ಸರೋಜಾದೇವಿ ಅಣ್ಣಾವ್ರ ಕುಟುಂಬಕ್ಕೆ, ಪಾರ್ವತಮ್ಮ ಅವರಿಗೆ ಆಪ್ತರಾಗಿದ್ದರು. ಅವರು ರಾಜ್ ಮನೆಗೆ ಹೋದಾಗಲೆಲ್ಲ ಮಲ್ಲಿಗೆ ತೆಗೆದುಕೊಂಡು ಹೋಗಿ ಪಾರ್ವತಮ್ಮ ಅವರ ಮುಡಿಗೆ ಮುಡಿಸುತ್ತಿದ್ದರಂತೆ.
ಪುನೀತ್ ಬಗ್ಗೆ ಅಪರಿಮಿತ ಪ್ರೀತಿ: ಸರೋಜಾದೇವಿ ಅವರಿಗೆ ಪುನೀತ್ ರಾಜ್‌ಕುಮಾರ್ ಕಂಡರೆ ಮಗನಂಥಾ ಭಾವ. ಸರೋಜಾದೇವಿ ಅಮ್ಮನಾಗಿ, ಪುನೀತ್ ಮಗನಾಗಿ ನಟಿಸಿದ್ದ ‘ಯಾರಿವನು’ ಸಿನಿಮಾದ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಹಾಡು ಜನಮನದಲ್ಲಿ ಇಂದಿಗೂ ಹಸಿರಾಗಿದೆ. ಆಗ ಬಾಲನಟನಾಗಿದ್ದ ಪುನೀತ್ ಈ ಹಾಡನ್ನು ಸ್ವತಃ ಹಾಡಿದ್ದರು. ಆಗಲೇ ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದು ಸರೋಜಾದೇವಿ ಅಂದುಕೊಂಡಿದ್ದರಂತೆ. ಪುನೀತ್ ನಟನೆಯ ‘ನಟ ಸಾರ್ವಭೌಮ’ ಚಿತ್ರ ಸರೋಜಾದೇವಿ ಅವರ ಕೊನೆಯ ಸಿನಿಮಾ.
ಪಾರ್ವತಮ್ಮ ನವರಸ ನಾಯಕಿ ಎನ್ನುತ್ತಿದ್ದ ಸರೋಜಾದೇವಿ: ರಾಜ್ ಕುಮಾರ್ ಅವರ ಅನೇಕ ಚಿತ್ರಗಳಿಗೆ ನಾಯಕಿಯಾಗಿದ್ದ ಬಿ ಸರೋಜಾದೇವಿ ಅಣ್ಣಾವ್ರ ಕುಟುಂಬಕ್ಕೆ, ಪಾರ್ವತಮ್ಮ ಅವರಿಗೆ ಆಪ್ತರಾಗಿದ್ದರು. ಅವರು ಡಾ ರಾಜ್ ಮನೆಗೆ ಹೋದಾಗಲೆಲ್ಲ ಮಲ್ಲಿಗೆ ತೆಗೆದುಕೊಂಡು ಹೋಗಿ ಪಾರ್ವತಮ್ಮ ಅವರ ಮುಡಿಗೆ ಮುಡಿಸುತ್ತಿದ್ದರಂತೆ. ‘ನಮ್ ರಾಜ್‌ಕುಮಾರ್ ಬಹಳ ಸರಳಜೀವಿ. ಅವರಲ್ಲಿ ನನ್ನ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳುತ್ತಿದ್ದೆ. ರಾಜ್ ಅವರು ಸಿನಿಮಾದಲ್ಲಿ ನವರಸ ನಾಯಕ. ಆದರೆ ಪಾರ್ವತಮ್ಮನವರು ನಿಜವಾದ ನವರಸ ನಾಯಕಿ. ಅವರು ಒಳ್ಳೆಯ ಮಗಳು, ಒಳ್ಳೆಯ ಹೆಂಡತಿ, ಒಳ್ಳೆಯ ಗೃಹಿಣಿ, ಒಳ್ಳೆಯ ತಾಯಿ, ಒಳ್ಳೆಯ ನಿರ್ಮಾಪಕಿ, ರಾಜ್‌ಕುಮಾರ್ ಅವರಿಗೆ ಪಿಆರ್‌ಓ, ಮ್ಯಾನೇಜರ್ ಎಲ್ಲವೂ ಆಗಿದ್ದರು. ಅವರ ಸಮಕ್ಕೆ ಬೇರೆ ಯಾರೂ ಇಲ್ಲ’ ಎಂದು ಸರೋಜಾದೇವಿ ಅಭಿಮಾನದಿಂದ ನುಡಿಯುತ್ತಿದ್ದರು. ಚೆನ್ನೈಯಲ್ಲಿದ್ದಾಗ ಪಾರ್ವತಮ್ಮ ಮಾಡುತ್ತಿದ್ದ ಬಿರಿಯಾನಿಯನ್ನು ಸರೋಜಾದೇವಿ ಬಹಳ ಇಷ್ಟಪಟ್ಟು ತಿನ್ನುತ್ತಿದ್ದರಂತೆ.
ಇದೂ ಹೆಣ್ಣುಮಗು, ಯಾರಿಗಾದರೂ ಕೊಟ್ಟುಬಿಡಿ!: ಸರೋಜಾದೇವಿ ಅವರು ಭೈರಪ್ಪ ಮತ್ತು ರುದ್ರಮ್ಮ ದಂಪತಿಗೆ ನಾಲ್ಕನೇ ಮಗಳು. ಇದಕ್ಕೂ ಮುನ್ನ ಜನಿಸಿದ್ದು ಮೂರು ಹೆಣ್ಣು ಮಕ್ಕಳೇ. ಹಾಗಾಗಿ, ನಾಲ್ಕನೇ ಮಗುವು ಕೂಡ ಹೆಣ್ಣಾಗಿದ್ದರಿಂದ ಸ್ವತಃ ಸರೋಜಾದೇವಿ ಅವರ ಅಜ್ಜನೇ, ‘ಹೆಣ್ಣು ಮಗು ಜನಿಸಿದೆ, ಯಾರಿಗಾದ್ರೂ ಕೊಟ್ಟುಬಿಡಿ’ ಎಂದಿದ್ದರಂತೆ. ಆದರೆ ಸರೋಜಾದೇವಿ ದೇಶವೇ ಮೆಚ್ಚುವಂತೆ ಬೆಳೆದರು.
ಲಕ್ಷಾಂತರ ಅಭಿಮಾನಿಗಳ ಮನ ಸೆಳೆದ ನಟಿ ಬಿ ಸರೋಜಾದೇವಿ ಅವರು ಒಬ್ಬ ಮಹಾನ್ ನಟಿ. ಈಗ ಅವರು ನಮ್ಮೊಂದಿಗೆ ಇಲ್ಲ ಎಂಬುದೇ ದುಃಖದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
- ರಜನಿಕಾಂತ್
ಪರಿಮಳ ಪಸರಿಸಿ ಹೊರಟ ಪಾರಿಜಾತಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಬಿ. ಸರೋಜಾದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಢಿಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ.
- ಕಿಚ್ಚ ಸುದೀಪ್
ಬಿ.ಸರೋಜಾದೇವಿ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
- ದರ್ಶನ್
ಅವರ ಮನಸ್ಸು ಹೇಗಿತ್ತೋ ಅಷ್ಟೇ ಪ್ರೀತಿ ಮತ್ತು ಮುಗ್ಧತೆಯಿಂದ ತೆರೆ ಮೇಲೆ ನಟಿಸಿದವರು. ಇತ್ತೀಚೆಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವು ಇದೆ. ಬಾಲಕನಾಗಿದ್ದಾಗಲೇ ಪುನೀತ್ ರಾಜ್‌ಕುಮಾರ್, ಬಿ ಸರೋಜಾದೇವಿ ಅವರ ಜತೆಗೆ ‘ಯಾರಿವನು’ ಚಿತ್ರದಲ್ಲಿ ನಟಿಸಿದ್ದಾರೆ. ಬಿ ಸರೋಜಾದೇವಿ ಅವರದ್ದು ಮರೆಯಲು ಆಗದೆ ಇರೋ ಮುಖ. ಇಂಡಿಯನ್ ಸಿನಿಮಾಗೆ ಅವರು ದೊಡ್ಡ ಆಸ್ತಿ.
- ಶಿವರಾಜ್‌ಕುಮಾರ್
ನಾನು ಹಿರಿಯ ನಟ ಆಗಿರಬಹುದು. ಆದರೆ, ಬಿ ಸರೋಜಾದೇವಿ ಅವರ ಮುಂದೆ ನಾನು ಚಿಕ್ಕವನು. ಕಲಾವಿದ ಅನಿಸಿಕೊಳ್ಳಲು, ಜೀವನದಲ್ಲಿ ಹೇಗಿರಬೇಕು ಅಂತ ತೋರಿಸಿಕೊಟ್ಟವರು. ಮಾತನಾಡಿದರೆ ಸ್ವಂತ ಅಮ್ಮನೇ ಮಾತನಾಡಿದಂತೆ. ಎದುರಿಗಿರುವ ನಟ ಕೂಡ ತಲ್ಲೀನತೆಯಿಂದ ನೋಡುವಂತೆ ನಟಿಸಿದವರು. ಸರೋಜಮ್ಮ ಅವರಿಗೆ ವಯಸ್ಸಾಯಿತು ಅಂದರೆ ಯಾರೂ ನಂಬಲ್ಲ. ಅಷ್ಟು ಮುಗ್ಧ, ನಗುವಿನ ಮನಸು ಅವರದ್ದು. ನನ್ನ ಮೇಷ್ಟ್ರು, ನನ್ನ ಅಮ್ಮ ಅವರು.
- ಶ್ರೀನಾಥ್
ನನಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಆ ಕಮಿಟಿಯಲ್ಲಿ ಬಿ. ಸರೋಜಾದೇವಿ ಅವರು ಇದ್ದರು. ಪ್ರಶಸ್ತಿ ಘೋಷಣೆ ಆದ ಮೇಲೆ ಅವರು ನನಗೆ ಫೋನ್ ಮಾಡಿ, ‘ಎಷ್ಟು ಚೆನ್ನಾಗಿ ನಟಿಸಿದ್ದೀಯಾ, ನಾನು ನಿನ್ನ ಅಭಿಮಾನಿ ಆಗಿಹೋದೆ’ ಅಂತ ಹೇಳಿ ನನ್ನ ಪ್ರಶಂಸಿದರು. ಹಿರಿಯರು, ತುಂಬಾ ಘನತೆಯಿಂದ ಬದುಕಿದವರು. ನಾವು ಕಲಿಯಬೇಕಿರುದು ಅವರ ಈ ಘನತೆಯನ್ನೇ.
- ಪ್ರಕಾಶ್ ರೈ
ಮೇರು ನಟಿ. ಇಷ್ಟು ವರ್ಷ ಬದುಕಿ, ಸಾಧನೆ ಮಾಡಿದ್ದು ಗ್ರೇಟ್. ಕ್ಲೀನ್ ಲೇಡಿ. ಯಾವುದೇ ವಿವಾದಗಳಿದೆ ಇಲ್ಲದೆ ಬದುಕಿದವರು. ಇದೇ ನಾವು ಅವರಿಂದ ಕಲಿಯಬೇಕಿರುವ ಗುಣ.
- ಜೈ ಜಗದೀಶ್
ಎಲ್ಲಿಯವರೆಗೂ ಹೊಸಬರು ಚಿತ್ರರಂಗಕ್ಕೆ ಬಂದು ನಟನೆ ಕಲಿಯುತ್ತಿರುತ್ತಾರೋ ಅಲ್ಲಿಯವರೆಗೂ ಬಿ ಸರೋಜಾದೇವಿ ಇರುತ್ತಾರೆ. ಅವರ ನಡಿಗೆ, ವ್ಯಕ್ತಿತ್ವ, ಅವರ ಜೀವನ ಸಂಭ್ರಮ, ಜನರನ್ನು ಪ್ರೀತಿಯಿಂದ ಮಾತನಾಡಿಸುವ ಅವರ ಮನಸ್ಸು ಹೀಗೆ ಎಲ್ಲವನ್ನು ಅವರಿಂದ ನಾವು ಕಲಿಯಬೇಕಾದ ವಿಷಯಗಳು.
- ಮಂಡ್ಯ ರಮೇಶ್
ನಾವೆಲ್ಲ ಚಿತ್ರರಂಗಕ್ಕೆ ಬರಲು ಬಿ ಸರೋಜಾದೇವಿ ಅವರೇ ಸ್ಫೂರ್ತಿ. ಅವರು ಸಿನಿಮಾ ಲೆಜೆಂಡ್. ಅವರನ್ನು ಮುಟ್ಟಿದರೆ ರೋಮಾಂಚನ ಆಗುತ್ತದೆ. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೇ ದೊಡ್ಡ ನಷ್ಟ.
- ಹರ್ಷಿಕಾ ಪೂಣಚ್ಚ
ನಾನು ಮೊದಲು ಭೇಟಿ ಮಾಡಿದ್ದು ನನ್ನ ನಿರ್ದೇಶನ, ನಟನೆಯ ‘ಎ’ ಸಿನಿಮಾ ಸೆನ್ಸಾರ್ ಸಮಯದಲ್ಲಿ. ಆಗ ಆ ಚಿತ್ರ ಸೆನ್ಸಾರ್ ಮಾಡದೆ ರಿವೈಸಿಂಗ್ ಕಮಿಟಿಗೆ ಕಳುಹಿಸಿದ್ದರು. ಆ ಕಮಿಟಿಯಲ್ಲಿ ಬಿ ಸರೋಜಾದೇವಿ ಅವರು ಇದ್ದರು. ಸಿನಿಮಾ ನೋಡಿದ ಮೇಲೆ ಅವರು ಚಪ್ಪಾಳೆ ತಟ್ಟಿ ನನ್ನ ಸ್ವಾಗತಿಸಿದ್ದು, ನನ್ನ ಚಿತ್ರದ ಪರವಾಗಿ ಕಮಿಟಿಯಲ್ಲಿ ವಾದ ಮಾಡಿದ್ದು ಇನ್ನೂ ನೆನಪಿದೆ. ಪರಿಪೂರ್ಣ ಜೀವನ ಮಾಡಿದ ಬಿ ಸರೋಜಾದೇವಿ ಅವರು ಮತ್ತೊಮ್ಮೆ ಕಲಾವಿದರಾಗಿ ಹುಟ್ಟಲಿ.
- ಉಪೇಂದ್ರ
ಶಿವನ ಭಕ್ತೆ, ಪ್ರಶಾಂತ ದಿನದಂದು ನಿರ್ಗಮನನನ್ನ ತಾಯಿ ರೀತಿ ಅವರು. ಅವರ ಜತೆಗೆ ಮಾತಾಡೋದೆ ದೊಡ್ಡ ಸಂತೋಷ. ನನ್ನ ಸಿನಿಮಾಗಳು ಟೀವಿಗಳಲ್ಲಿ ಬಂದಾಗ ನೋಡಿ ಪ್ರಶಂಸಿಸುವವರು. ಗ್ರಾಮೀಣ ಭಾಗದಿಂದ ಬಂದು ಎಲ್ಲಾ ಸೂಪರ್ ಸ್ಟಾರ್‌ಗಳ ಜತೆಗೆ ನಟಿಸಿದರು. ಶಿವನ ಭಕ್ತೆ ಅವರು. ಅವರಿಗೆ ತಾವರೆ ಹೂವು, ಶಿವ ಅಂದರೆ ತುಂಬಾ ಇಷ್ಟ. ಇವತ್ತು ಸೋಮವಾರ ಪ್ರಶಾಂತವಾದ ದಿನ ಅವರು ನಿರ್ಗಮಿಸಿದ್ದಾರೆ.
- ಜಗ್ಗೇಶ್
150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆಂಬುದೇ ದೊಡ್ಡ ಸಾಧನೆ. ತುಂಬು ಜೀವನ ಅನುಭವಿಸಿ ಹೋಗುತ್ತಿದ್ದಾರೆ. ಇಂಥ ಸಾಧಕಿ ಮತ್ತೆ ಸಿಗಲ್ಲ. ಅವರು ನಟಿಸಿದ ಎಲ್ಲಾ ಚಿತ್ರಗಳು, ಪಾತ್ರಗಳು ಗೊತ್ತು. ಅದಕ್ಕೆ ಕಾರಣ ಅವರ ನಟನೆ. ಅವರು ಎಲ್ಲೂ ಹೋಗಿಲ್ಲ ನಮ್ಮೊಂದಿಗೆ ಇರುತ್ತಾರೆ.
- ಗಿರಿಜಾ ಲೋಕೇಶ್
ಬಿ. ಸರೋಜಾದೇವಿ ಅವರು ಜೀವನದ ಬಗ್ಗೆ ತುಂಬಾ ಸಲಹೆಗಳನ್ನು ಕೊಟ್ಟಿದ್ದಾರೆ. ನಮ್ಮ ಚಿತ್ರರಂಗದ ರಿಯಲ್ ಸೂಪರ್ ಸ್ಟಾರ್ ಅವರು. ನಾನು ಯಾವಾಗ ಕಂಡರೂ ‘ಮಾಲಾ ಹೇಗಿದ್ದಿಯಾ, ಮಕ್ಕಳು ಹೇಗಿದ್ದಾರೆ’ ಅಂತ ಕೇಳುತ್ತಿದ್ದರು. ಅವರ ನಟನೆಯ ಎಲ್ಲಾ ಸಿನಿಮಾಗಳು ನನಗೆ ಇಷ್ಟ. ಅವರ ಜತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇನೆ. ಇದು ನನ್ನ ಅದೃಷ್ಟ.
- ಮಾಲಾಶ್ರೀ
ಜೀವನವನ್ನು ತುಂಬಾ ಪಾಸಿಟಿವ್ ಆಗಿ ನೋಡಿ, ಹಾಗೆ ಬದುಕಿದ ನಟಿ ಅವರು. ಚಿತ್ರರಂಗದಲ್ಲಿ ಏನೇ ಆದರೂ ಮೊದಲು ಫೋನ್ ಬರುತ್ತಿದ್ದು ಸರೋಜಾದೇವಿ ಅವರಿಂದ. ಹೀರೋಗೆ ಸಮಾನವಾಗಿ ನಿಂತ ನಟಿ ಅವರು. ಅವರು ನಮಗೆ ಮಾತ್ರವಲ್ಲ, ಮುಂದಿನ ತಲೆಮಾರಿಗೂ ಸ್ಫೂರ್ತಿ ಮತ್ತು ಪ್ರೇರಣೆ.
- ತಾರಾ
ಭಾರತೀಯ ಚಿತ್ರರಂಗಕ್ಕೆ ಇವತ್ತು ಅತ್ಯಂತ ದುಃಖಕರ ದಿನ. ಅವರ ಕೊನೆಯ ಚಿತ್ರ ನಾನೇ ನಿರ್ದೇಶಿಸಿದ್ದೇನೆ. ಮೊದಲು ನಟಿಸಲು ಒಪ್ಪಲಿಲ್ಲ. ಆ ನಂತರ ‘ಬಿ ಸರೋಜಾದೇವಿಯಾಗಿಯೇ ಪಾತ್ರ ಮಾಡಿ’ ಎಂದಾಗ ನಾನು ನಾನಾಗಿಯೇ ನಟಿಸಬೇಕಾ, ಚೆನ್ನಾಗಿರುತ್ತದೆ ಅಂತ ಹೇಳಿ ‘ನಟ ಸಾರ್ವಭೌಮ’ ಚಿತ್ರದಲ್ಲಿ ಪಾತ್ರ ಮಾಡಿದ್ದರು. ಒಂದು ದಿನ ತಡವಾಗಿ ಚಿತ್ರೀಕರಣಕ್ಕೆ ಬಂದಿದ್ದಕ್ಕೆ ಇಡೀ ಚಿತ್ರದ ಯೂನಿಟ್‌ಗೆ ಕೈ ಮುಗಿದು ಪ್ರದಕ್ಷಿಣೆ ಹಾಕಿ ಕ್ಷಮೆ ಕೇಳಿದ್ದರು.
- ಪವನ್ ಒಡೆಯರ್
ನಮ್ಮ ಕುಟುಂಬದ ಸ್ನೇಹಿತರು. ಕೊನೆಯವರೆಗೂ ಗತ್ತಿನಲ್ಲಿ ಬದುಕಿದವರು. ನನ್ನ ತಮ್ಮನ ಜತೆಗೆ ಸಿನಿಮಾ ಮಾಡಿದ್ದಾರೆ. ನಾನೂ ಅವರ ಜತೆಗೆ ಒಂದು ಸಿನಿಮಾ ಮಾಡಿದ್ದೇನೆ. ಅಪ್ಪಾಜಿ, ಅಮ್ಮ ಹೋದ ಮೇಲೆ ತುಂಬಾ ಸಲ ಮನೆಗೆ ಬಂದು ಮಾತನಾಡಿಸಿದ್ದರು.
- ರಾಘವೇಂದ್ರ ರಾಜ್‌ಕುಮಾರ್
ತಾಯಿಯನ್ನು ಕಳೆದುಕೊಂಡಿದ್ದೇವೆಮೇರು ನಟಿ, ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಅವರು. ನನ್ನ ಜತೆ ಇಟ್ಟುಕೊಂಡ ಪ್ರೀತಿಯನ್ನು ನಾನು ಮರೆಯಕ್ಕಾಗಲ್ಲ. ನಾನು ಅವರ ಜತೆಗೆ ನಟಿಸೇ ಅಲ್ಲ. ಆದರೂ ಅವರು ನನ್ನನ್ನ ಅವರ ಮನೆಗೆ ಕರೆಸಿಕೊಂಡು ನನ್ನಿಷ್ಟದ ಅಡುಗೆ ಮಾಡಿ ಬಡಿಸುತ್ತಿದ್ದರು. ತಾಯಿಯನ್ನು ಕಳೆದುಕೊಂಡಿದ್ದೇವೆ. ನನ್ನ ತುಂಬಾ ಪ್ರೀತಿಸಿದ ತಾಯಿ ಹೃದಯ ಇಲ್ಲವಾಗಿದ್ದು ದುಃಖದ ವಿಷಯ.
- ಶ್ರುತಿ
ಶಿಸ್ತುಬದ್ಧ ನಟಿ. ಅವರ ಜತೆಗೆ ಕೆಲಸ ಮಾಡಿದ್ದು ನನ್ನ ಪುಣ್ಯ. ಇವತ್ತಿನ ದಿನಗಳಲ್ಲಿ ಅಂಥ ನಟಿ ನೋಡಕ್ಕೆ ಆಗಲ್ಲ. ನನ್ನ ಮೊದಲ ಚಿತ್ರ ‘ಭಾಗ್ಯವಂತರು’ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
- ಭಾರ್ಗವ
ನನ್ನ ಜೀವನದಲ್ಲಿ ಇನ್ನೊಬ್ಬ ತಾಯಿನಾ ಕಳೆದುಕೊಂಡಿದ್ದೇನೆ. ಎರಡು ದಿನಗಳ ಹಿಂದೆ ಫೋನ್ ಮಾಡಿ ‘ನಿನ್ನ ನೋಡಬೇಕು ಮಗು’ ಅಂದಿದ್ದರು. ಅವರ ಅಭಿನಯದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ನಾನು. ಎಲ್ಲಾ ಭಾಷೆಗಳಲ್ಲಿ ನಟಿಸಿ ಅಪಾರವಾದ ಕೀರ್ತಿ, ಯಶಸ್ಸು ಗಳಿಸಿದವರು.
- ವಿನೋದ್ ರಾಜ್‌ಕುಮಾರ್
ನಿಮಗೊಸ್ಕರ ನಾನು ಪಾತ್ರ ಮಾಡುತ್ತೇನೆ. ಕತೆ ಕೇಳಲ್ಲ ಎಂದು ‘ನಟ ಸಾರ್ವಭೌಮ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ನಟನೆ ಮುಂದುರಿಸುತ್ತೇನೆ ಎಂದಿದ್ದರು. ಅಂಬರೀಶ್ ಅವರನ್ನು ತಮ್ಮ ಅಂತಲೇ ಕರೆಯುತ್ತಿದ್ದರು. ಮೂರು ದಿನಗಳ ಹಿಂದೆ ಫೋನ್ ಮಾಡಿದ್ದೆ. ಫೋನ್ ತೆಗೆದಿಲ್ಲ. ಇವತ್ತು ಬೆಳಗ್ಗೆ ಫೋನ್ ಬಂದಾಗಲೇ ಗೊತ್ತಾಗಿದ್ದು, ಅವರ ನಿಧನದ ಸುದ್ದಿ.
-ರಾಕ್‌ಲೈನ್ ವೆಂಕಟೇಶ್
ಕಥಾಸಂಗಮದಲ್ಲಿ ನನ್ನ ಪಾತ್ರ ನೋಡಿ ಬಿ ಸರೋಜಾದೇವಿ ಅವರು ಮೆಚ್ಚಿಕೊಂಡಿದ್ದರು. ಚಿತ್ರರಂಗದ ಸಮಸ್ಯೆಗಳು ಬಂದಾಗ ಹಿರಿಯ ವ್ಯಕ್ತಿಯಾಗಿ ಮುಂದೆ ನಿಂತುಕೊಳ್ಳುತ್ತಿದ್ದರು. ಕನ್ನಡಕ್ಕೆ ಮಾತ್ರವಲ್ಲ, ಎಲ್ಲಾ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಿದವರು. ಎಷ್ಟೇ ದೊಡ್ಡದಾಗಿ ಬೆಳೆದರು ಅಷ್ಟೇ ಮೃದುವಾಗಿದ್ದವರು. ನಗು ಮುಖದ ವ್ಯಕ್ತಿತ್ವ ಅವರದ್ದು.
- ಎಂ ಎಸ್ ಉಮೇಶ್
ಪೂರ್ಣ ಜೀವನ ಅವರದ್ದು. ಯಾವುದೇ ಕೊರತೆ ಇಲ್ಲದೆ ಬದುಕಿದವರು. ಎಲ್ಲಾ ಭಾಷೆಗಳಲ್ಲಿ ಅವರೇ ರಾಣಿ. ಯಾವಾಗಲೂ ನೋಡಿದರೂ ನಗು ನಗುತ್ತಲೇ ಬನ್ನಿ ಅಂತ ಮನೆಗೆ ಕರೆಯೋರು. ಆ ನಗು ಮುಖದ ವ್ಯಕ್ತಿತ್ವದ ನಮ್ಮಲ್ಲಿ ಶಾಶ್ವತವಾಗಿ ಇರುತ್ತದೆ.
- ಲಕ್ಷ್ಮೀ
