‘ಲಕ್ಷ್ಮಿ ಪುತ್ರ’ ಮೂಲಕ ಭಾವನಾತ್ಮಕ ಕಥೆಗಳತ್ತ ಮರಳಿದ ಎಪಿ ಅರ್ಜುನ್. ತಾಯಿಯ ನೈಜ ಮಾತುಗಳೇ ಚಿತ್ರದ ಸ್ಫೂರ್ತಿ. ಚಿಕ್ಕಣ್ಣನ ಆಯ್ಕೆ ಮತ್ತು ವಿಜಯ್ ಎಸ್. ಸ್ವಾಮಿಗೆ ನಿರ್ದೇಶನದ ಹೊಣೆ ನೀಡಿದ್ದರ ಹಿಂದಿನ ಕಾರಣವೇನು?
ತಾಯಿ-ಮಗನ ಬಾಂಧವ್ಯದ ಸುತ್ತ ಹೆಣೆದಿರುವ ‘ಲಕ್ಷ್ಮಿ ಪುತ್ರ’ ಸಿನಿಮಾ ಮೂಲಕ ತಮ್ಮ ಹಳೆಯ ಶೈಲಿಯ ಭಾವನಾತ್ಮಕ ಕಥನಕ್ಕೆ ಮರಳಿರುವ ನಿರ್ದೇಶಕ ಎಪಿ ಅರ್ಜುನ್, ತಾಯಿಯ ನಿಜ ಜೀವನದ ಮಾತು, ನಡೆ-ನುಡಿಗಳನ್ನೇ ಚಿತ್ರಕಥೆಯಲ್ಲಿ ಅಳವಡಿಸಿಕೊಂಡಿದ್ದಾಗಿ ಹೇಳಿದ್ದಾರೆ. 15 ವರ್ಷಗಳ ಕಾಲ ತಮ್ಮೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಜಯ್ ಎಸ್. ಸ್ವಾಮಿಗೆ ನಿರ್ದೇಶನದ ಜವಾಬ್ದಾರಿ ವಹಿಸಿರುವುದರ ಹಿಂದಿನ ಕಾರಣವನ್ನೂ ಅವರು ಹಂಚಿಕೊಂಡಿದ್ದಾರೆ.
ಎಪಿ ಅರ್ಜುನ್ ಹೆಸರು ಕೇಳಿದ ತಕ್ಷಣ ಪ್ರೀತಿ, ಗ್ರಾಮೀಣ ಸೊಗಡು ಹಾಗೂ ಮನಮುಟ್ಟುವ ಭಾವನಾತ್ಮಕ ಕಥೆಗಳು ನೆನಪಾಗುತ್ತವೆ. ‘ಅಂಬಾರಿ’, ‘ಅದ್ದೂರಿ’, ‘ರಾಟೆ’ಯಂತಹ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಅರ್ಜುನ್, ಇತ್ತೀಚಿನ ವರ್ಷಗಳಲ್ಲಿ ಮಾಸ್ ಹಾಗೂ ಅದ್ಧೂರಿ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿದ್ದರು. ಇದೀಗ ‘ಲಕ್ಷ್ಮಿ ಪುತ್ರ’ ಚಿತ್ರದ ಮೂಲಕ ಮತ್ತೆ ತಮ್ಮ ಹಿಂದಿನ ಭಾವನಾತ್ಮಕ ಕಥನ ಶೈಲಿಗೆ ಮರಳಿದ್ದಾರೆ.
ಈ ಸಿನಿಮಾಕ್ಕೆ ಎಪಿ ಅರ್ಜುನ್ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಆದರೆ ನಿರ್ದೇಶನದ ಜವಾಬ್ದಾರಿಯನ್ನು ತಮ್ಮೊಂದಿಗೆ ಕಳೆದ 15 ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ವಿಜಯ್ ಎಸ್. ಸ್ವಾಮಿಗೆ ವಹಿಸಿದ್ದಾರೆ. ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎಪಿ ಅರ್ಜುನ್ ಮತ್ತು ಅರ್ಜುನ್ ನಿರ್ಮಾಣ ಮಾಡಿದ್ದು, ರವಿ ಕಿರಣ್ ಎಂ. ಗೌಡ ಸಹ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರ ಈ ವಾರ ತೆರೆಗೆ ಬರಲು ಸಜ್ಜಾಗಿದೆ.
ತಾಯಿ-ಮಗನ ಬಾಂಧವ್ಯವೇ ‘ಲಕ್ಷ್ಮಿ ಪುತ್ರ’ ಚಿತ್ರದ ಜೀವಾಳ
‘ಲಕ್ಷ್ಮಿ ಪುತ್ರ’ ತಾಯಿ ಮತ್ತು ಮಗನ ನಡುವಿನ ಅಪಾರ ಪ್ರೀತಿ, ಬಾಂಧವ್ಯದ ಸುತ್ತ ಸಾಗುವ ಕಥೆ. ವಿಶೇಷವೆಂದರೆ, ಈ ಕಥೆಗೆ ಎಪಿ ಅರ್ಜುನ್ ಅವರ ಸ್ವಂತ ಬದುಕಿನ ಅನುಭವಗಳೇ ಸ್ಫೂರ್ತಿಯಾಗಿವೆ. ಕೊರೊನಾ ಸಮಯದಲ್ಲಿ ಮಗನೊಬ್ಬ ತನ್ನ ತಾಯಿಯನ್ನು ತಬ್ಬಿಕೊಳ್ಳುವ ವಿಡಿಯೋವೊಂದನ್ನು ನೋಡಿದ ಬಳಿಕ ಅರ್ಜುನ್ ಅವರಿಗೆ ಈ ಕಥೆಯ ಆಲೋಚನೆ ಬಂದಿತ್ತಂತೆ. ಆ ಕ್ಷಣದಲ್ಲಿದ್ದ ನಿಷ್ಕಲ್ಮಶ ಪ್ರೀತಿಯನ್ನು ತೆರೆಮೇಲೆ ಕಟ್ಟಿಕೊಡಬೇಕೆಂದು ಅವರು ನಿರ್ಧರಿಸಿದ್ದರು.
ಈ ಕುರಿತು ಮಾತನಾಡಿರುವ ಅರ್ಜುನ್, 'ನಮ್ಮ ತಾಯಿಯೇ ನಮ್ಮ ಜೀವನ. ನಾವೆಲ್ಲರೂ ನಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತೇವೆ. ಈ ಸಿನಿಮಾದಲ್ಲಿ ಸಂಭಾಷಣೆಗಳನ್ನು ನನ್ನ ತಾಯಿ ಮಾತನಾಡುವ ರೀತಿಯಲ್ಲೇ ಬರೆದಿದ್ದೇನೆ. ತಾರಾ ಅಮ್ಮ ನಡೆಯುವಾಗ, ಚಲಿಸುವಾಗ ಹಾಗೂ ಮಗನನ್ನು ಬೈಯುವಾಗ ನನಗೆ ನನ್ನ ತಾಯಿಯೇ ನೆನಪಾಗುತ್ತಿದ್ದರು' ಎಂದು ಹೇಳಿದ್ದಾರೆ.
15 ವರ್ಷಗಳ ಸಹವಾಸದ ಬಳಿಕ ನಿರ್ದೇಶಕರಾದ ವಿಜಯ್ ಎಸ್. ಸ್ವಾಮಿ
15 ವರ್ಷಗಳ ಕಾಲ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಬಳಿಕ ಸ್ವತಂತ್ರವಾಗಿ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳುವುದು ವಿಜಯ್ ಎಸ್. ಸ್ವಾಮಿ ಅವರಿಗೆ ಸುಲಭವಾಗಿರಲಿಲ್ಲ. ಅದರಲ್ಲೂ ಈಗಾಗಲೇ ಹಲವು ನಿರ್ದೇಶಕರು ಬಂದು ಹೋಗುವುದನ್ನು ಹತ್ತಿರದಿಂದ ಕಂಡಿದ್ದ ಅವರಿಗೆ, ಕಾಗದದ ಮೇಲಿರುವ ಭಾವನೆಯನ್ನು ಅದೇ ತೀವ್ರತೆಯಲ್ಲಿ ತೆರೆಮೇಲೆ ತರುವುದು ದೊಡ್ಡ ಸವಾಲಾಗಿತ್ತು. ಕಾಗದದ ಮೇಲೆ ಬರೆಯುವುದು ಒಂದು ವಿಚಾರ. ಆದರೆ ಅದೇ ಭಾವನೆಯನ್ನು ತೆರೆಯ ಮೇಲೆ ಮೂಡಿಸುವುದು ಅದಕ್ಕಿಂತ ದೊಡ್ಡ ಸವಾಲು' ಎಂದು ವಿಜಯ್ ಹೇಳಿದ್ದಾರೆ.
ನಿರ್ದೇಶನದಲ್ಲಿ ಎಪಿ ಅರ್ಜುನ್ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರೂ, ಚಿತ್ರದ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ತಾವೊಬ್ಬರೇ ತೆಗೆದುಕೊಳ್ಳಲು ವಿಜಯ್ ಸಿದ್ಧರಿಲ್ಲ. 'ನನಗೆ ಕೆಲಸ ಮಾಡಲು ಸ್ವಾತಂತ್ರ್ಯವಿತ್ತು. ಆದರೆ ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಅನ್ನು ನಾನೊಬ್ಬನೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಬ್ಬ ನಿರ್ದೇಶಕ ತಾನೇ ನಿರ್ಮಾಪಕನಾಗಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವುದು ಚಿತ್ರರಂಗದಲ್ಲಿ ಅಪರೂಪ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಮಿಡಿ ನಟ ಚಿಕ್ಕಣ್ಣನಿಗೆ ಭಾವನಾತ್ಮಕ ನಾಯಕನ ಪಾತ್ರ!
‘ಲಕ್ಷ್ಮಿ ಪುತ್ರ’ ಚಿತ್ರದ ಮತ್ತೊಂದು ವಿಶೇಷವೆಂದರೆ, ಸಾಮಾನ್ಯವಾಗಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಚಿಕ್ಕಣ್ಣ ಇಲ್ಲಿ ಗಂಭೀರ ಹಾಗೂ ಭಾವನಾತ್ಮಕ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು. ವಂದಿತಾ ಗೌಡ ಮತ್ತು ತಾರಾ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿಕ್ಕಣ್ಣನ ಆಯ್ಕೆಯ ಬಗ್ಗೆ ಮಾತನಾಡಿರುವ ಎಪಿ ಅರ್ಜುನ್, ಪ್ರೇಕ್ಷಕರು ಒಬ್ಬ ಕಲಾವಿದನನ್ನು ಸದಾ ನಗಿಸುವ ವ್ಯಕ್ತಿಯಾಗಿ ನೋಡಿರುತ್ತಾರೆ.
ಅಂಥ ಕಲಾವಿದ ತೆರೆಮೇಲೆ ಕಣ್ಣೀರು ಹಾಕಿದಾಗ ಪ್ರೇಕ್ಷಕರ ಮನಸ್ಸಿಗೆ ಅದು ಇನ್ನಷ್ಟು ಹತ್ತಿರವಾಗುತ್ತದೆ. ಆತ ಮನೆಯವರಲ್ಲಿ ಒಬ್ಬ ಎಂಬ ಭಾವನೆ ಮೂಡುತ್ತದೆ ಎಂದಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ವಿಜಯ್ ಎಸ್. ಸ್ವಾಮಿ, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಚಿಕ್ಕಣ್ಣ ಪಾತ್ರದ ನೋವನ್ನು ಸಹಜವಾಗಿ ಅಭಿವ್ಯಕ್ತಿಸಿದ ರೀತಿಯನ್ನು ನೆನಪಿಸಿಕೊಂಡಿದ್ದಾರೆ. ಒಂದೇ ಟೇಕ್ನಲ್ಲಿ ಅವರು ಆ ಭಾವನಾತ್ಮಕ ದೃಶ್ಯವನ್ನು ಪರಿಣಾಮಕಾರಿಯಾಗಿ ಅಭಿನಯಿಸಿದ್ದು ವಿಶೇಷ ಎಂದು ಹೇಳಿದ್ದಾರೆ.
ಇನ್ಮುಂದೆ ಪ್ರೀತಿ, ಸಂಬಂಧಗಳ ಸುತ್ತಲೇ ಸಿನಿಮಾಗಳನ್ನು ಮಾಡುತ್ತೇನೆ!
‘ಲಕ್ಷ್ಮಿ ಪುತ್ರ’ ಎಪಿ ಅರ್ಜುನ್ ಪಾಲಿಗೆ ಕೇವಲ ಮತ್ತೊಂದು ಸಿನಿಮಾವಲ್ಲ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದ, ಮಾಸ್ ಸಿನಿಮಾಗಳ ಹಿಂದೆ ಹೋಗಿದ್ದ ತಮ್ಮ ವೃತ್ತಿಜೀವನವನ್ನು ಸರಿಪಡಿಸಿಕೊಳ್ಳುವ ಪ್ರಯತ್ನವೂ ಹೌದು. 'ನಾನು ಒಂದು ತಪ್ಪು ಹೆಜ್ಜೆ ಇಟ್ಟಿದ್ದೆ. ಅದನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಈ ಕಥೆ ಬರೆದೆ' ಎಂದು ಅರ್ಜುನ್ ಸ್ಪಷ್ಟವಾಗಿ ಹೇಳಿದ್ದಾರೆ.
ಇನ್ನು 'ಇನ್ನು ಮುಂದೆ ಪ್ರೀತಿ ಮತ್ತು ಸಂಬಂಧಗಳಿಗೆ ಮಹತ್ವ ನೀಡುವ, ಸರಳವಾದ ಹಾಗೂ ಶುದ್ಧ ಮನಸ್ಸಿನ ಸಿನಿಮಾಗಳನ್ನೇ ಮಾಡುತ್ತೇನೆ ಎಂಬುದು ಅವರ ಮಾತು. ಸದ್ಯ ತಾಯಿ-ಮಗನ ಬಾಂಧವ್ಯ, ನೈಜ ಬದುಕಿನ ಅನುಭವಗಳು ಹಾಗೂ ಭಾವನೆಗಳಿಗೆ ಆದ್ಯತೆ ನೀಡಿರುವ ‘ಲಕ್ಷ್ಮಿ ಪುತ್ರ’ ಚಿತ್ರದ ಮೂಲಕ ಎಪಿ ಅರ್ಜುನ್ ತಮ್ಮ ಹಳೆಯ ಶೈಲಿಗೆ ಮರಳುವ ಪ್ರಯತ್ನದಲ್ಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಎಷ್ಟರಮಟ್ಟಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
















