ಇಂದು ಇಹಲೋಕ ತ್ಯಜಿಸಿದ ಹಿರಿಯ ನಟಿ ಬಿ.ಸರೋಜಾ ದೇವಿ ಅಂತಿಮ ಕ್ಷಣ ಹೇಗಿತ್ತು? ಅವರ ಜೀವನದ ಅಪೂರ್ವದ ಕ್ಷಣವೇನು? ಇಲ್ಲಿದೆ ಮಾಹಿತಿ... 

ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದೂ, ಕಾಲಿವುಡ್​ನಲ್ಲಿ ಕನ್ನಡದ ಗಿಣಿ ಎಂದೂ ಹೆಸರು ಮಾಡಿದ್ದ ಕನ್ನಡದ ಅಪರೂಪದ ಕಲಾವಿದೆ, ಚತುರ್ಭಾಷಾ ನಟಿ ಬಿ.ಸರೋಜಾದೇವಿ ಇಂದು ಬೆಳಿಗ್ಗೆ ಉಸಿರು ನಿಲ್ಲಿಸಿದ್ದಾರೆ. ತಮ್ಮ ಮಾತನಾಡುವ ಕಣ್ಣುಗಳಿಂದಲೇ ಕೋಟ್ಯಂತರ ಜನರ ಮನಗೆದ್ದ ನಟಿ ಏಳು ದಶಕಗಳವರೆಗೆ ಚಿತ್ರರಂಗವನ್ನು ಆಳಿದ ಕಲಾವಿದೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅವರು, 2019ರಲ್ಲಿ ಬಿಡುಗಡೆಗೊಂಡ ಪುನೀತ್ ರಾಜ್​ಕುಮಾರ್ ನಟನೆಯ ನಟ 'ಸಾರ್ವಭೌಮ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದರು. 7 ಜನವರಿ 1938ರಲ್ಲಿ ಹುಟ್ಟಿದ್ದ ನಟಿಗೆ ಈಗ 87 ವರ್ಷ ವಯಸ್ಸಾಗಿತ್ತು. ತುಂಬು ಜೀವನ ನಡೆಸಿದ ನಟಿಯನ್ನೀಗ ಸಿನಿಮಾ ಇಂಡಸ್ಟ್ರಿ ಕಳೆದುಕೊಂಡಿದೆ.

ನಟಿ ಸರೋಜಾ ದೇವಿ ಅವರು ದೇವರಿಗೆ ಪೂಜೆ ಸಲ್ಲಿಸುತ್ತಲೇ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ. ಅವರ ಮ್ಯಾನೇಜರ್​ ವಿಜಯ್​ ಕುಮಾರ್​ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ನಟಿ ಎಂದಿನಂತೆ ಪೂಜೆ ಸಲ್ಲಿಸಿ ಕುಳಿತುಕೊಂಡಾಗ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ನಿಧನರಾಗಿರುವುದು ತಿಳಿಯಿತು ಎಂದಿದ್ದಾರೆ. 'ಸರೋಜಾದೇವಿ ಅವರು ದಿನವೂ ಎದ್ದ ತಕ್ಷಣ ಪತ್ರಿಕೆ ಓದುತ್ತಿದ್ದರು. ಬಳಿಕ ಸ್ನಾನ ಮಾಡಿ ಪೂಜೆ ಮಾಡುತ್ತಿದ್ದರು. ಅದಾದ ಮೇಲಷ್ಟೇ ಉಪಾಹಾರ ಸೇವಿಸುತ್ತಿದ್ದರು. ಇಂದು ಕೂಡ ಪೂಜೆ ಮಾಡಿ ಟಿವಿ ಆನ್ ಮಾಡಿದ್ದರಷ್ಟೇ. ಆಗಲೇ ತುಂಬಾ ಸುಸ್ತಾದಂತೆ ಕಂಡರು. ಅಲ್ಲಿಯೇ ಕುಸಿದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ನಟಿಯ ತಾಯಿಯನ್ನು ಎಲ್ಲಿ ಮಣ್ಣು ಮಾಡಲಾಗಿದೆಯೋ ಅಲ್ಲೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, 1938ರ ಜನವರಿ 7ರಂದು ಅವರು ಬೆಂಗಳೂರಿನಲ್ಲಿ ಹುಟ್ಟಿದ ಸರೋಜಾದೇವಿ ಅವರ ತಂದೆ ಬೈರಪ್ಪ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಗೃಹಿಣಿ. ತಂದೆಯೇ ನೃತ್ಯ ಕಲಿಯುವಂತೆ ಪ್ರೋತ್ಸಾಹಿಸಿದ್ದರಿಂದ ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ಕೈತುಂಬಾ ಸಿನಿಮಾಗಳಿರುವಾಗಲೇ ಸರೋಜಾದೇವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎಂಜಿನಿಯರ್ ಆಗಿದ್ದ ಶ್ರೀಹರ್ಷ ರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967 ರಂದು ಸಪ್ತಪದಿ ತುಳಿದಿದ್ದರು. ಇವರಿಗೆ ಇಂದಿರಾ ಹಾಗೂ ಗೌತಮ್ ರಾಮಚಂದ್ರನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 1986ರಲ್ಲಿ ಪತಿ ಶ್ರೀಹರ್ಷ ಹೃದಯಾಘಾತದಿಂದ ತೀರಿಕೊಂಡ ನಂತರ ಬಹಳ ಕಷ್ಟಪಟ್ಟಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.

ಹಾಗೆಯೇ ಸರೋಜಾದೇವಿ ಅವರಿಗೆ ಒಬ್ಬಳು ದತ್ತು ಮಗಳಿದ್ದಳು.‌ ಹರ್ಷ ಭುವನೇಶ್ವರಿ ಹೆಸರಿನ ಈ ದತ್ತು ಪುತ್ರಿ ಚಿಕ್ಕ ವಯಸ್ಸಲ್ಲೇ ತೀರಿ ಹೋದ ಕಾರಣಕ್ಕೆ ಆಕೆಯ ನೆನಪಿನಲ್ಲಿ ನಟಿ ಭುವನೇಶ್ವರಿ ಅವಾರ್ಡ್ ನೀಡ್ತಾ ಇದ್ದರು. ಇಹದ ಯಾತ್ರೆ ಮುಗಿಸಿ ಹೊರಟಿರುವ ಸರೋಜಾದೇವಿ ಅವರ ಅಂತ್ಯಕ್ರಿಯೆ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ನಡೆಯಲಿದೆ ಎನ್ನಲಾಗಿದೆ. ಬಾಲಿವುಡ್​ನಲ್ಲಿಯೂ ನಟಿ ಖ್ಯಾತ ನಟರಾದ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮಿ ಕಪೂರ್, ಸುನಿಲ್‌ದತ್ ಜೊತೆ ನಟಿಸಿದ್ದಾರೆ. ಈ ಮೂಲಕ ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡದ ನಟಿ ಎನಿಸಿದ್ದಾರೆ.