ಹಾಸನದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಆನೆಗಳನ್ನು ಚಿಕ್ಕಮಗಳೂರಿಗೆ ಅರಣ್ಯ ಇಲಾಖೆ ಓಡಿಸಿದೆ. ಇದರಿಂದ ರೊಚ್ಚಿಗೆದ್ದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ಶಾಸಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜೀನಾಮೆ ನೀಡುವ ಮಾತುಗಳನ್ನೂ ಆಡಿದ್ದಾರೆ.

ಚಿಕ್ಕಮಗಳೂರು: ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ 48 ಗಂಟೆಗಳ ಅಂತರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಜೀವ ಕಳೆದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಬೆನ್ನಲ್ಲೇ ಬೇಲೂರಿನಲ್ಲಿದ್ದ ಆನೆಗಳನ್ನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಓಡಿಸಲಾಗಿದೆ. ಅರಣ್ಯ ಇಲಾಖೆಯ ಈ ಯಡವಟ್ಟಿಗೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂವರು ಶಾಸಕರು ರೊಚ್ಚಿಗೆದ್ದಿದ್ದಾರೆ! ಬೆನ್ನಲ್ಲೇ ಈ ವಿಚಾರ ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಏನಂದ್ರು ನಯನಾ ಮೋಟಮ್ಮ?

ಈ ಹಿನ್ನೆಲೆಯಲ್ಲಿ ಇವತ್ತು ದಿಢೀರ್ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಶಾಸಕರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನ್ನಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ.. ನಾವು ಬೇಡ ಎಂದು ಅರಣ್ಯ ಸಚಿವರಿಗೆ ಪತ್ರ ನೀಡಿದ್ದೇವೆ. ಆನೆಗಳನ್ನ ನಮ್ಮ ಕಡೆ ಓಡಿಸೋದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಮೂಡಿಗೆರೆ ಕಡೆಗೆ ಓಡಿಸೋದಿಲ್ಲ ಎಂದು ಹೇಳಿ, ನಮ್ಮ ಭಾಗಕ್ಕೆ ಆನೆಗಳನ್ನ ಓಡಿಸಿದ್ದಾರೆ. ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೇನೆ. ನಮಗೆ ಗೊತ್ತಿಲ್ಲದೇ ಆನೆ ಓಡಿಸಿದ್ದಾರೆ, ಇದನ್ನ ನಾನು ಸಹಿಸಲ್ಲ. ನಾನು ರಾಜೀನಾಮೆ ಪತ್ರ‌ ರೆಡಿ ಮಾಡಿಕೊಂಡು ಬಂದಿದ್ದೇನೆ.

ಈಗ ಆನೆ ಓಡಿಸೋದ ನಿಲ್ಲಿಸುತ್ತೇನೆ ಎಂದಿದ್ದಾರೆ. ಇಂದು ರಾತ್ರಿ ಆನೆಗಳನ್ನ ಬೇಲೂರಿಗೆ ಓಡಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುತ್ತೇನೆ. ನಾನು ಸರ್ಕಾರಕ್ಕೆ ಉತ್ತರ ಕೊಡ ಬೇಕಿಲ್ಲ. ನಾನು ಜನರಿಗೆ ಉತ್ತರ ಕೊಡಬೇಕು, ಜನ ನನ್ನ ಆಯ್ಕೆ ಮಾಡಿರೋದು. ನಮ್ಮಿಂದ ಸರ್ಕಾರ, ಸರಕಾರದಿಂದ ನಾವಲ್ಲ ಎಂದು ಕಿಡಿಕಾರಿದ್ದಾರೆ.

10-20 ವರ್ಷಕ್ಕೊಮ್ಮೆ ಆನೆಗಳು ಬರೋದು-ಹೋಗೋದು ಮಾಮೂಲು. ಆನೆಗಳೇ ಬಂದರೆ ಓಕೆ, ಅವು ವಾಪಸ್ ಹೋಗುತ್ತವೆ. ಹೀಗೆ ಬಲವಂತವಾಗಿ ಡ್ರೈವ್ ಮಾಡೋದು ಸರಿಯಲ್ಲ. ನಾಳೆ ನನ್ನ ಕ್ಷೇತ್ರದ ಒಳಗೆ ಬರೋ ಆನೆ ಹೋಗಬೇಕು. ಇಲ್ಲ ನಾಳೆ ನಾನು ರಾಜೀನಾಮೆ ಕೊಡ್ತೀನಿ ಎಂದು ನಯನಾ ಮೋಟಮ್ಮ ಎಚ್ಚರಿಕೆ ನಿಡಿದ್ದಾರೆ. ಸದ್ಯ, ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಕೇಳಿ ಬರುತ್ತಿದೆ. ಈ ವೇಳೆ ಮಹಿಳೆಯರನ್ನ ಸಚಿವರನ್ನಾಗಿ ಮಾಡುವ ಭರವಸೆಯನ್ನ ಸಿಎಂ ನೀಡಿದ್ದಾರೆ. ಈ ನಡುವೆ ನಯನಾ ಮೋಟಮ್ಮ ರಾಜೀನಾಮೆ ನೀಡ್ತೀನಿ ಎಂದಿರೋದು ಚರ್ಚೆಗೆ ಕಾರಣವಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೂ ಹಾಗೂ ಆನೆಗಳ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ.

ಇದೇ ವೇಳೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಮಾತನ್ನಾಡಿ.. ದ್ರಾ ಅಭಯಾರಣ್ಯ ಸಂರಕ್ಷಿತ ಪ್ರದೇಶ, ಆನೆ ತಂದು ಬಿಡೋದಲ್ಲ. ಕಾಡು ಪ್ರಾಣಿ ಉಳಿಸೋಕೆ ಜನರ ಜೀವ ಬಲಿ ಕೊಡೋದಲ್ಲ. ಜನರ ಜೀವಕ್ಕೆ ನಮ್ಮ ಸ್ಥಾನ ತ್ಯಾಗಕ್ಕೂ ಸಿದ್ಧ, ಜನ ಮುಖ್ಯ. ನಾವು ಅಧಿಕಾರಿಗಳು, ಅರಣ್ಯ ಸಚಿವರಿಗೆ ಪತ್ರ ಬರೆದಿದ್ದೇವೆ. ಹಾಸನ ಡಿಎಫ್ಓ ಓರ್ವ ಅಯೋಗ್ಯ. ಯಾವನು‌ ಅವನಿಗೆ ಅಧಿಕಾರ ಕೊಟ್ಟವನು? ಬಲವಂತವಾಗಿ ಆನೆಗಳನ್ನ ಓಡಿಸುತ್ತೇನೆ ಅಂತಾನೆ. ಕೂಡಲೇ ಆ ಹರೀಶ್ ನನ್ನ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಮೂವರು ಶಾಸಕರ ತೀರ್ಮಾನ ಒಂದೇ ಆಗಿದೆ. ನಮಗೆ ಜನರ ಜೀವ ಮುಖ್ಯ, ಅಧಿಕಾರ ಮುಖ್ಯ ಅಲ್ಲ. ಇಂದು ರಾತ್ರಿ ಆನೆಗಳು ಬೇಲೂರಿಗೆ ವಾಪಸ್ ಹೋಗಬೇಕು. ಇಲ್ಲವಾದರೆ ನಾಳೆ ನಾವು ಮೂವರು ರಾಜೀನಾಮೆ ನೀಡುತ್ತೇವೆ. ಸರ್ಕಾರದಿಂದ ಜನ ಅಲ್ಲ, ಜನರಿಂದ ಸರ್ಕಾರ. ಆನೆಗಳು ವಾಪಸ್ ಹೋಗದಿದ್ರೆ ರಾಜೀನಾಮೆ ಕೊಟ್ಟೇ ಕೊಡ್ತೀವಿ ಎಂದು ಗುಡುಗಿದ್ದಾರೆ.

ಮಾನವ-ಪ್ರಾಣಿ‌ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. 2 ವರ್ಷದಲ್ಲಿ 16 ಜನ ಸಾವನ್ನಪ್ಪಿದ್ದಾರೆ. 58ರಲ್ಲಿ 2 ಕಾಡಾನೆ ಸೆರೆಯಾಗಿದೆ. 56 ಆನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಕಳಿಸುತ್ತೇವೆ ಎಂದಿದ್ದರು. ನಮ್ಮ ಜಿಲ್ಲೆ ಬೇಡ ಎಂದು ನಾವು ಪತ್ರ ನೀಡಿದ್ದೇವೆ. ನಮಗೆ ಗೊತ್ತಿಲ್ಲದೆ ಆನೆಗಳನ್ನ ಓಡಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದು ಆನೆ ಓಡಿಸಿದ್ದಾರೆ. ಮುತ್ತೋಡಿಯಲ್ಲಿ 450ಕ್ಕೂ ಹೆಚ್ಚು ಆನೆಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಭಾಗಕ್ಕೆ ಆನೆಗಳನ್ನ ಓಡಿಸಬಾರದು. ಕೆಲವು ವೇಳೆ ಆನೆ ಬರುತ್ತೆ, ಹೋಗುತ್ತೆ ತೊಂದತೆ ಇಲ್ಲ. ಬಲವಂತವಾಗಿ ಓಡೊಸೋದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.