ಅಯ್ಯೋ ಇದೆಲ್ಲಿಯ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ಪುನೀತ್ ರಾಜ್ ಕುಮಾರ್‌ ಒಟ್ಟಿಗೆ ಕೆಲಸ ಮಾಡಿದ್ದಾರೆಂದು ಯೋಚಿಸುತ್ತಿದ್ದರೆ, ಇಲ್ಲಿದೆ ಉತ್ತರ. ಅಪ್ಪು ನಟನೆಯ ಮೊದಲ ಚಿತ್ರಕ್ಕೆ ಕಥೆ ಬರೆದಿದ್ದು ಸಲೀಂ ಖಾನ್!

- ಜಯಪ್ರಕಾಶ್ ಶೆಟ್ಟಿ, ಏಷ್ಯಾನೆಟ್ ಸುವರ್ಣ ನ್ಯೂಸ್

ನಿಮಗಿದು ಗೊತ್ತೇ ?
ಪುನೀತ್ ರಾಜ್‌ಕುಮಾರ್ ಅವರ ಪ್ರಥಮ ಚಿತ್ರಕ್ಕೆ ಕಥೆ ಬರೆದದ್ದು ಸಲ್ಮಾನ್ ಖಾನ್ ಅವರ ತಂದೆ. ಹೌದು, ನೀವು ಹುಬ್ಬೇರಿಸುವುದು ಸಹಜ . 

ಅರೇ ಎಲ್ಲಿಯ ಸಲ್ಮಾನ್ ಖಾನ್ ತಂದೆ ? ಎಲ್ಲಿಯ ಪುನೀತ್ ರಾಜಕುಮಾರ್? ವಯಸ್ಸಿನ ಅಂತರವಾದರೂ ಏನು? ಆದರೆ ಇದು ನಿಜ. ವಿಷಯಕ್ಕೆ ಬರೋಣ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಜೋಡಿ ಆಗಿನ ಕಾಲಕ್ಕೆ ಬರವಣಿಗೆಯಲ್ಲಿ ಸೂಪರ್ ಸ್ಟಾರ್ಸ್ ಎನಿಸಿಕೊಂಡವರು. ಇವರು ಕಥೆ ಬರೆದ 'ಜಂಜೀರ್' ಚಿತ್ರ ಅಮಿತಾಬ್ ಬಚ್ಚನ್ ಎಂಬ ಸೂಪರ್ ಸ್ಟಾರ್‌ನನ್ನೇ ಹುಟ್ಟು ಹಾಕಿತು. ಇವರ ಶೋಲೆ, ದೀವಾರ್, ಶಾನ್, ಡಾನ್, ಕ್ರಾಂತಿ, ಸೀತಾ ಔರ್ ಗೀತಾ, ಕಾಲ ಪತ್ತರ್, Mr.ಇಂಡಿಯಾ, ಶಕ್ತಿ, ತ್ರಿಶೂಲ್ ಹಿಂದಿ ಸಿನೆಮಾ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದ ಬ್ಲಾಕ್ ಬಸ್ಟರ್ ಸಿನೆಮಾಗಳು.

ಈ ನಡುವೆ ಇವರು ಪುನೀತ್ ರಾಜ್‌ಕುಮಾರ್‌ಗೆ ಯಾವಾಗ ಚಿತ್ರಕಥೆ ಬರೆದರು ಎಂಬ ಯೋಚನೆ ನಿಮ್ಮನ್ನು ಕಾಡದಿರದು. ಆದರೆ ನಾವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಮಾಹಿತಿ. 1975ರಲ್ಲಿ ಶೋಲೆ ಸಿನೆಮಾ ಸೂಪರ್ ಹಿಟ್ ಆದ ನಂತರ ಸಲೀಂ-ಜಾವೇದ್ ಜೋಡಿ ದಕ್ಷಿಣ ಭಾರತದಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗುತ್ತಾರೆ. ಆ ಸಿನಿಮಾ ಕನ್ನಡದ ವರನಟ ರಾಜ್‌ಕುಮಾರ್ ಅಭಿನಯದ 1976ರಲ್ಲಿ ತೆರೆ ಕಂಡಿದ್ದು ಪ್ರೇಮದ ಕಾಣಿಕೆ ಚಿತ್ರ. ನಂತರ ಇದೇ ಚಿತ್ರ ತಮಿಳಿನಲ್ಲಿ ಪೊಲ್ಲಧವನ್ ಎಂದೂ, ಹಿಂದಿಯಲ್ಲಿ ರಾಜ್ ಎಂದು ಬಿಡುಗಡೆಯಾಯಿತು. ಯಾವ ಯಾವ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಯಿತೋ, ಆಯಾ ಭಾಷೆಗಳಲ್ಲಿ ಈ ಕ್ರೈಮ್ ಥ್ರಿಲ್ಲರ್ (Crime Thriller) ಚಿತ್ರ ಹಿಟ್ ಆಗಿದ್ದು ವಿಶೇಷ. 

ಅಚ್ಚರಿ ಘಟನೆ: ಅಪ್ಪು ಸಮಾಧಿ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತ ಬಸವ

ಚಿತ್ರಕ್ಕೆ ವಿ ಸೋಮಶೇಖರ್ ನಿರ್ದೇಶಕರು. ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಆರತಿ ಮತ್ತು ಜಯಮಾಲಾ ಚಿತ್ರದಲ್ಲಿದ್ಧಾರೆ. ಈ ಸಿನೆಮಾದಲ್ಲೇ ಪುನೀತ್ ರಾಜ್‌ಕುಮಾರ್ 6 ತಿಂಗಳ ಮಗುವಾಗಿ ಕಾಣಿಸಿಕೊಂಡಿದ್ದು, ಅದ ಪ್ರಪ್ರಥಮ ಅಪ್ಪು ಆಲಿಯಾಸ್ ಪುನೀತ್ ರಾಜ್‌ಕುಮಾರ್ ಅವರ ಸಿನೆಮಾ. ಆದರೆ ತೆರೆ ಮೇಲೆ ಪುನೀತ್ ಹೆಸರು ಮಾಸ್ಟರ್ ಲೋಹಿತ್ ಎಂದಿದೆ. ಅಪ್ಪು ಸಹೋದರಿ ಪೂರ್ಣಿಮಾ ಕೂಡ ಈ ಚಿತ್ರದಲ್ಲಿದ್ದಾರೆ.

ಉಪೇಂದ್ರ ಕುಮಾರ್ ರಚಿಸಿ, ಗೀತೆ ಸಂಯೋಜಿಸಿದ ಈ ಚಿತ್ರದ ಗೀತೆಗಳು ಕನ್ನಡ ಸಿನಿ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಗಳಿಸಿದವು. ಸರ್ವಕಾಲಕ್ಕೂ ಮುದ ನೀಡುವ ಗೀತೆಗಳು ಪ್ರೇಮದ ಕಾಣಿಕೆ ಚಿತ್ರದಲ್ಲಿವೆ. ಈ ಚಿತ್ರ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಓಡಿದ್ದು ದೊಡ್ಡ ದಾಖಲೆ. ಕರ್ನಾಟಕ ಸರಕಾರದ ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೂ ಈ ಚಿತ್ರ ಭಾಜನವಾಗಿತ್ತೆ.

ಚಿತ್ರದ ಕಥೆ ಏನು? 
ಅಣ್ಣನ ಮಗ ರಾಜುನೊಂದಿಗೆ ಸೀತಾ ಎಂಬ ಯುವತಿ ಎಸ್ಟೇಟ್ ಓನರ್ ಮನೋಹರ್ ಮಗಳಿಗೆ ಸಹಾಯಕಿಯಾಗಿ ಮಾಡೋ ಕೆಲಸದ ಸಂದರ್ಶನಕ್ಕೆ ರೈಲಿನಲ್ಲಿ ಪಯಣಿಸುತ್ತಿರುತ್ತಾಳೆ.ಪ್ರಯಾಣದ ವೇಳೆ ಸಹ ಪ್ರಯಾಣಿಕನೊಬ್ಬನ ಕೊಲೆಯಾಗುತ್ತದೆ. ಕೊಲೆಗಾರ ಹೇಗಿದ್ದಾನೆಂದು ಸೀತಾ ಪೊಲೀಸರಿಗೆ ಮಾಹಿತಿಯೂ ನೀಡಿರುತ್ತಾಳೆ. ನಂತರ ಕೆಲಸಕ್ಕೆ ಸೇರೋ ಸೀತಾಗೆ ದೊಡ್ಡದೊಂದು ಆಘಾತ ಕಾದಿರುತ್ತೆ. ರೈಲಲ್ಲಿ ಕಂಡ ಕೊಲೆಯ ಆರೋಪಿಯೇ ಈ ಮನೋಹರ್ ಆಗಿರುತ್ತಾನೆ. ಯಾರಿಗೂ ಈ ವಿಷಯ ಬಾಯಿ ಬಿಡದಂತೆ ಸೀತಾಗೆ ಹೆದರಿಸಿರುತ್ತಾನೆ ಮನೋಹರ್. ಆ ನರಕದಿಂದ ಹಲವು ಬಾರಿ ತಪ್ಪಿಸಿಕೊಳ್ಳಲು ಸೀತಾ ಯತ್ನಿಸುತ್ತಾಳಾದರೂ ವಿಫಲವಾಗುತ್ತದೆ. ಮನೋಹರ್‌ನಂಥ ಒಳ್ಳೇ ಮನುಷ್ಯ ಏಕೆ ಕೊಲೆ ಮಾಡುತ್ತಾನೆ, ಅವನ ಹಿಂದಿನ ಕಥೆ ಏನು ಎಂಬುವುದು ಈ ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತದೆ. ಒಟ್ಟಿನಲ್ಲಿ ಈ ಕಥೆಯೂ ಸಕತ್ತೂ ಇಂಟರೆಸ್ಟಿಂಗ್ ಆಗಿರೋದ್ರಿಂದ ಚಿತ್ರ ಯಶಸ್ವಿಯಾಗುತ್ತದೆ.

ಡಾ.ರಾಜ್ - ಪುನೀತ್‌ರನ್ನ ಯಾಕಿನ್ನೂ ಪ್ರೀತಿಸ್ತಾರೆ, ಗೌರವಿಸ್ತಾರೆ? ಅನುಪಮ್ ಖೇರ್ ರಿಯಾಕ್ಷನ್ ಹೀಗಿತ್ತು