Mother Promise Movie Review: ಅನಿವಾರ್ಯತೆಯೇ ಶತ್ರು. ನಟ ಪೂರ್ಣಚಂದ್ರ ಇಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ ಅಪರಾವತಾರ ಮೆರೆದಿದ್ದಾರೆ. ನಿರೀಕ್ಷೆಯೇ ಇಲ್ಲದೆ ಸಿನಿಮಾ ನೋಡಿದವರಿಗೆ ಅಚ್ಚರಿ ಹುಟ್ಟಿಸುತ್ತಾರೆ.

ರಾಜೇಶ್ ಶೆಟ್ಟಿ

ಹೀರೋಯಿನ್‌ ಜೊತೆ ಡ್ಯುಯೆಟ್ಟಿಲ್ಲದೆ, ಅಸಭ್ಯ ದೃಶ್ಯಗಳಿಲ್ಲದೆ, ಅಕರಾಳ ವಿಕರಾಳ ಗನ್‌ಗಳಿಲ್ಲದೆ, ಐಟಂ ಸಾಂಗಿಲ್ಲದೆ, ಅಬ್ಬರ ಹಾಹಾಕಾರವಿಲ್ಲದೆ, ಯಾವುದೇ ಸಿದ್ಧ ಸೂತ್ರಗಳಿಲ್ಲದೆ ಎಲ್ಲಾ ಮಾದರಿಗಳನ್ನು ಗಾಳಿಗೆ ತೂರಿ ತಯಾರಾಗಿರುವ ಒಂದು ಅತ್ಯಂತ ಆಹ್ಲಾದಕರ ಸಿನಿಮಾ ಮದರ್‌ ಪ್ರಾಮಿಸ್‌. ಇಲ್ಲಿ ಹೀರೋಗಳಿಲ್ಲ, ಬದಲಿಗೆ ಪಾತ್ರಗಳಿವೆ. ಬಿಲ್ಡಪ್‌ ಇಲ್ಲ, ಬದಲಿಗೆ ಒಂದೊಳ್ಳೆ ಸ್ಕ್ರಿಪ್ಟ್‌ ಇದೆ. ಸಂಕೀರ್ಣ ಕತೆಯಿಲ್ಲ, ಆಪ್ತ ಬದುಕಿದೆ. ಇಲ್ಲಿ ಘಟನೆಗಳೇ ವಿಲನ್‌ಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಿವಾರ್ಯತೆಯೇ ಶತ್ರು. ನಟ ಪೂರ್ಣಚಂದ್ರ ಇಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ ಅಪರಾವತಾರ ಮೆರೆದಿದ್ದಾರೆ. ನಿರೀಕ್ಷೆಯೇ ಇಲ್ಲದೆ ಸಿನಿಮಾ ನೋಡಿದವರಿಗೆ ಅಚ್ಚರಿ ಹುಟ್ಟಿಸುತ್ತಾರೆ. ಡಾನ್‌ ಒಬ್ಬನ ಅಮ್ಮ ಕೊಟ್ಟ ನೆಚ್ಚಿನ ಬೈಕ್‌ ಕಾಣಿಸದೇ ಹೋದ ಕ್ಷಣದಿಂದ ಕತೆ ಆರಂಭವಾಗುತ್ತದೆ. ಆಮೇಲೆ ಇಲ್ಲಿನ ಪಾತ್ರಗಳು, ಅವರ ಬದುಕುಗಳು ಪರಸ್ಪರ ಹೆಣೆದುಕೊಂಡು ವಿಷಾದವು ತಮಾಷೆಯಾಗಿ ಎಲ್ಲರ ಬದುಕು ಗೋಜಲಾಗುವ ಹಂತಕ್ಕೆ ತಲುಪುತ್ತದೆ.

ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಬಹುತೇಕರು ಇಲ್ಲಿ ತಮ್ಮನ್ನು ತಾವು ಕಾಣಬಹುದು ಅನ್ನುವುದೇ ಈ ಬರವಣಿಗೆಯ ಹೆಗ್ಗಳಿಕೆ. ಇಲ್ಲಿರುವ ಎಲ್ಲವೂ ನಾವು ನೀವು ಅಲ್ಲಿ ಇಲ್ಲಿ ನೋಡಿರುವ ಪಾತ್ರಗಳೇ, ಸನ್ನಿವೇಶಗಳೇ. ಹಾಗಾಗಿ ಸಿನಿಮಾ ಕನೆಕ್ಟ್‌ ಆಗುತ್ತಾ ಹೋಗುತ್ತದೆ. ಪೂರ್ಣ ಇಲ್ಲಿ ಯಾವುದನ್ನೂ ಗಂಭೀರ ಮಾಡುವುದಿಲ್ಲ. ಗಂಭೀರ ಅನ್ನಿಸಿದಾಗೆಲ್ಲಾ ಏನೋ ಪಂಚ್‌ಲೈನ್‌ ಕೊಟ್ಟು ನಗಿಸುತ್ತಾರೆ. ಹಗುರಾಗಿಸುತ್ತಾರೆ. ಅಷ್ಟರ ಮಟ್ಟಿಗೆ ಸೊಗಸಾದ ಬರವಣಿಗೆ.

ಚಿತ್ರ: ಮದರ್ ಪ್ರಾಮಿಸ್

ನಿರ್ದೇಶನ: ಪೂರ್ಣಚಂದ್ರ ಮೈಸೂರು

ತಾರಾಗಣ: ಧನಂಜಯ, ಮಹಾದೇವ ಪ್ರಸಾದ್‌, ಪೂರ್ಣಚಂದ್ರ, ನರೇಶ್ ಡಿಂಗ್ರಿ, ಗೀತಾ, ಯಶವಂತ್, ಶ್ರೀವತ್ಸ ಶ್ಯಾಮ್

ರೇಟಿಂಗ್: 3.5

ಇದೊಂದು ಮನಸಾರೆ ನಗಿಸಿ ಹಗುರಗೊಳಿಸುವ ಸಿನಿಮಾ. ಡಾಲಿ ಧನಂಜಯ, ಪೂರ್ಣಚಂದ್ರ ಮೈಸೂರು, ಯಶವಂತ್, ಅರುಣ, ಯಶವಂತ್ ಶೆಟ್ಟಿ, ಅಂಜನ್ ಸುಪ್ರೀತ್, ಮಹದೇವ್ ಪ್ರಸಾದ್, ನರೇಶ್ ಡಿಂಗ್ರಿ, ಶಮಂತ್ ವೇಣುಗೋಪಾಲ್, ಮಹೇಶ್ ತಿಲಕ್, ಶ್ರೀವತ್ಸ, ಶ್ರವಣ್ ಒಬ್ಬೊಬ್ಬರದೂ ಅದ್ಭುತ ನಟನೆ. ಅವರವರ ಪಾತ್ರವನ್ನು ಮನಸ್ಸಲ್ಲಿ ಕೆತ್ತಿ ಬಿಡುತ್ತಾರೆ. ಆರಂಭದಲ್ಲಿ ಕತೆ ತೀವ್ರಗೊಳ್ಳುವುದು ಸ್ವಲ್ಪ ತಡವಾಗುತ್ತದೆ. ಇಂಟರ್ವಲ್‌ ಹೊತ್ತಿಗೆ ಒಂದು ಹದಕ್ಕೆ ಬರುತ್ತದೆ.

ಆಮೇಲೆ ದ್ವಿತೀಯಾರ್ಧ ಪೂರ್ತಿ ಇಹ ಮರೆಸುತ್ತಾರೆ. ಹಾಗಂತ ಸಂಕೀರ್ಣ ಕತೆ, ಲಾಜಿಕ್‌ ನಿರೀಕ್ಷೆ ಇಡಬಾರದು. ಬಾಲಿವುಡ್‌ನ ‘ವೆಲ್‌ಕಮ್‌’, ‘ಹೇರಾಫೇರಿ’ ಮಾದರಿಯ ಸಿನಿಮಾ. ಅಂತಿಮವಾಗಿ ಲೈಟಾಗಿ ಒಂದು ಸಂದೇಶ ದಾಟಿಸಿ ನಗುವನ್ನುಳಿಸಿ ಸಿನಿಮಾ ಮುಗಿಯುತ್ತದೆ. ಆದರೆ ಅಲ್ಲಿಂದ ಆ ಪಾತ್ರಗಳು ಮನಸ್ಸಲ್ಲಿ ಬೆಳೆಯತೊಡಗುತ್ತವೆ. ಅದೇ ಈ ಸಿನಿಮಾದ ಶಕ್ತಿ. ಪೂರ್ಣಚಂದ್ರ ಈ ವರ್ಷಕ್ಕೊಂದು ತುಂಬಾ ಸೊಗಸಾದ ಸಿನಿಮಾವನ್ನು ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರಿಂದ ಇನ್ನೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.