ಗಾಂಧಿನಗರಕ್ಕೆ ಡ್ರಗ್ಸ್ ಅಮಲು ಆರೋಪ; ಎಲ್ಲರನ್ನು ಅನುಮಾನಿಸದಿರಿ ನೋಯಿಸದಿರಿ!
ಜಗತ್ತು ದುಂಡಗಿದೆ. ಹಾಗಾಗಿ ಆಗಾಗ ಗಾಂಧಿನಗರಕ್ಕೆ ಡ್ರಗ್ಸ್ ಅಮಲು ಆರೋಪ ಬರುತ್ತಲೇ ಇರುತ್ತದೆ. ಬಣ್ಣದ ಜಗತ್ತು ಅಂದ ಮೇಲೆ ಅದರ ಮೇಲೆ ಸಾವಿರಾರು ಮಂದಿಯ ಗಮನ ಇರುತ್ತದೆ. ಒಂಚೂರು ಅನುಮಾನದ ಹೊಗೆ ಎದ್ದರೂ ಬೆಂಕಿ ಬೀಳುವುದಕ್ಕೆ ಜಾಸ್ತಿ ಹೊತ್ತು ಬೇಕಾಗಿಲ್ಲ. ಈಗ ಆಗಿರುವುದೂ ಅದೇ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬೆನ್ನು ಬಿದ್ದಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಡ್ರಗ್ಸ್ ಮಾಫಿಯಾ ಜಾಲ ಬೆಂಗಳೂರಿಗೂ ಹರಡಿದ್ದು ಗೊತ್ತಾಗಿದೆ. ಕನ್ನಡದ ನಟರು, ಸಂಗೀತಗಾರರು ಡ್ರಗ್ಸ್ ಅಮಲಿಗೆ ಮರುಳಾಗಿರುವ ಶಂಕೆ ಇದೆ ಎಂಬ ಹೇಳಿಕೆ ಬಿಡುಗಡೆಯಾಗಿದೆ. ಅಲ್ಲಿಗೆ ಮತ್ತೆ ಗಾಂಧಿನಗರದ ತುಂಬಾ ಅನುಮಾನದ ನೋಟ ಬಿದ್ದಿದೆ.
ಇಂಥದ್ದೊಂದು ಆರೋಪ ಬಂದ ತಕ್ಷಣ ಎದುರಾಗುವ ಪ್ರಶ್ನೆ ಇದು ನಿಜವೇ ಎಂಬುದು. ಅದಕ್ಕೆ ಉತ್ತರ ಸಿಗದಿದ್ದರೂ ಎರಡನೇ ಪ್ರಶ್ನೆ ಎದುರಾಗುವುದು ಸಹಜ ಮತ್ತು ನಿಶ್ಚಿತ. ಆ ಪ್ರಶ್ನೆಯೇ ಯಾರಾರು ಅನ್ನುವುದು. ಅವರಿರಬಹುದೇ, ಇವರಿರಬಹುದೇ ಎಂಬ ಮಾತುಕತೆಗಳನ್ನು ಯಾರೂ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಇಲ್ಲಿ ಯಾವುದು ನಿಜ, ಯಾವುದು ಸುಳ್ಳು ಅನ್ನುವುದು ಸದ್ಯಕ್ಕಂತೂ ತಿಳಿಯುವುದಿಲ್ಲ. ಆದರೆ ಒಂದಂತೂ ನಿಜ, ಅನುಮಾನದ ಕರಿನೆರಳು ಗಾಂಧಿನಗರದ ಮೇಲೆ ಬಿದ್ದಿದೆ.
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ 1 ಕೋಟಿ ರುಪಾಯಿ ಮೌಲ್ಯದ ಗಾಂಜಾ ವಶ
ಎಲ್ಲಾ ತಿಳಿದವರು, ತಿಳಿದರೂ ತಿಳಿಯದಂತೆ ಇರುವವರು, ಅಲ್ಪಸ್ವಲ್ಪ ಹೇಳುವವರು, ಗೊತ್ತಿಲ್ಲದೆಯೇ ಎಲ್ಲವನ್ನೂ ತಿಳಿದಂತೆ ತಿಳಿಸುವವರು ಹೀಗೆ ಎಲ್ಲಾ ಬಗೆಯ ಜನರಿರುವ ಗಾಂಧಿನಗರದಲ್ಲಿ ನಿಜ ಯಾವುದು ಎಂದು ಹುಡುಕುವುದು ನಿಜಕ್ಕೂ ಸವಾಲು. ಅಂಥದ್ದರಲ್ಲಿ ಒಂದಷ್ಟುಮಂದಿಯ ಬಳಿ ಇದೇನಿದು ರಗಳೆ ಎಂದು ಕೇಳಿದಾಗ ಸಿಕ್ಕ ಉತ್ತರಗಳು ಇಲ್ಲಿವೆ. ಉಳಿದಿದ್ದು ನಿಮಗೆ ಸಿಕ್ಕಷ್ಟು.
ಸಂತೋಷ ಕೂಟಗಳಿವೆ, ಡ್ರಗ್ಸ್ ಪಾರ್ಟಿ ಇಲ್ಲ
-ಅನಿತಾ ಭಟ್, ನಟಿ
ನಾನು ಕಳೆದ 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದೇನೆ. ಡ್ರಗ್ಸ್ ಮಾಫಿಯಾ, ಜಾಲ, ನಂಟು ಅಂತ ಏನೆಲ್ಲ ಹೇಳುತ್ತಿದ್ದಾರೋ ಅದ್ಯಾವುದನ್ನೂ ನಾನು ಕಂಡಿಲ್ಲ. ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಸಂಸ್ಕೃತಿ ಇಲ್ಲ. ಉದ್ಯಮದಲ್ಲಿ ಪಾರ್ಟಿಗಳು ನಡೆಯುತ್ತವೆ, ಸಂತೋಷ ಕೂಟಗಳನ್ನು ಆಯೋಜಿಸುತ್ತಾರೆ. ಪಾರ್ಟಿ ಸಂಸ್ಕೃತಿ ಇದೆ ನಿಜ, ಹಾಗಂತ ಡ್ರಗ್ಸ್ ತೆಗೆದುಕೊಳ್ಳುವ ಪಾರ್ಟಿಗಳನ್ನು ಮಾಡುವವರು ಕನ್ನಡದಲ್ಲಿ ಇಲ್ಲ. ಆದರೂ ಸಿನಿಮಾ ಅಂದಾಗ ಗಾಸಿಪ್ಪುಗಳು ಎಷ್ಟುಸುಲಭವಾಗಿ ಹರಡುತ್ತಾರೋ ಅಷ್ಟೇ ಸುಲಭವಾಗಿ ಇಂಥ ಮಾಫಿಯಾ ನೆರಳಿನ ನಂಟು ಬೆಸೆಯುತ್ತಾರೆ. ಯಾಕೆಂದರೆ ಲೈಮ್ ಲೈಟ್ ಬೀಳೋರ ಮೇಲೆ ಕಲ್ಲು ತೂರೋದು ಸುಲಭ. ಹಾಗೆ ತೂರಿದ ಕಲ್ಲುಗಳು ರಂಜನಿಯವಾಗಿ ಸುದ್ದಿ, ವಿವಾದ ಕೂಡ ಆಗುತ್ತವೆ. ಬಹುಬೇಗ ಎಲ್ಲರ ಗಮನ ಸೆಳೆಯುತ್ತವೆ. ನಾನೇ ಮಾಧ್ಯಮಗಳಲ್ಲಿ ನೋಡಿದಂತೆ ಕಳೆದ ವರ್ಷವೂ ಇಂಥದ್ದೇ ಆರೋಪ ಬಂತು. ನಂತರ ಆ ಆರೋಪ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಈಗಲೂ ಅಷ್ಟೇ. ಆರೋಪ ಬಂದಿದೆ. ಇಂಥ ಸೂಕ್ಷ್ಮ ವಿಚಾರಗಳು ಬಂದಾಗ ‘ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ’ ಅಂತ ಜನರಲೈಜ್ ಮಾಡುವ ಬದಲು ನಿಜಕ್ಕೂ ಅದರಲ್ಲಿ ಇದ್ದವರು ಕಂಡರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಸಂಬಂಧಪಟ್ಟಕಾನೂನು, ಪೊಲೀಸ್ ಇರುತ್ತಾರೆ. ಅವರು ತಮ್ಮ ಕೆಲಸ ಮಾಡುತ್ತಾರೆ. ಅದು ಬಿಟ್ಟು ಇಡೀ ಉದ್ಯಮವೇ ಇಂಥ ಜಾಲದ ಭಾಗವಾಗಿದೆ ಎನ್ನುವಂತೆ ಬಿಂಬಿಸುವುದು ಸರಿಯಲ್ಲ. ಹೀಗೆ ಏಕದೃಷ್ಟಿಯಿಂದ ಆರೋಪ ಮಾಡಿದರೆ ಅಲ್ಲಿ ಕೆಲಸ ಮಾಡುವ ಸಾವಿರಾರು ಮಂದಿಗೆ ಕಪ್ಪು ಅಂಟಿಸಿದಂತೆ ಆಗುತ್ತದೆ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್; ಸುಮಲತಾ ಅಂಬರೀಶ್ ಹೇಳಿದ್ದಿಷ್ಟು!
ಎಲ್ಲರನ್ನೂ ಒಂದೇ ಥರ ನೋಡದಿರಿ
-ಹರ್ಷಿಕಾ ಪೂಣಚ್ಚ, ನಟಿ
ಕನ್ನಡದಲ್ಲಿ ಡ್ರಗ್ ಮಾಫಿಯಾ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಯಾಕೆಂದರೆ ಇಲ್ಲಿವರೆಗೂ ನಾನು ಅಂಥ ಪಾರ್ಟಿಗಳನ್ನ ಅಥವಾ ಡ್ರಗ್ಸ್ ತೆಗೆದುಕೊಳ್ಳುವವರನ್ನು ನೋಡಿಲ್ಲ. ಒಂದು ವೇಳೆ ಈಗ ಬರುತ್ತಿರುವ ಸುದ್ದಿಯಂತೆ ಯಾರಾದರೂ ಅಂಥ ಜಾಲದ ಭಾಗವಾಗಿದ್ದರೆ ಅವರನ್ನು ಸಾಕ್ಷಿ ಸಮೇತ ಹಿಡಿದು ಕಾನೂನು ಪ್ರಕಾರ ಶಿಕ್ಷೆ ಕೊಡಲಿ. ಆದರೆ, ಇಂಥ ಘಟನೆಗಳು ಅಥವಾ ಪ್ರಕರಣಗಳು ಬೆಳಕಿಗೆ ಬಂದಾಗ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿದಂತೆ ‘ಡ್ರಗ್ ಜಾಲದಲ್ಲಿ ಸ್ಯಾಂಡಲ್‌ವುಡ್ ನಟ- ನಟಿಯರು’ ಎಂದು ಹೇಳುವುದು ಎಷ್ಟುಸೂಕ್ತ. ನನಗೆ ಗೊತ್ತಿರುವಂತೆ ನಮ್ಮ ಕನ್ನಡ ಚಿತ್ರರಂಗ ಇಂಥ ಅಪರಾಧ ವಲಯದಲ್ಲಿ ಗುರುತಿಸಿಕೊಂಡಿಲ್ಲ. ಹೀಗಾಗಿ ಈಗ ಕೇವಲ ಆರೋಪ ಮಾತ್ರ ಬರುತ್ತಿದೆ. ಅದು ನಿಜ ಅಂತ ಹೇಳಬೇಕಾದವರು ಯಾರು? ಹೀಗಾಗಿ ಇಂಥ ಅಂತೆಕಂತೆಗಳ ಆಧಾರ ಮೇಲೆ ಒಂದು ಉದ್ಯಮದ ಮೇಲೆ ಮಸಿ ಬಳಿಯುವುದು ಸೂಕ್ತವಲ್ಲ.
ಡ್ರಗ್ಸ್ ಪ್ರಕರಣಕ್ಕೆ ಟ್ವಿಸ್ಟ್, 'ನಶೆಕನ್ಯೆ' ಅನಿಕಾ ಬಾಯ್ಬಿಟ್ಳು ಸ್ಟಾರ್ ನಟರ ಹೆಸರು!
ಸಿನಿಮಾದವರೇಕೆ ಟಾರ್ಗೆಟ್ ಆಗುತ್ತಾರೆ?
-ಪವನ್ ಕುಮಾರ್, ನಿರ್ದೇಶಕ
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಮತ್ತು ನನ್ನ ಸಿನಿಮಾ ಕೆಲಸಗಳಿಗಾಗಿ ಓಡಾಡುವ ವ್ಯಾಪ್ತಿಯಲ್ಲಿ ನಾನು ಇಂಥ ಯಾವ ವಿಚಾರಗಳನ್ನು ಕೇಳಿಲ್ಲ. ನೀವು ಹೇಳುವ ಡ್ರಗ್ ವಿಚಾರ ಎಲ್ಲಾ ಕ್ಷೇತ್ರಗಳಲ್ಲೂ ಇರಬಹುದು ಅಥವಾ ಇಲ್ಲದಿರಬಹುದು. ಆದರೆ, ಕನ್ನಡ ಸಿನಿಮಾದವರು ಅಂತ ಯಾಕೆ ಲೇಬಲ್ ಹಾಕ್ತೀರಿ? ಕೆಟ್ಟವರು ಎಲ್ಲಾ ಕಡೆ ಇರುತ್ತಾರೆ. ಆದರೂ ನೀವು ಹೇಳುವಂತೆ ಇಂಥ ಸಂಚಲನಾತ್ಮಕ ಸುದ್ದಿಗಳು ಬಹು ಬೇಗ ಸಿನಿಮಾದವರನ್ನು ಯಾಕೆ ಆವರಿಸಿಕೊಳ್ಳುತ್ತವೆ ಅಂದರೆ ಸಿಂಪಲ್, ನಾವು ಸಿನಿಮಾದವರು. ಏನೇ ಹೇಳಿದರೂ, ಏನೇ ಬರೆದರೂ, ಏನೇ ಆರೋಪ ಮಾಡಿದರೂ ರೋಚಕ ಮತ್ತು ರಂಜನೀಯವಾಗಿರುತ್ತದೆ. ಯಾಕೆಂದರೆ ಇಡೀ ಜಗತ್ತಿಗೆ ಕೋವಿಡ್-19 ಕಾಡುತ್ತಿರುವಾಗ ನಟ ಅಮಿತಾಬ್ ಬಚ್ಚನ್‌ಗೆ ಕೋವಿಡ್-19 ಬಂದಿದ್ದು ದೊಡ್ಡ ಸುದ್ದಿ ಆಯ್ತಲ್ಲ ಅದೇ ರೀತಿ ಈ ಡ್ರಗ್ ವಿಚಾರ.
ಸ್ಯಾಂಡಲ್‌ವುಡ್‌ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್‌ನಲ್ಲಿದ್ದಳು?
ಇಡೀ ಉದ್ಯಮವನ್ನೇ ದೂಷಿಸುವುದು ಬೇಡಿ
- ಶ್ರೀಧರ್ ವಿ ಸಂಭ್ರಮ್, ಸಂಗೀತ ನಿರ್ದೇಶಕ
ಅಂಥದ್ದೊಂದು ಜಾಲ, ಅಪರಾಧ ಅಥವಾ ಮಾಫಿಯಾ ಇಲ್ಲಿ ಇದ್ದರೆ ಅಂಥವರನ್ನು ಗುರುತಿಸಿ ಶಿಕ್ಷೆ ಕೊಡಿ. ಆದರೆ ಇಡೀ ಉದ್ಯಮವನ್ನೇ ದೂಷಿಸಬೇಡಿ. ಅಂತೆಕಂತೆಗಳ ಆರೋಪಗಳನ್ನೇ ನಂಬಿಕೊಂಡು ಚಿತ್ರರಂಗದ ಕಡೆ ಬೆರಳು ಮಾಡಿ ತೋರಿಸುವುದು ಒಳ್ಳೆಯದಲ್ಲ. ಇವತ್ತು ಡ್ರಗ್ ಅನ್ನೋದು ದೊಡ್ಡ ಮಟ್ಟದಲ್ಲಿ ಆವರಿಸಿಕೊಂಡಿದೆ. ಅದನ್ನು ಸೇವನೆ ಮಾಡೋದೆ ಪ್ರತಿಷ್ಠೆಯ ಜೀವನ ಅಂದುಕೊಂಡಿದ್ದಾರೆ. ಚಟಗಿಂತ ಹೆಚ್ಚಾಗಿ ಅದೊಂದು ಪ್ಯಾಷನ್ ಆಗಿದೆ. ಅಂಥ ಕೆಟ್ಟದಾರಿಯಲ್ಲಿರುವವರನ್ನು ಶಿಕ್ಷಿಸುವುದು ತಪ್ಪಲ್ಲ. ಹಾಗಂತ ಎಲ್ಲರೂ ಹಾಗೆ ಇರಲ್ಲ.
ಡ್ರಗ್ಸ್ ಡೀಲಿಂಗ್: ಸ್ಯಾಂಡಲ್‌ವುಡ್ ಸ್ಟಾರ್ಸ್, ಸಿಂಗರ್ಸ್ ಮೇಲೆ NCB ಕಣ್ಣು..!
ಇದೆಲ್ಲಾ ಅಂತೆ ಕಂತೆ ಎಂದು ನಂಬಿದ್ದೇನೆ
- ಕಾರುಣ್ಯ ರಾಮ್
ಇವೆಲ್ಲಾ ಅಂತೆ ಕಂತೆಗಳು. ಕೇವಲ ಊಹೆಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ಬಾಲಿವುಡ್, ಟಾಲಿವುಡ್‌ಗಳಲ್ಲಿ ಈ ರೀತಿಯ ಒಂದೆರಡು ಪ್ರಕರಣಗಳು ನಡೆದಿರಬಹುದು. ಹಾಗೆಂದು ಇಡೀ ಇಂಡಸ್ಟ್ರಿಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇಂತಹ ವೇಳೆಯಲ್ಲಿ ಸೆಲಬ್ರಿಟಿಗಳಾದ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಅಭಿಮಾನಿಗಳು ನಮ್ಮನ್ನು ಗಮನಿಸುತ್ತಿರುತ್ತಾರೆ. ನಾವು ನಮ್ಮ ಗೌರವ ಕಾಪಾಡಿಕೊಳ್ಳುವ ಮೂಲಕ ಇಂಡಸ್ಟ್ರಿಯ ಗೌರವವನ್ನೂ ಕಾಪಾಡಬೇಕಿದೆ. ನಮ್ಮ ಸ್ಯಾಂಡಲ್‌ವುಡ್ ಯಾವ ಕಾಲದಲ್ಲೂ ಈ ರೀತಿಯ ಪ್ರಪಂಚಕ್ಕೆ ತೆರೆದುಕೊಂಡಿಲ್ಲ. ಅದೇ ಕಾರಣಕ್ಕೆ ನನಗೆ ನಮ್ಮ ಇಂಡಸ್ಟ್ರಿ ಮೇಲೆ ತುಂಬಾ ಗೌರವ ಇದೆ.
ಎಲ್ಲರನ್ನೂ ಸಿಕ್ಕಿಸುವುದು ಬೇಡ
- ಶ್ರೀನಿ, ನಿರ್ದೇಶಕ
ಮೂಲಭೂತವಾಗಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ತಪ್ಪು ಮಾಡದೇ ಇದ್ದವರ ಕಡೆಗೆ ಆರೋಪ ಮಾಡುವುದು ತಪ್ಪಬೇಕು. ಈಗ ಚಿತ್ರರಂಗದಲ್ಲಿ ಇರುವವರೆಲ್ಲಾ ಒಂದೇ ಅಲ್ಲ. ಒಂದಿಬ್ಬರು ತಪ್ಪು ಮಾಡಿರಬಹುದು. ಅವರು ಮಾಡಿದ ಕೆಲಸಕ್ಕೆ ಎಲ್ಲರೂ ಅಪವಾದ ಹೊತ್ತುಕೊಳ್ಳುವುದು ಸರಿಯಲ್ಲ. ಈಗ ಪೊಲೀಸರು ಈ ರೀತಿಯ ಆರೋಪ ಮಾಡಿದ್ದಾರೆ, ಕೆಲವರನ್ನು ಬಂಧಿಸಿದ್ದಾರೆ, ವಿಚಾರಣೆ ನಡೆಸುತ್ತಿದ್ದಾರೆ ಎಂದರೆ ಅಲ್ಲಿ ಒಂದಷ್ಟುಸತ್ಯವಾದ ಅಂಶ ಇರಬಹುದು. ಅದನ್ನು ಅವರು ಹೊರಗೆ ತೆಗೆಯುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾರೆ. ಅಲ್ಲಿಯವರೆಗೂ ಈ ವಿಚಾರದ ಬಗ್ಗೆ ನಾವು ಹೆಚ್ಚು ಮಾತನಾಡಲು ಆಗುವುದಿಲ್ಲ. ಆದರೆ ನನ್ನ ಮನವಿ ಏನೆಂದರೆ ಇಡೀ ಸ್ಯಾಂಡಲ್‌ವುಡ್ ಅನ್ನು ಈ ವಿಷ ವ್ಯೂಹದೊಳಗೆ ಸಿಕ್ಕಿಸುವುದು ಬೇಡ.
ಸ್ಯಾಂಡಲ್‌ವುಡ್ ಆರೋಪ ಮುಕ್ತವಾಗುತ್ತೆ
- ರಾಗಿಣಿ
ಈಗ ನೆಗೆಟಿವ್ ಪಬ್ಲಿಸಿಟಿ ಎನ್ನುವುದು ಹೆಚ್ಚಾಗಿದೆ. ಈಗ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂರು ಮಂದಿ ಹಾಗೂ ಅವರ ಸುತ್ತಲೂ ಇರುವವರು ಹೀಗೆಯೇ ಮಾಡಿರಬಹುದು. ಯಾವುದೇ ಇಶ್ಯೂ ಇದ್ದಾಗ ಮೊದಲು ದೊಡ್ಡ ದೊಡ್ಡ ರಾಜಕಾರಣಿಗಳು, ಸೆಲಬ್ರಿಟಿಗಳು, ಬ್ಯುಸಿನೆಸ್ ಐಕಾನ್‌ಗಳನ್ನು ಟಾರ್ಗೆಟ್ ಮಾಡುತ್ತಾರೆ. ಇವರ ಹೆಸರು ಬಂದರೆ ಒಂದಷ್ಟುಪ್ರಚಾರ ಸಿಕ್ಕುತ್ತದೆ ಎನ್ನುವ ಹುನ್ನಾರ ಇರಬಹುದು. ಇದೊಂದು ಬೇಸ್‌ಲೆಸ್ ಇಶ್ಯೂ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲವೇ ಇಲ್ಲ. ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಇಡೀ ಜಾಲವನ್ನು ತಿಳಿಯಬೇಕು. ಇದೆಲ್ಲಾ ಎಲ್ಲಿಂದ ಬರುತ್ತಿದೆ, ಇದರ ಹಿಂದೆ ಯಾರಿದ್ದಾರೆ, ಏನೇನು ಆಗುತ್ತಿದೆ ಎನ್ನುವ ಸಂಪೂರ್ಣ ವಿವರವನ್ನು ತನಿಖೆ ಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು. ಅದಕ್ಕೂ ಮೊದಲು ಇಡೀ ಪ್ರಕರಣವನ್ನು ಸ್ಯಾಂಡಲ್‌ವುಡ್ ಜೊತೆಗೆ ತಳುಕು ಹಾಕುವುದು ಸರಿಯಲ್ಲ. ಜೊತೆಗೆ ಯಾವ ನಟ, ನಟಿ, ಸಿನಿಮಾ ಮಂದಿ ತಮ್ಮನ್ನು ತಾವು ಈ ವಿಚಾರವಾಗಿ ಪ್ರೂವ್ ಮಾಡಿಕೊಳ್ಳುವುದು ಬೇಕಿಲ್ಲ. ಅವರ ಬಗ್ಗೆ ಅವರಿಗೆ, ಅಭಿಮಾನಿಗಳಿಗೆ ಗೊತ್ತಿರುತ್ತದೆ. ನಮ್ಮ ಸ್ಯಾಂಡಲ್‌ವುಡ್ ಈ ಆರೋಪದಿಂದ ಖಂಡಿತವಾಗಿಯೂ ಮುಕ್ತವಾಗುತ್ತದೆ.