Dhruva Sarja New Movie: ‘ತತ್ಸಮ ತದ್ಭವ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ವಿಷಾಲ್ ಆತ್ರೇಯ ಹಾಗೂ ಧ್ರುವ ಸರ್ಜಾ ಹೊಸ ಸಿನಿಮಾಗಾಗಿ ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ತಮ್ಮ ಮುಂದಿನ ಸಿನಿಮಾಗಳ ಆಯ್ಕೆಯಲ್ಲಿ ಸಾಕಷ್ಟು ಚೂಸಿ ಆಗಿದ್ದಾರೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸುತ್ತಿರುವ ಧ್ರುವ ಸರ್ಜಾ, ಇದೀಗ ಮತ್ತೊಂದು ಕುತೂಹಲಕಾರಿ ಕಾಂಬಿನೇಷನ್‌ಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
‘ತತ್ಸಮ ತದ್ಭವ’ ಸಿನಿಮಾ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ವಿಷಾಲ್ ಆತ್ರೇಯ ಹಾಗೂ ಧ್ರುವ ಸರ್ಜಾ ಹೊಸ ಸಿನಿಮಾಗಾಗಿ ಕೈಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಇಬ್ಬರ ನಡುವೆ ಮಾತುಕತೆ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಧ್ರುವ ಸರ್ಜಾ ಅವರ ಈ ಸಿನಿಮಾ ಅವರ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ ಎಂಬ ಮಾತು ಕೇಳಿಬರುತ್ತಿದೆ.
ಧ್ರುವ ಸರ್ಜಾ ಜೊತೆ ವಿಷಾಲ್ ಆತ್ರೇಯ?
ವಿಷಾಲ್ ಆತ್ರೇಯ ನಿರ್ದೇಶನದ ಮೊದಲ ಸಿನಿಮಾ ‘ತತ್ಸಮ ತದ್ಭವ’ ವಿಭಿನ್ನ ಕಥಾಹಂದರ ಹಾಗೂ ನಿರೂಪಣೆಯಿಂದ ಗಮನ ಸೆಳೆದಿತ್ತು. ಸಸ್ಪೆನ್ಸ್ ಪ್ರಧಾನ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ಈ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿತ್ತು. ಇದೇ ಚಿತ್ರದ ಮೂಲಕ ನಟಿ ಮೇಘನಾ ರಾಜ್ ಸರ್ಜಾ ಕೂಡ ಬಹಳ ದಿನಗಳ ಬಳಿಕ ಬೆಳ್ಳಿತೆರೆಗೆ ಮರಳಿದ್ದರು. ಇದೀಗ ತಮ್ಮ ಮುಂದಿನ ಸಿನಿಮಾಗಾಗಿ ವಿಷಾಲ್ ಆತ್ರೇಯ ಅವರು ಧ್ರುವ ಸರ್ಜಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಕೇವಲ ಮತ್ತೊಂದು ಆ್ಯಕ್ಷನ್ ಚಿತ್ರವಾಗದೆ, ಧ್ರುವ ಅವರ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಎಂಟರ್‌ಟೈನರ್ ಆಗಿರಲಿದೆ ಎಂಬ ಚರ್ಚೆ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗಿದೆ.
ನಿರ್ಮಾಣದ ಹೊಣೆ ಯಾರದ್ದು?
ಈ ಹೊಸ ಪ್ರಾಜೆಕ್ಟ್ ಹೈದರಾಬಾದ್ ಮೂಲದ ಖ್ಯಾತ ನಿರ್ಮಾಣ ಸಂಸ್ಥೆ People Media Factory ಬ್ಯಾನರ್‌ನಲ್ಲಿ ಮೂಡಿಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ಈ ಸಿನಿಮಾವನ್ನು ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಧ್ರುವ ಸರ್ಜಾ ಈಗಾಗಲೇ ಈ ನಿರ್ಮಾಣ ಸಂಸ್ಥೆಯೊಂದಿಗೆ ಸಿನಿಮಾ ಮಾಡುವ ಕಮಿಟ್‌ಮೆಂಟ್ ಹೊಂದಿದ್ದು, ಪ್ರಾಜೆಕ್ಟ್ ಕುರಿತ ಚರ್ಚೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಶ್ರೀಮುರಳಿ ಜೊತೆಗಿನ ಸಿನಿಮಾ ಏನಾಯ್ತು?
ವಿಷಾಲ್ ಆತ್ರೇಯ ಈ ಹಿಂದೆ ನಟ ಶ್ರೀಮುರಳಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆ ಪ್ರಾಜೆಕ್ಟ್ ಇನ್ನೂ ಕೆಲಸದ ಹಂತದಲ್ಲೇ ಇದೆ ಎನ್ನಲಾಗುತ್ತಿದೆ. ಇದೀಗ ಧ್ರುವ ಸರ್ಜಾ ಜೊತೆಗಿನ ಹೊಸ ಕಾಂಬಿನೇಷನ್ ಬಗ್ಗೆ ಮಾತು ಕೇಳಿಬರುತ್ತಿರುವುದು ಕುತೂಹಲ ಮೂಡಿಸಿದೆ. ಧ್ರುವ ಸರ್ಜಾ ಕೂಡ ತಮ್ಮ ಮುಂದಿನ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹಲವು ನಿರ್ದೇಶಕರ ಜೊತೆ ಕಥೆ ಹಾಗೂ ಪ್ರಾಜೆಕ್ಟ್ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
‘ಕ್ರಿಮಿನಲ್’ ಮೇಲೆ ಧ್ರುವ ಫೋಕಸ್
ಸದ್ಯ ಧ್ರುವ ಸರ್ಜಾ ‘ಕ್ರಿಮಿನಲ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್‌ಗುರು ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಅರ್ಧದಷ್ಟು ಪೂರ್ಣಗೊಂಡಿದೆ ಎನ್ನಲಾಗಿದೆ. ಇದರ ನಡುವೆ ವಿಷಾಲ್ ಆತ್ರೇಯ ಜೊತೆಗಿನ ಹೊಸ ಸಿನಿಮಾದ ಸುದ್ದಿ ಹೊರಬಿದ್ದಿರುವುದು ಧ್ರುವ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ತತ್ಸಮ ತದ್ಭವ’ದಂತಹ ವಿಭಿನ್ನ ಕಥೆಯನ್ನು ಕಟ್ಟಿಕೊಟ್ಟ ನಿರ್ದೇಶಕ ಹಾಗೂ ಮಾಸ್ ಇಮೇಜ್ ಹೊಂದಿರುವ ಧ್ರುವ ಸರ್ಜಾ ಒಂದಾಗಲಿದ್ದಾರೆ ಎನ್ನುವುದು ನಿಜವಾದರೆ, ಈ ಕಾಂಬಿನೇಷನ್ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕುವ ಸಾಧ್ಯತೆಯಿದೆ. ಆದರೆ ಸಿನಿಮಾ, ಕಥೆ, ಪಾತ್ರ ಹಾಗೂ ಅಧಿಕೃತ ಘೋಷಣೆ ಬಗ್ಗೆ ಸದ್ಯ ಯಾವುದೇ ವಿವರಗಳು ಹೊರಬಿದ್ದಿಲ್ಲ. ಮಾತುಕತೆ ಅಂತಿಮ ಹಂತಕ್ಕೆ ತಲುಪಿದ ಬಳಿಕವೇ ಈ ಪ್ರಾಜೆಕ್ಟ್‌ಗೆ ಅಧಿಕೃತ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ.


