Asianet Suvarna News Asianet Suvarna News

ಹೆರಿಗೆ ಎಂಬ ಮಧುರ ನೋವಿನ ಅನುಭವ!

ಒಂಭತ್ತು ತಿಂಗಳ ಕಾತುರ, ಗಂಡೋ, ಹೆಣ್ಣೋ ಎಂಬ ಕಾತುರ. ಆ ಒಂಭತ್ತು ತಿಂಗಳು ಒಂದು ಹೆಣ್ಣು ಅನುಭವಿಸುವ ಆ ಅನುಭವ ವರ್ಣಿಸಲಾಗದು. ಪ್ರತೀ ತಿಂಗಳು ಹೊಸ ಬಯಕೆ, ಹೊಸ ಕನಸು, ಹೊಸ ಅನುಭವ ಹೊಟ್ಟೆಯೊಳಗಿನ ಜೀವದ ಜೊತೆ ಮಾತನಾಡುವ ಹಂಬಲ, ದಿನವೂ ಹೊಟ್ಟೆ ಎಷ್ಟು ದೊಡ್ಡದಾಗಿದೆ ಎಂದು ಕನ್ನಡಿಯ ಮುಂದೆ ಪದೇ ಪದೇ ನೋಡುವುದು ಇವು ತಾಯ್ತನದ ಸಂಭ್ರಮಗಳು. 

woman shares first delivery experience
Author
Bengaluru, First Published Oct 16, 2019, 4:21 PM IST
  • Facebook
  • Twitter
  • Whatsapp

ಕೊನೆಗೂ ಹತ್ತಿರ ಬಂದಿತ್ತು ಆ ದಿನ. ಒಂಭತ್ತು ತಿಂಗಳ ಕಾತುರ, ಗಂಡೋ, ಹೆಣ್ಣೋ ಎಂಬ ಕಾತುರ. ಆ ಒಂಭತ್ತು ತಿಂಗಳು ಒಂದು ಹೆಣ್ಣು ಅನುಭವಿಸುವ ಆ ಅನುಭವ ವರ್ಣಿಸಲಾಗದು. ಪ್ರತೀ ತಿಂಗಳು ಹೊಸ ಬಯಕೆ, ಹೊಸ ಕನಸು, ಹೊಸ ಅನುಭವ ಹೊಟ್ಟೆಯೊಳಗಿನ ಜೀವದ ಜೊತೆ ಮಾತನಾಡುವ ಹಂಬಲ, ದಿನವೂ ಹೊಟ್ಟೆ ಎಷ್ಟು ದೊಡ್ಡದಾಗಿದೆ ಎಂದು ಕನ್ನಡಿಯ ಮುಂದೆ ನೋಡಿದ್ದೆ ನೋಡಿದ್ದು. ಅದರೊಂದಿಗೆ ಸೆಲ್ಫಿ ಬೇರೆ.

ಈ ಎಲ್ಲಾ ಅನುಭವಗಳ ಮುಕ್ತಾಯ ಮತ್ತು ಹೊಸ ಅನುಭವಗಳ ಆರಂಭದ ಕಾಲ. ನನ್ನ ಡಾಕ್ಟರ್ ಆಂಟಿ ಹೇಳಿದ್ರು ಆಗಸ್ಟ್ ೮ಕ್ಕೆ ನಿನ್ನ ನಿಗದಿತ ದಿನಾಂಕ ಅಂತ. ಆಗಸ್ಟ್ ೮ ಮುಗಿದು ೨೦ ಬಂದರೂ ಸುದ್ದಿನೇ ಇಲ್ಲಾ. ಮನದೊಳಗೆ ಗಾಬರಿ ಏಕೆ ಇನ್ನು ಡೆಲಿವರಿ ಆಗುತ್ತಿಲ್ಲಾ ಅಂತ. ಕೆಲವರು ಹೇಳುತ್ತಿದ್ದರು, ಗಂಡು ಮಗುವಾದರೆ ಡೆಲಿವರಿ ಲೇಟ್ ಎಂದು. ಮತ್ತದೇ ಜನ ನಿನ್ನ ಕಲರ್ ಬೆಳ್ಳಗಿನ ಹಾಲಿನಂತೆ ಇದೆ, ನಿನಗೆ ಹಣ್ಣು ಮಗುವೇ ಆಗೋದು ಎಂದು.

ನಿಮ್ಮ ಗರ್ಲ್ ಫ್ರೆಂಡ್ ನಿಮ್ಮಿಂದ ಬಯಸುವುದೇನು ಗೊತ್ತಾ?

ಇವರ ಹೇಳಿಕೆ ನಡುವೆ ಡೆಲಿವರಿ ಯಾವಾಗೆಂದು  ಗೊತ್ತಾಗುತ್ತಿಲ್ಲ. ಗಾಬರಿ ಹೆಚ್ಚುತ್ತಿತ್ತು, ಡಾಕ್ಟರ್ ಬಳಿ ಕೇಳಿಯೇ ಬಿಟ್ಟೆ. ಆಂಟಿ ಆಗಸ್ಟ್ ೮ಕ್ಕೆ ಡೆಲಿವರಿ ಎಂದಿದ್ರಿ ಇನ್ನೂ ಏಕೆ ಆಗಿಲ್ಲ. ಸುಮ್ಮನೆ ಸಿಸೇರಿಯನ್ ಮಾಡಿಬಿಡಿ ಮಗುವಿಗೆ ತೊಂದರೆಯಾದರೆ ಕಷ್ಟ ಎಂದು. ಅದಕ್ಕವರು ನಕ್ಕು ಹುಚ್ಚು ಹುಡುಗಿ ಅದು ಬರುವ ವೇಳೆ ಬರುತ್ತೆ ಮನೆಗೆ ಹೋಗು ನಿನ್ನ ಮೈ ರೆಡಿ ಇಲ್ಲಾ ಅಂದ್ರು. ಅವರ ಮಾತಿಗೆ ಮತ್ತಷ್ಟು ಗಾಬರಿ ಹೆಚ್ಚಾಯಿತು. ಬರೀ ಮೂರು ತಿಂಗಳ ರಜೆ, ರಜೆ ಶುರುವಾಗಿ 20 ದಿನ ಕಳೆದಿತ್ತು. ಮಗುವಾದ ಮೇಲೆ ಅದರ ಜೊತೆ ಇರಲಾಗದು ಅನ್ನುವ ನೋವು ಶುರುವಾಯಿತು. ಈ ಒಂಭತ್ತು ತಿಂಗಳು ಮಜವಾಗಿತ್ತು. ಆದರೆ ಈಗ ಏನೂ ತಿಳಿಯದಾಯಿತು.

ಈ ಮೊದಲು ನನ್ನ ಗಂಡನಿಗೂ ಹೇಳಿದ್ದೆ ‘ದಿನವೂ ರಾತ್ರಿ ಹೆಚ್ಚು ಕಾಲ ವಾಕಿಂಗ್ ಮಾಡೋಣ ಡೆಲಿವರಿ ಬೇಗ ಆಗುತ್ತೆ ಎಂದು. ಅವರೂ ಹೂಂ ಎಂದು ಊಟವಾದ ಮೇಲೆ ದೊಡ್ಡ ರೌಂಡ್ ಹಾಕಿ ಕೊನೆಗೆ ಬಂತು ಆ ದಿನ ಆಗಸ್ಟ್‌೨೭. ಬೆಳಗ್ಗೆ ೮ ಗಂಟೆಗೆ ಎದ್ದ ಮೇಲೆ ಏಕೋ ನೋವಿನ ಅನುಭವ. ಅಮ್ಮನಿಗೆ ಹೇಳಲು ಭಯ. ಅಮ್ಮನಿಗೆ ಹೇಳಿದರೆ ನನ್ನನ್ನು ಸಮಾಧಾನ ಮಾಡುವ ಬದಲು ತಾನೇ ಭಯ ಪಡುತ್ತಾಳೆ. ಮೆಲ್ಲನೆ ನನ್ನ ಗಂಡನನ್ನು ಕರೆದೆ, ನೋವಾಗ್ತಿದೆ ಅಮ್ಮನಿಗೆ ಹೇಳಬೇಡಾ ಅಮ್ಮ ಶಾಲೆಗೆ ಹೋಗಲಿ. ಆಮೇಲೆ ಡಾಕ್ಟರ್ ಹತ್ರ ಕೇಳುವಾ ಎಂದು ಹೇಳಿದೆ.  ಆದರೆ ಪತಿರಾಯ ಹೋಗಿ ಅಮ್ಮನಿಗೆ ಹೇಳಿದ.

ನಾನು ಅಂದುಕೊಂಡಂತೆ ಅಮ್ಮನಿಗೆ ಭಯ ಶುರುವಾಯಿತು. ಕೊನೆಗೆ ಪತಿರಾಯ ಡಾಕ್ಟರ್ ಆಂಟಿಗೆ ಫೋನ್ ಮಾಡಿದ ಆಂಟಿ ಹೇಳಿದ್ರು, ಟೈಮ್ ಆಗಿದೆ ಕರೆದುಕೊಂಡು ಬನ್ನಿ ಅಂತ. ಆಗ ನನ್ನ ಅಸಲಿ ಭಯ ಶುರುವಾಯಿತು. ಈ ದಿನ ಯಾವಾಗ ಬರುತ್ತೆ ಎಂದು ತುದಿಗಾಲಿನಲ್ಲಿ ಚಡಪಡಿಸುತ್ತಿದ್ದ ನನಗೆ ಡಾಕ್ಟರ್ ಆಂಟಿ ಹೇಳಿದಾಗ ಅಡ್ಮಿಟ್ ಆಗುತ್ತಿದ್ದಂತೆ ಈ ದಿನ ಇಷ್ಟು ಬೇಗ ಏಕೆ ಬಂತೆಂದು ಧೈರ್ಯ ಕರಗಿ ಭಯ ಉಕ್ಕಿತು.

ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!

ಅಮ್ಮನಿಗೆ ಅಮ್ಮ ನನ್ನಿಂದ ನಾರ್ಮಲ್ ಡೆಲಿವರಿ ಆಗದು, ಸಿಸೇರಿಯನ್ ಮಾಡಿಸಿ ಎಂದೆ. ಅಮ್ಮ ನೋಡೋಣ ಎನ್ನಲು, ನಾನು ಇನ್ನೂ ಒಂದು ಗಂಟೆ ಲೇಟ್ ಮಾಡಿದೆ. ಆಸ್ಪತ್ರೆಗೆ ಬರುತ್ತಿದ್ದಂತೆ ಡಾಕ್ಟರ್ ನನ್ನ ನೋಡಿ ಕೂಡಲೇ ಲೇಬರ್ ರೂಮ್‌ಗೆ ಕರೆದುಕೊಂಡು ಹೋಗಲು ಹೇಳಿದರು. ಇದ್ದೆಲ್ಲಾ ಧೈರ್ಯ ನೀರಲ್ಲಿ ಹೋಮ. ಕಾಲು ಗಡಗಡ ಶುರು. ಲೇಬರ್ ವಾರ್ಡ್ ಎಂಟ್ರಿ ಆಗುತ್ತಿದ್ದಂತೆ ಪೇನ್ ಹೆಚ್ಚಾಯಿತು. ನೋವು
ತಡಿಯಲಾಗಲಿಲ್ಲ. ಅತ್ತೆ. ಚೀರಿದೆ, ಕಿರುಚಾಡಿದೆ. ಗಂಡನಿಗೆ ಬೈದೆ.

ಕಡೆಗೆ 2 ಗಂಟೆಯ ನೋವಿನ ನರಳಾಟದ ನಂತರ ಕೇಳಿದ್ದು ಒಂದು ಮಗುವಿನ ದನಿ. ನೋವನ್ನು ಒಂದೇ ನಿಮಿಷದಲ್ಲಿ ಮರೆತೆಬಿಟ್ಟೆ. ಮಗು ನೋಡಲು ಕಾತುರದಿಂದ ಇದ್ದ ನನ್ನ ಬಳಿ ಬಂದ ಡಾಕ್ಟರ್ ಕಂಗ್ರಾಟ್ಸ್ ಹೆಣ್ಣು ಮಗು ಎಂದರು. ಮಗು ಚೆನ್ನಾಗಿದೆ, ನಿನಗಿಂತಾ ಚೆನ್ನಾಗಿದೆ ಎಂದಾಗ ನನ್ನ ಮನಸ್ಸಿಗೆ ಖುಷಿ ಹೆಚ್ಚಿ ಆನಂದದ ಪನ್ನೀರು ಹರಿಯಿತು. ನಂತರ ಮಗುವನ್ನು ನೋಡಿ ಅಪ್ಪಿಕೊಳ್ಳುತ್ತಲೇ ಅದು ಪಿಳಪಿಳ ದೊಡ್ಡ ಕಣ್ಣು ಬಿಡಲು, ನಾನೇ ನಿನ್ನಮ್ಮ ಎಂದು ಅದಕ್ಕೆ ಪರಿಚಯಿಸಿದೆ. ಹೃದಯ ತಂಪೆನಿಸಿತು.

ಮಗು ಜೀವನವನ್ನು ಹೇಗೆ ಬದಲಿಸುತ್ತದೆ ಎಂದು ತಿಳಿಯಿತು. ನಾನು ಪರಿಪೂರ್ಣಳಾದೆ ಎಂದು ಹೃದಯ ಹೇಳಿತು. ಈಗ ಅದೇ ಮಗುವಿಗೆ ಮೂರು ವರ್ಷ ಹೇಗೆ ಕಳೆದವೋ ಗೊತ್ತಾಗಲಿಲ್ಲ. ನನ್ನ ಕೂಸೆ ನನ್ನ ಕನಸು ನನ್ನ ಒಲವು.

- ಮಧು ರಾವಣ 

Follow Us:
Download App:
  • android
  • ios