ಜೈಪುರದಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಗಂಡನ ಕೊಲೆಗೆ ಯತ್ನಿಸಿದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನಿಗೆ ಅತಿಯಾದ ಡೋಸ್ ಇಂಜೆಕ್ಷನ್ ನೀಡಲು ನರ್ಸ್ ಜೊತೆ ಸಂಚು ರೂಪಿಸಿದ್ದಳು. ಆಸ್ಪತ್ರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಗಂಡನ ಪ್ರಾಣ ಉಳಿಯಿತು. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದರೆ ಅಥವಾ ದಂಪತಿಯ ಪೈಕಿ ಒಬ್ಬರಿಗೆ ಅನೈತಿಕ ಸಂಬಂಧವಿದ್ದರೆ ಡಿವೋರ್ಸ್ ಕೊಡುವ ಘಟನೆಗಳು ಹೆಚ್ಚಾಗಿವೆ. ಆದರೆ, ಇದರ ಹೊರತಾಗಿಯೂ ಅನೈತಿಕ ಸಂಬಂಧ ಇಟ್ಟುಕೊಂಡ ಹೆಂಡತಿಯರ ಪೈಕಿ, ಕೆಲವರು ಪ್ರೀತಿ ತೋರಿಸುವ ಗಂಡನಿಗೆ ಡಿವೋರ್ಸ್ ಕೊಡಲಾಗದೇ ಗಂಡನ ಜೀವವನ್ನೇ ತೆಗೆಯಲು ಮುಂದಾಗುತ್ತಾರೆ. ಅಂತಹ ಅನೇಕ ಘಟನೆಗಳಿಗೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ಗಂಡನಿಗೆ ಪ್ರಿಯಕರನೊಂದಿಗೆ ಸೇರಿಕೊಂಡು ಆಸ್ಪತ್ರೆಯ ನರ್ಸ್‌ ಅನ್ನು ಪುಸಲಾಯಿಸಿ ಓವರ್ ಡೋಸ್ ಇಂಜೆಕ್ಷನ್ ಕೊಟ್ಟು ಸಾಯಿಸಲು ಮುಂದಾಗಿದ್ದಾರೆ. ಆದರೆ, ಈ ಘಟನೆ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿದಿದ್ದು, ಗಂಡನನ್ನು ಕಾಪಾಡಿದ್ದಾರೆ.

ಈ ಘಟನೆ ರಾಜಸ್ಥಾನ ರಾಜ್ಯದ ಜೈಪುರದ ಚಂದ್ವಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದ ಗಂಡನನ್ನು ದೂರ ಮಾಡಲು ಕಾರಣವೇ ಸಿಕ್ಕದ ಮಹಿಳೆ, ತನ್ನ ಪ್ರಿಯಕರ ಮತ್ತು ನರ್ಸಿಂಗ್ ಸಹೋದ್ಯೋಗಿಯೊಂದಿಗೆ ಸೇರಿಕೊಂಡು ತನ್ನ ಸ್ವಂತ ಗಂಡನನ್ನೇ ಕೊಲ್ಲಲು ಸಂಚು ರೂಪಿಸಿದ್ದಾಳೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿಯ ಜಾಗರೂಕತೆಯು ಒಂದು ಜೀವವನ್ನು ಉಳಿಸಿತು. ಇನ್ನು ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಮೂವರನ್ನು ಜೈಲಿಗೆ ಕಳುಹಿಸಲಾಗಿದೆ.

ಜೈಪುರದ ಆಸ್ಪತ್ರೆಯಲ್ಲಿ ಇಂಜೆಕ್ಷನ್:

ಮಾಹಿತಿಯ ಪ್ರಕಾರ, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನನ್ನು NIMS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವನ ಹೆಂಡತಿ ಆಗಾಗ್ಗೆ ಗಂಡನನ್ನು ಭೇಟಿಯಾಗಲು ಬರುತ್ತಿದ್ದಳು. ಈ ಸಮಯದಲ್ಲಿ, ತನ್ನ ಪ್ರಿಯಕರ ಮತ್ತು ನರ್ಸಿಂಗ್ ಸಿಬ್ಬಂದಿಯ ಸಹಾಯದಿಂದ, ಅವಳು ತನ್ನ ಪತಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಳು. ಮಂಗಳವಾರ ರಾತ್ರಿ ಸುಮಾರು 3 ಗಂಟೆಯ ಸುಮಾರಿಗೆ, ಈ ಮೂವರು ಒಟ್ಟಿಗೆ ಗಂಡನಿಗೆ ಇಂಜೆಕ್ಷನ್ ನೀಡುತ್ತಿದ್ದಾಗ, ಆಸ್ಪತ್ರೆ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಇದರಿಂದ ಅವರಿಗೆ ಅನುಮಾನ ಬಂದಿದೆ. ಕೂಡಲೇ ರಾತ್ರಿ ಪಾಳಿಯಲ್ಲಿದ್ದ ಹಿರಿಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ರೋಗಿಯನ್ನು ತಪಾಸಣೆ ಮಾಡಿದಾಗ ಓವರ್ ಡೋಸ್ ಕೊಟ್ಟಿರುವ ಇಂಜೆಕ್ಷನ್ ಪರಿಣಾಮ ಬೀರುವುದನ್ನು ತಡೆದಿದ್ದಾರೆ. ಇದಾದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅವಳು ತನ್ನ ಗಂಡನನ್ನು ಕೊಲ್ಲಲು ಪ್ಲಾನ್: 
ಚಂದ್ವಾಜಿ ಪೊಲೀಸ್ ಠಾಣೆಯ ಉಸ್ತುವಾರಿ ಹೀರಾಲಾಲ್ ಸೈನಿ ಮಾತನಾಡಿ, ಮೂವರನ್ನು ವಶಕ್ಕೆ ಪಡೆದು ನಡೆಸಿದ ಆರಂಭಿಕ ತನಿಖೆಯಲ್ಲಿ, ಮಹಿಳೆ ತನ್ನ ಪತಿಯೊಂದಿಗೆ ಜಗಳ ಮಾಡುತ್ತಿದ್ದಳು. ಅವಳು ತನ್ನ ಪ್ರಿಯಕರನೊಂದಿಗೆ ದೀರ್ಘಕಾಲದಿಂದ ಪತಿಯನ್ನು ಕೊಲ್ಲಲು ಯೋಜಿಸುತ್ತಿದ್ದಳು ಎಂದು ತಿಳಿದುಬಂದಿದೆ. ಈ ಅಪರಾಧದಲ್ಲಿ ನರ್ಸಿಂಗ್ ಸಿಬ್ಬಂದಿ ಕೂಡ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯ ಜಾಗರೂಕತೆ ಮತ್ತು ಸಕಾಲಿಕ ಕ್ರಮದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ತಿಳಿಸಿದ್ದಾರೆ.

ಮದುವೆಯಾದ ಕೇವಲ 14 ದಿನಕ್ಕೆ ಗಂಡನಿಗೆ ಮೋಸ:

ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಹೊಸದಾಗಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಬಂದಿದ್ದ ವಧುವೊಬ್ಬಳು ಮನೆಯಲ್ಲಿದ್ದ ಎಲ್ಲ ಚಿನ್ನ-ಬೆಳ್ಳಿ, ಹಣವನ್ನು ದೋಚಿಕೊಂಡು ಪರಾರಿ ಆಗಿರುವ ಘಟನೆ ನಡೆದಿದೆ. ನಗರದಲ್ಲಿ ಕೈಗಾಡಿ ಕೆಲಸ ಮಾಡುವ ಸಾಮಾನ್ಯ ಯುವಕನನ್ನು ಮದುವೆಯಾಗಿದ್ದ ವಧು, ಅವನ ಜೀವಮಾನದ ಉಳಿತಾಯದ ಎಲ್ಲ ಹಣ ಮತ್ತು ಸಂಪತ್ತನ್ನು ಕದ್ದು ಪರಾರಿಯಾಗಿದ್ದಾಳೆ. ಈ ಘಟನೆ ಮಾಂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಂತ್ರಸ್ತ ಯುವಕ ವಿಷ್ಣು ಶರ್ಮಾ ತನ್ನ ಪತ್ನಿ ಅನುರಾಧ ಮೇಲೆ ದೂರು ನೀಡಿದ್ದಾರೆ. ನಾನು ಮದುವೆಯಾದ 14 ದಿನಗಳ ನಂತರ ಮನೆಯಿಂದ ಹೆಂಡತಿ ಓಡಿಹೋಗಿದ್ದಾಳೆ. ತನ್ನ ಬಳಿ ಇದ್ದ ಲಕ್ಷಾಂತರ ಮೌಲ್ಯದ ಆಭರಣಗಳು, ನಗದು ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿದ್ದಾಳೆ ಎಂದು ಆರೋಪಿಸಿದ್ದಾನೆ.