B Jayashree Karavali: ಅಪ್ಪಟ ಕನ್ನಡ ಮಣ್ಣಿನ ಸೊಗಡನ್ನು ಹೊತ್ತಿರುವ 'ಕರಾವಳಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ.

ಅಪ್ಪಟ ಕನ್ನಡ ಮಣ್ಣಿನ ಸೊಗಡನ್ನು ಹೊತ್ತಿರುವ 'ಕರಾವಳಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದ್ದು, ಖ್ಯಾತ ಗಾಯಕಿ ಬಿ ಜಯಶ್ರೀ ಹಲವು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾಗೆ ಧ್ವನಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಂಗಗೀತೆಗಳ ಮೂಲಕವೇ ಹೆಚ್ಚು ಕೇಳಿಬರುತ್ತಿದ್ದ ಜಯಶ್ರೀ ಅವರ ಕಂಚಿನ ಕಂಠ ಇದೀಗ 'ಕರಾವಳಿ' ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದೆ. ಅವರ ಸೇರ್ಪಡೆ ಚಿತ್ರದ ಸಂಗೀತಕ್ಕೆ ಮತ್ತಷ್ಟು ಮೆರುಗು ತಂದಿದ್ದು, ಸಂಗೀತಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದ ಹಾಡಿನ ಬಗ್ಗೆ ಮಾಹಿತಿ ಪಡೆದ ಬಿ ಜಯಶ್ರೀ ಅವರು ಅದನ್ನು ಬಹಳ ಮೆಚ್ಚಿಕೊಂಡು ಸಂತೋಷದಿಂದ ಹಾಡಿದ್ದಾರೆ ಎನ್ನಲಾಗಿದೆ. ಹಾಡಿನ ಸ್ವರೂಪವನ್ನು ಚಿತ್ರತಂಡ ಇನ್ನೂ ರಹಸ್ಯವಾಗಿಯೇ ಇಟ್ಟಿದೆ. ಅದು ಭಾವನಾತ್ಮಕ ಗೀತೆಯೇ, ಭಕ್ತಿಭಾವದ ಹಾಡೇ ಅಥವಾ ಕಥೆಯ ಪ್ರಮುಖ ತಿರುವಿಗೆ ಸಂಬಂಧಿಸಿದ ವಿಶೇಷ ಗೀತೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಬಿ ಜಯಶ್ರೀ ಅವರು ಕನ್ನಡ ಚಿತ್ರರಂಗಕ್ಕೆ ಅನೇಕ ಮರೆಯಲಾಗದ ಹಾಡುಗಳನ್ನು ನೀಡಿದ್ದಾರೆ.

'ಕಾರ್ ಕಾರ್', 'ಬೀಳ್ತಾವ್ ನೋಡೀಗ ಕವ್ವಾತಗಳು', 'ಚಕ್ಕೋತ ಬೇಕಿತ್ತ', 'ಬೋಂಡಾನ ಡುಮ್ಮಿನ', 'ರಂಬೆ ನಾ ವಯ್ಯಾರದ ರಂಬೆ' ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳಿಗೆ ಅವರ ಧ್ವನಿಯ ಮೆರಗು ಸಿಕ್ಕಿದೆ. ಆದರೆ ಕಳೆದ ಹಲವು ವರ್ಷಗಳಿಂದ ಅವರು ಸಿನಿಮಾ ಹಾಡುಗಳಿಂದ ದೂರವಿದ್ದು, ರಂಗಭೂಮಿಯಲ್ಲೇ ಹೆಚ್ಚು ಸಕ್ರಿಯರಾಗಿದ್ದರು. ಈಗ 'ಕರಾವಳಿ' ಚಿತ್ರದ ಮೂಲಕ ಅವರ ಪುನರಾಗಮನ ಸಂಗೀತಾಭಿಮಾನಿಗಳಿಗೆ ಖುಷಿ ತಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ

ಈಗಾಗಲೇ ಬಿಡುಗಡೆಯಾಗಿರುವ 'ಮುದ್ದು ಗುಮ್ಮ' ಹಾಗೂ 'ಸೋಲ್ ಆಫ್ ಕರಾವಳಿ' ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಹೀಗಾಗಿ ಜಯಶ್ರೀ ಅವರು ಹಾಡಿರುವ ಹೊಸ ಗೀತೆ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂದಹಾಗೆ, 'ಕರಾವಳಿ' ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದು, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಗಾಣಿಗ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಾಯಕಿಯರಾಗಿ ಸಂಪದಾ ಮತ್ತು ಸುಷ್ಮಿತಾ ಅಭಿನಯಿಸಿದ್ದಾರೆ. ಜೊತೆಗೆ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಟ್ರೇಲರ್ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿರುವ 'ಕರಾವಳಿ' ಇದೇ ಜುಲೈ 24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಚಿತ್ರದ ಜೊತೆಗೆ ಬಿ ಜಯಶ್ರೀ ಅವರ ಹೊಸ ಹಾಡಿನ ಮೇಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.