ನಟಿ ಕಲ್ಪನಾ ಅವರು ಬೆಳಗಾವಿಯ ಐಬಿಯಲ್ಲಿ ನಿಧನರಾದ ನಂತರ ಆ ಬಂಗಲೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದವು. ನಟ ‘ಮುಖ್ಯಮಂತ್ರಿ’ ಚಂದ್ರು ಅವರು ಅದೇ ಬಂಗಲೆಯಲ್ಲಿ ತಂಗಿದ್ದಾಗ ಕಿಲಕಿಲ ನಗು ಮತ್ತು ಗೆಜ್ಜೆ ಶಬ್ದದಂತಹ ಭಯಾನಕ ಅನುಭವಗಳನ್ನು ಎದುರಿಸಿದರು.
ಕನ್ನಡ ಚಿತ್ರರಂಗದ ಖ್ಯಾತ ನಟಿ 'ಮಿನುಗು ತಾರೆ' ಎಂದೇ ಖ್ಯಾತರಾಗಿದ್ದ ನಟಿ ಕಲ್ಪನಾ ಅವರು 1979ರ ಮೇ 12 ರಂದು ನಿಧನರಾದರು. ಅವರ ಸಾವು ಆತ್ಮಹ*ತ್ಯೆ ಎಂದು ವರದಿಯಾಗಿದ್ದರೂ, ಸುತ್ತಲಿನ ಕಾರಣಗಳು ಇಂದಿಗೂ ಚರ್ಚೆಯಲ್ಲಿವೆ. ಬೆಳಗಾವಿಯಲ್ಲಿ ಗೋಟೂರ್ ಇನ್ಸ್ಪೆಕ್ಷನ್ ಬಂಗಲೋ (IB) ಅರ್ಥಾತ್ ಗೆಸ್ಟ್ ಹೌಸ್ನಲ್ಲಿ ಅವರು ಸಾವನ್ನಪ್ಪಿದಾಗ ಅವರಿಗೆ ಕೇವಲ 36 ವರ್ಷ ವಯಸ್ಸು. ಈ ಅಕಾಲಿಕ ಅಗಲಿಕೆ ಇಡೀ ಚಿತ್ರರಂಗವನ್ನೇ ದಂಗುಬಡಿಸಿದ್ದು ಇದೆ. ಆದರೆ ಅವರು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದುದರಿಂದ ಆ ಬಂಗಲೆಯಲ್ಲಿ ಆಗ ಯಾರೂ ವಾಸಿಸುತ್ತಿರಲಿಲ್ಲ. ಅಲ್ಲಿ ನಡೆಯುತ್ತಿದೆ ಎನ್ನಲಾದ ಚಿತ್ರ-ವಿಚಿತ್ರ ಘಟನೆಗಳಿಂದ ಎಲ್ಲರೂ ಆ ಬಂಗಲೆಯ ಬಳಿ ಹೋಗಲು ಹೆದರುತ್ತಿದ್ದರು. ಆದರೆ ಧೈರ್ಯ ಮಾಡಿ ಹೋಗಿದ್ದ ಮುಖ್ಯಮಂತ್ರಿ ಚಂದ್ರು ಅವರಿಗೆ ಅಂದು ಆದ ಭಯಾನಕ ಅನುಭವವನ್ನು ಸಂದರ್ಶನವೊಂದರಲ್ಲಿ ರಿವೀಲ್ಮಾಡಿದ್ದಾರೆ.
ಧೈರ್ಯ ಮಾಡಿ ಅಲ್ಲಿ ಮಲಗಿದ್ದೆ
ಆಗ ನಾನು ಜನತಾ ಪಕ್ಷದಲ್ಲಿದ್ದೆ. ಅದಾಗಲೇ ಕಲ್ಪನಾ ಅವರ ದೊಡ್ಡ ಅಭಿಮಾನಿಯಾಗಿದ್ದರೂ, ನನಗೆ ಅವರ ಜೊತೆ ನಟನೆ ಮಾಡಲು ಆಗಿರಲಿಲ್ಲ. ಪಕ್ಷದ ವತಿಯಿಂದ ನಾಗರಾಜ್ ಮೂರ್ತಿ ಅವರ ಜೊತೆ ಬೆಳಗಾವಿಗೆ ಹೋಗಿದ್ದೆ. ಗೆಸ್ಟ್ ಹೌಸ್ ತಲುಪಿದಾಗ ರಾತ್ರಿ 11.30 ದಾಟಿತ್ತು. ಅಲ್ಲಿದ್ದ ಕೆಲಸದವನ ಬಳಿಕ ಇದರ ಬೀಗ ಕೊಡು ಎಂದು ಹೇಳಿದೆ. ಆದರೆ ಅವನು ನಮ್ಮನ್ನು ಗುರುತಿಸಿ, ಬೇಡ ಸ್ವಾಮಿ, ಇಲ್ಲಿ ಇರಬೇಡಿ. ಇಲ್ಲೇ ಸ್ವಲ್ಪ ದೂರದಲ್ಲಿ ಮತ್ತೊಂದು ಐಬಿ ಇದೆ. ಅಲ್ಲಿಯೇ ಹೋಗಿ ಎಂದ. ಕಾರಣ ಕೇಳಿದಾಗ ಇಲ್ಲಿ ನಡೆಯುವ ಕೆಲವೊಂದು ಭಯಾನಕ ಘಟನೆಗಳನ್ನು ವಿವರಿಸಿದ. ಆದರೆ ನಾವು ಅದನ್ನೆಲ್ಲಾ ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಕೊಡೋ ಸುಮ್ಮನೇ ಕೀ. ಭೂತ, ಗೀತ ಅಂತೆ ಎಂದು ತಮಾಷೆ ಮಾಡಿ ಕೀ ತೆಗೆದುಕೊಂಡು ಮಲಗಿದೆವು ಎನ್ನುತ್ತಲೇ ಅರ್ಧ ಗಂಟೆಯಲ್ಲಿಯೇ ಆದ ಭಯಾನಕ ಅನುಭವ ಹೇಳಿದ್ದಾರೆ.
ಕಿಲಕಿಲ ನಗು, ಗೆಜ್ಜೆ ಶಬ್ದ
ನಾನು ಮಲಗಿ ಅರ್ಧ ಗಂಟೆ ಆಗಿತ್ತೇನೋ. ಯಾರೋ ಕಿಲ ಕಿಲ ನಗುವಂತೆ ಭಾಸವಾಯಿತು. ಅಕ್ಕ-ಪಕ್ಕದಲ್ಲಿಯೇ ಆ ನಗು ಕೇಳಿಬರುತ್ತಿತ್ತು. ಆದರೆ ಅದೊಂದು ರೀತಿಯಲ್ಲಿ ಭಯಾನವೂ, ಕರ್ಕಶವೂ ಆಗಿತ್ತು. ಬೆವೆತು ಹೋದೆ. ಆ ಕೆಲಸದ ಹೇಳಿದ್ದು ನೆನಪಾಯಿತು. ಕಣ್ಣು ಬಿಟ್ಟು ನೋಡಿದರೆ ಯಾರೂ ಇರಲಿಲ್ಲ. ಅಲ್ಲೇ ಪಕ್ಕದಲ್ಲಿ ನಾಗರಾಜ ಮೂರ್ತಿ ಮಲಗಿದ್ದ. ನಾನು ಎದ್ದೆನೋ ಬಿದ್ದೆನೋ ಎಂದು ಅವನ ಬಳಿ ಹೋಗಿ ಹೀಗೆಲ್ಲಾ ಆಗ್ತಿದೆ. ಬೇಗ ಇಲ್ಲಿಂದ ಹೋಗೋಣ ಎಂದು ಎಬ್ಬಿಸಿದೆ. ನಿದ್ದೆಯ ಮೂಡ್ನಲ್ಲಿ ಅವನು ಅದಕ್ಕೆ ಒಪ್ಪಲೇ ಇಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ನಾನಿನ್ನೂ ನಾಗರಾಜ ಮೂರ್ತಿ ಸಮೀಪವೇ ಇದ್ದೆ. ಆಗಲೇ ಇಬ್ಬರಿಗೂ ಗೆಜ್ಜೆ ಶಬ್ದ ಕೇಳಿಸಿತು. ಅವನಿಗೂ ಭಯ ಆಗೋಯ್ತು. ನಂತರ ಅಲ್ಲಿಂದ ಒಂದೇ ಉಸಿರಿಗೆ ಓಡಿದೆವು ಎಂದಿರುವ ಮುಖ್ಯಮಂತ್ರಿ ಚಂದ್ರು, ಆ ಕೆಲಸದವ ಹೀಗೆಲ್ಲಾ ಹೇಳಿದ್ದ ಭ್ರಮೆಯೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಅನುಭವ ನಮಗಿಬ್ಬರಿಗೂ ಆಯ್ತು. ಮುಂದೆ ಎಂದಿಗೂ ಅಲ್ಲಿ ಹೋಗುವ ಧೈರ್ಯಮಾಡಲಿಲ್ಲ ಎಂದಿದ್ದಾರೆ.















