ನಟಿ ಜಯಮಾಲಾ ಅವರ ಮಗಳು ಸೌಂದರ್ಯಾ ಇಂಗ್ಲೆಂಡ್‌ ವೇಲ್ಸ್‌ನ ಸ್ವಾನ್‌ಸಿ ಯುನಿವರ್ಸಿಟಿ ವಿದ್ಯಾರ್ಥಿನಿ. ಇದೀಗ ತಾಯ್ನೆಲಕ್ಕೆ ಬಂದಿಳಿದ ನಿರುಮ್ಮಳತೆಯಲ್ಲಿದ್ದಾರೆ. ಆದರೆ ಲಾಕ್‌ಡೌನ್‌ ಆರಂಭದಲ್ಲೇ ಭಾರತಕ್ಕೆ ಹೊರಟರೂ ಬರಲಾಗದೇ, ಇಂಗ್ಲೆಂಡ್‌ನಲ್ಲೇ ಐಸೋಲೇಶನ್‌ನಲ್ಲಿರಬೇಕಾಯ್ತು. ತಾಯ್ನೆಲಕ್ಕೆ ಹಿಂದಿರುಗುವವರೆಗೂ ಇದ್ದ ಆತಂಕ, ಇಂಗ್ಲೆಂಡ್‌ನ ಭಯದ ದಿನಗಳನ್ನು ಅವರಿಲ್ಲಿ ವಿವರಿಸಿದ್ದಾರೆ.

ತಾಯ್ನೆಲಕ್ಕೆ ಬಂದಿಳಿದಾಗ ಕಣ್ತುಂಬ ನೀರು

ಸುಮಾರು ಹನ್ನೊಂದು ಹನ್ನೆರಡು ಗಂಟೆಗಳ ವಿಮಾನ ಪ್ರಯಾಣದ ಕೊನೆಯ ಭಾಗ, ಜೀವನದಲ್ಲಿ ಮರೆಯಲಾಗದ ಗಳಿಗೆಯಾಗಿ ದಾಖಲಾಯಿತು. ಲಂಡನ್‌ನಿಂದ ಹೊರಟ ನಮ್ಮ ವಿಮಾನ ದೆಹಲಿ ಸಮೀಪಿಸುತ್ತಿದ್ದಂತೆ ವಿಮಾನದ ತುಂಬ ಕೇಕೆ, ಸೀಟಿ, ಹರ್ಷೋದ್ಗಾರಗಳು, ನಮ್ಮೆಲ್ಲರ ಕಣ್ಣುಗಳು ಕಣ್ಣೀರಿಂದ ಒದ್ದೆಯಾಗಿದ್ದವು. ಮಾಚ್‌ರ್‍ 28 ರಿಂದ ಈವರೆಗೆ ದುಸ್ವಪ್ನವಾಗಿ ಕಾಡುತ್ತಿದ್ದ ಕ್ಷಣಗಳು ಕರಗಿ ಖುಷಿಯ ದಿನಗಳು ಬಂದಿದ್ದವು. ವಿಮಾನ ಬೆಂಗಳೂರಿಗೆ ಬಂದಿಳಿದ ಮೇಲಂತೂ ಪ್ರಯಾಣದ ಸುಸ್ತೆಲ್ಲ ಮರೆಯಾಗಿ ವಿಪರೀತ ಜೋಶ್‌ ಬಂದುಬಿಟ್ಟಿತ್ತು.

ಅಯ್ಯಯ್ಯೋ.. ಎಲ್ಲವನ್ನು ಕಾಣಿಸಿಕೊಂಡು ಹೋದವಳು ಯಾರು?

ನನ್ನ ಕತೆ ಇದು

ಇಂಗ್ಲೆಂಡ್‌ ರಾಜಧಾನಿ ಲಂಡನ್‌ನಿಂದ ಹಲವು ಮೈಲಿಗಳ ದೂರದಲ್ಲಿರುವ ವೇಲ್ಸ್‌ ಸಿಟಿ ಸಮೀಪ ನಮ್ಮ ಸ್ವಾನ್‌ಸಿ ಯುನಿವರ್ಸಿಟಿ ಇದೆ. ಇಲ್ಲಿ ಭಾರತೀಯ ವಿದ್ಯಾರ್ಥಿಗಳು ಬಹಳ ಕಡಿಮೆ. ನಾನಿಲ್ಲಿ ಬಾಟನಿಯಲ್ಲಿ ಫೈನಲ್‌ ಯಿಯರ್‌ ಆನರ್ಸ್‌ ಮಾಡುತ್ತಿದ್ದೀನಿ. ಈ ಮಾಚ್‌ರ್‍ ಕೊನೆಗೆ ನನ್ನ ಈ ವ್ಯಾಸಂಗ ಮುಕ್ತಾಯಗೊಳ್ಳಬೇಕಿತ್ತು. ಅದಕ್ಕೂ ಮೊದಲೇ ಇಲ್ಲಿ ಕೊರೋನಾ ಕಾಣಿಸಿಕೊಂಡಿತು. ನಮ್ಮ ಯುನಿವರ್ಸಿಟಿಯಲ್ಲಿ ನ್ಯೂರೋ ಸೈನ್ಸ್‌ ಪ್ರೊಫೆಸರ್‌ಗೆ ಕೋವಿಡ್‌ ಬಂತು, ಆಮೇಲೆ ವಿದ್ಯಾರ್ಥಿಗೆ ಹಬ್ಬಿತು. ಮತ್ತೊಬ್ಬ ಪ್ರಾಧ್ಯಾಪಕರಿಗೂ ಬಂತು. ಹರ್ಡ್‌ ಇಮ್ಯುನಿಟಿ ಅಂತ ಆಮೇಲೂ ಕ್ಲಾಸಸ್‌ ಮುಂದುವರಿಸೋದರಲ್ಲಿದ್ದರು, ನಾವು ವಿದ್ಯಾರ್ಥಿಗಳೆಲ್ಲ ವಿರೋಧಿಸಿದ ಮೇಲೆ ಸೀಲ್‌ಡೌನ್‌ ಮಾಡಿದರು.

ಏರ್‌ಲಿಫ್ಟ್‌; ಲಂಡನ್‌ನಿಂದ ಭಾರತಕ್ಕೆ ನಟಿ ಜಯಮಾಲಾ ಪುತ್ರಿ ವಾಪಸ್!

ಇಂಡಿಯಾದ ಕೊನೆಯ ಫ್ಲೈಟು

ನನ್ನ ಬಾಡಿಗೆ ಮನೆ ಅಗ್ರಿಮೆಂಟ್‌ ಮುಗಿದಿತ್ತು. ಅಷ್ಟೊತ್ತಿಗೆ ಭಾರತದಲ್ಲಿ ಲಾಕ್‌ಡೌನ್‌ ಆಗ್ತಿದೆ, ಲಂಡನ್‌ನಿಂದ ಕೊನೆಯ ಫ್ಲೈಟ್‌ ಹೊರಡ್ತಿದೆ ಅಂತ ಗೊತ್ತಾಯ್ತು. ಆ ಫ್ಲೈಟ್‌ಗೆ ಟಿಕೆಟ್‌ ಮಾಡಿದ್ದೂ ಆಯ್ತು. ಆದರೆ ಲಂಡನ್‌ನಲ್ಲಿ ಈಗ ಅಲ್ಲಿಗೆ ಕಳಿಸೋಕೆ ತಾಂತ್ರಿಕ ಸಮಸ್ಯೆ ಇದೆ ಅಂದರು. ನನಗೆ ದಿಗಿಲು.. ಗಲಾಟೆ ಮಾಡಿ ಅವರನ್ನು ಹೇಗೋ ಒಪ್ಪಿಸಿದೆವು. ಆಮೇಲೆ ನೋಡಿದರೆ ನಾವಿದ್ದ ಫ್ಲೈಟ್‌ ನಮ್ಮನ್ನೆಲ್ಲ ದುಬೈಯಲ್ಲಿ ಇಳಿಸಿತು. ಮುಂದೆ ಹೋಗಲೇ ಇಲ್ಲ. ಅಷ್ಟೊತ್ತಿಗೆ ದುಬೈನಿಂದ ಲಂಡನ್‌ಗೆ ವಿಮಾನಯಾನವೂ ಮುಕ್ತಾಯಗೊಂಡಿತ್ತು. ಅತ್ತ ಭಾರತಕ್ಕೂ ಹೋಗಲಾಗದೇ ಇತ್ತ ಲಂಡನ್‌ಗೂ ಮರಳಲಾಗದೇ ಏರ್‌ಪೋರ್ಟ್‌ನಲ್ಲಿ ದಿಕ್ಕೆಟ್ಟು ಕೂತಿದ್ದೆವು.

ದುಬೈ ಏರ್‌ಪೋರ್ಟ್‌ನ ಭೀತಿಯ ಕ್ಷಣಗಳು

ರೆಡ್‌ ಅಲರ್ಟ್‌ ಇದ್ದ ದುಬೈ ಏರ್‌ಪೋರ್ಟ್‌. ನಾವು ಅಲ್ಲೊಂದು ಕಡೆ ಮೆಟ್ಟಿಲಿನ ಅಡಿ ಕೂತು ಅತ್ತಿತ್ತ ನೋಡುತ್ತಿದ್ದೆವು. ಅಲ್ಲಲ್ಲಿ ಕೆಮ್ಮುವ ಧ್ವನಿ, ಓಡಾಡುತ್ತಲೇ ಇದ್ದ ಆ್ಯಂಬ್ಯುಲೆನ್ಸ್‌, ಅದರೊಳಗಿದ್ದ ರೋಗಿಗಳು ವಿಚಿತ್ರವಾಗಿ ಉಸಿರಾಡುತ್ತಿದ್ದರು, ಅದು ನಮ್ಮಂಥಾ ಸಹಜ ಉಸಿರಾಟವಲ್ಲ.. ಆ ಧ್ವನಿ ಏರ್‌ಪೋರ್ಟ್‌ನಲ್ಲೆಲ್ಲ ತುಂಬಿ ಹೋಗಿತ್ತು. ಆಗಾಗ ಕೈ, ಮೈಯಿಡೀ ಸ್ಯಾನಿಟೈನರ್‌ ಹಚ್ಚಿಕೊಳ್ಳುತ್ತಿದ್ದೆವು. ಯಾರಿಂದ ಎಲ್ಲಿ ಸೋಂಕು ತಗುಲಬಹುದೋ ಅನ್ನುವ ಭಯ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮುಂದಿನ ಕತೆ ಏನು ಅಂತ ಯೋಚಿಸಿದರೆ ತಲೆ ಕೆಟ್ಟು ಹೋಗುತ್ತಿತ್ತು. ಏಕೆಂದರೆ ವಿದೇಶಿ ನಂಬರ್‌ಗಳ ಮೂಲಕ ಇಲ್ಲಿಂದ ವಾಟ್ಸಾಪ್‌ ಕರೆ ಹೋಗಲ್ಲ. ನಮ್ಮ ಈ ಸ್ಥಿತಿ ಯಾರಿಗೂ ಹೇಳುವಂತಿಲ್ಲ. ಇಲ್ಲಿಯ ನಮ್ಮ ಸ್ಥಿತಿ ಯಾರಿಗೆ ಹೇಳುವುದು..

ಗೊಂದಲ, ಹಸಿವು

ಅದೃಷ್ಟವಶಾತ್‌ ಒಂದು ವಿಮಾನದಲ್ಲಿ ನಮ್ಮನ್ನು ಮತ್ತೆ ಲಂಡನ್‌ಗೆ ತಂದಿಳಿಸಿದರು. ಮಧ್ಯರಾತ್ರಿ ನಾನಿದ್ದ ಜಾಗಕ್ಕೆ ಬಂದಿಳಿದರೆ ರೂಮ್‌ಗೆ ಲಾಕ್‌. ನಾನಿದ್ದ ರೂಮ್‌ನ ಅಗ್ರಿಮೆಂಟ್‌ ಮುಗಿದು ಆಗಲೇ ರೂಮ್‌ ಖಾಲಿ ಮಾಡಿದ್ದೆ. ಮಾಲೀಕರು ಲಾಕ್‌ ಮಾಡಿಕೊಂಡು ಹೋಗಿದ್ದರು. ಮಧ್ಯರಾತ್ರಿ ಅವರಿಗೆ ಮೆಸೇಜ್‌ ಮಾಡಿ ನನ್ನೆಲ್ಲ ಸ್ಥಿತಿ ವಿವರಿಸಿದೆ. ಅವರು ಮತ್ತೊಬ್ಬರ ಮೂಲಕ ಬೀಗ ತೆಗೆಸಿಕೊಟ್ಟರು.

ನಾನು ರೆಡ್‌ ಅಲರ್ಟ್‌ ಇದ್ದ ಏರ್‌ಪೋರ್ಟ್‌ಗಳಲ್ಲಿ ಸಂಚರಿಸಿದ ಕಾರಣ ಐಸೋಲೇಶನ್‌ ಮಾಡಲೇ ಬೇಕಿತ್ತು. ಆದರೆ ರೂಮ್‌ನಲ್ಲಿ ಕರೆಂಟ್‌, ನೀರು, ಇಂಟರ್‌ನೆಟ್‌, ಫೋನ್‌ ಎಲ್ಲ ಸೇವೆ ಕಟ್‌ ಮಾಡಿದ್ದರು. ಆಹಾರಕ್ಕೆ ಗತಿಯಿಲ್ಲ. ಐಸೋಲೇಶನ್‌ನಲ್ಲಿ ಇದ್ದವರಿಗೆ ಆಹಾರ ಎಲ್ಲಿಂದ ಬರಬೇಕು? ನನ್ನ ಕುವೈಟ್‌ ಫ್ರೆಂಡ್‌ ಸಕಾಲದಲ್ಲಿ ಆಹಾರ ಮತ್ತು ವಿಟಮಿನ್‌ ಮಾತ್ರೆ ತಂದುಕೊಟ್ಟು ಸಹಾಯ ಮಾಡಿದಳು. ಅವಳಿಗೆ ಅಸ್ತಮಾ ಸಮಸ್ಯೆ ಇತ್ತು. ಹಾಗಾಗಿ ರೂಮ್‌ನ ಹೊರಗೇ ಆಹಾರ ಇಟ್ಟು ಹೋಗುತ್ತಿದ್ದಳು.

ಐಸೋಲೇಶನ್‌ ಕ್ಷಣಗಳು

ಸುತ್ತಲ ಜಗತ್ತಲ್ಲಿ ಏನಾಗುತ್ತೆ ಅಂತ ಗೊತ್ತಿಲ್ಲ. ಆಪ್ತರು ಎಲ್ಲ ಅವರವರ ಜಾಗಕ್ಕೆ ಹೋಗಿ ಆಗಿದೆ. ರೂಮ್‌ ಹೊರಗೆ ಫ್ರೆಂಡ್‌ ತಂದಿಡುವ ಆಹಾರವೇ ಜೀವನಾಧಾರ. ಈ ಟೈಮ್‌ನಲ್ಲಿ ಮತ್ತೊಂದು ಭಯ ಧೃತಿಗೆಡಿಸುತ್ತಿತ್ತು. ಒಂದು ವೇಳೆ ಮಧ್ಯರಾತ್ರಿ ನನಗೆ ಉಸಿರಾಟದ ಸಮಸ್ಯೆ ಏನಾದರೂ ಶುರುವಾದರೆ ಏನು ಮಾಡೋದು.. ಇಲ್ಲಿನ ಆರೋಗ್ಯ ವ್ಯವಸ್ಥೆ ನಮ್ಮ ಹಾಗಲ್ಲ. ನೀವು ಕಾಲ್‌ ಮಾಡಿ ಇಪ್ಪತ್ತು ನಿಮಿಷ ನಿಮ್ಮೆಲ್ಲ ವಿವರ ಹೇಳಿದ ಮೇಲೆ ಆ್ಯಂಬ್ಯುಲೆನ್ಸ್‌ ಕಳಿಸುತ್ತಾರೆ. ಆದರೆ ತೀವ್ರ ಅಸ್ವಸ್ಥಗೊಂಡಾಗ ಅವರ ಪ್ರಶ್ನೆಗೆ ಉತ್ತರಿಸೋದು ಹೇಗೆ.. ನನ್ನ ಪುಣ್ಯ, ಹದಿನಾರು ದಿನ ಅಂಥಾ ಯಾವ ಸಮಸ್ಯೆಯೂ ಆಗಲಿಲ್ಲ. ವೀಡಿಯೋ ಕಾಲ್‌ನಿಂದ ಅಮ್ಮನ ಜೊತೆಗೆ, ಫ್ರೆಂಡ್ಸ್‌ ಜೊತೆ, ಇಲ್ಲಿನ ಕನ್ನಡ ಸಂಘದವರ ಜೊತೆಗೆ ಮಾತಾಡುತ್ತಿದ್ದೆ. ಕನ್ನಡ ಸಂಘದವರು ಬಹಳ ಧೈರ್ಯ ತುಂಬಿದರು.

ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ ಸನ್ನಿ ಲಿಯೋನ್; ಹೇಗೆ ಸಾಧ್ಯವಾಯ್ತು?

ಕೊನೆಗೂ ಕರೆ ಬಂತು

ಭಾರತಕ್ಕೆ ಹೊರಡುವ ಎರಡು ದಿನ ಮೊದಲಿನವರೆಗೂ ನನಗೆ ಯಾವ ಸೂಚನೆಯೂ ಬಂದಿರಲಿಲ್ಲ. ಆದರೆ ಹಿಂದಿನ ದಿನ ರಾತ್ರಿ 11 ಗಂಟೆಗೆ ಕರೆ ಬಂತು. ನಾಳೆ ಬೆಳಗ್ಗೆ ಆರು ಗಂಟೆಗೆಲ್ಲ ಲಂಡನ್‌ ಏರ್‌ಪೋರ್ಟ್‌ನಲ್ಲಿರಿ ಅಂತ. ಉದ್ವೇಗ, ಖುಷಿಯಲ್ಲಿ ಏನು ಮಾಡಲೂ ತೋಚದ ಸ್ಥಿತಿ. ಆದರೆ ನಾನಿದ್ದ ಜಾಗ ಲಂಡನ್‌ನಿಂದ ಹಲವು ಮೈಲಿ ದೂರ. ಬೇಗ ಬೇಗ ಎಲ್ಲ ಪ್ಯಾಕ್‌ ಮಾಡಿಕೊಂಡು ಮೂರಕ್ಕೆಲ್ಲ ಟ್ಯಾಕ್ಸಿ ಹತ್ತಿದೆ. ಆರು ಗಂಟೆಗೆ ಏರ್‌ಪೋರ್ಟ್‌ನಲ್ಲಿದ್ದೆ. ಉದ್ದದ ಕ್ಯೂ ಇತ್ತು. ಒಂದಿಷ್ಟುತಪಾಸಣೆಗಳ ನಂತರ ನಮ್ಮನ್ನು ಫ್ಲೈಟ್‌ ಹತ್ತಿಸಿದರು.

ವಿಮಾನದಲ್ಲಿ ಆತಂಕ

ಸುಮಾರು ಹನ್ನೊಂದು ಹನ್ನೆರಡು ಗಂಟೆಗಳ ಪಯಣ. ಪಕ್ಕದಲ್ಲಿ ಗರ್ಭಿಣಿಯೊಬ್ಬರು ಕೂತಿದ್ದರು. ಹೊಟ್ಟೆನೋವು, ಸಂಕಟದಿಂದ ಒದ್ದಾಡುತ್ತಿದ್ದರು. ಸೆಲ್ಫ್ ಸರ್ವೀಸ್ ಇತ್ತು. ಅಷ್ಟು ಹೊತ್ತೂ ಕೂತೇ ಇರುವ ಅನಿವಾರ್ಯತೆ. ಆತಂಕ, ಎಲ್ಲಿ ಯಾರನ್ನು ಮುಟ್ಟಿಬಿಡುತ್ತೇವೋ ಅಂತ. ಕೊನೆಗೂ ಫ್ಲೈಟ್‌ ದೆಹಲಿ ಮುಟ್ಟಿದಾಗ ಬಹಳ ಭಾವೋದ್ವೇಗಕ್ಕೆ ಒಳಗಾಗಿದ್ದೆವು.

ಕ್ವಾರೈಂಟೇನ್‌ನಲ್ಲೂ ಖುಷಿ

ಈಗ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಮ್ಮನ್ನು ಕ್ವಾರೈಂಟೈನ್‌ನಲ್ಲಿ ಇಟ್ಟಿದ್ದಾರೆ. ಇಲ್ಲಿ ವೈದ್ಯಕೀಯ ವ್ಯವಸ್ಥೆ, ಆಹಾರ ಎಲ್ಲ ಇದೆ. ಭಯ, ಆತಂಕಗಳೆಲ್ಲ ಮುಗಿದು ಕ್ವಾರೈಂಟೈನ್‌ನಲ್ಲೂ ಖುಷಿಯಿಂದಿರುವುದು ಸಾಧ್ಯವಾಗುತ್ತಿದೆ.

- ಪ್ರಿಯಾ ಕೇರ್ವಾಶೆ