ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು.

'ಕರಾವಳಿ' ಸಿನಿಮಾ ಬಿಡುಗಡೆಯ ಮುನ್ನವೇ ವಿವಾದದ ಕೇಂದ್ರಬಿಂದುವಾಗಿದೆ. ಟ್ರೇಲರ್ ಬಿಡುಗಡೆಯ ನಂತರ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಅದರಲ್ಲೂ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಮತ್ತು ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ನಟನ ಬೆಂಬಲಕ್ಕೆ ಪತ್ನಿ ರಾಗಿಣಿ ಚಂದ್ರನ್ ನಿಂತಿದ್ದು, ಅವರ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಟ್ರೇಲರ್‌ನಲ್ಲಿ ಅವರ ಪಾತ್ರಕ್ಕೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ಸಂಗತಿ ಹೊರಬಿದ್ದಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಪೋಸ್ಟ್ ವೈರಲ್

ಈ ಬೆಳವಣಿಗೆಗಳ ನಡುವೆಯೇ ರಾಗಿಣಿ ಚಂದ್ರನ್ ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ಕುರಿತು ಹಂಚಿಕೊಂಡಿರುವ ವಿಶೇಷ ಪೋಸ್ಟ್ ವೈರಲ್ ಆಗಿದೆ. ಪ್ರಜ್ವಲ್ ಅವರ ಜನ್ಮದಿನ ಜುಲೈ 4ರಂದು ಕಳೆದಿದ್ದರೂ, ಮತ್ತೊಮ್ಮೆ ಶುಭಾಶಯ ಕೋರಿದ ಅವರು, ಪತಿಯ ವ್ಯಕ್ತಿತ್ವ ಮತ್ತು ಜೀವನ ಮೌಲ್ಯಗಳನ್ನು ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ.

"ನೀವು ದಯೆ, ಪ್ರೀತಿ ಮತ್ತು ನಿಸ್ವಾರ್ಥತೆಗೆ ಪ್ರತಿರೂಪ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರ ಒಳಿತನ್ನೇ ಬಯಸುವ ವ್ಯಕ್ತಿ ನೀವು. ನನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವ ಪತಿ, ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಮಗ ಹಾಗೂ ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಮಾನಿಗಳಿಗೆ ಅತ್ಯುತ್ತಮ ಅಭಿನಯ ನೀಡುತ್ತಿರುವ ಅದ್ಭುತ ಕಲಾವಿದ ನೀವು," ಎಂದು ರಾಗಿಣಿ ಬರೆದುಕೊಂಡಿದ್ದಾರೆ.

ಇದರೊಂದಿಗೆ, "ನಿಮ್ಮ ವಿನಯ, ಎಲ್ಲರಿಗೂ ನೀಡುವ ಗೌರವ ಮತ್ತು ನಿಮ್ಮ ಮೌಲ್ಯಗಳೇ ನಿಮ್ಮ ದೊಡ್ಡ ಶಕ್ತಿ. ನಿಮ್ಮ ಕಲೆಗೆ, ಚಿತ್ರರಂಗಕ್ಕೆ ಮತ್ತು ನಿಮ್ಮವರಿಗಾಗಿ ನೀವು ಯಾವಾಗಲೂ ಶೇ.100ರಷ್ಟು ಸಮರ್ಪಣೆಯಿಂದ ದುಡಿಯುತ್ತೀರಿ. ನೀವು ಹೇಗಿದ್ದೀರೋ ಹಾಗೆಯೇ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮ ಮೌಲ್ಯಗಳಿಗೆ ನಮ್ಮ ಗೌರವ ಸದಾ ಇರುತ್ತದೆ. ನೀವು ನಮ್ಮ ಹೆಮ್ಮೆ," ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.

ಒಂದೆಡೆ ಕರಾವಳಿ ಚಿತ್ರದ ಟ್ರೇಲರ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ಮತ್ತೊಂದೆಡೆ ರಾಗಿಣಿ ಚಂದ್ರನ್ ಅವರ ಈ ಬೆಂಬಲದ ಸಂದೇಶ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಬೆಳವಣಿಗೆಗಳು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿವೆ.

View post on Instagram