'ಅಮೃತಧಾರೆ' ಧಾರಾವಾಹಿಯ ಗೌತಮ್ ಮತ್ತು ಭೂಮಿಕಾ ಜೋಡಿ ವೀಕ್ಷಕರ ಮನಗೆದ್ದಿದೆ. ಆದರೆ, ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರು 20 ವರ್ಷಗಳ ಹಿಂದೆ 'ರೌಡಿ ಅಳಿಯ' ಚಿತ್ರದಲ್ಲಿ ರೌಡಿ ಅಣ್ಣ-ತಂಗಿಯಾಗಿ ಒಟ್ಟಿಗೆ ನಟಿಸಿದ್ದರು ಎಂಬುದು ಈಗ ವೈರಲ್ ಆಗಿದೆ.
ಅಮೃತಧಾರೆ ಎಂದರೆ ಸಾಕು, ಅಲ್ಲಿನ ಗೌತಮ್ ಮತ್ತು ಭೂಮಿಕಾ ಮುದ್ದಾದ ಜೋಡಿ ಎಲ್ಲರ ಕಣ್ಣೆದುರು ಬರುತ್ತದೆ. ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ (Rajesh Nataranga) ಮತ್ತು ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ (Chaya Singh) ಅವರ ಅದ್ಭುತ ಅಭಿನಯವಂತೂ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಕಣ್ಣಿನಲ್ಲಿಯೇ ನಟಿಸುವ ಈ ಇಬ್ಬರು ಅದ್ಭುತ ಕಲಾವಿದರು ಒಬ್ಬರನ್ನೊಬ್ಬರು ನಟನೆಯಲ್ಲಿ ಪೈಪೋಟಿ ನೀಡುವಂತೆ ನಟಿಸುತ್ತಿದ್ದಾರೆ. ಮಧ್ಯ ವಯಸ್ಸಿನ ಲವ್ ಸ್ಟೋರಿಯಿಂದ ಹಿಡಿದು, ಮದುವೆಯಾದ ಮೇಲಿನ ಭಾವನೆ, ಅಪ್ಪ-ಅಮ್ಮನಾದ ಬಳಿಕ ಆ ಪ್ರೀತಿ, ಬೇರೆ ಬೇರೆಯಾಗಿ ಇದೀಗ ವಿರಹ ವೇದನೆ ಅನುಭವಿಸುತ್ತಿರುವುದು... ಅಬ್ಬಬ್ಬಾ ಎನ್ನುವಂಥ ನಟನೆ ಇವರಿಬ್ಬರದ್ದು. ಇದೇ ಕಾರಣಕ್ಕೆ ಈ ಸೀರಿಯಲ್ ಟಿಆರ್ಪಿಯಲ್ಲಿಯೂ ಮುಂದಿದ್ದು, ವೀಕ್ಷಕರನ್ನು ಕ್ಷಣಕ್ಷಣಕ್ಕೂ ರೋಮಾಂಚನಗೊಳಿಸುತ್ತಿದೆ.
ರೌಡಿ ಅಣ್ಣ-ತಂಗಿ!
ಆದರೆ, ನಿಮಗೆ ಗೊತ್ತಾ? ಇದೇ ಮುದ್ದಾದ ಗಂಡ-ಹೆಂಡತಿ ಜೋಡಿ 20 ವರ್ಷಗಳ ಹಿಂದೆ ರೌಡಿ ಜೋಡಿಯಾಗಿತ್ತು ಎನ್ನೋದು? ಅಷ್ಟಕ್ಕೂ ರಾಜೇಶ್ ನಟರಂಗ ಅವರು ಕೆಲವು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದರೆ, ಅವರಿಗೆ ಸರಿಸಾಟಿಯಾಗಿ ಛಾಯಾ ಸಿಂಗ್ ಅವರೂ ರೌಡಿಯಾಗಿ ಕಾಣಿಸಿಕೊಂಡಿರುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಈ ಕುತೂಹಲ ಈಗ ರಿವೀಲ್ ಆಗಿದೆ. ಇವರಿಬ್ಬರ ಅಭಿನಯದ ರೌಡಿ ಅಳಿಯ (Rowdy Aliya) ಚಿತ್ರದ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರೌಡಿ ಅಳಿಯ ಚಿತ್ರ
2004ರಲ್ಲಿ ಬಿಡುಗಡೆಯಾಗಿದ್ದ ರೌಡಿ ಅಳಿಯ ಚಿತ್ರದಲ್ಲಿ ಶಿವರಾಜ್ ಕುಮಾರ್, ಶರಣ, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ, ರೌಡಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದರು ಗೌತಮ್ ಮತ್ತು ಭೂಮಿಕಾ ಅರ್ಥಾತ್ ರಾಜೇಶ್ ಮತ್ತು ಛಾಯಾ ಸಿಂಗ್! ಇದರಲ್ಲಿ ಛಾಯಾ ಸಿಂಗ್ ಕುಪ್ಪಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ರೌಡಿಸಂ ದೃಶ್ಯದ ತುಣುಕು ಇಲ್ಲಿದೆ. ಅಂದು ಅಣ್ಣ-ತಂಗಿಯಾಗಿ ನಟಿಸಿದ್ದವರು ಇಂದು ಗಂಡ- ಹೆಂಡತಿಯಾಗಿ ನಟಿಸುತ್ತಿದ್ದಾರೆ. ಅಲ್ಲಿಯೂ ಇವರಿಬ್ಬರ ಜೋಡಿ ಸಕತ್ ಸೌಂಡ್ ಮಾಡಿದ್ದರೆ, ಈಗಲೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಒಂದೇ ವ್ಯತ್ಯಾಸ ಎಂದರೆ ಆ ಚಿತ್ರದಲ್ಲಿ ಇವರದ್ದು ಸೈಡ್ ರೋಲ್ ಆದರೆ, ಇಲ್ಲಿ ಲೀಡ್ ರೋಲ್ ಅಷ್ಟೇ.
ರಾಜೇಶ್ ನಟರಂಗ ಕುರಿತು...
ಇನ್ನು ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.
ಛಾಯಾ ಸಿಂಗ್ ಕುರಿತು...
ನಟಿ ಛಾಯಾ ಅವರು ಸ್ಯಾಂಡಲ್ವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿರಪರಿಚಿತರು. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ತುಂಟಾಟ ಸಿನಿಮಾ ಬಳಿಕ ಕಾಲಿವುಡ್‌ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.
ಛಾಯಾ ಸಿಂಗ್ ಫ್ಯಾನ್ಸ್ ಪೇಜ್ನಲ್ಲಿ ಶೇರ್ ಮಾಡಲಾಗಿರುವ ಈ ವೈರಲ್ ವಿಡಿಯೋಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/reel/DQikh-QCd9V/?igsh=YndzM3V1emdzNXll


