ನಿನಗಾಗಿ, ಪ್ರೀತಿ ಪ್ರೇಮ ಪ್ರಣಯ, ಚಂದ್ರಮುಖಿ ಪ್ರಾಣಸಖಿ, ಪರ್ವ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಅವಳಿ ಮಕ್ಕಳಲ್ಲಿ ಓರ್ವ ಮಗುವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ನಟಿ ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ಅವಳಿ ಮಗು ಹೊಂದುವ ನಿರೀಕ್ಷೆಯಲ್ಲಿದ್ದರು. ದುರದೃಷ್ಟವಶಾಕ್ ಒಂದು ಮಗು ತೀರಿಕೊಂಡಿದೆ. ಈಗ ಅವರು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಹೆರಿಗೆ ಪ್ರಕ್ರಿಯೆ ಬಗ್ಗೆ ಅವರು Times Of India ವೆಬ್‌ಸೈಟ್‌ಗೆ ಸಂದರ್ಶನ ನೀಡಿದ್ದಾರೆ.
ಟೈಮ್ ಬಾಂಬ್ ಮೇಲೆ ಕೂತಿದ್ದೀರಿ ಅಂದ್ರು
“ಸೀಮಂತ ಮುಗಿದಬಳಿಕ ನನಗೆ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಆಮೇಲೆ ರಕ್ತಸ್ರಾವ ಶುರುವಾಗಿದೆ. ನಾನು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆನೋ ಆ ಆಸ್ಪತ್ರೆ ದೂರ ಇತ್ತು. ಹೀಗಾಗಿ ಕುಟುಂಬದ ಸಲಹೆ ಮೇರೆಗೆ ಹತ್ತಿರದ್ದಲ್ಲೇ ಇದ್ದ ಆಸ್ಪತ್ರೆಗೆ ಹೋದೆವು. ಅಲ್ಲಿ ನನ್ನ ಸಂಬಂಧಿಕರ ಮಕ್ಕಳ ಹೆರಿಗೆಯೂ ಆಗಿತ್ತು. ಅಲ್ಲಿ ಹೋಗುತ್ತಿದ್ದಂತೆ ಡಾಕ್ಟರ್, ಭಾವನಾ ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ ಎಂದರು. ಮುಂದಿನ ಕೆಲವು ಗಂಟೆ ಚಿಂತಾಜನಕ ಆಗಿರುತ್ತದೆ ಎಂದರು” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.
ಮಗು ಹಾರ್ಟ್ ಬೀಟ್ ನಿಂತಾಗ…!
“ಡಾಕ್ಟರ್ ಟೆಸ್ಟ್ ಮಾಡಿದ ಬಳಿಕ ಮಗುವಿಗೆ ರಕ್ತ ನೀಡುವ ನಾಳ ರಿವರ್ಸ್ ಹೋಗುತ್ತಿದೆ ಎನ್ನೋದು ಗೊತ್ತಾಯಿತು. ಒಂದು ಮಗು ಆರೋಗ್ಯವಾಗಿತ್ತು. ಆದರೆ ಆ ಮಗುವಿನ ತೂಕ ಕಡಿಮೆ ಇದೆ ಅಂತ ಗೊತ್ತಾಗಿ ದೇವರ ಬಳಿ ಪ್ರಾರ್ಥನೆ ಮಾಡಿದೆವು. ಆದರೆ ಆರೋಗ್ಯ ಸುಧಾರಿಸದೆ ಆಪರೇಶನ್ ಮಾಡಬೇಕಾಯ್ತು. ಮಾನಿಟರ್‌ನಲ್ಲಿ ಒಂದು ಮಗುವಿನ ಹಾರ್ಟ್‌ಬೀಟ್ ಕುಸಿದಿರೋದನ್ನು ನೋಡಿದೆ, ಆಗ ಆದ ಆಘಾತವನ್ನು ಹೇಗೆ ಹೇಳಲಿ? ಒಂದು ಮಗು ಉಳಿಸೋಕಾಗಲಿಲ್ಲ ಅಂತ ಡಾಕ್ಟರ್ ಹೇಳಿದರು. ಇನ್ನೊಂದು ಮಗುಗೋಸ್ಕರ ಮತ್ತೆ ಕಾಯೋಕೆ ಆಗದೆ 32ನೇ ವಾರಕ್ಕೆ ಆಪರೇಶನ್ ಮಾಡಿದೆವು” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.
ಸಿಹಿ-ಕಹಿ ಅನುಭವ ಇದು!
“ಆಪರೇಶನ್ ಮಾಡಿದ ಬಳಿಕ ಡಾಕ್ಟರ್ ನನ್ನ ಬಳಿ ಬಂದು, ಎರಡು ಹೆಣ್ಣು ಮಕ್ಕಳು ಆಗಿತ್ತು ಎಂದರೆ. ಆ ಮಗು ಇಲ್ಲ ಅಂತ ಬೇಸರ ಕೂಡ ಇದೆ. ಮಗು ಕಳೆದುಕೊಂಡ ದುಃಖ ಏನು ಎನ್ನೋದು ತಾಯಿಗೆ ಮಾತ್ರ ಗೊತ್ತಿರುತ್ತದೆ. ಈಗ ನಾನು ಹೆಣ್ಣು ಮಗುವಿನ ತಾಯಿ ಅಂತ ಖುಷಿ ಇದೆ. ಮಗು ಹುಟ್ಟಿತು ಅಂತ ಖುಷಿಪಡಲಾ ಅಥವಾ ಆ ಮಗು ಇಲ್ಲ ಅಂತ ಬೇಸರಪಟ್ಟುಕೊಳ್ಳಲಾ? ಇದೊಂದು ಥರ ಸಿಹಿ-ಕಹಿ ಅನುಭವ. ನನ್ನ ಮಗಳಿಗೆ ರುಕ್ಮಿಣಿ ಎಂದು ಹೆಸರಿಟ್ಟಿದ್ದೇನೆ. ಇದು ಅಜ್ಜಿ ಹೆಸರು” ಎಂದಿದ್ದಾರೆ.
ಪ್ರೀತಿ ಪ್ರೇಮ ಪ್ರಣಯ, ನಿನಗಾಗಿ, ಪರ್ವ, ಚಂದ್ರಮುಖಿ ಪ್ರಾಣಸಖಿ, ಲಂಕೇಶ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
