Dr. Rajkumar and Amitabh Bachchan: ಡಾ. ರಾಜ್‌ಕುಮಾರ್ ಮತ್ತು ಅಮಿತಾಬ್ ಬಚ್ಚನ್ ನಡುವಿನ ಆತ್ಮೀಯ ಬಾಂಧವ್ಯವನ್ನು ಈ ಲೇಖನ ವಿವರಿಸುತ್ತದೆ. ಅಣ್ಣಾವ್ರು ನಂಜನಗೂಡಿನಲ್ಲಿ ಬಿಗ್‌ಬಿಗಾಗಿ ಉರುಳು ಸೇವೆ ಮಾಡಿದ್ದರು. ಯಾಕೆ ಮಾಡಿದ್ದರು? ಅಮಿತಾಬ್‌ಗೆ ಏನಾಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಭಾರತೀಯ ಸಿನಿಮಾ ರಂಗದ ಇಬ್ಬರು ಮಹಾನ್ ದಿಗ್ಗಜರು ಯಾರು ಅಂದರೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಮತ್ತು ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್! ಇವರಿಬ್ಬರು ಬೇರೆ ಬೇರೆ ಭಾಷೆಯ ಸೂಪರ್ ಸ್ಟಾರ್‌ಗಳಾದರೂ ಅವರ ನಡುವೆ ಆತ್ಮೀಯವಾದ ಬಾಂಧವ್ಯ ಇತ್ತು. ಅಮಿತಾಬ್ ಬಚ್ಚನ್ ಮೇಲೆ ಅಣ್ಣಾವ್ರಿಗೆ ಎಷ್ಟು ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು ಗೊತ್ತಾ? ಈ ಹಿಂದೆ ಬಿಗ್‌ ಬಿಗಾಗಿ ಅಣ್ಣಾವ್ರು ನಂಜನಗೂಡಿನಲ್ಲಿ ಉರುಳು ಸೇವೆ ಮಾಡಿದ್ದರು.

ಹೌದು, ಅದು 1982ರ ಸಮಯ. ಬೆಂಗಳೂರಿನಲ್ಲಿ ಅಮಿತಾಬ್ ಬಚ್ಚನ್ ನಟನೆಯ 'ಕೂಲಿ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ದೃಶ್ಯ ಒಂದರಲ್ಲಿ ಅಮಿತಾಬ್ ಮತ್ತು ಖಳನಟ ಪುನೀತ್ ಇಸ್ಸಾರ್ ಮಧ್ಯೆ ಫೈಟಿಂಗ್ ಸೀನ್ ನಡೆಯುತ್ತಿತ್ತು. ಆ ವೇಳೆ ಆಕಸ್ಮಿಕವಾಗಿ ಪುನೀತ್ ಇಸ್ಸಾರ್, ಅಮಿತಾಬ್‌ಗೆ ಬಲವಾಗಿ ಹೊಡೆದಿದ್ದರು. ಪರಿಣಾಮ ಅಮಿತ್‌ಗೆ ತೀವ್ರ ರಕ್ತಸ್ರಾವ ಆಗುತ್ತಿತ್ತು.

ತಕ್ಷಣವೇ ಬೆಂಗಳೂರಿನಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಪರಿಸ್ಥಿತಿ ಕೆಟ್ಟದಾದಾಗ ಚಿಕಿತ್ಸೆಗಾಗಿ ಮುಂಬೈಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಒಂದು ಹಂತದಲ್ಲಿ ವೈದ್ಯರು ಅಮಿತಾಬ್ ಅವರನ್ನು 'ಕ್ಲಿನಿಕಲಿ ಡೆಡ್' ಎಂದು ಘೋಷಿಸುವ ಮಟ್ಟಕ್ಕೆ ಪರಿಸ್ಥಿತಿ ಕೈಮೀರಿತ್ತು.

ಗೆಳೆಯನಿಗಾಗಿ ಗುಪ್ತ ಹರಕೆ

ಆತ್ಮೀಯ ಸ್ನೇಹಿತ ಅಮಿತಾಬ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಡಾ.ರಾಜ್‌ ತೀವ್ರ ಆಘಾತಕ್ಕೆ ಒಳಗಾದರು. ಗೆಳೆಯನ ಆರೋಗ್ಯಕ್ಕಾಗಿ ಮರುಗಿದ ಅಣ್ಣಾವ್ರು, ಯಾರಿಗೂ ತಿಳಿಯದಂತೆ ತಮ್ಮ ಆಪ್ತರೊಂದಿಗೆ ಗುಟ್ಟಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಹಾನ್ ನಟ ಡಾ. ರಾಜ್‌ಕುಮಾರ್ ಅಲ್ಲಿ ತಮ್ಮ ಸ್ಟಾರ್‌ಗಿರಿ, ಗೌರವ ಎಲ್ಲವನ್ನೂ ಬದಿಗಿಟ್ಟು ಒಬ್ಬ ಸಾಮಾನ್ಯ ಭಕ್ತನಂತೆ ನಿಂತರು. ಅಮಿತಾಬ್ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಿ ಬದುಕಿ ಬರಲಿ ಎಂದು ಪ್ರಾರ್ಥಿಸಿ, ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಮಾಡಿದ್ದರು.

ಇತ್ತ, ನಿರಂತರ ಚಿಕಿತ್ಸೆ ಹಾಗೂ ಕೋಟ್ಯಂತರ ಅಭಿಮಾನಿಗಳು, ಅಣ್ಣಾವ್ರಂತಹ ಶ್ರೇಷ್ಠರ ಪ್ರಾರ್ಥನೆ ಫಲವಾಗಿ ಅಮಿತಾಬ್ ಬಚ್ಚನ್ ಸಾವಿನ ದವಡೆಯಿಂದ ಪಾರಾದರು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು. ಇದೇ 'ಕೂಲಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಅಮಿತಾಬ್ ಅವರು ಡಾ. ರಾಜ್‌ಕುಮಾರ್‌ಗೆ ಆಹ್ವಾನಿಸಿದ್ದರಂತೆ. ಆದರೆ ಈ ದುರಂತದ ಬಳಿಕ ಚಿತ್ರೀಕರಣದ ವೇಳಾಪಟ್ಟಿ ಬದಲಾಗಿ ಅಣ್ಣಾವ್ರಿಗೆ ನಟಿಸಲು ಸಾಧ್ಯವಾಗಲಿಲ್ಲ.

ಅಮಿತಾಬ್ ಮನದಾಳದ ಮಾತು

ಡಾ.ರಾಜ್‌ಕುಮಾರ್ ಅವರ ಈ ದೊಡ್ಡ ಗುಣ ಮತ್ತು ಸರಳತೆಯ ಬಗ್ಗೆ ಅಮಿತಾಬ್ ಬಚ್ಚನ್‌ಗೂ ಅಪಾರ ಗೌರವ ಇತ್ತು. ಕಾಂತಾರ ಸಿನಿಮಾ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಡಾ.ರಾಜ್‌ಕುಮಾರ್‌ ಅವರನ್ನು ಬಿಗ್‌ಬಿ ಸ್ಮರಿಸಿದ್ದರು. ಕರ್ನಾಟಕದಲ್ಲಿ ರಾಜ್‌ಕುಮಾರ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಅವರು ಅತ್ಯಂತ ವಿನಯಶೀಲರಾಗಿದ್ದರು. ಸರಳ ಉಡುಪು ಧರಿಸಿ, ತುಂಬಾ ಸಿಂಪಲ್ ಆಗಿ ಬದುಕುತ್ತಿದ್ದರು. ಅವರ ಮಾತುಗಳಲ್ಲಿ ಅಷ್ಟೊಂದು ಆತ್ಮೀಯತೆ ಇರುತ್ತಿತ್ತು. ಅವರು ನಿಧನರಾಗುವವರೆಗೂ ನಮ್ಮಿಬ್ಬರ ಬಾಂಧವ್ಯ ಹಾಗೆಯೇ ಇತ್ತು. ಇಂದು ಅವರ ಮಕ್ಕಳೊಂದಿಗೂ ನನಗೆ ಉತ್ತಮ ಸಂಬಂಧವಿದೆ. ರಾಜ್‌ಕುಮಾರ್ ಅವರಂತಹ ಮಹಾನ್ ವ್ಯಕ್ತಿಯ ಆಶೀರ್ವಾದ ಪಡೆದದ್ದು ನನ್ನ ಪುಣ್ಯ ಎಂದಿದ್ದರು.