ಕನ್ನಡದ ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಕನ್ನಡದ ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು. 1938 ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ. ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು.
ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಲಕ್ಷ್ಮೀಸರಸ್ವತಿ, ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿನ ಅವರ ಅಮೋಘ ಸಾಧನೆಗಾಗಿ ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.
ಹಿಂದಿಯಲ್ಲಿಯೂ ಅವರು ಖ್ಯಾತ ನಟರಾದ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮಿ ಕಪೂರ್, ಸುನಿಲ್‌ದತ್ ಜೊತೆ ಸರೋಜಾದೇವಿ ನಟಿಸಿದ್ದು ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡದ ನಟಿ ಎನಿಸಿದ್ದರು. ಏಳು ದಶಕಗಳಲ್ಲಿ ಸುಮಾರು 200 ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ನಟ 'ಸಾರ್ವಭೌಮ' ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು
1938ರ ಜನವರಿ 7ರಂದು ಅವರು ಬೆಂಗಳೂರಿನಲ್ಲಿ ಹುಟ್ಟಿದ ಸರೋಜಾದೇವಿ ಅವರ ತಂದೆ ಬೈರಪ್ಪಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಗೃಹಿಣಿ. ತಂದೆಯೇ ನೃತ್ಯ ಕಲಿಯುವಂತೆ ಪ್ರೋತ್ಸಾಹಿಸಿದ್ದರಿಂದ ಅವರು ಚಿತ್ರರಂಗಕ್ಕೆ ಬರಲು ತಂದೆಯಿಂದಲೇ ಬೆಂಬಲ ಸಿಕ್ಕಿತ್ತು. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ಕೈತುಂಬಾ ಸಿನಿಮಾಗಳಿರುವಾಗಲೇ ಸರೋಜಾದೇವಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎಂಜಿನಿಯರ್ ಆಗಿದ್ದ ಶ್ರೀಹರ್ಷ ರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967 ರಂದು ಸಪ್ತಪದಿ ತುಳಿದಿದ್ದರು. ಇವರಿಗೆ ಇಂದಿರಾ ಹಾಗೂ ಗೌತಮ್ ರಾಮಚಂದ್ರನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 1986ರಲ್ಲಿ ಪತಿ ಶ್ರೀಹರ್ಷ ಹೃದಯಾಘಾತದಿಂದ ತೀರಿಕೊಂಡ ನಂತರ ಬಹಳ ಕಷ್ಟಪಟ್ಟಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.
ಹಾಗೆಯೇ ಸರೋಜಾದೇವಿ ಅವರಿಗೆ ಒಬ್ಬಳು ದತ್ತು ಮಗಳಿದ್ದಳು. ಹರ್ಷ ಭುವನೇಶ್ವರಿ ಹೆಸರಿನ ಈ ದತ್ತು ಪುತ್ರಿ ಚಿಕ್ಕ ವಯಸ್ಸಲ್ಲೇ ತೀರಿ ಹೋದ ಕಾರಣಕ್ಕೆ ಆಕೆಯ ನೆನಪಿನಲ್ಲಿ ನಟಿ ಭುವನೇಶ್ವರಿ ಅವಾರ್ಡ್ ನೀಡ್ತಾ ಇದ್ದರು..
ಇಹದ ಯಾತ್ರೆ ಮುಗಿಸಿ ಹೊರಟಿರುವ ಸರೋಜಾದೇವಿ ಅವರ ಅಂತ್ಯಕ್ರಿಯೆ ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ನಡೆಯಲಿದೆ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಇದೆ
