ಉಪಾಧ್ಯಕ್ಷ ಯಶಸ್ಸಿನ ಬಳಿಕ ಕಾಮಿಡಿ ಕಿಂಗ್ ಚಿಕ್ಕಣ್ಣ ನಾಯಕನಾಗಿ ನಟಿಸಿರುವ 'ಲಕ್ಷ್ಮೀಪುತ್ರ' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನವೆಂಬರ್ 27ರಂದು ಸಿನಿಮಾ ತೆರೆಗೆ ಬರಲಿದ್ದು, ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಡೈಲಾಗ್ ಹೇಳಿ ಚಿಕ್ಕಣ್ಣ ಗಮನ ಸೆಳೆದಿದ್ದಾರೆ. ಬೆನ್ನಲ್ಲೇ ಚಿಕ್ಕಣ್ಣ ಯಾರಿಗೆ ಬಿಗ್ ಮೆಸೇಜ್ ಪಾಸ್ ಮಾಡಿದ್ರು ಅನ್ನೋ ಚರ್ಚೆ ಶುರುವಾಗಿದೆ.
ಬೆಂಗಳೂರು: 'ಉಪಾಧ್ಯಕ್ಷ' ಯಶಸ್ಸಿನ ಬಳಿಕ ಕಾಮಿಡಿ ಕಿಂಗ್ ಚಿಕ್ಕಣ್ಣ ಮತ್ತೆ ನಾಯಕ ನಟನಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇದೇ ನವೆಂಬರ್ 27ರಂದು ಸಿನಿಮಾ ತೆರೆಗೆ ಬರಲಿದೆ.
ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಟ್ರೈಲರ್ ರಿಲೀಸ್ ಮಾಡಿತ್ತು. ಈ ವೇದಿಕೆಯಲ್ಲಿ ಆಪ್ತ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಅವರನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಯಶ್ ಅವರ ಜನಪ್ರಿಯ ಡೈಲಾಗ್ ಒಂದನ್ನು ಹೊಡೆದು ತಾವು ಸ್ಪರ್ಧೆಗೆ ಸಿದ್ಧ ಎಂಬ ಖಡಕ್ ಸಂದೇಶ ಕೊಟ್ಟಿದ್ದಾರೆ.
ಚಿಕ್ಕಣ್ಣ ಹೇಳಿದ್ದೇನು?
ಸಾಮಾನ್ಯವಾಗಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವಾಗ ಪೈಪೋಟಿ ಕಡಿಮೆ ಇರಲಿ ಎಂದು ಚಿತ್ರತಂಡಗಳು ಬಯಸುತ್ತವೆ. 'ಲಕ್ಷ್ಮೀಪುತ್ರ' ಚಿತ್ರಕ್ಕೂ ಮೊದಲು ಹಾಗೇ ಆಗಿತ್ತು. ಈಗ ನವೆಂಬರ್ 27ರ ಸುತ್ತಮುತ್ತ ಸಾಲು ಸಾಲು ಸಿನಿಮಾಗಳು ಬರುತ್ತಿವೆ. ಇದು ಚಿಕ್ಕಣ್ಣ ಅವರಿಗೂ ಕೊಂಚ ಗಾಬರಿ ಶುರುವಾಗಿದೆ. ಈ ಬಗ್ಗೆ ವೇದಿಕೆ ಮೇಲೆ ಮನಬಿಚ್ಚಿ ಮಾತನಾಡಿದ ಚಿಕ್ಕಣ್ಣ, ರಾಕಿಂಗ್ ಸ್ಟಾರ್ ಯಶ್ ಈ ಹಿಂದೆ ತಮ್ಮ 'ರಾಜಹುಲಿ' ಸಿನಿಮಾದಲ್ಲಿ ಹೇಳಿದ್ದ ಡೈಲಾಗ್ ನೆನಪಿಸಿಕೊಂಡು ಭರ್ಜರಿ ಪಂಚ್ ಕೊಟ್ಟಿದ್ದಾರೆ.
ಚಿಕ್ಕಣ್ಣ ಹೊಡೆದ ಆ ಡೈಲಾಗ್ ಏನು?
'ಹಿಂದೆ ಯಾವ್ ಸಿನಿಮಾನೂ ಇಲ್ಲ, ಮುಂದೆ ಯಾವ್ ಸಿನಿಮಾನೂ ಇಲ್ಲ. ನಮ್ ಜೊತೆ ಯಾವ್ದು ಇಲ್ಲ ಅಂತ. ಅದಾದ ಮೇಲೆ ಅಂದರೆ ನವೆಂಬರ್ 27 ಆದಮೇಲೆ ಬರ್ತಾನೆ ಇದ್ದಾರೆ. ಅದೊಂದು ಸ್ವಲ್ಪ ಗಾಬರಿ ಇದೆ. But okay. ಅವಾಗಾವಾಗ ರಾಕಿ ಭಾಯ್ನ ನೆನಪಿಸ್ಕೊಂಡು ಸುಮ್ನಾದೆ' ಎನ್ನುತ್ತ ಯಶ್ ಅವರ ಡೈಲಾಗ್ ಹೊಡೆದಿದ್ದಾರೆ.
'ಅಣ್ತಮ್ಮಾ ರೇಸ್ ಅಲ್ಲಿ ಒಂದ್ ಕುದುರೆ ಹೋದ್ರೆ ಜಟಗಾ ಗಾಡಿ ಅಂತಾರೆ. ಅಕ್ಕಪಕ್ಕ ಒಂದೆರಡ್ಮೂರು ಕುದುರೆಗಳಿದ್ದ್ ಗೆದ್ರೇನೆ ಅದು ನಿಜವಾದ ರೇಸ್ ಅಂತ ಅನ್ನೋದು ಅಂತ. ಅಕ್ಕಪಕ್ಕದಲ್ಲಿ ಎರಡು ಕುದುರೆ ಓಡ್ತಿದ್ರೆನೇ ಕುದುರೆ ಮೇಲೆ ಕೂತವ್ನ ಜ್ಯಾಕಿ ಅನ್ನೋದು. ಇಲ್ಲಾ ಅಂದ್ರೆ ಜಟಗಾ ಓಡ್ಸೋನು ಅಂತಾರೆ' ಎಂಬ ಡೈಲಾಗ್ ಅನ್ನು ಚಿಕ್ಕಣ್ಣ ಪುನರುಚ್ಚರಿಸಿದ್ದಾರೆ. ಈ ಮಾತಿನ ಮೂಲಕ ಎಷ್ಟೇ ಸಿನಿಮಾಗಳು ಎದುರಾದರೂ ಎಲ್ಲರ ಜೊತೆ ಪೈಪೋಟಿ ನಡೆಸಿ ಗೆಲ್ಲಲು ನಾವು ರೆಡಿ ಎಂಬ ಸಂದೇಶವನ್ನು ಚಿಕ್ಕಣ್ಣ ರವಾನಿಸಿದ್ದಾರೆ.
ಇನ್ನು, ಟ್ರೈಲರ್ ರಿಲೀಸ್ ಇವೆಂಟ್ಗೆ ಹಿರಿಯ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಚಿತ್ರದ ಅಮ್ಮನ ಹಾಡು ಪ್ಲೇ ಆದಾಗ, ಶಿವಣ್ಣ ವೇದಿಕೆ ಮೇಲೆ ತಮ್ಮ ಸೂಪರ್ ಹಿಟ್ 'ಜೋಗಿ' ಸಿನಿಮಾದ ಸ್ಟೈಲ್ನಲ್ಲಿ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದರು. ಶಿವಣ್ಣನ ಜೊತೆ ಚಿಕ್ಕಣ್ಣ ಮತ್ತು ಹಿರಿಯ ನಟಿ ತಾರಾ ಅನುರಾಧಾ ಕೂಡ ಸ್ಟೆಪ್ ಹಾಕಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಶಿವಣ್ಣನ ಪ್ರೀತಿ ಮತ್ತು ಬೆಂಬಲದ ಬಗ್ಗೆ ಮಾತನಾಡಿದ ಚಿಕ್ಕಣ್ಣ, ಈ ಹಿಂದೆ ನನ್ನ ಉಪಾಧ್ಯಕ್ಷ ಚಿತ್ರಕ್ಕೂ ಶಿವಣ್ಣ ಸಪೋರ್ಟ್ ಮಾಡಿದ್ದರು. ಸಿನಿಮಾ ನೋಡಿ ಶುಭ ಕೋರಿದ್ದರು. ಈಗ 'ಲಕ್ಷ್ಮೀಪುತ್ರ' ಚಿತ್ರಕ್ಕೂ ಬಂದು ಬೆಂಬಲ ನೀಡಿದ್ದಾರೆ. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಶಿವಣ್ಣ ಇಡೀ ದಿನ ಸಿನಿಮಾ ಕೆಲಸಗಳಲ್ಲಿಯೇ ಬ್ಯುಸಿ ಇರುತ್ತಾರೆ. ಆದರೂ ನಮ್ಮ ಕನ್ನಡ ಸಿನಿಮಾ ಅಂತ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಾರೆ ಎಂದು ಕೃತಜ್ಞತೆ ಸಲ್ಲಿಸಿದರು.















