ಡಾಕ್ಟ್ರೇ, ವಿವಾಹಿತೆಯರತ್ತ ಹುಡುಗರು ಆಕರ್ಷಿತರಾಗೋಕೆ ಕಾರಣವೇನು?
ಹದಿಹರೆಯದ ಹುಡುಗರು ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗುವುದು ಸಾಮಾನ್ಯ. ಇದರ ಹಿಂದೆ ಕೆಲವು ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಜೈವಿಕ ಕಾರಣಗಳಿರುತ್ತವೆ. ಅವುಗಳನ್ನು ಮತ್ತು ಈ ಆಕರ್ಷಣೆಯನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯಿರಿ.
ಪ್ರಶ್ನೆ: ನಾನು ಮದುವೆಯಾಗಿರುವ ಮಹಿಳೆ, ವಯಸ್ಸು ಮೂವತ್ತೈದು. ನನ್ನ ಪಕ್ಕದ ಮನೆಯಲ್ಲಿ ನಾಲ್ಕಾರು ಕಾಲೇಜು ಹುಡುಗರಿದ್ದಾರೆ. ಅವರು ನಮ್ಮ ಮನೆಗೆ ಆಗಾಗ ಬರುತ್ತಿರುತ್ತಾರೆ. ನನ್ನನ್ನು ಆರಾಧನೆಯಿಂದ ನೋಡುತ್ತಾರೆ. ಅವರಲ್ಲಿ ಇಬ್ಬರಂತೂ "ನನಗೆ ನೀವೆಂದರೆ ತುಂಬಾ ಇಷ್ಟ" ಎಂದು ನೇರವಾಗಿಯೇ ಹೇಳಿದ್ದಾರೆ. ಈಗಲೂ ನನ್ನ ಸೌಂದರ್ಯ ಚೆನ್ನಾಗಿದೆ, ಇಲ್ಲವೆಂದಲ್ಲ. ಆದರೆ ಅವರ ಕಾಲೇಜಿನಲ್ಲಿ ನನಗಿಂತಲೂ ಸುಂದರಿಯಾಗಿರುವ ಹುಡುಗಿಯರಿದ್ದಾರೆ. ಹೀಗೆ ವಿವಾಹಿತೆಯರತ್ತ ಆಕರ್ಷಿತರಾಗುವ ಇಂಥ ತುಂಬಾ ಹುಡುಗರನ್ನು ನಾನು ಗಮನಿಸಿದ್ದೇನೆ. ಯಾಕೆ ಹೀಗೆ? ಹುಡುಗರು ಮದುವೆಯಾದ ಮಹಿಳೆಯರತ್ತ ಆಕರ್ಷಿತರಾಗುವುದಕ್ಕೆ ಏನಾದರೂ ತರ್ಕಬದ್ಧ ಕಾರಣಗಳಿವೆಯಾ? ಅಂದಹಾಗೆ, ಈ ಹುಡುಗರನ್ನು ನಾನು ದೂರವೇ ಇಟ್ಟಿದ್ದೇನೆ.
ಡಾಕ್ಟರ್: ಈ ಹುಡುಗರನ್ನು ದೂರವೇ ಇಟ್ಟು ನೀವು ಒಳ್ಳೆಯ ಕೆಲಸ ಮಾಡಿದಿರಿ. ಅವರ ಆಕರ್ಷಣೆಯನ್ನು ಪೋಷಿಸುವಂತೆ ನೀವು ವರ್ತಿಸಿದ್ದರೆ ನಿಮ್ಮ ಬದುಕು ಕಷ್ಟವಾಗುತ್ತಿತ್ತು. ನಿಮ್ಮ ಸಾಂಸಾರಿಕ ನೆಮ್ಮದಿಗೆ ಕಂಟಕ ಒದಗುತ್ತಿತ್ತು. ಈಗ ಅದರಿಂದ ನೀವು ಪಾರಾಗಿದ್ದೀರಿ. ಇರಲಿ, ಹುಡುಗರು ಮದುವೆಯಾದ ಮಹಿಳೆಯರತ್ತ ಆಕರ್ಷಿತರಾಗುವುದಕ್ಕೆ ವೈಜ್ಞಾನಿಕ ಅಥವಾ ತರ್ಕಬದ್ಧ ಕಾರಣಗಳಿವೆಯೇ ಎಂಬುದು ನಿಮ್ಮ ಪ್ರಶ್ನೆ. ಇದೆ ಎಂಬುದೇ ಇದಕ್ಕೆ ಉತ್ತರ.
1) ಅನುಭವ ಮತ್ತು ಭಾವನಾತ್ಮಕ ಸ್ಥಿರತೆ: ಮದುವೆಯಾದ ಮಹಿಳೆಯರು ಸಾಮಾನ್ಯವಾಗಿ ಸಂಬಂಧಗಳನ್ನು ನಿಭಾಯಿಸುವಲ್ಲಿ ಹೆಚ್ಚು ಅನುಭವ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಅವರ ಅನುಭವವು ಯುವಕರಿಗೆ ಭಾವನಾತ್ಮಕವಾಗಿ ಸ್ಥಿರವಾಗಿರುವಂತೆ ಕಾಣಬಹುದು. ಇದರಿಂದ ಅವರು ಹೆಚ್ಚು ಆಕರ್ಷಿತರಾಗುತ್ತಾರೆ. ಜೀವಶಾಸ್ತ್ರೀಯವಾಗಿ, ಗಂಡು ಎಂಬ ಪ್ರಾಣಿ ಯಾವಾಗಲೂ ತನ್ನ ಸಂತಾನವನ್ನು ಭದ್ರವಾಗಿ ಬೆಳೆಸಬಲ್ಲ ಹೆಣ್ಣಿನತ್ತ ಹೆಚ್ಚು ಆಕರ್ಷಿತಗೊಳ್ಳುತ್ತಾನೆ. ಇದಕ್ಕೆ ʼಸ್ಪೋರ್ಸ್ ಸೆಲೆಕ್ಷನ್ʼ ಎನ್ನುತ್ತಾರೆ. ವಿವಾಹಿತೆಯರು ಮಕ್ಕಳನ್ನು ಸರಿಯಾಗಿ ಬೆಳೆಸಿದ ಅನುಭವ ಹೊಂದಿರುತ್ತಾರೆ.
2) ವಿಶ್ವಾಸಾರ್ಹತೆ ಮತ್ತು ಭದ್ರತೆ: ಮದುವೆಯಾದ ಮಹಿಳೆಯರು ಹೆಚ್ಚು ವಿಶ್ವಾಸಾರ್ಹತೆ ಮತ್ತು ಭದ್ರತೆಯನ್ನು ನೀಡುವಂತೆ ತೋರುತ್ತಾರೆ. ಅವರ ಆತ್ಮವಿಶ್ವಾಸವು ಯುವಕರಿಗೆ ಭದ್ರತೆ ಮತ್ತು ನಂಬಿಕೆಯನ್ನು ನೀಡಬಹುದು. `ಅಟ್ಯಾಚ್ಮೆಂಟ್ ಥಿಯರಿ`ಯ ಪ್ರಕಾರ, ಇದರಿಂದ ಯುವಕರು ಈಕೆಯ ಸಂಗದಲ್ಲಿ ಹೆಚ್ಚು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿಕೊಳ್ಳಬಹುದು.
3) ಮಾದರಿ ವ್ಯಕ್ತಿತ್ವ: ಹಲವು ಬಾರಿ, ಯುವಕರಿಗೆ ತಮ್ಮ ಜೀವನದಲ್ಲಿ ತಾಯಿಯಂಥ ವ್ಯಕ್ತಿತ್ವದ ಮಹಿಳೆಯನ್ನು ಪದೇ ಪದೇ ಹುಡುಕುವ ದೌರ್ಬಲ್ಯ ಇರುತ್ತದೆ. ಈ ಅಟ್ಯಾಚ್ಮೆಂಟ್ ಸ್ಟೈಲ್ಸ್ ಪ್ರಕಾರ, ಮದುವೆಯಾದ ಮಹಿಳೆ ತಾಯಿಯ ರೀತಿಯಲ್ಲಿ ಪಾಲನೆ ಮತ್ತು ಪ್ರೀತಿಯನ್ನು ತೋರಿಸುವಂತೆ ತೋರುತ್ತಾರೆ. ಇದು ಹುಡುಗರಿಗೆ ಆಕರ್ಷಕವಾಗಬಹುದು.
4) ನಿರ್ಬಂಧದ ಆಕರ್ಷಣೆ: ನಮ್ಮ ಸಂಸ್ಕೃತಿಯಲ್ಲಿ ಫೋರ್ಬಿಡನ್ ಫ್ರೂಟ್ ಎಫೆಕ್ಟ್ ಅಥವಾ ನಿರ್ಬಂಧಿಸಿದ ವಿಷಯಗಳತ್ತ ಕೈಚಾಚುವ ಬುದ್ಧಿ ಹದಿಹರೆಯದಲ್ಲಿ ಜಾಸ್ತಿ. ಈ ಪ್ರಾಯದಲ್ಲಿ ಬೇಲಿ ಕಂಡರೆ ಹಾರಬೇಕು ಎನಿಸುತ್ತದೆ. ಬೇಲಿ ಇರುವುದೇ ಹಾರುವುದಕ್ಕೆ ಎನಿಸುತ್ತದೆ. ಮದುವೆಯಾದ ಮಹಿಳೆಯರ ಜೊತೆಗಿನ ಸಂಬಂಧವು ಕೆಲವರಿಗೆ ಸವಾಲು ಮತ್ತು ಥ್ರಿಲ್ ತಂದುಕೊಡಬಹುದು.
5) ಹಾರ್ಮೋನ್ ಪ್ರಭಾವ: ಕೆಲ ಹಾರ್ಮೋನ್‌ಗಳು, ವಿಶೇಷವಾಗಿ ಟೆಸ್ಟೋಸ್ಟೆರೋನ್, ಯುವಕರಲ್ಲಿ ಬಯಕೆಯನ್ನು ಹೆಚ್ಚಿಸಬಹುದು. ಸಂಶೋಧನೆಗಳಿಂದ ತಿಳಿದುಬಂದಿರುವಂತೆ, ಟೆಸ್ಟೋಸ್ಟೆರೋನ್ ಹಾರ್ಮೋನ್‌ನ ಮಟ್ಟ ಹೆಚ್ಚು ಇದ್ದಾಗ ಸವಾಲಿನ ಸಂಬಂಧಗಳತ್ತ ಆಕರ್ಷಣೆಯು ಹೆಚ್ಚಾಗುತ್ತದೆ. ಸಾಹಸಿಕವಾದ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಎನಿಸುತ್ತದೆ.
ವಾತ್ಸಾಯನನ ಕಾಮಸೂತ್ರದ ಪ್ರಕಾರ, ಮದುವೆಯಾಗೋ ಗಂಡಿಗೆ ಇದು ಇರಲೇಬೇಕಂತೆ!
6) ಮೀಡಿಯಾ ಪ್ರಭಾವ: ಪಾಪ್ ಕಲ್ಚರ್ ಮತ್ತು ಮೀಡಿಯಾಗಳು ಹಿರಿಯ ಮಹಿಳೆಯರ ಮತ್ತು ಯುವಕರ ನಡುವಿನ ಸಂಬಂಧವನ್ನು ರೊಮ್ಯಾಂಟಿಕ್ ಆಗಿ ತೋರಿಸಿವೆ. ಮೀಡಿಯಾಗಳಲ್ಲಿ ತೋರಿಸಲಾದ ಈ ಧೋರಣೆಯು ಸಾಮಾಜಿಕ ಅಭಿಪ್ರಾಯವನ್ನು ರೂಪಿಸುತ್ತದೆ ಮತ್ತು ಹುಡುಗರ ಹುಚ್ಚು ಆಕರ್ಷಣೆಗೆ ಕಾರಣವಾಗಬಹುದು.
ಈ ಮೇಲಿನ ಎಲ್ಲಾ ಅಂಶಗಳು ಹುಡುಗರ ಆಕರ್ಷಣೆಗೆ ಕಾರಣಗಳನ್ನು ವಿವರಿಸುತ್ತವೆ. ಹೀಗಾಗಿ ವಿವಾಹಿತೆಯರು ತಮ್ಮ ಕುಟುಂಬದಾಚೆಗಿನ ಹದಿಹರೆಯದ ಹುಡುಗರ ಸಂಪರ್ಕಕ್ಕೆ ಬಂದಾಗ ಈ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅವರ ಮನಸ್ಸು ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ವ್ಯವಹರಿಸಬೇಕು. ಅತಿ ಹೆಚ್ಚಿನ ಪ್ರೀತಿ ತೋರಿಸಿ ಒಲಿಸಿಕೊಳ್ಳಲು ಹೊರಟರೆ ಮುಂದೆ ಅಪಾಯ ಕಾದಿರುತ್ತದೆ.
Chanakya Niti: ನಿಮ್ಮ ಯಶಸ್ಸನ್ನು ಕದಿಯುವ ಸಹೋದ್ಯೋಗಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?