ವಿಷ್ಣುವರ್ಧನ್ ಮತ್ತು ಸರೋಜಾದೇವಿ ಅವರಿಗೆ 'ಕರ್ನಾಟಕ ರತ್ನ' ಘೋಷಣೆಯ ಬೆನ್ನಲ್ಲೇ, ಮಂಡ್ಯದ ಅಂಬರೀಷ್ ಅವರಿಗೂ ಈ ಗೌರವ ನೀಡುವಂತೆ ತಾರಾ ಅನುರಾಧ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದಿದ್ದಾರೆ.
ಬೆಂಗಳೂರು (ಸೆ.15): ದಿವಂಗತ ನಟ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಡಾ. ಸರೋಜಾದೇವಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ, ದಿವಂಗತ ನಟ ಮತ್ತು ರಾಜಕಾರಣಿ ಅಂಬರೀಷ್ ಅವರಿಗೂ ಈ ಗೌರವ ನೀಡುವಂತೆ ಹಿರಿಯ ನಟಿ ತಾರಾ ಅನುರಾಧ ಅವರು ಮನವಿ ಮಾಡಿದ್ದಾರೆ.
ಇಂದು (ಸೆಪ್ಟೆಂಬರ್ 15) ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ತಾರಾ, ಈ ಕುರಿತು ಪ್ರಸ್ತಾವ ಸಲ್ಲಿಸಿದರು. ಭೇಟಿಯ ನಂತರ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, 'ಅಂಬರೀಷ್ ಅಣ್ಣ ಒಬ್ಬ ಮಹಾನ್ ವ್ಯಕ್ತಿ ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಸ್ನೇಹ ಇಡೀ ಚಿತ್ರರಂಗಕ್ಕೆ ಮತ್ತು ಜನತೆಗೆ ತಿಳಿದಿದೆ. ಈಗ ವಿಷ್ಣು ಸರ್‌ಗೆ ಕರ್ನಾಟಕ ರತ್ನ ಸಿಕ್ಕಿರುವುದರಿಂದ, ಅಂಬರೀಷ್ ಅಣ್ಣನಿಗೂ ಈ ಪ್ರಶಸ್ತಿ ಸಿಗಬೇಕು ಎಂಬುದು ನನ್ನ ವೈಯಕ್ತಿಕ ಆಶಯ' ಎಂದು ಹೇಳಿದರು.
ಮಲ್ಲೇಶ್ವರಂ ರಸ್ತೆಗೆ ಸರೋಜಾದೇವಿ ಹೆಸರು
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಾರಾ ತಿಳಿಸಿದರು. ಜೊತೆಗೆ, ಹಿರಿಯ ನಟಿ ಸರೋಜಾದೇವಿ ಅವರ ಹೆಸರನ್ನು ಬೆಂಗಳೂರಿನ ಮಲ್ಲೇಶ್ವರಂ 11ನೇ ಕ್ರಾಸ್ ರಸ್ತೆಗೆ ಇಡುವಂತೆ ಮನವಿ ಮಾಡಿದ್ದು, ಅದಕ್ಕೂ ಒಪ್ಪಿಗೆ ಸಿಕ್ಕಿದೆ ಎಂದು ವಿವರಿಸಿದರು. ಸರೋಜಾದೇವಿ ಅವರು ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಈಗಾಗಲೇ ಪಡೆದಿದ್ದಾರೆ.
ರಾಜ್ಯದ ಮಹಾನ್ ಸಾಧಕರಿಗೆಲ್ಲರಿಗೂ 'ಕರ್ನಾಟಕ ರತ್ನ' ಪ್ರಶಸ್ತಿ ಸಿಗಬೇಕು. ನಮ್ಮ ರಾಜ್ಯಕ್ಕೆ ಮತ್ತು ಕಲೆಗೆ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಎಂದು ತಾರಾ ಹೇಳಿದರು. ಕರ್ನಾಟಕದ ಸಂಸ್ಕೃತಿ, ರಾಜಕೀಯ ಮತ್ತು ಸಮಾಜಕ್ಕೆ ಅಂಬರೀಷ್ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
