ಕೊರೋನಾ ಲೆಕ್ಕಿಸದೆ ನಟ ಅಜಯ್‌ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಸಿನಿಮಾ ತೆರೆಗೆ ಬರುತ್ತಿದೆ. ಇದೇ ಏಪ್ರಿಲ್‌ 16ಕ್ಕೆ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಚಿತ್ರದ ಪ್ರೀ-ರಿಲೀಸ್‌ ಈವೆಂಟ್‌ ಆಯೋಜಿಸಲಾಗಿತ್ತು.

ಗೋವಿಂದ ರಾಜು ಎಎಚ್‌ ನಿರ್ಮಾಣದ ಈ ಚಿತ್ರವನ್ನು ವಿಜಯಾನಂದ್‌ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಯಾಗುತ್ತಿರುವಾಗ ನಟ ಅಜಯ್‌ ರಾವ್‌ ಕೊಂಚ ಭಾವುಕರಾಗಿದ್ದರು. ಈಗಾಗಲೇ ಸಿನಿಮಾ ಬಿಡುಗಡೆ ತಡವಾಗಿದೆ. ಕೊರೋನಾ ಸಂಕಷ್ಟಗಳಲ್ಲಾದರೂ ತೆರೆಗೆ ಬರುತ್ತಿದೆ ಎಂಬುದು ಅವರ ಭಾವುಕತೆಗೆ ಕಾರಣ. ಕೃಷ್ಣ ಸರಣಿಯ ಎಲ್ಲ ಚಿತ್ರಗಳು ಗೆದ್ದಿವೆ. ಇದೇ ಕಾರಣಕ್ಕೆ ‘ಕೃಷ್ಣ ಟಾಕೀಸ್‌’ ಕೂಡ ಗೆಲ್ಲುತ್ತದೆಂಬ ಭರವಸೆ ಇಡೀ ಚಿತ್ರತಂಡದ್ದು.

ಕೃಷ್ಣ ಟಾಕೀಸ್‌ನಲ್ಲಿ ಪತ್ರಕರ್ತನಾದ ನಟ ಅಜಯ್..!

ಅಜಯ್‌ ರಾವ್‌ ಇಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘20 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಹಾರರ್‌ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕೃಷ್ಣ ಸರಣಿಯಲ್ಲಿ ಪ್ರೇಮ ಕತೆಗಳನ್ನೇ ಮಾಡಲಾಗಿತ್ತು. ಈಗ ಒಂದು ಹಾರರ್‌ ಕತೆ ಮಾಡಿದ್ದೇವೆ. ಹೊಸ ರೀತಿಯ ಸಿನಿಮಾ ಎಂಬುದಕ್ಕೆ ಇದೇ ಸಾಕ್ಷಿ. ಇಂಥ ಚಿತ್ರಗಳನ್ನು ಜನ ಹೆಚ್ಚು ಹೆಚ್ಚು ನೋಡಬೇಕು. ಖಂಡಿತ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎಂಬುದು ಅಜಯ್‌ ರಾವ್‌ ಕೊಟ್ಟಭರವಸೆ.

40 ಸೆಕೆಂಡ್‌ ಡೈಲಾಗ್‌ ಹೇಳಿ ನಟ ಅಜಯ್ ರಾವ್‌ಗೆ ಸವಾಲ್ ಹಾಕಿದ ಹಾಸ್ಯ ನಟ ಚಿಕ್ಕಣ್ಣ ವಿಡಿಯೋ ವೈರಲ್! 

ನಿರ್ದೇಶಕ ವಿಜಯಾನಂದ್‌ ಅವರಿಗೆ 2017ರಲ್ಲಿ ಲಕ್ನೋ ಚಿತ್ರಮಂದಿರದಲ್ಲಿ ನಡೆದ ಒಂದು ಘಟನೆಯ ಸುದ್ದಿ ಓದಿ ಕತೆ ಹೊಳೆಯಿತಂತೆ. ಹೀಗಾಗಿ ಇದು ನೈಜ ಘಟನೆ ಸಿನಿಮಾ ಎಂಬುದು ಅವರ ಮಾತು. ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ನೋಡಿದವರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಕೂಡ ಇದೇ ರೀತಿ ಮೆಚ್ಚಿಗೆ ಆಗಲಿದೆಯಂತೆ. ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಇರುವ ಕಾರಣ, ಇಡೀ ಸಿನಿಮಾ ಮ್ಯೂಸಿಕಲ್ಲಾಗಿಯೂ ಪ್ರೇಕ್ಷಕರನ್ನು ರಂಜಿಸಲಿದೆಯಂತೆ. ಅಭಿಷೇಕ್‌ ಕಾಸರಗೋಡು ಛಾಯಾಗ್ರಾಹಣ ಚಿತ್ರಕ್ಕಿದೆ. ಅಪೂರ್ವ ಚಿತ್ರದ ನಾಯಕಿಯಾಗಿ ನಟಿಸಿದ್ದು, ಸಿಂಧು ಲೋಕನಾಥ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ, ಶಿವಮೊಗ್ಗ ವೈದ್ಯ ಅವರು ಚಿತ್ರದ ಕುರಿತು ಹೇಳಿಕೊಂಡರು. ಮಂಡ್ಯ ರಮೇಶ…, ಶೋಭ ರಾಜ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.