ಹಾಡು ನೋಡುವಾಗಲೂ ಪ್ರೇಕ್ಷಕರ ಮನಸ್ಸಿನಲ್ಲಿ 'ಮುಂದೆ ಏನೋ ದೊಡ್ಡದು ನಡೆಯಲಿದೆ' ಎಂಬ ಕುತೂಹಲ ಹಾಗೆಯೇ ಉಳಿಯಿತು. ಹೀಗೆ ಚಿತ್ರಕಥೆ ಎಲ್ಲಿಯೂ ಕುಸಿಯದಂತೆ ಉಪೇಂದ್ರ ಮಾಡಿದ ಆ ಒಂದೇ ಒಂದು ಸಣ್ಣ ಬದಲಾವಣೆ ಹಾಗೂ ವರದಣ್ಣ ಅವರ ಅನುಭವದ ಮಾತು ಸೇರಿ 'ಓಂ' ಸಿನಿಮಾವನ್ನು ಕನ್ನಡ ಚಿತ್ರರಂಗದ ಅಜರಾಮರ ಸಿನಿಮಾವನ್ನಾಗಿ ಮಾಡಿತು.

'ಓ ಗುಲಾಬಿಯೇ' ಹಾಡಿನ ಹತ್ತಿರ ಸಿನಿಮಾ ಬಿದ್ದುಹೋಗುತ್ತೆ ಅನ್ನಿಸಿತ್ತು... ಆದರೆ ವರದಣ್ಣ ಹೇಳಿದ ಆ ಒಂದೇ ಮಾತು ಇತಿಹಾಸ ಬರೆಯಿತು!' ಎಂದು 'ಓಂ' ಸಿನಿಮಾದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಉಪೇಂದ್ರ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ಹೊಸ ಅಧ್ಯಾಯ ಬರೆದ ಸಿನಿಮಾ ಎಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಓಂ' (Om). ಬಿಡುಗಡೆಯಾಗಿ ದಶಕಗಳೇ ಕಳೆದರೂ ಇಂದಿಗೂ ಈ ಸಿನಿಮಾ ರೀ-ರಿಲೀಸ್ ಆದರೆ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತವೆ. ಆದರೆ ಇಂತಹದೊಂದು ಕಲ್ಟ್ ಕ್ಲಾಸಿಕ್ ಸಿನಿಮಾ ತೆರೆಗೆ ಬರುವ ಮುನ್ನ, ಅದರ ಸ್ಕ್ರಿಪ್ಟ್ ಹಂತದಲ್ಲಿ ಉಪೇಂದ್ರ ಅವರಿಗೆ ದೊಡ್ಡದೊಂದು ಗೊಂದಲ ಕಾಡಿತ್ತು ಎಂಬುದು ನಿಮಗೆ ಗೊತ್ತೇ? 'ರಾಪಿಡ್ ರಶ್ಮಿ' (Rapid Rashmi) ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಉಪೇಂದ್ರ, 'ಓಂ' ಸಿನಿಮಾದ ಆ ರೋಚಕ ತೆರೆಮರೆಯ ಕಥೆಯನ್ನು ಹಾಗೂ ಡಾ. ರಾಜ್‌ಕುಮಾರ್ ಅವರ ಸಹೋದರ ವರದಣ್ಣ (ವರದಪ್ಪ) ಅವರ ಅಪಾರ ಸಿನಿಮಾ ಜ್ಞಾನವನ್ನು ಬಹಳ ಅಚ್ಚರಿ ಹಾಗೂ ಗೌರವದಿಂದ ನೆನಪಿಸಿಕೊಂಡಿದ್ದಾರೆ.

'ಓಂ' ಸಿನಿಮಾದ ಸಿದ್ಧತೆಯ ದಿನಗಳನ್ನು ಮೆಲುಕು ಹಾಕಿದ ಉಪೇಂದ್ರ ಹೇಳಿದ್ದು ಇದು!

'ಓಂ' ಸಿನಿಮಾದ ಸಿದ್ಧತೆಯ ದಿನಗಳನ್ನು ಮೆಲುಕು ಹಾಕಿದ ಉಪೇಂದ್ರ, "ಓಂ ಸಿನಿಮಾ ಮಾಡಬೇಕಾದರೆ ನಡೆದ ಆ ಘಟನೆ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಆಗ ಸಿನಿಮಾದ ಪೂರ್ತಿ ಸ್ಕ್ರಿಪ್ಟ್ ರೆಡಿಯಾಗಿತ್ತು. ನಾನು ಎಲ್ಲರಿಗೂ ಸ್ಕ್ರಿಪ್ಟ್ ರೀಡಿಂಗ್ ಕೂಡ ಕೊಟ್ಟಿದ್ದೆ, ಕಥೆ ಕೇಳಿದ ಎಲ್ಲರಿಗೂ ಅದು ಇಷ್ಟವಾಗಿ ಓಕೆ ಆಗಿತ್ತು. ಆದರೆ ನನ್ನ ಮನಸ್ಸಿನಲ್ಲಿ ಮಾತ್ರ ಏನೋ ಒಂದು ಸಣ್ಣ ಅನುಮಾನ ಕಾಡುತ್ತಲೇ ಇತ್ತು. ಹಾಗಾಗಿ ನಾನು ಶೂಟಿಂಗ್ ಶುರು ಮಾಡುವ ಮುನ್ನ ಇನ್ನೂ 1 ಅಥವಾ 2 ತಿಂಗಳು ಟೈಮ್ ಬೇಕು ಎಂದು ಕೇಳಿದ್ದೆ. ಕಥೆಯಲ್ಲಿ ಇನ್ನೇನೋ ಸರಿಪಡಿಸಬೇಕು ಅಂತ ನನ್ನ ಪಾಡಿಗೆ ನಾನು ಯೋಚನೆ ಮಾಡುತ್ತಾ ಕೂತಿದ್ದೆ" ಎಂದು ಅಂದಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಉಪೇಂದ್ರ ಅವರು ಹೀಗೆ ಸಮಯ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿದ ವರದಣ್ಣ, ಒಂದು ದಿನ ಉಪೇಂದ್ರ ಅವರನ್ನು ಕರೆದು ಮಾತನಾಡಿಸಿದರು. "ವರದಣ್ಣ ನನ್ನನ್ನು ಕರೆದು, 'ಯಾಕೆ ಉಪೇಂದ್ರ, ಸ್ಕ್ರಿಪ್ಟ್ ರೀಡಿಂಗ್ ಕೊಟ್ಟಾಗ ಎಲ್ಲವೂ ಕರೆಕ್ಟ್ ಆಗಿತ್ತಲ್ಲ? ನೀವೂ ಅಷ್ಟೇ ಚೆನ್ನಾಗಿ ಕಥೆ ಹೇಳಿದ್ರಿ, ಎಲ್ಲರಿಗೂ ಇಷ್ಟ ಆಯ್ತು. ಮತ್ತೆ ಈಗ ಎಲ್ಲಿ, ಏನಾಗಿದೆ? ಯಾಕೆ ಇಷ್ಟು ಟೈಮ್ ತಗೋತಾ ಇದ್ದೀರಾ?' ಅಂತ ಕೇಳಿದರು. ಅದಕ್ಕೆ ನಾನು, 'ಇಲ್ಲ ಸರ್, ನನಗೆ ಸ್ಕ್ರಿಪ್ಟ್‌ನಲ್ಲಿ ಒಂದು ಕಡೆ ಸ್ವಲ್ಪ ಡೌಟ್ ಅನಿಸುತ್ತಿದೆ' ಅಂತ ಹೇಳಿದೆ" ಎಂದಿದ್ದಾರೆ ಉಪೇಂದ್ರ.

ವರದಣ್ಣ ಆಡಿದ ಮಾತು ಕೇಳಿ ಉಪೇಂದ್ರ ನಿಜಕ್ಕೂ ದಂಗಾಗಿ ಹೋಗಿದ್ದರು!

ಆಗ ವರದಣ್ಣ ಆಡಿದ ಮಾತು ಕೇಳಿ ಉಪೇಂದ್ರ ನಿಜಕ್ಕೂ ದಂಗಾಗಿ ಹೋಗಿದ್ದರು! ಏಕೆಂದರೆ, ನೂರಾರು ಸಿನಿಮಾಗಳ ಸ್ಕ್ರಿಪ್ಟ್‌ಗಳನ್ನು ನೋಡಿ, ಅಳೆದು ತೂಗಿ ಗೆಲ್ಲಿಸಿದ್ದ ಅನುಭವ ವರದಣ್ಣ ಅವರಿಗಿತ್ತು. "ಅವರು ಎಷ್ಟು ಚೆನ್ನಾಗಿ ಹೇಳಿದರು ಅಂದರೆ, 'ನನಗೆ ಗೊತ್ತು ನೀವು ಎಲ್ಲಿ ಸಿಕ್ಕಾಕೊಂಡಿದ್ದೀರಾ ಅಂತ!' ಎಂದರು. ನನಗೆ ಆಶ್ಚರ್ಯವಾಗಿ 'ಎಲ್ಲಿ ಸರ್?' ಅಂತ ಕೇಳಿದೆ. ಅದಕ್ಕೆ ವರದಣ್ಣ ಒಂದು ಕ್ಷಣವೂ ಯೋಚಿಸದೆ, 'ಆ ಓ ಗುಲಾಬಿ ಹಾಡು ಬರುತ್ತಲ್ಲ... ನಿಮಗೆ ಅಲ್ಲೇ ತಾನೆ ಡೌಟ್ ಇರೋದು?' ಅಂತ ಕರಾರುವಾಕ್ಕಾಗಿ ಗುರುತಿಸಿಬಿಟ್ಟರು!" ಎಂದು ಉಪೇಂದ್ರ ವರದಣ್ಣ ಅವರ ಚಾಣಾಕ್ಷತೆಯನ್ನು ಕೊಂಡಾಡಿದ್ದಾರೆ.

ತಮ್ಮ ಮನಸ್ಸಿನಲ್ಲಿದ್ದ ನಿಖರವಾದ ಗೊಂದಲವನ್ನು ವರದಣ್ಣ ಅಷ್ಟು ಸುಲಭವಾಗಿ ಕಂಡುಹಿಡಿದಿದ್ದನ್ನು ಕಂಡು ಅಚ್ಚರಿಪಟ್ಟ ಉಪೇಂದ್ರ, ತಮ್ಮ ಆತಂಕವನ್ನು ಅವರ ಮುಂದೆ ಬಿಚ್ಚಿಟ್ಟರು. "ಹೌದು ಸರ್! ಅಲ್ಲಿಯವರೆಗೂ ನಾನು ಸಿನಿಮಾವನ್ನು ತುಂಬಾ ತೀವ್ರವಾಗಿ, ಎತ್ತರಕ್ಕೆ ಎತ್ತಿಕೊಂಡು ಹೋಗುತ್ತೇನೆ. ಆದರೆ ಆ ಹಂತದಲ್ಲಿ ನಾಯಕಿ ಪ್ರೀತಿಯಲ್ಲಿ ಬಿದ್ದುಬಿಡುತ್ತಾಳೆ, ಅವರಿಬ್ಬರೂ ಪ್ರೀತಿ ಮಾಡುತ್ತಾರೆ, ಆಮೇಲೆ 'ಓ ಗುಲಾಬಿಯೇ' ಹಾಡು ಬರುತ್ತದೆ. ಅಲ್ಲಿಂದ ಸಿನಿಮಾದ ಓಟ ಎಲ್ಲೋ ಒಂದು ಕಡೆ ಡ್ರಾಪ್ (ಕುಸಿತ) ಆಗಿಬಿಡುತ್ತದೆಯೇನೋ ಅನ್ನಿಸುತ್ತಿದೆ ಸರ್" ಎಂದು ಉಪೇಂದ್ರ ತಮ್ಮ ನಿರ್ದೇಶಕನ ಭಯವನ್ನು ಹಂಚಿಕೊಂಡಿದ್ದರು.

ಆದರೆ ವರದಣ್ಣ ಅವರು ಕೊಟ್ಟ ಧೈರ್ಯ ಮತ್ತು ಸಲಹೆ ಉಪೇಂದ್ರ ಅವರಿಗೆ ದೊಡ್ಡ ಶಕ್ತಿ ನೀಡಿತು. "ಇಲ್ಲ, ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಡಿ! ಆ ಹಾಡು ಬರುವಷ್ಟರಲ್ಲಿ ಜನ ಈಗಾಗಲೇ ಕಥೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿರುತ್ತಾರೆ. ಅವರಿಬ್ಬರೂ ಪ್ರೀತಿ ಮಾಡಿದಾಗ, 'ಮುಂದೆ ಏನಾಗುತ್ತದೆ?' ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಆ ಕುತೂಹಲವೇ ಸಿನಿಮಾವನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ, ನೀವು ಚಿಂತೆ ಮಾಡಬೇಡಿ" ಎಂದು ವರದಣ್ಣ ಭರವಸೆ ತುಂಬಿದ್ದರು.

ಆದರೆ ಅಲ್ಲಿಗೆ ಸುಮ್ಮನಾಗುವ ಜಾಯಮಾನ ರಿಯಲ್ ಸ್ಟಾರ್ ಉಪೇಂದ್ರ ಅವರದ್ದಲ್ಲ! ವರದಣ್ಣ ಧೈರ್ಯ ತುಂಬಿದ ನಂತರವೂ, ಪ್ರೇಕ್ಷಕರ ಗಮನ ಒಂದೇ ಒಂದು ಸೆಕೆಂಡ್ ಕೂಡ ಆಚೀಚೆ ಹೋಗಬಾರದು ಎಂದು ಉಪೇಂದ್ರ ತಮ್ಮದೇ ಆದ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದರು.

"ವರದಣ್ಣ ಅಷ್ಟು ಧೈರ್ಯ ಕೊಟ್ಟ ಮೇಲೂ, ಆ ಹಾಡು ಬರುವ ಜಾಗದಲ್ಲಿ ಕಥೆಯ ವೇಗ ಎಲ್ಲೂ ಡ್ರಾಪ್ ಆಗಬಾರದು ಅಂತ ನಾನು ಒಂದು ವಿಶೇಷ ಶಾಟ್ ಸೇರಿಸಿದೆ. ಇನ್ನೇನು ನಾಯಕಿಗೆ ಸತ್ಯನ ಮೇಲೆ ಪ್ರೀತಿ ಹುಟ್ಟಿತು, ಹಾಡು ಶುರುವಾಗಬೇಕು ಅನ್ನುವಷ್ಟರಲ್ಲಿಯೇ—ಹೊಟ್ಟೆ ಬಗೆದಿರುವ ಒಬ್ಬ ವ್ಯಕ್ತಿಯನ್ನು ತಂದು ತೋರಿಸಿ, ಜೈಲಿನಲ್ಲಿ ಇರುವ ಸತ್ಯನ ಬಗ್ಗೆ 'ನೋಡು, ಸತ್ಯ ಅವನ ಹೊಟ್ಟೆ ಬಗೆದುಬಿಟ್ಟಿದ್ದಾನೆ, ಅವನನ್ನು ಬಿಡೋದೇ ಇಲ್ಲ!' ಅನ್ನುವಂತಹ ಒಂದು ಭಯಾನಕ ಪುಷ್ ಕೊಟ್ಟು, ಆಮೇಲೆ 'ಓ ಗುಲಾಬಿಯೇ' ಹಾಡನ್ನು ಓಪನ್ ಮಾಡಿದೆ!" ಎಂದು ಉಪೇಂದ್ರ ಆ ಐಕಾನಿಕ್ ದೃಶ್ಯದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಒಂದು ರೊಮ್ಯಾಂಟಿಕ್ ಹಾಡು ಶುರುವಾಗುವ ಮುನ್ನವೇ ಅಂತಹದೊಂದು ಕ್ರೂರ ಮತ್ತು ತೀವ್ರವಾದ ದೃಶ್ಯವನ್ನು ಇಟ್ಟಿದ್ದರಿಂದ, ಹಾಡು ನೋಡುವಾಗಲೂ ಪ್ರೇಕ್ಷಕರ ಮನಸ್ಸಿನಲ್ಲಿ 'ಮುಂದೆ ಏನೋ ದೊಡ್ಡದು ನಡೆಯಲಿದೆ' ಎಂಬ ಕುತೂಹಲ ಹಾಗೆಯೇ ಉಳಿಯಿತು. ಹೀಗೆ ಚಿತ್ರಕಥೆ ಎಲ್ಲಿಯೂ ಕುಸಿಯದಂತೆ ಉಪೇಂದ್ರ ಮಾಡಿದ ಆ ಒಂದೇ ಒಂದು ಸಣ್ಣ ಬದಲಾವಣೆ ಹಾಗೂ ವರದಣ್ಣ ಅವರ ಅನುಭವದ ಮಾತು ಸೇರಿ 'ಓಂ' ಸಿನಿಮಾವನ್ನು ಕನ್ನಡ ಚಿತ್ರರಂಗದ ಅಜರಾಮರ ಸಿನಿಮಾವನ್ನಾಗಿ ಮಾಡಿತು. ಉಪೇಂದ್ರ ಅವರ ಈ ಸಿನಿಮಾ ಜ್ಞಾನ ಮತ್ತು ತೆರೆಮರೆಯ ಕಥೆ ಇದೀಗ ಸಿನಿಪ್ರಿಯರ ಮನಗೆದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರ ಮೆಚ್ಚುಗೆ ಗಳಿಸುತ್ತಿದೆ. ಅಂದಹಾಗೆ, ಈ ಸ್ಟೋರಿಯನ್ನು 'ವಿವಿಧ ವಿಸ್ಮಯ' ಫೇಸ್‌ಬುಕ್ ಪೇಜ್‌ನಿಂದ ಆಯ್ದುಕೊಳ್ಳಲಾಗಿದೆ.