ಖ್ಯಾತ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ದುಬೈನಿಂದ ಚಿನ್ನ ಸಾಗಿಸುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಬಂಧನವಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರು ತಿಂಗಳಿಂದ ಈ ಕೃತ್ಯ ಎಸಗುತ್ತಿದ್ದು, ಜಾಕೆಟ್‌ನಿಂದ ಅನುಮಾನಗೊಂಡು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಪತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈಕೆಯ ಬಳಿ ಸುಮಾರು 12.56 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಸ್ಯಾಂಡಲ್‌ವುಡ್ ನಟಿ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಪುತ್ರಿ, ಸ್ಯಾಂಡಲ್‌ವುಡ್ ರನ್ಯಾ ರಾವ್ ಸದ್ಯ ಚಿನ್ನದ ಕಳ್ಳಿ ಎಂಬ ಹೆಸರಿನಿಂದ ಕುಖ್ಯಾತಿ ಗಳಿಸಿದ್ದಾರೆ. ದುಬೈನಿಂದ ಹಲವಾರು ಬಾರಿ ಪ್ರಯಾಣ ಬೆಳೆಸಿ ಚಿನ್ನಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದ ನಟಿ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಸದ್ಯ ಅರೆಸ್ಟ್ ಆಗಿರುವ ಅವರು, 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ನಟಿ ತಾನು ಟ್ರ್ಯಾಪ್ ಆಗಿದ್ದು, ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂದಿರುವುದಾಗಿ ವರದಿಯಾಗಿದೆ. ಚಿನ್ನಾಭರಣಗಳ ಸ್ಮಗ್ಲರ್ಗಳಿಂದ ಟ್ರ್ಯಾಪ್ಗೆ ಒಳಗಾಗಿದ್ದರಿಂದ ಈ ಕೃತ್ಯಕ್ಕೆ ಇಳಿಯಬೇಕಾಯಿತು ಎಂದು ನಟಿ ಹೇಳಿರುವುದಾಗಿ ತಿಳಿದುಬಂದಿದೆ. ಇದು ನಿಜವೇ ಆಗಿದ್ದರೆ, ನಟಿ ಕಾಣದ ಕೈಗಳ ಬಗ್ಗೆ ಬಾಯಿ ಬಿಡುವಲ್ಲಿ ಸಂದೇಹವಿಲ್ಲ. ಇದರಿಂದಲೇ ಈಗ ಅಸಲಿ ಕಳ್ಳರಿಗೆ ನಡುಕ ಶುರುವಾಗಿದೆ!
ಅಷ್ಟಕ್ಕೂ ನಟಿ ಸಿಕ್ಕಿಬಿದ್ದ ಹಿಂದೆ, ರೋಚಕ ಕಥೆ ಇದೆ. ಅದೇನೆಂದರೆ, ರನ್ಯಾ ರಾವ್ ವಿಐಪಿ ಗೇಟ್ನಿಂದ ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದುದರಿಂದ ಆಕೆಯನ್ನು ಚೆಕ್ ಮಾಡುತ್ತಿರಲಿಲ್ಲ! ಆದರೆ, ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಯೊಬ್ಬರು ಪದೇ ಪದೇ ರನ್ಯಾ ರಾವ್ ಹೋಗಿ ಬರುತ್ತಿದ್ದುದ್ದನ್ನು ಗಮನಿಸುತ್ತಿದ್ದರು. ಅವರ ಕಣ್ಣು ರನ್ಯಾ ಅವರ ಜಾಕೆಟ್ ಮೇಲಿತ್ತು. ಹೇಳಿ ಕೇಳಿ ರನ್ಯಾ ಪೊಲೀಸ್ ಅಧಿಕಾರಿಯ ಮಗಳು. ಹೀಗಿರುವಾಗ ಒಂದೇ ಜಾಕೆಟ್ ಪದೇ ಪದೇ ಧರಿಸುತ್ತಿದ್ದುದು ಏಕೆ ಎನ್ನುವ ಬಗ್ಗೆ ಸಂದೇಹ ಶುರುವಾಗಿತ್ತು. ಆಗ ಅನುಮಾನ ಬಂದು ತನಿಖೆ ಮಾಡಿದಾಗಲೇ ಚಿನ್ನದ ಕಳ್ಳಸಾಗಣೆ ವಿಷಯ ಬೆಳಕಿಗೆ ಬಂದಿದೆ. ಚಿನ್ನ ಸಾಗಿಸಲು ಆ ಜಾಕೆಟ್ ಅನುಕೂಲ ಎನ್ನುವ ಕಾರಣಕ್ಕೆ ಆಕೆ ಅದನ್ನೇ ಧರಿಸಿ ಹೋಗುತ್ತಿದ್ದರು. ಅಷ್ಟಕ್ಕೂ ತಮ್ಮ ಜಾಕೆಟ್ ಯಾರು ಗಮನಿಸುತ್ತಾರೆ ಎಂದು ಅವರು ಅಂದುಕೊಂಡಿದ್ದರು. ಆದರೆ ಎಲ್ಲಾ ಉಲ್ಟಾ ಹೊಡೆದಿದೆ.
ಯಾರು ಗೊತ್ತಾ ಚಿನ್ನದ ಕಳ್ಳಿ ರನ್ಯಾ ರಾವ್ ಪತಿ? ಬೆಂಗಳೂರಿನ ಈ ಪ್ರಸಿದ್ದ ಬಾರ್ ಡಿಸೈನ್ ಮಾಡಿದ್ದು ಇವರೇ..
ಆರು ತಿಂಗಳಿನಿಂದ ಈ ಕಳ್ಳ ವ್ಯವಹಾರ ರನ್ಯಾ ಮಾಡುತ್ತಿರುವುದಾಗಿ ಹೇಳಲಾಗಿದೆ. ಇದೀಗ ಟ್ರ್ಯಾಪ್ಗೆ ಒಳಗಾಗಿರುವುದಾಗಿ ನಟಿ ಹೇಳಿದ್ದರಿಂದ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಆರಂಭವಾಗಿದೆ. ಪೊಲೀಸ್ ಅಧಿಕಾರಿಯ ಮಗಳಾಗಿರುವ ಕಾರಣ, ಸ್ವಲ್ಪ ಸಮಾಧಾನವಾಗಿ ತನಿಖೆ ನಡೆಯಬಹುದು. ಅಸಲಿ ಕಳ್ಳರು ಸಿಕ್ಕಿಬೀಳುತ್ತಾರೆ ಎನ್ನುವ ಭರವಸೆ ಜನರಲ್ಲಿ ಇದೆ. ಅಂದಹಾಗೆ, ನಟಿ ರನ್ಯಾ ಅವರಿಗೆ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು, ಅವರ ಪತಿ ಪ್ರಸಿದ್ಧ ಆರ್ಕಿಟೆಕ್ಚರ್‌ಗಳಲ್ಲಿ ಒಬ್ಬರು ಎನ್ನುವುದು ಗೊತ್ತಾಗಿತ್ತು. ಬೆಂಗಳೂರಿನ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ತಾಜ್ ವೆಸ್ಟ್ ಎಂಡ್‌ನಲ್ಲಿ ಅವರ ವಿವಾಹ ನಡೆದಿತ್ತಾದರೂ ಇದರ ಮಾಹಿತಿ ಎಲ್ಲೂ ಹೊರಬಿದ್ದಿರಲಿಲ್ಲ. ರನ್ಯಾ ರಾವ್ ಬಂಧನವಾದಾಗಲೂ ಅವರ ಪತಿ ಯಾರು ಅನ್ನೋದು ಎಲ್ಲರ ಕುತೂಹಲವಾಗಿತ್ತು. ಈಗ ರನ್ಯಾ ರಾವ್ ಅವರ ಪತಿ ಯಾರು ಎನ್ನುವ ಮಾಹಿತಿ ಸಿಕ್ಕಿದೆ.
ರನ್ಯಾ ರಾವ್ ಅವರ ಪತಿಯ ಹೆಸರು ಜತಿನ್ ಹುಕ್ಕೇರಿ. ಬೆಂಗಳೂರಿನ ಪ್ರಸಿದ್ಧ ಆರ್ಕಿಟೆಕ್ಚರ್‌ಗಳಲ್ಲಿ ಒಬ್ಬರು. ಈಗ ರನ್ಯಾ ರಾವ್ ಬಂಧನ ಬೆನ್ನಲ್ಲಿಯೇ ಜತಿನ್ ಹುಕ್ಕೇರಿ ಅವರ ಮೇಲೂ ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿಆರ್‌ಐ ) ಅನುಮಾನ ವ್ಯಕ್ತಪಡಿಸಿದೆ. ಜತಿನ್ ಹುಕ್ಕೇರಿ ಇತ್ತೀಚೆಗೆ ನಡೆಸಿದ ದುಬೈ ಟ್ರಿಪ್‌ಗಳ ವಿವರಗಳನ್ನು ಪತ್ತೆ ಮಾಡಲು ಮುಂದಾಗಿದೆ. ರನ್ಯಾ ಸ್ವತಃ ಎರಡು ವಾರಗಳಲ್ಲಿ ನಾಲ್ಕು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಕಂಡುಬಂದಿದೆ. ಕಳೆದ ವರ್ಷದಲ್ಲಿ, ಅವರು 30 ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಆಕೆಯ ಬೆಲ್ಟ್‌ನಲ್ಲಿ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.. ರನ್ಯಾ ಅವರ ಮನೆಯಿಂದ ಡಿಆರ್‌ಐ 17.29 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ನಗದು ಸೇರಿದೆ. ಕಳ್ಳಸಾಗಣೆ ಮಾಡಿದ ಪ್ರತಿ ಕೆಜಿ ಚಿನ್ನಕ್ಕೆ ಆಕೆಗೆ 1 ಲಕ್ಷ ರೂ.ಗಳಂತೆ ಪಾವತಿಸಲಾಗಿದ್ದು, ಪ್ರತಿ ಟ್ರಿಪ್‌ಗೆ 12 ರಿಂದ 13 ಲಕ್ಷ ರೂ.ಗಳನ್ನು ಗಳಿಸಲಾಗಿದೆ ಎಂದು ಆರೋಪಿಸಲಾಗಿದೆ.

