ನಟಿ ಭಾವನಾ ರಾಮಣ್ಣ ಅವರು 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭ ಧರಿಸಿರುವ ನಿರ್ಧಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮದುವೆಯಾಗದೆ ತಾಯ್ತನವನ್ನು ಸ್ವೀಕರಿಸುವ ಅವರ ಆಯ್ಕೆ ಹಾಗೂ ಸವಾಲುಗಳ ಬಗ್ಗೆ ಈ ಸಂದರ್ಶನದಲ್ಲಿ ಭಾವನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

- ಪ್ರಿಯಾ ಕೇರ್ವಾಶೆ

--------------

ಮಖಾಮುಖಿ ಸಂದರ್ಷನ: ಭಾವನಾ, ಕನ್ನಡ ಚಲನಚಿತ್ರ ನಟಿ

ಕನ್ನಡ ನಟಿ ಭಾವನಾ ರಾಮಣ್ಣ 40ನೇ ವಯಸ್ಸಿನಲ್ಲಿ ಐವಿಎಫ್‌(IVF) ಮೂಲಕ ಗರ್ಭ ಧರಿಸಿರುವುದು ರಾಜ್ಯಾದ್ಯಂತ ಚರ್ಚೆ ಹುಟ್ಟು ಹಾಕಿದೆ. ಈ ಚರ್ಚೆ ಐವಿಎಫ್‌ ಮೂಲಕ ಗರ್ಭ ಧರಿಸಿದ್ದಕ್ಕಲ್ಲ, ಮದುವೆಯೇ ಆಗದೆ ಐವಿಎಫ್‌ ಮೂಲಕ ತಾಯಿ ಆಗುತ್ತಿರುವ ಮೊದಲ ಸ್ಯಾಂಡಲ್‌ವುಡ್ ನಟಿ ಎಂಬ ಕಾರಣಕ್ಕೆ. ಕಾನೂನು ಪ್ರಕಾರ ಇದು ತಪ್ಪಲ್ಲದಿದ್ದರೂ ಇದು ನೈತಿಕವಾಗಿ ಚರ್ಚಾರ್ಹ ಸಂಗತಿ ಎಂಬ ವಾದ ಶುರುವಾಗಿದೆ. ಭಾವನಾ ನಿರ್ಧಾರ ಬೆಂಬಲಿಸಿರುವವರು ವೈಜ್ಞಾನಿಕ ಯುಗದಲ್ಲೂ ಪುರುಷ ಪ್ರಧಾನ ಸಮಾಜದ ಮಾನದಂಡಗಳನ್ನೇ ಯಾಕೆ ಮುಂದುವರೆಸಬೇಕು ಎಂದು ಪ್ರಶ್ನಿಸಿದರೆ, ತಾಯ್ತನ ನೈಸರ್ಗಿಕ ಶಕ್ತಿ. ಅದು ನಿಸರ್ಗದತ್ತವಾಗಿಯೇ ಆಗಬೇಕು ಎಂಬುದು ಮತ್ತೆ ಕೆಲವರ ವಾದ. ಈ ಎಲ್ಲಾ ಚರ್ಚೆಗಳು ಹಾಗೂ ಅದರಿಂದ ಹುಟ್ಟಿಕೊಂಡಿರುವ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿರುವ ನಟಿ ಭಾವನಾ ‘ನನ್ನಈ ತೀರ್ಮಾನ ಪುರುಷ ವಿರೋಧಿ ಕೆಂಪು ಬಾವುಟ ಪ್ರದರ್ಶನ ಅಲ್ಲ’ ಎಂದೂ ಹೇಳಿದ್ದಾರೆ.

ಐವಿಎಫ್‌ ಮೂಲಕ ಅವಳಿ ಮಗು ಪಡೆಯುವ ನಿಮ್ಮ ತೀರ್ಮಾನ ರಾಜ್ಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆಯಲ್ಲ?

ನಾನು ಸೋಷಿಯಲ್‌ ಮೀಡಿಯಾ ಕಡೆಗೆ ತಲೆ ಹಾಕಿಲ್ಲ. ಆದರೆ ವಿಚಾರ ಬಹಿರಂಗಪಡಿಸಿದ ಮೊದಲ ದಿನ ಒತ್ತಡ ಆಗಿತ್ತು. ಈ ಬಗ್ಗೆ ಚರ್ಚೆ, ಮಾತುಕತೆ ಅಂತೆಲ್ಲ ಆಗಿ ರಾತ್ರಿ ನಿದ್ದೆ ಬರಲಿಲ್ಲ. ಇದೆಲ್ಲ ಒಂದೆರಡು ದಿನ ಅಷ್ಟೇ. ಈಗ ಮತ್ತೆ ಶಾಂತ ಮನಸ್ಥಿತಿ ಕಾಯ್ದುಕೊಂಡಿದ್ದೇನೆ. ಹಾಗೆ ನೋಡಿದರೆ ನಾನು ಯಾವ ವಿಷಯವನ್ನೂ ತೀರ ತಲೆಗೆ ಹಚ್ಚಿಕೊಳ್ಳುವವಳಲ್ಲ. ಆದರೂ ಗರ್ಭವತಿ ಆಗಿರುವಾಗ ಮನಸ್ಸು ಸೂಕ್ಷ್ಮವಿರುತ್ತದೆ. ಮೊದಲಿನ ಹಾಗೆ ಎಲ್ಲವನ್ನೂ ತಡೆದುಕೊಳ್ಳೋದಿಲ್ಲ. ಅದು ಅರಿವಿಗೆ ಬಂದಿದೆ.

ವಿವಾಹ ವ್ಯವಸ್ಥೆಯಿಂದ ಭಾವನಾ ವಿಮುಖರಾಗಿದ್ದು ಏಕೆ?

ನಾನು ಸಿನಿಮಾರಂಗದಲ್ಲಿರುವವಳು. ಇದರಲ್ಲಿ ಅವಕಾಶಗಳು, ಕೆರಿಯರ್‌ ಗ್ರಾಫ್‌ ಒಂದೇ ಥರ ಇರಲ್ಲ. ಅನಿರೀಕ್ಷಿತತೆ ಹೆಚ್ಚು. ಏರಿಳಿತಗಳು ಸಾಮಾನ್ಯ. ಹಾಗೆ ನೋಡಿದರೆ ನಟಿಯರಿಗೆ 20-30ರ ಹರೆಯದಲ್ಲಿ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿರುತ್ತವೆ. ಆ ಹೊತ್ತಿಗೆ ಮದುವೆ, ಮಗು ಮಾಡಿಕೊಂಡರೆ ನಮ್ಮ ಮುಖ್ಯವಾಹಿನಿಯ ಕೆರಿಯರ್‌ಗೆ ಹೊಡೆತ ಬೀಳುತ್ತದೆ. ಜತೆಗೆ, ಮದುವೆಯಾದರೆ ನಾನು ಬಹುಶಃ ಆತನ ಹಣದ ಮೇಲೆ ಅವಲಂಬಿತಳಾಗಬೇಕಾಗಬಹುದು. ಮದುವೆಯಾದ ಮೇಲೂ ಸ್ವಾವಲಂಬಿಯಾಗಿರಬೇಕೆಂದರೆ ವೃತ್ತಿಗೆ ಹೆಚ್ಚು ಸಮಯ ಕೊಡಬೇಕು, ಈ ಕ್ಷೇತ್ರದಲ್ಲಿ ಸಾಕಷ್ಟು ಜನರ ಒಡನಾಟ ಅನಿವಾರ್ಯ. ಓಡಾಟವೂ ಹೆಚ್ಚು. ಈ ವಿಚಾರಗಳು ಸಂಗಾತಿಯಲ್ಲಿ ಅಪಾರ್ಥಕ್ಕೆ ಎಡೆ ಮಾಡಿಕೊಡುವ, ಸಂಬಂಧದಲ್ಲಿ ಬಿರುಕು ತರುವ ಸಾಧ್ಯತೆ ಇದೆ. ಹೀಗಾದರೆ ಮನಸ್ಸಿನ ಮೇಲಾಗುವ ಆಘಾತ, ಪೆಟ್ಟು ದೊಡ್ಡದು. ಈ ಎಲ್ಲ ಕಾರಣಕ್ಕೆ 35ವರೆಗೂ ನಾನು ಮದುವೆಯನ್ನು ದೂರವಿಟ್ಟೆ.

ವಿವಾಹ ವ್ಯವಸ್ಥೆಯಿಂದ ದೂರವಾದವರೂ ಮಗು ಮಾಡಿಕೊಳ್ಳುವ ಮನಸ್ಸು ಮಾಡಿದ್ದು ಏಕೆ?

35ರ ಹರೆಯಕ್ಕೆ ಬಂದಾಗ ನಾನು ಇಷ್ಟು ಸಮಯ ಮಾಡಿದ್ದೆಲ್ಲ ವೇಸ್ಟ್ ಅನಿಸತೊಡಗಿತು. ಪ್ರಕೃತಿ ನನಗೆ ಹೆಣ್ಣಾಗಲು ನೀಡಿದ ಬಹು ಸುಂದರ ಅನುಭವವೊಂದರಿಂದ ವಂಚಿತಳಾಗುತ್ತಿದ್ದೇನೆ ಅನಿಸಿತು. ಅದರ ಮುಂದೆ ಬೇರೆ ಯಾವುದೂ ದೊಡ್ಡದಾಗಿ ಕಾಣಲಿಲ್ಲ. ಮಗು ಬೇಕೇ ಬೇಕು ಅನಿಸಿದಾಗ ನನ್ನ ಮನಸ್ಸಿಗೆ ಬಂದದ್ದು ಮದುವೆ ವಿಚಾರ. ಆದರೆ, ಈ ವಯಸ್ಸಿನಲ್ಲಿ ನನಗೆ ಸೂಕ್ತ ಸಂಗಾತಿ ಸಿಗಲಿಲ್ಲ. ಇದು ನನ್ನನ್ನು ಮಾನಸಿಕವಾಗಿ ಮತ್ತಷ್ಟು ಕುಸಿಯುವಂತೆ ಮಾಡಿತು. ಮಕ್ಕಳು ಹೆತ್ತವರ ಹೆಮ್ಮೆ. ಬದುಕಿನ ಒಂದು ಕಾಲಘಟ್ಟದಲ್ಲೇ ಸಂಗಾತಿಗಿಂತ ಮಕ್ಕಳೇ ನಮಗೆ ಹೆಚ್ಚು ಆತ್ಮೀಯರಾಗುತ್ತಾರೆ, ಸ್ನೇಹಿತರಾಗುತ್ತಾರೆ, ಅಂಥಾ ಕುಡಿ ಇಲ್ಲ ಅಂದಾಗ ಬದುಕೇ ಶೂನ್ಯ ಅನಿಸತೊಡಗಿತು. ಇನ್ನೊಂದೆಡೆ ನನಗೆ ಸಂಗಾತಿಯ ಅಗತ್ಯ ಕಾಣುತ್ತಿರಲಿಲ್ಲ, ಆದರೆ ಮಗುವಿನ ಅಗತ್ಯ ತಡೆಯಲಾರದಷ್ಟು ತೀವ್ರವಾಗಿತ್ತು. ಆ ಹೊತ್ತಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳದೇ ಮುಂದೆ ಹೋಗುವುದೇ ಸಾಧ್ಯವಿಲ್ಲ ಅನಿಸಿತು.

ಐವಿಎಫ್‌ಗೆ ಹೋಗೋಣ ಅಂತ ಐಡಿಯಾ ಬಂದ ಸನ್ನಿವೇಶ ಹೇಳಬಹುದಾ?

ನಾನು ಎರಡು ವರ್ಷಗಳ ಹಿಂದೆಯೇ ಐವಿಎಫ್‌ ಪ್ರೆಗ್ನೆನ್ಸಿಗೆ ಪ್ರಯತ್ನಿಸಿದ್ದೆ. ಆದರೆ ಆ ಹೊತ್ತಿನಲ್ಲಿ ಉದ್ಭವಿಸಿದ ಕೆಲ ಗೊಂದಲಗಳಿಂದಾಗಿ ಮುಂದುವರಿಯಲಾಗಲಿಲ್ಲ. ಆದರೆ ಮಗುವಿನ ಬಯಕೆ ತೀವ್ರವಾಗುತ್ತಲೇ ಹೋಯಿತು. ಎರಡು ವರ್ಷಗಳ ಬಳಿಕ ಮತ್ತೆ ಐವಿಎಫ್‌ನ ಮೊರೆ ಹೊಕ್ಕೆ. ಈ ವೇಳೆ ಗೊಂದಲವಿಲ್ಲದೆ ಪ್ರಕ್ರಿಯೆಗಳೆಲ್ಲ ಸರಾಗವಾದವು.

ಡೋನರ್‌ ಬಗ್ಗೆ ಮಾಹಿತಿ ಇತ್ತಾ? ನಿಮ್ಮ ಕಂಡೀಶನ್‌ಗಳೇನಾದರೂ ಇದ್ದವಾ?

ಈಗ ವೈದ್ಯಕೀಯ ವ್ಯವಸ್ಥೆ ಬಹಳ ಸುಧಾರಿಸಿದೆ. ನಮಗೆ ಪರಿಚಿತರ, ಆಪ್ತರ ವೀರ್ಯ ಪಡೆದು ಗರ್ಭ ಧರಿಸಬಹುದು. ಡೋನರ್‌ ವಿವರವನ್ನು ಬಹಿರಂಗ ಮಾಡುವ ಆಯ್ಕೆಯೂ ಇದೆ. ಜೊತೆಗೆ ನಮ್ಮ ಅಗತ್ಯಗಳಿಗೆ ತಕ್ಕಂಥ ಡೋನರ್‌ ಅನ್ನು ಆರಿಸಬಹುದು. ಆದರೆ ನನ್ನ ಗರ್ಭಧಾರಣೆಗೆ ರಹಸ್ಯ ಡೋನರ್‌ ಅನ್ನೇ ಆಯ್ಕೆ ಮಾಡಿಕೊಂಡೆ. ದಕ್ಷಿಣದವರಾಗಬೇಕು ಅನ್ನುವುದು ಬಿಟ್ಟು ಉಳಿದೆಲ್ಲ ನಿರ್ಧಾರ ವೈದ್ಯರೇ ತೆಗೆದುಕೊಂಡರು.

ಮೊದಲೇ ಐವಿಎಫ್‌ ಮಾಡಿಸಬಹುದಿತ್ತಲ್ವ ಅನ್ನುವ ಮಾತಿಗೆ ನಿಮ್ಮ ಉತ್ತರ?

ಸರ್ಕಾರ 40 ವರ್ಷ ದಾಟಿದ ಮಹಿಳೆಗಷ್ಟೇ ಐವಿಎಫ್‌ಗೆ ಅವಕಾಶ ನೀಡುತ್ತದೆ. ಹೀಗಿರುವಾಗ ಮೊದಲು ಐವಿಎಫ್‌ಗೆ ಹೋಗೋದಕ್ಕೆ ಕಾನೂನು ತೊಡಕಿತ್ತು.

ಆದರೆ 40ರ ಬಳಿಕ ದೇಹ ಸಹಕರಿಸುತ್ತದಾ?

ಅದೃಷ್ಟವಶಾತ್‌ ನನ್ನದು ಆರೋಗ್ಯಕರ ದೇಹ ಪ್ರಕೃತಿ. ಬಿಪಿ, ಶುಗರ್‌ ಇತ್ಯಾದಿ ಏನೂ ಇಲ್ಲ. ಜೊತೆಗೆ ಐವಿಎಫ್‌ ಟ್ರೀಟ್‌ಮೆಂಟ್‌ಗೂ ಮೊದಲೇ ಹಾರ್ಮೋನಲ್‌ ಇಂಜೆಕ್ಷನ್‌ ನೀಡುತ್ತಾರೆ. ಗರ್ಭಧರಿಸಿದ ಕೆಲ ಸಮಯದ ಬಳಿಕವೂ ಅದು ಮುಂದುವರಿಯುತ್ತದೆ. ನಾನು ಮೊದಲ ಪ್ರಯತ್ನದಲ್ಲೇ ಗರ್ಭ ಧರಿಸಿದೆ. ನನಗೆ ಬೇರೇನೂ ಸಮಸ್ಯೆ ಆಗಿಲ್ಲ. ಎಲ್ಲರಿಗೂ ಹೀಗೇ ಆಗುತ್ತದೆ ಅಂತಲ್ಲ. ಆದರೆ ಈ ವಿಚಾರ ದೈಹಿಕತೆಯನ್ನೂ ಮೀರಿದ್ದು. ಭಾವನಾತ್ಮಕತೆಗೆ ಸಂಬಂಧಿಸಿದ್ದು.

ಸಾಕಷ್ಟು ಜನ ಐವಿಎಫ್‌ ಮಾಡಿಸಿಕೊಂಡರೂ ನಿಮ್ಮ ವಿಚಾರ ಹೆಚ್ಚೆಚ್ಚು ಚರ್ಚಾಸ್ಪದವಾಗುತ್ತಿದೆಯಲ್ಲ?

ಇದನ್ನು ನಾನು ಪ್ರಚಾರಕ್ಕಾಗಿ ಮಾಡಿಲ್ಲ. ನನ್ನ ಬದುಕಿನ ಖುಷಿಯ ಗಳಿಗೆಗಳನ್ನು ಹಂಚಿಕೊಳ್ಳುವಂತೆ ಇದನ್ನೂ ಹಂಚಿಕೊಂಡಿದ್ದೇನೆ. ಉಳಿದದ್ದರ ಬಗ್ಗೆ ನನಗೆ ಯೋಚನೆ ಇಲ್ಲ. ಆದರೆ ನಾನು ಕಾನೂನಿನ ಪ್ರಕಾರವೇ ಈ ಪ್ರಕ್ರಿಯೆಗೆ ಒಳಪಟ್ಟಿದ್ದೇನೆ. ನೆಲದ ಕಾನೂನು ನಮ್ಮ ಹಿತಕ್ಕಾಗಿಯೇ ರೂಪಿಸಿರುವುದು ಅಲ್ವಾ, ಅದನ್ನು ಅನುಸರಿಸಿದಾಗ ತಪ್ಪಿನ ಮಾತೆಲ್ಲಿಂದ ಬಂತು? ಮೊದಲು ನಾವು ಪೂರ್ವಾಗ್ರಹದಿಂದ, ಕೆಲ ಕಟ್ಟುಕಟ್ಟಳೆಗಳಿಂದ ಹೊರಬರಬೇಕು. ನನ್ನ ಈ ನಿರ್ಧಾರವನ್ನು ಮನೆಯವರು ಸ್ವಾಗತಿಸಿದ್ದಾರೆ, ಚಿತ್ರರಂಗದ ಮಿತ್ರರು ಅಭಿನಂದಿಸಿದ್ದಾರೆ. ಆಪ್ತರೆಲ್ಲರೂ ನನ್ನ ಜೊತೆಗೆ ನಿಂತಿದ್ದಾರೆ. ನನಗೆ ಮುಖಾಮುಖಿಯಾಗಿ ಯಾರೂ ನನ್ನ ನಿರ್ಧಾರವನ್ನು ಟೀಕಿಸಿಲ್ಲ. ಹೀಗಿರುವಾಗ ನನ್ನೆದುರು ಬಾರದವರ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ? ಯಾರೋ ಮಾತಾಡಬಹುದು ಎಂಬ ಭಯದಲ್ಲಿ ಯಾಕೆ ಬದುಕಲಿ, ಆ ‘ಯಾರೋ’ ನಮ್ಮೆದುರಿಗೆ ಕಾಣಿಸಿಕೊಳ್ಳಲ್ಲ ಅಂದಾಗ ಅವರಿಗಾಗಿ ಆತಂಕಪಡುವುದರಲ್ಲಿ ಅರ್ಥ ಇದೆಯಾ?

ಸೆಲೆಬ್ರಿಟಿಯಾಗಿ ನೀವು ಹಾಕಿಕೊಟ್ಟ ಹಾದಿಯನ್ನು ಹೆಣ್ಮಕ್ಕಳೆಲ್ಲ ಅನುಸರಿಸಿದರೆ ಸಮಾಜದ ಗತಿ ಏನು ಅಂತ ವಾದವಿದೆ?

ದೈಹಿಕ ಆಕರ್ಷಣೆ ಪ್ರಕೃತಿ ನಿಯಮ. ಅದರಿಂದ ನಾನಾಗಲಿ, ಉಳಿದವರಾಗಲಿ ದೂರವಿರುವುದು ಕಷ್ಟಸಾಧ್ಯ. ಅದೇ ಹೆಣ್ಣು ಗಂಡುಗಳನ್ನು ಒಂದು ಮಾಡುತ್ತದೆ. ಆದರೆ ನನ್ನ ಬದುಕಿನ ಪಯಣ ಆಗಲೇ ಹೇಳಿದಂತೆ ಕೊಂಚ ಭಿನ್ನವಾಗಿತ್ತು. ಅದರರ್ಥ ಗಂಡು ಹೆಣ್ಣಿನ ಸಂಬಂಧದಲ್ಲಿ ನನಗೆ ನಂಬಿಕೆ ಇಲ್ಲ ಅನ್ನೋದಲ್ಲ. ನಾನದರಿಂದ ಮುಕ್ತಳಾದವಳೂ ಅಲ್ಲ. ಆದರೆ, ಹೆಣ್ಣಿನ ಮೇಲೆ ಗಂಡಿನ ದೌರ್ಜನ್ಯ ಹೆಚ್ಚಾದಾಗ ಹೆಣ್ಣುಮಕ್ಕಳು ಅದರಿಂದ ಹೊರಬಂದು ಮುಕ್ತರಾಗಿ ಐವಿಎಫ್‌ ಮೂಲಕ ಮಗು ಮಾಡಿಕೊಂಡು ಬದುಕಿನ ಹಂಬಲ ಪೂರೈಸಿಕೊಳ್ಳಬಹುದು. ಮಗುವಿನ ಕಾರಣಕ್ಕೆ ಗಂಡಸಿನ ದೌರ್ಜನ್ಯವನ್ನು, ದಬ್ಬಾಳಿಕೆಯನ್ನು ಅವಳು ಸಹಿಸಿಕೊಂಡಿರಬೇಕು ಅಂತಿಲ್ಲ. ನಮ್ಮ ಹಳ್ಳಿಗಳಲ್ಲಿ ಸಣ್ಣ ವಯಸ್ಸಿಗೇ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಬದುಕುತ್ತಿರುವ ಅನೇಕ ಹೆಣ್ಣುಮಕ್ಕಳಿದ್ದಾರೆ. ಈ ಸೌಲಭ್ಯ ಅವರಂಥವರನ್ನು ಮುಟ್ಟಿದರೆ ಅವರ ಬದುಕಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ಮಗುವಿನ ಕಾರಣಕ್ಕೆ ನೋವಿನ ಸಂಬಂಧವನ್ನು ಸಹಿಸಿ ಬದುಕನ್ನು ಅಸಹನೀಯವಾಗಿಸಿಕೊಳ್ಳಬೇಕಿಲ್ಲ. ಆದರೆ ನಮ್ಮಲ್ಲಿ ಐವಿಎಫ್‌ ಸಾಮಾನ್ಯರಿಂದ ದೂರವೇ ಇದೆ. ಸರ್ಕಾರ ಇನ್ನೂ ಐವಿಎಫ್‌ ಚಿಕಿತ್ಸಾ ಘಟಕ ತೆರೆದಿಲ್ಲ, ಯಾವ ಆಸ್ಪತ್ರೆಗಳಲ್ಲೂ ಐವಿಎಫ್‌ ಚಿಕಿತ್ಸೆ ಇರೋದಿಲ್ಲ. ಇಲ್ಲೆಲ್ಲ ಐವಿಎಫ್‌ ಚಿಕಿತ್ಸೆ ತಂದರೆ ಎಲ್ಲರಿಗೂ ಇದು ಕೈಗೆಟುಕುವಂತಾಗುತ್ತದೆ.

ಇಷ್ಟಾದರೂ ನಾಳೆ ನಿಮ್ಮ ಮಕ್ಕಳು ಶಾಲೆಗೆ ಹೋಗಲು ಫಾರ್ಮ್‌ನಲ್ಲಿ ಅಪ್ಪನ ಕಾಲಂ ತುಂಬಬೇಕಾಗುತ್ತದೆ ಎಂಬ ಮಾತಿದೆ?

ಈಗ ಯಾವ ಶಾಲೆಗಳಲ್ಲೂ ಫಾರ್ಮ್‌ನಲ್ಲಿ ಅಪ್ಪನ ಹೆಸರು ತುಂಬಿಸಬೇಕೆಂಬ ನಿರ್ಬಂಧ ಇಲ್ಲ. ಅಮ್ಮನ ಹೆಸರಿದ್ದರೆ ಆಯ್ತು ಅಷ್ಟೇ. ಅಪ್ಪನ ಹೆಸರಿರಬೇಕು ಅನ್ನೋದನ್ನು ಸರ್ಕಾರ ತೆಗೆದು ಹಾಕಿದೆ.

ಸಿಂಗಲ್‌ ಪೇರೆಂಟಿಂಗ್‌ನಲ್ಲಿರುವ ಸವಾಲು ನಿಮ್ಮ ಧೈರ್ಯಗುಂದಿಸಿಲ್ವಾ?

ಆ ಬಗ್ಗೆ ಖಚಿತ ನಿಲುವು ತಳೆದಿದ್ದೇನೆ ಎನ್ನಲಾರೆ. ಆದರೆ ನನ್ನ ಮಕ್ಕಳನ್ನು ನಾನು ಹೇಗೆ ಬೆಳೆಸಬೇಕು ಎನ್ನುವ ಬಗ್ಗೆ ಖಚಿತತೆ ಇದೆ. ಇದರರ್ಥ ನಾಳೆ ಎದುರಾಗುವ ಸವಾಲುಗಳನ್ನು ಮಕ್ಕಳು ಸಮರ್ಥವಾಗಿ ಎದುರಿಸಬಲ್ಲರಾ ಅನ್ನುವುದನ್ನು ಮುಂದೆ ನೋಡಬೇಕಷ್ಟೇ. ಅದನ್ನು ಇದಮಿತ್ಥಂ ಎನ್ನಲಾಗದು.

ಮಗು ಬೇಕು, ಸಂಗಾತಿ ಬೇಡ ಎಂಬ ಮನೋಭಾವ ಎಷ್ಟು ಸರಿ?

ಈಗ ನಮ್ಮಲ್ಲಿ ಪರಿವರ್ತನೆಯ ಕಾಲ. ಈ ಸಮಯದಲ್ಲಿ ನಮ್ಮ ಹೆಣ್ಣುಮಕ್ಕಳು ಈ ನಿರ್ಧಾರಕ್ಕೆ ಬಂದಿದ್ದಾರೆ ಅಂದರೆ ಅದಕ್ಕೆ ಬಲವಾದ ಕಾರಣ ಇದ್ದೇ ಇರುತ್ತದೆ. ಹೆಣ್ಣುಮಕ್ಕಳು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿದ್ದಾರೆ. ಸ್ವಾಭಿಮಾನಿ, ಸ್ವಾವಲಂಬಿಗಳಾಗಿ ಬದುಕುವುದು ಅವರ ಆದ್ಯತೆ. ಆದರೆ ಶೈಕ್ಷಣಿಕವಾಗಿ ಎಷ್ಟೇ ಮುಂದುವರಿದಿದ್ದರೂ ಗಂಡುಮಕ್ಕಳಿನ್ನೂ ಈ ಬದಲಾವಣೆಗೆ ತೆರೆದುಕೊಂಡಿಲ್ಲ. ಎಷ್ಟೋ ಮಂದಿ ಪಿತೃಪ್ರಧಾನ ಮನಸ್ಥಿತಿಯಲ್ಲೇ ಇದ್ದಾರೆ. ಮುಂದೆ ಹೋದ ಹೆಣ್ಣು ಈ ಮನಸ್ಥಿತಿಯನ್ನು ಒಪ್ಪಲು ಸುತರಾಂ ಸಿದ್ಧಳಿಲ್ಲ. ಹೀಗಿರುವಾಗ ಹುಡುಗರು ಹೊಸ ಗಾಳಿಗೆ ತೆರೆದುಕೊಳ್ಳಬೇಕು. ಸೋ ಕಾಲ್ಡ್‌ ಮೇಲ್‌ ಇಗೋದಿಂದ ಕಳಚಿಕೊಂಡು ಸ್ನೇಹಭಾವ ಬೆಳೆಸಿಕೊಳ್ಳಬೇಕು, ಪರಸ್ಪರರ ಸ್ವಾತಂತ್ರ್ಯ ಗೌರವಿಸಬೇಕು, ಆಗ ಯಾಕೆ ಹೆಣ್ಣು ಸಂಗಾತಿ ಬೇಡ ಅಂತಾಳೆ. ಅವರು ಬದಲಾಗದಿದ್ದರೆ ನಾವಂತೂ ಹಿಂದಕ್ಕೆ ಹೋಗಲ್ಲ. ಆಗ ಸಂಗಾತಿಯ ಹಂಗಿಲ್ಲದೇ ಮಗು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ.

ನಟಿಯರಿಗೆ ಒಂಟಿಯಾಗಿದ್ದು, ಐವಿಎಫ್‌ ಮಾಡಿಸಿಕೊಳ್ಳುವುದು ಬೆಸ್ಟ್ ಮಾರ್ಗ ಅನ್ನುತ್ತೀರಾ?

ನನಗೆ ಸರಿ ಅನಿಸಿದ್ದನ್ನು ನಾನು ಮಾಡಿದ್ದೇನೆ. ಇದು ಉಳಿದವರಿಗೂ ಸರಿ ಅನಿಸಬೇಕಿಲ್ಲ. ಆದರೆ ಒಂದಂತೂ ನಿಜ. ನಟಿಯೊಬ್ಬಳು ಚಿಕ್ಕ ವಯಸ್ಸಲ್ಲೇ ವಿವಾಹ, ಕೌಟುಂಬಿಕತೆಗೆ ಹೋದರೆ ಅವಳ ನಟನಾ ವೃತ್ತಿಯಲ್ಲಿ ಮುಖ್ಯವಾಹಿನಿಯಲ್ಲಿ ಮೊದಲಿದ್ದಂತೆ ಬೆಳೆಯುವುದು ಸಾಧ್ಯವಾಗುವುದಿಲ್ಲ. ಅದಕ್ಕೆ ನಮ್ಮ ಇಂಡಸ್ಟ್ರಿಯಲ್ಲೇ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇನ್ನು ಕೆಲವರು ವಿವಾಹವಾಗಿದ್ದರೂ ಅವರ ಸಂಬಂಧದಲ್ಲಿ ಸೌಹಾರ್ದತೆ ಇಲ್ಲದಿರುವುದನ್ನು ಕಾಣುತ್ತೇವೆ. ಚೆನ್ನಾಗಿರುವವರೂ ಇರಬಹುದು. ಆದರೆ ಈ ಸಮಸ್ಯೆಯಂತೂ ಇದ್ದೇ ಇದೆ. ಅವರವರು ಅವರಿಗೆ ಸರಿ ಎನಿಸಿದ ಬದುಕನ್ನು ಆರಿಸಿಕೊಳ್ಳಬಹುದು. ನಾನು ಹಾದಿ ಹಾಕಿಕೊಟ್ಟಿದ್ದೇನೆ, ಹೀಗೇ ಬದುಕಿ ಅಂತ ನಾನಂತೂ ಅವರಿಗೆ ಹೇಳುವುದಿಲ್ಲ.

ಈ ಮೂಲಕ ನೀವು ಸಮಾಜಕ್ಕೆ ಏನು ಹೇಳಲು ಹೊರಟಿದ್ದೀರಿ?

ನಮ್ಮಲ್ಲಿ ಐವಿಎಫ್‌ ಬಗ್ಗೆ ತಪ್ಪು ತಿಳಿವಳಿಕೆ ಇದೆ. ಆದರೆ ನಮ್ಮ ನೆಲದ ಕಾನೂನು ನಮ್ಮ ಹಿತಕ್ಕಾಗಿ ಅನೇಕ ಅನುಕೂಲಕತೆಗಳನ್ನು ಮಾಡಿಕೊಟ್ಟಿದೆ. ಉಸಿರುಗಟ್ಟಿ ಬದುಕುವ ಬದಲು ಅದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಬದುಕಿನ ಆದ್ಯತೆಗಳ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳೋಣ. ಕಟ್ಟುಕಟ್ಟಳೆಗಿಂತಲೂ ಅಂತರಂಗದ ದನಿಯನ್ನು ಅನುಸರಿಯೋಣ.