Brahma Kamala Trailer: ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ವಿಭಿನ್ನ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತ್ತೊಮ್ಮೆ ಹೊಸ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ದಾರಿ ಯಾವುದಯ್ಯ ವೈಕುಂಠಕೆ' ಚಿತ್ರದ ಬಳಿಕ ಅವರು ನಿರ್ದೇಶಿಸಿರುವ ಹೊಸ ಸಿನಿಮಾ 'ಬ್ರಹ್ಮ ಕಮಲ', ಬಿಡುಗಡೆಯ ಮುನ್ನವೇ ತನ್ನ ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಮಹಿಳೆಯ ಬದುಕಿನ ಸೂಕ್ಷ್ಮ ಭಾವನೆಗಳು, ಕುಟುಂಬದೊಳಗೆ ಮರೆಯಾಗಿರುವ ಮೌನ ನೋವುಗಳು ಮತ್ತು ಸಮಾಜದ ವಾಸ್ತವವನ್ನು ತೆರೆದಿಡುವ ಪ್ರಯತ್ನ ಈ ಚಿತ್ರದಲ್ಲಿದೆ ಎನ್ನುವ ಸುಳಿವು ಟ್ರೇಲರ್ ನೀಡಿದೆ.
ಕೌಟುಂಬಿಕ ಬದುಕಿನ ಹೇಳದ ಕಥೆಗೆ ದೃಶ್ಯರೂಪ
'ಹೆಣ್ಣು ಸಂಸಾರದ ಕಣ್ಣು' ಎಂಬ ಮಾತು ಎಲ್ಲರಿಗೂ ಪರಿಚಿತ. ಆದರೆ ಆ ಕಣ್ಣಿನಲ್ಲಿ ಅಡಗಿರುವ ನೋವು, ತ್ಯಾಗ ಮತ್ತು ಹೇಳಲಾಗದ ಭಾವನೆಗಳನ್ನು ಸಮಾಜ ಎಷ್ಟು ಅರ್ಥ ಮಾಡಿಕೊಳ್ಳುತ್ತದೆ ಎಂಬ ಪ್ರಶ್ನೆಯನ್ನೇ 'ಬ್ರಹ್ಮ ಕಮಲ' ಮುಂದಿಡುತ್ತದೆ. ನಮ್ಮ ನಡುವಿನ ಸಾಮಾನ್ಯ ಕುಟುಂಬವೊಂದರಲ್ಲಿ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳ ಸುತ್ತ ಕಥೆ ಸಾಗುತ್ತಿದ್ದು, ಮಹಿಳೆಯ ಮನಸ್ಸಿನೊಳಗಿನ ಸಂಘರ್ಷವನ್ನು ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.
ಟ್ರೇಲರ್‌ನಲ್ಲೇ ಮೂಡಿದ ಕುತೂಹಲ
ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ಸಂಭಾಷಣೆಗಿಂತ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಾತ್ರಗಳ ಮೌನ, ದೃಶ್ಯಗಳ ತೀವ್ರತೆ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಬಗ್ಗೆ ವಿಭಿನ್ನ ನಿರೀಕ್ಷೆ ಮೂಡಿಸಿದೆ. ವಾಣಿಜ್ಯ ಸಿನಿಮಾಗಳ ನಡುವೆಯೂ ಇಂತಹ ಅರ್ಥಪೂರ್ಣ ಕಥೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡುತ್ತವೆ ಎಂಬ ಅಭಿಪ್ರಾಯ ಸಿನಿಪ್ರಿಯರಿಂದ ವ್ಯಕ್ತವಾಗುತ್ತಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೇ ಮೆಚ್ಚುಗೆ
ಚಿತ್ರ ಬಿಡುಗಡೆಯಾಗುವ ಮುನ್ನವೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ನಲ್ಲಿ ಪ್ರದರ್ಶನ ಕಂಡಿದ್ದ 'ಬ್ರಹ್ಮ ಕಮಲ' ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಭಾರೀ ಮೆಚ್ಚುಗೆಯ ಹಿನ್ನೆಲೆಯಲ್ಲಿ ಚಿತ್ರಕ್ಕೆ ಒಂದಲ್ಲ, ಮೂರು ವಿಶೇಷ ಪ್ರದರ್ಶನಗಳು ಆಯೋಜಿಸಲಾಗಿದ್ದು, ಅದೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಿದ್ದು ಪೂರ್ಣಚಂದ್ರ ಅವರ ಮತ್ತೊಂದು ವಿಭಿನ್ನ ಹೆಜ್ಜೆ
ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಸಿದ್ದು ಪೂರ್ಣಚಂದ್ರ ಅವರೇ ನಿರ್ವಹಿಸಿದ್ದಾರೆ. ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಲ ರಾಜ್ವಾಡಿ, ಮಮತಾ ರಾಹುತ್ ಹಾಗೂ ಪ್ರಮೀಳಾ ಸುಬ್ರಮಣ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಣೆ
ಚಿತ್ರಕ್ಕೆ ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ, ದೀಪು ಸಂಕಲನ ನೀಡಿದ್ದಾರೆ. ನಿರ್ಮಾಣ ನಿರ್ವಹಣೆಯನ್ನು ನಾಗರತ್ನ ಕೆ.ಎಚ್. ವಹಿಸಿಕೊಂಡಿದ್ದು, ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಇನ್ನು ಟ್ರೇಲರ್ ಮೂಲಕವೇ ಚರ್ಚೆಗೆ ಕಾರಣವಾಗಿರುವ 'ಬ್ರಹ್ಮ ಕಮಲ' ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಘೋಷಿಸಲಿದೆ. ವಿಭಿನ್ನ ಕಥಾಹಂದರ ಮತ್ತು ಮಹಿಳಾ ಕೇಂದ್ರಿತ ನಿರೂಪಣೆಯೊಂದಿಗೆ ಈ ಸಿನಿಮಾ ಕನ್ನಡ ಸಿನಿಪ್ರಿಯರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ.


