ʼಲೇಡಿ ಸೂಪರ್‌ಸ್ಟಾರ್ʼ ಬಿ ಸರೋಜಾದೇವಿ ಅವರು ವಿವಿಧ ಭಾಷೆಗಳಲ್ಲಿ ಹೀರೋಯಿನ್ ಆಗಿ ಮೆರೆದಿದ್ದಾರೆ. ʼಕಿತ್ತೂರು ರಾಣಿ ಚೆನ್ನಮ್ಮʼ ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಇವರನ್ನು ಕನ್ನಡಿಗರು ಮರೆಯೋಕೆ ಸಾಧ್ಯವೇ?
ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಮೆರೆದಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ನಿಧನರಾದರು. ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 1938ರ ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ ಅವರು ಬೆಂಗಳೂರು ಸರೋಜಾದೇವಿ ಎಂದು ಹೆಸರು ಇಟ್ಟುಕೊಂಡಿದ್ದರು.
“ನಿಮಗೇಕೆ ಕೊಡಬೇಕು ಕಪ್ಪ? ಕಿತ್ತೂರು ರಾಣಿಯ ಪಾತ್ರವನ್ನು ಪರಕಾಯ ಪ್ರವೇಶ ಮಾಡಿ ನಟಿಸಿದ ಅಭಿನಯ ಚತುರೆ ಬಿ ಸರೋಜಾದೇವಿ, ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್‌ಸ್ಟಾರ್ ಆಗಿದ್ದವರು. ಇವರ ಕಾಲ್‌ಶೀಟ್ ಸಿಕ್ಕರೆ ಸಿನಿಮಾ ಗೆದ್ದಹಾಗೆ ಎಂದು ನಂಬಿದ್ದ ಕಾಲ ಒಂದಿತ್ತು! ಕನ್ನಡಪೈಂಗಿಳಿ ಎಂದೇ ತಮಿಳಿನ ಚಿತ್ರರಂಗದಲ್ಲಿ ಹೆಸರಾಗಿದ್ದವರು.
ಎಂಜಿಆರ್, ಎನ್‌ಟಿಆರ್, ಡಾ. ರಾಜ್, ಶಿವಾಜಿ ಗಣೇಶನ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್ ಮುಂತಾದ ದಿಗ್ಗಜರೊಡನೆ ನಾಯಕಿಯಾಗಿ ಸರಿಸಮಾನ ಪಾತ್ರ ನಿರ್ವಹಿಸಿದ ಪದ್ಮಭೂಷಣ ಬಿ ಸರೇಜಾದೇವಿ ಇನ್ನು ನೆನಪು ಮಾತ್ರ. ಕನ್ನಡದ ಮೊದಲ ವರ್ಣ ಚಿತ್ರ ಅಮರಶಿಲ್ಪಿ ಜಕಣಾಚಾರಿಯ ಚಲುವಾಂತ ಚನ್ನಿಗನೆ ನಲಿದಾಡು ಬಾ ಹಾಡನ್ನು ಕನ್ನಡ ಸಿನಿಪ್ರಿಯರು ಮರೆಯಲು ಸಾಧ್ಯವೇ?
ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾ ನೆನಪಿದ್ಯಾ?
1962ರಲ್ಲಿ ಪ್ರಸಾರವಾದ ʼಕಿತ್ತೂರ ರಾಣಿ ಚೆನ್ನಮ್ಮʼ ಸಿನಿಮಾದಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದರು. ಬಿ ಆರ್ ಪಂತುಲು ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು. ಬ್ರಿಟಿಷ್ ಕಂಪೆನಿ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಕಥೆ ಇಲ್ಲಿತ್ತು.
ಸರೋಜಾ ದೇವಿ ಅವರು ಅಮರ ಶಿಲ್ಪಿ ಜಕಣಾಚಾರಿ, ಭಾಗ್ಯವಂತರು, ಮಲ್ಲಮ್ಮನ ಪವಾಡ, ಬಬ್ರುವಾಹನ, ಲಕ್ಷ್ಮೀಸರಸ್ವತಿ, ಕಥಾಸಂಗಮ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನ ಪಾಟ್ಟಾಲಿ ಮುತ್ತು, ಕಲ್ಯಾಣ ಪರಿಸು, ಪಡಿಕಥ ಮೇಥೈ, ತೆಲುಗಿನ ಪಂಡರಿ ಭಕ್ತಲು, ದಕ್ಷಯಜ್ಞಂ, ಮೆಹಂದಿ ಲಗ ಕೆ ರಖನಾ, ಹಿಂದಿಯ ಆಶಾ, ಮಲೆಯಾಳಂನ ಮುತ್ತುಮಿಂತ್ರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸರೋಜಾದೇವಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಸಿಕ್ಕಿವೆ.
ಏಳು ದಶಕಗಳಲ್ಲಿ ಸುಮಾರು 200 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ಪುನೀತ್ ರಾಜ್ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.
