ಬಾಸ್ ಸಿನಿಮಾ ಸಂಕಷ್ಟ ದೂರವಾಗಿದೆ. ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಬಾಸ್ ಸಿನಿಮಾ ಬಿಡುಗಡೆಗೆ ಒಪ್ಪಿದ್ದಾರೆ.ಈ ಸಿನಿಮಾ ಬಿಡುಗಡೆ ಮಾಡಬಾರದು ಎಂದು ವಿಜಯಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದರು. ಏನಿದು ಪ್ರಕರಣ?
ಬೆಂಗಳೂರು (ಆ.03) ಸಿನಿಮಾ ಸೆಟ್ಟೇರುತ್ತದ್ದಂತೆ ಬಾರಿ ವಿವಾದಕ್ಕೆ ಗುರಿಯಾಗಿದ್ದ ಬಾಸ್ ಸಿನಿಮಾಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಬಾಸ್ ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ನಟ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ಇದೀಗ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ. ಬಾಸ್ ಸಿನಿಮಾ ಬಿಡುಗಡೆ ನಟ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ಇದೀಗ ಬಾಸ್ ಸಿನಿಮಾ ತಂಡ ಮೂವಿ ಬಿಡುಗಡೆ ತಯಾರಿ ಮಾಡಿಕೊಂಡಿದೆ. ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಕಾರಣ ಆಗಸ್ಟ್ 7 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.
ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣವನ್ನು ವಿಷಯವಾಗಿಟ್ಟುಕೊಂಡು ಬಾಸ್ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದರು. ರೇಣುಕಾಸ್ವಾಮಿ ಪ್ರಕರಣದ ಸುತ್ತು ಮುತ್ತ ಸಿನಿಮಾ ಮಾಡಲಾಗಿದೆ. ಪ್ರಕರಣ ಕೋರ್ಟ್‌ನಲ್ಲಿದೆ. ಇದರ ನಡುವೆ ನಟ ದರ್ಶನ್ ತೇಜೋವಧೆ ಮಾಡುವ ಪ್ರಯತ್ನ ಎಂದು ವಿಜಯಲಕ್ಷ್ಮಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ವಾದ ಆಲಿಸಿದ ಹೈಕೋರ್ಟ್ ಬಾಸ್ ಸಿನಿಮಾ ಪರ ತೀರ್ಪು ನೀಡಿತ್ತು
ಹೈಕೋರ್ಟ್‌ನಲ್ಲಿ ದರ್ಶನ್ ಪತ್ನಿಗೆ ಸೋಲು
ಬಾಸ್ ಸಿನಿಮಾ ರಿಲೀಸ್ ಮಾಡಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ವಿಜಯಲಕ್ಷ್ಮಿಗೆ ಹಿನ್ನಡೆಯಾಗಿತ್ತು. ವಿಜಯಲಕ್ಷ್ಮಿ ಅರ್ಜಿ ತಿರಸ್ಕರಿಸಿದ ಕೋರ್ಟ್, ಬಾಸ್ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಹೈಕೋರ್ಟ್‌ನಲ್ಲಿ ಹಿನ್ನಡೆಯಾದ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದರು. ಈ ನಡುವೆ ದರ್ಶನ್ ಸಿನಿಮಾ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ ಹಿನ್ನಲೆ ಪತ್ನಿ ವಿಜಯಲಕ್ಷ್ಮಿ ಹೋರಾಟ ಕೈಬಿಟ್ಟಿದ್ದರು.
ಸಿನಿಮಾ ಹೀರೋ ತನುಷ್ ಶಿವಣ್ಣ ಹೇಳಿದ್ದೇನು?
ಬಾಸ್ ಸಿನಿಮಾ ಬಿಡುಗಡೆಗೆ ನಟ ದರ್ಶನ್ ಒಪ್ಪಿಗೆ ನೀಡಿದ್ದಾರೆ. ಸಿನಿಮಾಗೆ ತೊಂದರೆ ಕೊಡುವುದು ಬೇಡ ಎಂದಿದ್ದಾರೆ. ಬಾಸ್ ಸಿನಿಮಾ ವಿರುದ್ಧ ಸುಪ್ರಿಂ ಕೋರ್ಟ್ ಗೆ ಹೋಗೋದು ಬೇಡ ಎಂದು ದರ್ಶನ್ ಸೂಚಿಸಿದ್ದಾರೆ. ಈ ಕುರಿತು ವಿಜಯಲಕ್ಷ್ಮಿ ಮೇಡಂ ಜೊತೆಗೂ ಮಾತನಾಡಿದ್ದೇನೆ. ಸಿನಿಮಾ ಬಿಡುಗಡೆ ಮಾಡಿ ಎಂದಿದ್ದಾರೆ ಎಂದು ತನುಷ್ ಶಿವಣ್ಣ ಹೇಳಿದ್ದಾರೆ.
ವಿಜಯಲಕ್ಷ್ಮೀ ಮೇಡಂ ಅವರ ಲಾಯರ್ ಪ್ರಥಮ್ ಸಿನಿಮಾ ನೋಡಿದ್ದಾರೆ. ಆಗಸ್ಟ್ 7 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಘೋಷಿಸಿದೆ. ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ, ಕಾನೂನು ತೊಡಕು ನಿವಾರಣೆಯಾಗಿದೆ. ಇದೀಗ ಜನರು ಸಿನಿಮಾ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.


