ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಅವರು ನಟನೆಯಿಂದ ದೂರ ಸರಿದು ಇದೀಗ 'ಹರಿಪ್ರಿಯಾಸ್ ಟ್ವಿಸ್ಟ್' ಎಂಬ ಹೊಸ ಸ್ಟುಡಿಯೋ ಆರಂಭಿಸುವ ಮೂಲಕ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಪತ್ನಿಯ ಈ ಹೊಸ ಪ್ರಯತ್ನ ಹಾಗೂ ಆಕೆಯ ಕುಟುಂಬದ ಮೇಲಿನ ಕಾಳಜಿಯನ್ನು ನಟ ವಸಿಷ್ಠ ಸಿಂಹ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಬೆಂಗಳೂರು: ನಟ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಜೋಡಿ ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. 2023ರಲ್ಲಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತಾವು ಪ್ರೀತಿಸಿದ ನಟ ವಸಿಷ್ಠ ಸಿಂಹ ಅವರನ್ನ ಹರಿಪ್ರಿಯಾ ವಿವಾಹವಾದರು. 2025ರಲ್ಲಿ ದಂಪತಿಗೆ ಗಂಡುಮಗುವಾಯಿತು. ಮದುವೆಯಾದಾಗಿನಿಂದಲೂ ನಟಿ ಹರಿಪ್ರಿಯಾ ನಟನೆಯಿಂದ ಸ್ವಲ್ಪ ದೂರ ಸರಿದಿದ್ದರು. ಅಮ್ಮನಾದ ಮೇಲೆ ಸಂಪೂರ್ಣವಾಗಿ ಮಗುವಿಗಾಗಿ ಮೀಸಲಿಟ್ಟಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಅವರು, ಇದಾಗಲೇ ಕೆಲವು ಹಿಟ್​ ಸಿನಿಮಾಗಳನ್ನು ನೀಡಿದವರು, ‘ಉಗ್ರಂ’, ‘ರನ್ನ’, ‘ಬುಲೆಟ್ ಬಸ್ಯಾ’, ‘ನೀರ್ ದೋಸೆ’, ‘ಬೆಲ್ ಬೆಟಾಂ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಆದರೆ ಸಹಜವಾಗಿ ಈಗ ಬಹುತೇಕ ನಟಿಯರಂತೆ ಅಮ್ಮನ ಧರ್ಮವನ್ನು ಕಾಯ್ದುಕೊಳ್ಳುತ್ತಿದ್ದಾರೆ.

ಹೊಸ ಸ್ಟುಡಿಯೋಗೆ ಚಾಲನೆ

ಇದೀಗ ನಟಿ ಹೊಸದೊಂದು ವಿಷ್ಯವನ್ನು ರಿವೀಲ್​ ಮಾಡಿದ್ದಾರೆ. ಅದೇನೆಂದರೆ ನಟನೆಯಿಂದ ದೂರವಾಗುತ್ತಿದ್ದಂತೆಯೇ, ಉದ್ಯಮಿಯಾಗಿ ಕಾಲಿಟ್ಟಿದ್ದಾರೆ. ಅವರು ಇದೀಗ ಸ್ವಂತ ಸ್ಟುಡಿಯೋ ಆರಂಭಿಸಿದ್ದಾರೆ. ಅದರ ಹೆಸರು ಹರಿಪ್ರಿಯಾ’ಸ್ ಟ್ವಿಸ್ಟ್ (Haripriya's Twist). ದಂಪತಿ ಸಹಿತ ಈ ಹೊಸ ಸ್ಟುಡಿಯೋಗೆ ಚಾಲನೆ ನೀಡಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ವಸಿಷ್ಠ ಸಿಂಹ - ಹರಿಪ್ರಿಯಾ ದಂಪತಿಯ ವಿಶೇಷ ಫೋಟೋಗಳೀಗ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಇದು ಅವರ ಕನಸಿನ ಬಿಜಿನೆಸ್​ ಆಗಿತ್ತು ಎನ್ನಲಾಗಿದೆ.

ಪತ್ನಿಯನ್ನು ಹಾಡಿ ಹೊಗಳಿದ್ದ ವಸಿಷ್ಠ ಸಿಂಹ

ನಟಿ ಹರಿಪ್ರಿಯಾ ಅವರ ಈ ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಂದಹಾಗೆ, ಇತ್ತೀಚೆಗೆ ತಮ್ಮ ನಟಿ ಪತ್ನಿ ಬಗ್ಗೆ ನಟ ಪತಿ ವಸಿಷ್ಠ ಸಿಂಹ ಅವರು ಹಾಡಿ ಹೊಗಳಿದ್ದರು. 'ಹರಿಪ್ರಿಯಾ ಅವರು ತಾವೊಬ್ಬರು ನಟಿ ಎಂಬುದನ್ನೇ ಮರೆಸುವಷ್ಟು ಪಕ್ಕಾ ಫ್ಯಾಮಿಲಿ ವುಮೆನ್ ಆಗಿದ್ದಾರೆ. ಆಹಾರಪ್ರಿಯೆ ಆಗಿರುವ ಹರಿಪ್ರಿಯಾ ಅವರು ಮಾವನ ಜೊತೆಗೂಡಿ ದಿನಾಲೂ ನಮ್ಮ ಫ್ಯಾಮಿಲಿಗೆ ಆರೋಗ್ಯಕರ ಹಾಗೂ ರುಚಿಕಟ್ಟಾದ ಊಟ-ತಿಂಡಿ ತಯಾರಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ ಎಂದಿದ್ದರು.

ನಮ್ಮ ಇಡೀ ಕುಟುಂಬದ ನೆಮ್ಮದಿ ಹಾಗೂ ಆರೋಗ್ಯವನ್ನು ಬಿಟ್ಟು ಬೇರೆಲ್ಲವನ್ನೂ ಮರೆತಿದ್ದಾರೆ ಎಂಬಂತೆ ತಮ್ಮ ಲೈಫ್‌ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಏನು ಬೇಕು, ಏನು ಬೇಡ ಎಂಬುದಕ್ಕಷ್ಟೇ ಮೊದಲ ಆದ್ಯತೆ ಕೊಡುತ್ತಾರೆ ಎಂದು ಶ್ಲಾಘಿಸಿದ್ದರು. ಒಬ್ಬ ಸ್ಟಾರ್ ನಟಿ ಇಷ್ಟು ಬೇಗ ಈ ಮಟ್ಟಿಗೆ ಫ್ಯಾಮಿಲಿ ಓರಿಯಂಟೆಡ್ ಆಗಿ ತೊಡಗಿಸಿಕೊಂಡಿರುವುದು ನನಗೇ ಅಚ್ಚರಿ ಮೂಡಿಸುತ್ತಿದೆ. ಮಗುವಿಗೆ ತಾಯಿಯಾಗಿ, ನನಗೆ ಪತ್ನಿಯಾಗಿ ಮನೆಗೆ ಮಹಾಲಕ್ಷ್ಮೀಯಾಗಿ, ನನ್ನ ಅಪ್ಪನಿಗೆ ಮುದ್ದಿನ ಹಾಗೂ ಒಳ್ಖೆಯ ಸೊಸೆಯಾಗಿ ಹರಿಪ್ರಿಯಾ ನಮ್ಮ ಮನ-ಮನೆ ತುಂಬಿಕೊಂಡಿದ್ದಾರೆ. ಈ ಮಟ್ಟಿಗಿನ ಟ್ರಾನ್ಸ್‌ಫಾರ್ಮೇಶನ್ನನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾನೂ ಸೇರಿದಂತೆ ನನ್ನ ಇಡೀ ಕುಟುಂಬ ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಖುಷಿ ಪಡುತ್ತೇವೆ' ಎಂದು ಪತ್ನಿಯನ್ನು ಹಾಡಿ ಹೊಗಳಿದ್ದರು.