ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ತೀವ್ರ ನೋವಿನ ನಡುವೆಯೂ ಬಸ್ ಅನ್ನು ಮರಕ್ಕೆ ಗುದ್ದಿ 26 ಮಕ್ಕಳ ಜೀವ ಉಳಿಸಿದ ಚಾಲಕ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು: ಕೊಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ಅಮ್ಮಡಿ ಗ್ರಾಮದ ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ. 26 ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಬಸ್ ಡ್ರೈವರ್ಗೆ ಎದೆ ನೋವು ಕಾಣಿಸಿಕೊಂಡಿದೆ.
ತೀವ್ರ ಎದೆ ನೋವಿನ ಹೊರತಾಗಿಯೂ ಬಸ್ಸಿನಲ್ಲಿ 26 ಜೀವಗಳು ಇರೋದನ್ನು ತಿಳಿದ ಬಸ್ ಡ್ರೈವರ್, ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಹಠಾತ್ ನೋವು ಹಿನ್ನೆಲೆಯಲ್ಲಿ ಅವರ ಬಳಿ ಸಾಧ್ಯವಾಗಲಿಲ್ಲ. ಕೊನೆಗೆ ಮರವೊಂದಕ್ಕೆ ಬಸ್ ಅನ್ನು ಗುದ್ದಿ ನಿಲ್ಲಿಸಿದ್ದಾನೆ. ಆ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಗಳ ಜೀವ ಉಳಿದಿದೆ.
ಆದರೆ.. ಇತ್ತ ಬಸ್ ನಿಲ್ಲುತ್ತಿದ್ದಂತೆಯೇ ಚಾಲಕ ಸಂಪೂರ್ಣ ನಿತ್ರಾಣ ಕಳೆದುಕೊಂಡು ನೆಲಕ್ಕೆ ಕುಸಿದು ಬಿದ್ದಾನೆ. ಅಷ್ಟರಲ್ಲೇ ಚಾಲಕನ ಪ್ರಾಣ ಹೋಗಿತ್ತು. ಲಕ್ಷ್ಮಣ (65) ಮೃತ ದುರ್ದೈವಿ. ಮೃತ ಚಾಲಕ ಲಕ್ಷ್ಮಣ್ ಅವರು ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ ನಿವಾಸಿ ಎಂದು ತಿಳಿದುಬಂದಿದೆ.
ಮಕ್ಕಳಿಗೆ ಸಣ್ಣಪುಟ್ಟ ಗಾಯ
ಬಸ್ ಮರಕ್ಕೆ ಗುದ್ದಿದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಕೆಲವು ಮಕ್ಕಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಮಕ್ಕಳನ್ನ ಪ್ರಾಥಮಿಕ ಚಿಕಿತ್ಸೆ ನಂತರ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ಇನ್ನು ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತದ ಸುದ್ದಿ ತಿಳಿದು ಸ್ಥಳೀಯ ಶಾಸಕ ಟಿಡಿ ರಾಜೇಗೌಡ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದರು. ಮಕ್ಕಳ ಆರೋಗ್ಯವನ್ನು ವಿಚಾರಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಮೃತ ಚಾಲಕ ಲಕ್ಷ್ಮಣ ಪರ್ಥಿವ ಶರೀರವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ನೀಡಲಾಗುತ್ತದೆ. ಇತ್ತ ಲಕ್ಷಣ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಸಂಬಂಧಿಕರ ಆಕ್ರಂದ ಮುಗಿಲು ಮುಟ್ಟಿದೆ. ಈ ದುರ್ಘಟನೆಯು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ

ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಕಳಪೆ ರಸ್ತೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ರಸ್ತೆ ಪ್ಯಾಚ್ ವರ್ಕ್, ಗುತ್ತಿಗೆದಾರ-ಕಂಟ್ರಾಕ್ಟರ್ಗೆ ಕ್ಲಾಸ್ ತೆಗೆದುಕೊಂಡಿರುವ ಸ್ಥಳೀಯರು, ದುಡ್ಡು ಸರ್ಕಾರದ್ದು, ನಿಮ್ಮ ಅಪ್ಪನ ಮನೆಯದ್ದಾ, ಮಾಡೋ ಕೆಲಸ ಸರಿಯಾಗಿ ಮಾಡಿ. ಕಳಪೆ ಕೆಲಸ ಮಾಡಿ ನಿಮ್ಮ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸಬೇಕಾ? ಗುಂಡಿಗೆ ಜಲ್ಲಿ ಹಾಕಿ ಡಾಂಬರ್ ಹಾಕಿದ್ರೆ ವಾರವೂ ಬರಲ್ಲ. ಮತ್ತೆ ಕಿತ್ತೋಗುತ್ತದೆ. ಕೆಳಗೆ ಟಾರ್ ಹಾಕಿದ ಮೇಲೆ ಜಲ್ಲಿ ಹಾಕಿ ಮತ್ತೆ ಟಾರ್ ಹಾಕಿ. ಸುಮ್ನೆ ಜಲ್ಲಿ ಹಾಕಿ ಟಾರ್ ಸುರಿದು ಹೋದರೆ ಎರಡೇ ದಿನಕ್ಕೆ ಕಿತ್ತೋಗುತ್ತದೆ. ಹೇಗೆ ಪ್ಯಾಚ್ ಹಾಕ್ತೀರಾ ಹಾಕಿ ತೋರಿಸಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಪ್ಯಾಚ್ ವರ್ಕ್ ರಸ್ತೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಕಳಪೆ ರಸ್ತೆಯಿಂದಾಗ ನಿತ್ಯ ಅಪಘಾತಗಳು ಆಗುತ್ತಿವೆ. ಇದಕ್ಕೆಲ್ಲ ಯಾರು ಹೊಣೆ ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.















