ದರ್ಶನ್ ಪ್ರಕರಣದ ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ರಮ್ಯಾ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಜ್ ಬಿ ಶೆಟ್ಟಿ ದರ್ಶನ್ ಬಗ್ಗೆ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಜು.26): ಸಾಲು ಸಾಲು ಸೋಲುಗಳು, ದರ್ಶನ್ ಪ್ರಕರಣದಿಂದ ಸೊರಗಿ ಹೋಗಿದ್ದ ಸ್ಯಾಂಡಲ್‌ವುಡ್ ಮೇಲೆದ್ದು ಬರುವ ಲಕ್ಷಣ ಕಾಣುತ್ತಿದೆ. ಎಕ್ಕ ಸಿನಿಮಾಕ್ಕೆ ಭರ್ಜರಿ ಆರಂಭ ಸಿಕ್ಕ ಬೆನ್ನಲ್ಲೇ, ಜೆಪಿ ತುಮಿನಾಡ್ ನಿರ್ದೇಶನದ ಸು ಫ್ರಂ ಸೋ ಸಿನಿಮಾ ಕೂಡ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಮತ್ತೊಮ್ಮೆ ದರ್ಶನ್ ಪ್ರಕರಣ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ದರ್ಶನ್ ಹಾಗೂ ಆತನ ಸಹಚರರಿಗೆ ಜಾಮೀನು ನೀಡಿದ ರೀತಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೇಗಾದರೂ ಮಾಡಿ ಜಾಮೀನು ನೀಡಲೇಬೇಕು ಎನ್ನುವ ಕಾರಣಕ್ಕೆ ಯಾವುದಾದರೂ ಅಂಶ ಹುಡುಕಿಕೊಂಡು ಈ ಕೇಸ್‌ನಲ್ಲಿ ಜಾಮೀನು ನೀಡಲಾಗಿದೆ ಎಂದಿರುವ ಸುಪ್ರೀಂ ಕೋರ್ಟ್, ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನೂ ವಿಚಾರಣೆ ಮಾಡಿ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇನ್ನು 8-10 ದಿನಗಳಲ್ಲಿ ದರ್ಶನ್ ಜಾಮೀನು ಅರ್ಜಿಯ ತೀರ್ಪು ಬರಲಿದೆ. ಅದರ ನಡುವೆ ಡಿಗ್ಯಾಂಗ್ ಸದಸ್ಯರಿಗೆ ರಿಟನ್ ಸಬ್‌ಮಿಷನ್ ಅವಕಾಶ ನೀಡಲಾಗಿದೆ.
ಈ ಹಂತದಲ್ಲಿ ಸ್ಯಾಂಡಲ್‌ವುಡ್ ನಟಿ ರಮ್ಯಾ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ಸು ಫ್ರಂ ಸೋ ಸಿನಿಮಾಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದ ರಾಜ್ ಬಿ ಶೆಟ್ಟಿ ದರ್ಶನ್ ಬಗ್ಗೆ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋ ಕೂಡ ವೈರಲ್ ಆಗಿದೆ. ಕಳೆದ ಜನವರಿಯಲ್ಲಿ ಮಾತನಾಡಿದ್ದ ರಾಜ್ ಬಿ ಶೆಟ್ಟಿ, ಕೊಲೆ ಆರೋಪಿಗೆ ಎಂದೂ ಬೆಂಬಲ ನೀಡೋದಿಲ್ಲ ಎಂದಿದ್ದರು.
ದರ್ಶನ್ ಸರ್ ಅವರನ್ನು ಎಲ್ಲರೂ ಮೀಟ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನೀವು ಯಾವಾಗಲಾದರೂ ಮೀಟ್ ಮಾಡ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಾಜ್ ಬಿ ಶೆಟ್ಟಿ, 'ಐ ಥಿಂಕ್ ದರ್ಶನ್ ಅವರು ನನಗೆ ಆ ರೀತಿಯ ಪರಿಚಯ ಇಲ್ಲ. ನಾನು ಒಂದೇ ಬಾರಿ ಅವರನ್ನು ಮೀಟ್ ಆಗಿದ್ದು. ಬಹುಶಃ ಒಂದು ಸ್ಟೇಜ್‌ನಲ್ಲಿ ಮೀಟ್ ಅಗಿದ್ದೆ.ಈಗ ಅವರು ಜೈಲಲ್ಲಿದ್ದಾಗ ನಾನು ಹೋಗೋದು ಸರಿಯಲ್ಲ ಅಲ್ವಾ. ನಾನು ಅವರನ್ನು ನೋಡಲು ಜೈಲಿಗೆ ಯಾಕೆ ಹೋಗಬೇಕು ಅನ್ನೋದು ನನಗೆ ಗೊತ್ತಿಲ್ಲ' ಎಂದು ಹೇಳಿದ್ದರು.
ಅದೊಂದು ಕೇಸ್ ಆಗಬಾರದಿತ್ತು. ಬಟ್ ಆಗಿ ಹೋಗಿದೆ. ಅದರ ಬಗ್ಗೆಯೇ ಮಾತನಾಡಿ ಮಾತನಾಡಿ ಏನೂ ಪ್ರಯೋಜನವಿಲ್ಲ. ಬಟ್ ಒಂದು ಮುನ್ನೆಚ್ಚರಿಕೆ ಎಲ್ಲರಿಗೂ ಬೇಕು. ಎಲ್ಲಾ ನಟರಿಗೂ ಕೂಡ ಇದು ಬೇಕು. ಯಾವದೇ ರೀತಿಯಲ್ಲಿ ನಾವು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ನಾವು ಕೂಡ ಸಾಮಾನ್ಯರು. ಇಲ್ಲದೇ ಇದ್ದರೆ ನಾವೂ ಕೂಡ ಶಿಕ್ಷೆ ಅನುಭವಿಸಲೇಬೇಕು. ದರ್ಶನ್ ಕೇಸ್‌ಅನ್ನು ಹ್ಯಾಂಡಲ್ ಮಾಡಿರುವ ರೀತಿ ಬಹಳ ಖುಷಿ ಎನಿಸಿತು. ಯಾಕೆಂದರೆ ಕೆಲವು ಸಲ ತುಂಬಾ ಪವರ್‌ಫುಲ್ ವ್ಯಕ್ತಿಗಳಿಗೆ ಶಿಕ್ಷೆ ಆಗಲ್ಲ ಅಂತಾರೆ. ಇದು ಜನರಿಗೆ ಕಾನೂನಿನ ಬಗ್ಗೆ ಒಂದು ಕೆಟ್ಟ ಅಭಿಪ್ರಾಯವನ್ನು ಮೂಡಿಸಿತ್ತು. ಬಟ್ ಈಗ ಆರೋಪಿಗಳ ಸ್ಥಾನದಲ್ಲಿ ಇದ್ದಾರೆ. ನೋಡೋಣ ಮುಂದೆ ಏನಾಗುತ್ತೆ ಅಂತಾ. ಅಪರಾಧಿ ಅಂತಾ ಪರಿಗಣಿಸ್ತಾರಾ? ಇಲ್ವಾ ಅಂತಾ ಮುಂದೆ ನೋಡೋಣ' ಎಂದಿದ್ದರು.
