ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರು ಧನಶ್ರೀ ವರ್ಮ ಅವರೊಂದಿಗಿನ ತಮ್ಮ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಆದ ಆತುರದ ನಿರ್ಧಾರ ಮತ್ತು ಜೀವನಶೈಲಿಯ ವ್ಯತ್ಯಾಸಗಳು ಬೇರ್ಪಡುವಿಕೆಗೆ ಕಾರಣ ಎಂದು ಚಾಹಲ್ ಹೇಳಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರ ವೈವಾಹಿಕ ಜೀವನ ಅತ್ಯಂತ ಸಣ್ಣ ಸಮಯದಲ್ಲಿ ಮುಗಿದುಹೋಯಿತು. 2020ರ ಡಿಸೆಂಬರ್‌ನಲ್ಲಿ ಧನಶ್ರೀ ವರ್ಮರನ್ನು ವಿವಾಹವಾಗಿದ್ದ ಚಾಹಲ್ 2025ರ ಮಾರ್ಚ್‌ನಲ್ಲಿ ವಿಚ್ಛೇದನ ನೀಡಿದರು.ಕಳೆದ ಹಲವಾರು ತಿಂಗಳಿನಿಂದ ಅವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಮಾತುಗಳು ಬಂದಿವೆ. ಆದರೆ, ಇಲ್ಲಿಯವರೆಗೂ ಚಾಹಲ್ ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ, ರಾಜ್ ಶಮಾನಿ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ಸಂಗತಿಗಳನ್ನು ಮಾತನಾಡಿದ್ದಾರೆ. ಧನಶ್ರಿ ವರ್ಮ ಜೊತೆಗಿನ ಮದುವೆ ಆತುರದಲ್ಲಿ ಮಾಡಿಕೊಂಡೆ ಎನ್ನುವ ಅರ್ಥದ ಭಾವನೆ ವ್ಯಕ್ತಪಡಿಸಿದ್ದಾರೆ.
ಮಾತುಕತೆಯ ವೇಳೆ, 'ಸಂಬಂಧಗಳಲ್ಲಿ ವ್ಯತ್ಯಾಸವಿದೆ, ಅಲ್ಲಿ ಬ್ರೇಕ್-ಅಪ್‌ಗಳು ಮತ್ತು ಪ್ಯಾಚ್-ಅಪ್‌ಗಳು ಇರುತ್ತವೆ, ಆದರೆ ಮದುವೆಯಲ್ಲಿ ಇಬ್ಬರು ಜನರನ್ನು ಒಂದೇ ಸೂರಿನಡಿ ತರಬೇಕಾಗುತ್ತದೆ. ಇದು ಬಹಳ ಭಿನ್ನ. ಲಾಕ್‌ಡೌನ್ ಸಮಯದಲ್ಲಿ, ಮದುವೆ, ವಿಚ್ಛೇದನ ಮಾತ್ರವಲ್ಲ ಹೆರಿಗೆಯಲ್ಲೂ ದೊಡ್ಡ ಏರಿಕೆ ಇತ್ತು. ಇದೇ ಸಮಯದಲ್ಲಿ ಧನಶ್ರಿ ವರ್ಮ ಜೊತೆಗೆ ರಿಲೇಷನ್‌ಷಿಪ್‌ನಲ್ಲಿದ್ದ ಚಾಹಲ್, ಇದೇ ಫ್ಲೋನಲ್ಲಿಯೇ ನನ್ನ ಮದುವೆ ನಡೆದುಹೋಯಿತು ಎಂದಿದ್ದಾರೆ.
"ನನಗೆ ಅತ್ಯಂತ ಕಷ್ಟಕರವಾದ ವಿಚಾರವೆಂದರೆ ನನ್ನ ಕುಟುಂಬ ಮತ್ತು ನನ್ನ ಆಟ ಎರಡಕ್ಕೂ ಸಮಾನ ಸಮಯವನ್ನು ನೀಡುವುದು. ಆಕೆ ನನ್ನ ಡಾನ್ಸ್ ಟೀಚರ್ ಆಗಿದ್ದಳು. ಲಾಕ್‌ಡೌನ್ ನಂತರ ನಾವು ಭೇಟಿಯಾದೆವು ಮತ್ತು 4-5 ತಿಂಗಳೊಳಗೆ ನಮ್ಮ ಜೀವನದಲ್ಲಿ ಎಲ್ಲವೂ ನಿರ್ಧಾರವಾಯಿತು. ನಂತರ ಆಕೆ ಕೆಲಸದ ಕಾರಣ ಮುಂಬೈನಲ್ಲಿ ವಾಸಿಸಲು ಪ್ರಾರಂಭಿಸಿದಳು ಮತ್ತು ವಾರಕ್ಕೆ ಮೂರು ಬಾರಿ ಗುರುಗ್ರಾಮಕ್ಕೆ ಬರುತ್ತಿದ್ದಳು. ಕೊನೆಗೆ ಇದು ವರ್ಕ್ ಔಟ್ ಆಗುವ ಸಂಬಂಧವಲ್ಲ ಎಂದು ನಾವು ನಿರ್ಧರಿಸಿದೆವು' ಎಂದು ಹೇಳಿದ್ದಾರೆ.
ಧನಶ್ರೀ ಜೊತೆ ಮದುವೆಯ ಬಗ್ಗೆ ಇನ್ನಷ್ಟು ಯೋಚಿಸಬೇಕಿತ್ತೇ? ಇಲ್ಲವೇ? ಅನ್ನೋದರ ಬಗ್ಗೆ ನಾನು ಈಗ ಯೋಚನೆ ಮಾಡುತ್ತಿಲ್ಲ ಎಂದಿದ್ದಾರೆ. ಎರಡು ವರ್ಷಗಳು ಕಳೆದಿವೆ, ಆದರೆ ಮತ್ತೊಂದು ರಿಲೇಷನ್‌ಷಿಪ್‌ಗೆ ನಾನು ಸಿದ್ದನಿದ್ದೇನೆಯೇ ಇಲ್ಲವೇ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ನಿಜವಾದ ಪ್ರೀತಿ ಎಂದರೆ ತಿಳುವಳಿಕೆ, ನಿಷ್ಠೆ ಮತ್ತು ಬದ್ಧತೆಯ ಎಂದು ಹೇಳಿರುವ ಯುಜಿ, ಯಾರಾದರೂ ಕೆಲಸದ ನಿಮಿತ್ತ ಒಂದು ತಿಂಗಳು ದೂರವಿದ್ದರೆ, ಇನ್ನೊಬ್ಬ ವ್ಯಕ್ತಿ ಬೇರೆ ಸಂಬಂಧದ ಕಡೆ ಮುಖ ಮಾಡಬಾರದು ಅನ್ನೋ ಸಂಗತಿಯನ್ನೂ ಹೇಳಿದ್ದಾರೆ.
"ಆದರ್ಶ ಪ್ರೀತಿ ಎಂದರೆ ತಿಳುವಳಿಕೆ, ನಿಷ್ಠೆ ಮತ್ತು ಬದ್ಧತೆ. ನಾನು ಒಂದು ತಿಂಗಳು ಮನೆಗೆ ಬರದಿದ್ದರೂ, ಬೇರೆವರೊಂದಿಗೆ ಸಂಬಂಧ ಹೊಂದಿಲ್ಲ ಎಂದು ನಾನು ನಂಬಬಹುದೇ?" ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಸಂಬಂಧ ಸರಿಯಾಗಿ ಇಲ್ಲದೇ ಇದ್ದಲ್ಲಿ ಅದನ್ನು ಹೊಡೆದಾಡಿಕೊಂಡು ಕೆಡಿಸಿಕೊಳ್ಳುವುದಲ್ಲ ಎಂದಿರುವ ಚಾಹಲ್, ಧನಶ್ರಿ ಜೊತೆಗೆ ಆದ ಮೊದಲ ಗಲಾಟೆಯನ್ನೂ ಹಂಚಿಕೊಂಡಿದ್ದಾರೆ.
"ನಮ್ಮ ನಡುವೆ ಒಪ್ಪಂದವಿರಬೇಕು. ಏನಾದರೂ ಸರಿಯಾಗದಿದ್ದರೆ, ನೀವು ಜಗಳವಾಡಲು ಪ್ರಾರಂಭಿಸಬೇಡಿ. ಮೊದಲ ಜಗಳಕ್ಕೆ ನನಗೆ ಬೇಸರವಿದೆ. ಅದಾದ ನಂತರ, ನಾನು ಹಾಗೆ ಮಾಡುವುದಿಲ್ಲ ಎಂದು ತೀರ್ಮಾನಿಸಿದೆ. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತು. ಆಕೆ ಸಾಕಾಗಿದೆ ಎಂದು ನನಗೆ ಅನಿಸಿತು. ನಾನು ಆಕೆಯನ್ನ ನಿಂದಿಸಲಿಲ್ಲ ಅಥವಾ ಕೈ ಎತ್ತಲಿಲ್ಲ, ನನ್ನ ಧ್ವನಿ ಏರಿತು. ಅಷ್ಟೇ' ಎಂದು ಹೇಳಿದ್ದಾರೆ.

