ನಾನು ತುಂಬಾ ರೆಬೆಲ್‌. ಆಗೆಲ್ಲ ‘ಅಯ್ಯೋ ಅತ್ತೆ ಬೈದ್ರೆ ವಿಷ ತಗೋಬೇಕಾ? ಅಂಥಾ ಪಾತ್ರ ಮಾಡಬೇಕಾ?’ ಅನ್ನೋ ಪ್ರಶ್ನೆ ಮೂಡುತಿತ್ತು ಎಂದು ಹಿರಿಯ ನಟಿ ಶ್ರುತಿ ಹೇಳಿದ್ದಾರೆ.

ಚಿತ್ರರಂಗಕ್ಕೆ ಬಂದು 35 ವರ್ಷಗಳನ್ನು ಪೂರೈಸಿರುವ ಹೊತ್ತಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ‘ಯಾವುದು ಅಸಾಧ್ಯ ಅಲ್ಲ’ ಎನ್ನುವ ಸತ್ಯದರ್ಶನವಾಗುತ್ತದೆ ಎಂದು ಹಿರಿಯ ನಟಿ ಶ್ರುತಿ ಹೇಳಿದ್ದಾರೆ.

1. ಚಿತ್ರರಂಗಕ್ಕೆ ಬಂದು 35 ವರ್ಷಗಳನ್ನು ಪೂರೈಸಿರುವ ಹೊತ್ತಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ‘ಯಾವುದು ಅಸಾಧ್ಯ ಅಲ್ಲ’ ಎನ್ನುವ ಸತ್ಯದರ್ಶನವಾಗುತ್ತದೆ. ನಾವು ಮಾಡೋ ಕೆಲಸದಲ್ಲಿ ಪ್ರಾಮಾಣಿಕತೆ, ಕಲಿಕೆಯ ಉತ್ಸಾಹ, ಶ್ರದ್ಧೆ ಇದ್ದರೆ ಏನನ್ನ ಬೇಕಾದರೂ ಸಾಧಿಸಬಹುದು ಎಂಬುದು ಈ ಮೂವತ್ತೈದು ವರ್ಷಗಳ ನನ್ನ ಸಿನಿ ಪಯಣವೇ ನನಗೆ ಅರ್ಥ ಮಾಡಿಸಿದೆ.

2. ಆಸೆಪಟ್ಟರೆ ಏನೂ ಸಿಗಲ್ಲ, ಪ್ರಯತ್ನ ಮಾಡಿದರೆ ಮಾತ್ರ ಏನಾದರು ಸಿಗುತ್ತದೆ ಎನ್ನುವುದು ನಾನು ನಂಬಿರುವ ತತ್ವ. ಚಿತ್ರರಂಗ, ಸಿನಿಮಾ, ನಟನೆ ನನ್ನ ಆಸೆ ಆಗಿರಲಿಲ್ಲ. ನನ್ನ ಹೆತ್ತವರ ಕನಸಾಗಿತ್ತು. ಆದರೆ, ಹೆತ್ತವರ ಆ ಕನಸು, ಆಸೆಗಳು ಈಡೇರಕ್ಕೆ ನಾನು ಪ್ರಯತ್ನ ಮಾಡಿದೆ. ಅಂದುಕೊಂಡಿದ್ದಕ್ಕಿಂತ ಹೆಚ್ಚೇ ನನಗೆ ಚಿತ್ರರಂಗ ಯಶಸ್ಸು ನೀಡಿತು.

3. ನಾನು ನಾಯಕಿಯಾಗಿ ಚಿತ್ರರಂಗ ಬಂದಿದ್ದು ‘ಶ್ರುತಿ’ ಚಿತ್ರದಿಂದ. ಅಲ್ಲಿಂದ ಪ್ರಿಯದರ್ಶಿನಿ ಎನ್ನುವ ಹೆಸರು ಹೋಗಿ ಶ್ರುತಿ ಅಂತಲೇ ಹೆಸರಾಯಿತು. ಈ ಚಿತ್ರಕ್ಕೂ ಮುನ್ನ ‘ಆಸೆಗೊಬ್ಬ ಮೀಸೆಗೊಬ್ಬ’ ಹಾಗೂ ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ.

4. ಗುರಿ ಇಟ್ಟುಕೊಂಡು ವೃತ್ತಿ ಶುರು ಮಾಡಿದವಳಲ್ಲ. ಅಥವಾ ನಾನು ಇಂಥ ಸಿನಿಮಾ ಮಾಡಿದರೆ ಅದರ ಪರಿಣಾಮ ಹೀಗಿರುತ್ತದೆ, ಮುಂದೆ ದೊಡ್ಡ ಸಿನಿಮಾ ಸಿಗುತ್ತದೆ, ಹೆಚ್ಚಿನ ಹಣ ಸಿಗುತ್ತದೆ ಇತ್ಯಾದಿ ಯಾವುದನ್ನೂ ಯೋಚಿಸದೆ ಕೆಲಸ ಮಾಡಿದವಳು. ನನ್ನದು ಪ್ರಯತ್ನ ಮಾತ್ರ. ಶ್ರೀಕೃಷ್ಣ ಹೇಳಿದ, ‘ಪ್ರಯತ್ನ ಮಾತ್ರ ಮಾಡು ಫಲ ದೇವರಿಗೆ ಬಿಡು’ ಅನ್ನೋ ಸಂದೇಶದಂತೆ ನಾನು ನನ್ನ ವೃತ್ತಿಯನ್ನು ಕಟ್ಟಿಕೊಂಡು ಬಂದಿದ್ದೇನೆ.

5. ಮೊದಲು ಬಣ್ಣ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಂತಾಗ 9ನೇ ತರತಿಯಲ್ಲಿದ್ದೆ. ಅಪ್ಪ ನನಗೆ ಒಂದು ಕೆಲಸ ಕೊಡಿಸಿದ್ದಾರೆ, ಅದನ್ನು ತುಂಬಾ ಚೆನ್ನಾಗಿ ಮಾಡಬೇಕು ಅಂತ ಇತ್ತಷ್ಟೇ. ನಿನ್ನ ಮಗಳು ಹೇಳಿದ್ದನ್ನು ತುಂಬಾ ಚೆನ್ನಾಗಿ ಮಾಡುತ್ತಾಳೆ ಅಂತ ಅಪ್ಪನಿಗೆ ಬೇರೆಯವರು ಹೇಳಬೇಕು ಎಂಬ ಆಸೆ ಇತ್ತು. ಅದರ ಆಚೆಗೆ ಸ್ಟಾರ್‌, ಸೆಲೆಬ್ರಿಟಿ ಎನ್ನುವ ಕಲ್ಪನೆಯೂ ಇರಲಿಲ್ಲ. ಅವತ್ತಿನ ಸಿನಿಮಾ, ಅವತ್ತಿನ ನಟನೆ, ಅವತ್ತಿನ ಸೀನ್‌ ಅಷ್ಟು ಮಾತ್ರ ಗೊತ್ತಿತ್ತು.

6. ನನಗೇ ನಾನು ಸಿನಿಮಾ ನಟಿ ಅಂತ ಗೊತ್ತಾಗಿದ್ದು ‘ರಂಜಿತ’ ಸಿನಿಮಾ ಮಾಡುವ ಹೊತ್ತಿಗೆ. ಕೆ ವಿ ಜಯರಾಂ ನಿರ್ದೇಶನದ ‘ರಂಜಿತ’ ಸಿನಿಮಾ ಹೊತ್ತಿಗೆ ನನಗೇ ಅಂತಲೇ ಒಂದಿಷ್ಟು ಪಾತ್ರಗಳು ಬ್ರಾಂಡ್‌ ಆಗಿದ್ದವು. ‘ಕರ್ಪೂರದ ಗೊಂಬೆ’ ಚಿತ್ರ ಬಿಡುಗಡೆ ಆದಾಗ, ಶೂಟಿಂಗ್‌ ಸ್ಥಳಗಳಿಗೆ ಹೆಣ್ಣು ಮಕ್ಕಳು ನನಗೇ ಅಂತಲೇ ಅಡುಗೆ ಮಾಡಿಕೊಂಡು ಬಂದು ಕೊಡುತ್ತಿದ್ದರು. ಆಗ ನಾನು ಏನೋ ಸ್ಪೆಷಲ್‌ ಅನಿಸೋಕೆ ಶುರುವಾಯಿತು.

7. ನಾನು ತೆರೆ ಮೇಲೆ ಮಾಡಿಕೊಂಡು ಬರುತ್ತಿರುವ ಪಾತ್ರಗಳಿಗೂ ನಿಜ ಜೀವನದ ನನ್ನ ವ್ಯಕ್ತಿತ್ವಕ್ಕೂ ತದ್ವಿರುದ್ಧ. ಗಂಡ ಹೊಡೆದಿದ್ದಕ್ಕೆ, ಅತ್ತೆ ಬೈದಿದ್ದಕ್ಕೆ ಸೂಸೈಡ್‌ ಮಾಡಿಕೊಳ್ಳೋ ಪಾತ್ರದಲ್ಲಿ ನಟಿಸಿರಬಹುದು, ಸಿನಿಮಾ ಕೊನೆ ತನಕ ಅಳುತ್ತಲೇ ಕಾಣಿಸಿಕೊಂಡಿರಬಹುದು. ಆದರೆ, ಅದು ನನ್ನ ವ್ಯಕ್ತಿತ್ವ ಅಲ್ಲ. ನಾನು ತುಂಬಾ ರೆಬೆಲ್‌. ಆಗೆಲ್ಲ ‘ಅಯ್ಯೋ ಅತ್ತೆ ಬೈದ್ರೆ ವಿಷ ತಗೋಬೇಕಾ? ಅಂಥಾ ಪಾತ್ರ ಮಾಡಬೇಕಾ?’ ಅನ್ನೋ ಪ್ರಶ್ನೆ ಮೂಡುತಿತ್ತು.

8. ಆಗ ಈಗಿನಂತೆ ಮಾನಿಟರ್‌, ಸೆಲೆಬ್ರಿಟಿ ಶೋ ಕಲ್ಚರ್‌ ಇರಲಿಲ್ಲ. ಚಿತ್ರದ ತಾಂತ್ರಿಕ ತಂಡವರು ರಷಸ್‌ ಪ್ರೊಜೆಕ್ಷನ್‌ ಹಾಕುವಾಗ ನಾನು ಕಾಡಿಬೇಡಿ ನೋಡಲು ಹೋಗುತ್ತಿದ್ದೆ. ಹಾಗೆ ನಾನು ಮೊದಲು ನೋಡಿದ್ದು ‘ಕರ್ಪೂರದ ಗೊಂಬೆ’ ಸಿನಿಮಾ. ಆ ನಂತರ ತುಂಬಾ ಸಲ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಖುಷಿಪಟ್ಟಿದ್ದೆ. ಮೆಜೆಸ್ಟಿಕ್‌ ಚಿತ್ರಮಂದಿರದ ಮುಂದೆ ನನ್ನದು 100 ಅಡಿ ಕಟೌಟ್‌ ಹಾಕಿದ್ದು ಈಗಲೂ ಮರೆಯಲಾಗದ ಸಂಗತಿ.

9. ನನ್ನ ನೆಚ್ಚಿನ ಡಾ. ವಿಷ್ಣುವರ್ಧನ್‌ ಅವರು. ಶಾಲೆಯಲ್ಲಿ ವಿಷ್ಣುವರ್ಧನ್‌ ಹೆಸರಿನ ಗ್ಯಾಂಗಿಗೇ ನಾನೇ ಲೀಡರ್‌. ಅವರ ಸಿನಿಮಾಗಳನ್ನು ನೋಡಿ ಸ್ಕ್ರೀನ್‌ಗೆ ಕಾಸು ಚೆಲ್ಲುತ್ತಿದ್ದೆ. ನೋಟ್‌ಬುಕ್‌ಗಳಲ್ಲಿ ವಿಷ್ಣುವರ್ದನ್‌ ಫೋಟೋಗಳನ್ನು ಅಂಟಿಸಿಕೊಂಡಿದ್ದೆ. ಅವರಂತೆ ಕೈಗೆ ಕಡಗ ಹಾಕಿಕೊಂಡು ಓಡಾಡುತ್ತಿದ್ದೆ. ಹೀಗಾಗಿ ನಾನು ಅಭಿಮಾನಿಸುವ ಮೇರು ನಟ ವಿಷ್ಣುವರ್ಧನ್‌ ಜೊತೆಗೆ ಅಭಿನಯಿಸುವ ಅವಕಾಶ ಸಿಗುತ್ತದೆ ಅಂತ ನಾನು ಕನಸಿನಲ್ಲಿ ಅಂದಾಜು ಮಾಡಿರಲ್ಲ. ವಿಷ್ಣು ಅವರ ಜೊತೆಗೆ ನನ್ನ ಮೊದಲ ಚಿತ್ರ ‘ಮೋಜುಗಾರ ಸೊಗಸುಗಾರ’. ಅವರಿಗೆ ನೂರನೇ ಚಿತ್ರ. ಮೈ ಡ್ರೀಮ್‌ ಹೀರೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನನ್ನ ಬದುಕಿನ ಬಹುದೊಡ್ಡ ಸಂಗತಿ.

10. ನಾನು ಜನರಿಗೆ ಮನರಂಜನೆ ಕೊಡಕ್ಕೆ ಮಾತ್ರ ಸೀಮಿತ ಆಗಬಾರದು. ನನ್ನ ಈ ಹಂತಕ್ಕೆ ಬೆಳೆಸಿದ ಜನರಿಗೆ ಏನಾದರು ಮಾಡಬಹುದೇ ಎನ್ನುವ ಆಲೋಚನೆಯಲ್ಲಿ ಹುಟ್ಟಿದ್ದೇ ರಾಜಕೀಯ ಪ್ರವೇಶ. ರಾಜಕೀಯದಲ್ಲಿ ನನಗೆ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಈಗ ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ.

ನನ್ನ ಮಗಳು ಚಿತ್ರರಂಗಕ್ಕೆ ಎಂಟ್ರಿ

ನನ್ನ ಮಗಳು ಗೌರಿ ಓದಿನಲ್ಲಿ ತುಂಬಾ ಮುಂದಿದ್ದಳು. ಆಕೆ ಉನ್ನತ ಹುದ್ದೆಗೇರುತ್ತಾಳೆ ಅಂದುಕೊಂಡಿದ್ದೆ ಆದರೆ, ಒಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಬಂದು ‘ನನಗೆ ಸಿನಿಮಾಗಳಲ್ಲಿ ನಟಿಸೋದು ಇಷ್ಟ’ ಅಂತ ಹೇಳಿದಾಗ ನನಗೇ ಅಚ್ಚರಿ ಆಯಿತು. ಮಕ್ಕಳ ಕನಸುಗಳನ್ನು ಪೋಷಿಸುವುದು ಪೋಷಕರ ಜವಾಬ್ದಾರಿ ಅಲ್ಲವೇ. ಹೀಗಾಗಿ ಅವಳನ್ನು ನಟನಾ ಶಾಲೆಗೆ ಸೇರಿಸಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಕತೆ ಕೇಳುತ್ತಿದ್ದೇನೆ. ಸದ್ಯದಲ್ಲೇ ನನ್ನ ಮಗಳು ಚಿತ್ರರಂಗಕ್ಕೆ ನಟಿಯಾಗಿ ಬರುತ್ತಾಳೆ.