಡಲಾಗಿತ್ತು. ಅಂದು ಚೌಡೇಶ್ವರಿ ದೇವಿ ಪೂಜೆ ನಡೆಯುತ್ತಿದ್ದಾಗ, ದೇವಿಯೇ ಅಲ್ಪಾಯು ಬಗ್ಗೆ ಹೇಳಿದ್ದಳು. ಲೋಹಿತ್​ ಎಂದರೆ ಅಲ್ಪಾಯು ಎನ್ನುವ ಅರ್ಥ ಕೊಡುತ್ತದೆ ಎನ್ನುವ ಕಾರಣಕ್ಕೆ ಪುನೀತ್​ ಎಂದು ನಾಮಕರಣ ಮಾಡುವಂತೆ ಸಲಹೆ ಬಂದಿತ್ತು. ಕೊನೆಗೆ ಲೋಹಿತ್​ಗೆ ಪುನೀತ್​ ಎಂದು ಹೆಸರು ಬದಲಾಯಿಸಿ, ಆ ಫಾರ್ಮ್​ ಹೆಸರನ್ನು ಕೂಡ ಬದಲು ಮಾಡಲಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪುನೀತ್​ ಎಂದು ಹೆಸರು ಬದಲಾದರೂ ಅಲ್ಪಾಯುವಿನಲ್ಲಿಯೇ ಹೋಗಿಬಿಟ್ಟ ಎಂದು ಚಿನ್ನೇಗೌಡರು ನೊಂದು ನುಡಿದಿದ್ದಾರೆ.

'ಅವನ ಸಾಮ್ರಾಜ್ಯವನ್ನು ಅಶ್ವಿನಿ ಸೇರಿದಂತೆ ಶಿವಣ್ಣ, ರಾಘಣ್ಣ ಎಲ್ಲಾ ನೋಡಿಕೊಳ್ತಾ ಇದ್ದಾರೆ. ಇಬ್ಬರೂ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಹಾಗೇ ನಡೆದುಕೊಂಡು ಹೋಗುತ್ತಿದೆ' ಎಂದಿದ್ದಾರೆ ಅವರು. ಇನ್ನು ಪುನೀತ್‌ ಅವರ ಬಾಲ್ಯದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯವೇ. ಪುನೀತ್ ಆರು ತಿಂಗಳು ಮಗುವಿದ್ದಾಗ 1976ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಕಾಣಿಸಿಕೊಂಡರು. ಇದಾದ ಬಳಿಕ, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ', ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ',ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು' ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಕಾಣಿಸಿಕೊಂಡರು. ಇವರು ನಟಿಸಿದ್ದ `ಚಲಿಸುವ ಮೋಡಗಳು' ಮತ್ತು `ಎರಡು ನಕ್ಷತ್ರಗಳು' ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದ್ದವು.

View post on Instagram