Asianet Suvarna News Asianet Suvarna News

ಕನಸಿನಲ್ಲಿ ಸಂಗಾತಿಗೆ ವಂಚಿಸಿದ್ರಾ? ಹಾಗಾದ್ರೆ ನೀವಿದನ್ನು ಓದಿ...

ಕನಸಿಗೆ ಯಾವ ಪರಿಧಿಯೂ ಇಲ್ಲ,ಯಾರ ಹಂಗೂ ಇಲ್ಲ. ಅದು ಹೇಗೆ ಬೇಕಾದ್ರೂ ನಮ್ಮ ಮುಂದೆ ಪ್ರತ್ಯಕ್ಷವಾಗಬಹುದು. ಆದ್ರೆ ಸಂಗಾತಿಯನ್ನು ವಂಚಿಸಿದ ಅಥವಾ ಅವರಿಂದ ವಂಚನೆಗೊಳಗಾಗುವ ಕನಸು ಬಿದ್ರೆ ಮನಸ್ಸಿಗೆ ಕಸಿವಿಸಿಯಂತೂ ಆಗೇಆಗುತ್ತೆ.

Why we see the dream of cheating the partner
Author
Bangalore, First Published Jul 29, 2020, 12:41 PM IST

ನಿಮ್ಮದು ಪರ್ಫೆಕ್ಟ್ ಮ್ಯಾಚ್. ಮೇಡ್ ಫಾರ್ ಈಚ್ ಅದರ್ ಜೋಡಿ. ಒಬ್ಬರು ಇನ್ನೊಬ್ಬರನ್ನು ಬಿಟ್ಟು ದೂರವಾಗೋ ಚಾನ್ಸೇ ಇಲ್ಲ. ಅಷ್ಟು ಹಚ್ಚಿಕೊಂಡಿರುತ್ತೀರಿ, ಅರಿತಿರುತ್ತೀರಿ. ಆದ್ರೂ ನೀವು ನಿಮ್ಮ ಸಂಗಾತಿಗೆ ವಂಚಿಸಿದಂತೆ ಅಥವಾ ನಿಮ್ಮ ಸಂಗಾತಿ ನಿಮಗೆ ವಂಚಿಸಿದಂತೆ ಕನಸು ಬೀಳಬಹುದು. ಈ ರೀತಿ ಕನಸು ಬಿದ್ದಾಗ ಬೆಚ್ಚಿ ಬೀಳುವ ಅನುಭವವಾಗೋದು ಸಹಜ. ಆದ್ರೆ ಇದನ್ನು ಗಂಭೀರವಾಗಿ ಪರಿಗಣಿಸಿ ಮನಸ್ಸು ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಾಗೆಯೇ ನಿಮ್ಮ ಸಂಗಾತಿ ಬಳಿ ಈ ವಿಷಯ ಪ್ರಸ್ತಾಪಿಸಿ ಗಲಾಟೆ ಮಾಡೋ ಅಥವಾ ಮನಸ್ಸು ಕೆಡಿಸುವ ಅಗತ್ಯವೂ ಇಲ್ಲ. ಇಂಥ ಕನಸುಗಳು ಬೀಳೋದು ಅಸಹಜವೇನಲ್ಲ. ಅಲ್ಲದೆ, ಕನಸು ಬಿದ್ದ ತಕ್ಷಣ ಅದೇನು ನಿಜವಾಗೋದಿಲ್ಲ. ಕನಸು ಅನ್ನೋದು ಬಿಡಿಸಲಾಗದ ಗಂಟು. ಸಂಬಂಧವಿಲ್ಲದ ವಿಷಯಗಳು, ವ್ಯಕ್ತಿಗಳನ್ನು ಎಳೆದು ತಂದು ನಿಮ್ಮ ಕಣ್ಣೆದುರು ನಿಲ್ಲಿಸೋ ತಾಕತ್ತಿರೋದು ಕನಸಿಗೆ ಮಾತ್ರ. ಕನಸಿನ ಹಿಂದೆ ಹಳೆಯ ನೆನಪುಗಳು, ಮನಸ್ಸಿನಲ್ಲಿ ಮೂಲೆಯಲ್ಲಿ ಅವಿತು ಕುಳಿತಿರೋ ಅಸಮಾಧಾನಗಳು, ಈಡೇರದ ಬಯಕೆಗಳು ಅಡಗಿರಬಹುದು. 

ಮಾತುಗಳು ಕಪ್ಪೆ ಚಿಪ್ಪಿನಲ್ಲಿ ಮುತ್ತಾಗಲಿ

-ಸಂಗಾತಿ ನಿಮ್ಮನ್ನು ವಂಚಿಸಿದ ಕನಸಿನ ಹಿಂದೆ ಈ ಕಾರಣಗಳಿರಬಹುದಾ?
ಇಂಥ ಕನಸು ಬೀಳೋದಕ್ಕೆ ಕಾರಣ ಹಲವಿರಬಹುದು. ಅದ್ರಲ್ಲಿ ಮುಖ್ಯವಾದದ್ದು ಅಸೂಯೆ. ಪ್ರೀತಿಯಿರೋ ಕಡೆ ಅಸೂಯೆಯೂ ಇರುತ್ತದೆ ಎನ್ನುತ್ತಾರೆ. ನಿಮ್ಮ ಸಂಗಾತಿ ತನ್ನ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಸಣ್ಣ ಅಸಮಾಧಾನವನ್ನು ಹುಟ್ಟು ಹಾಕಿರಬಹುದು. ಈ ಅಸಮಾಧಾನವೇ ಕನಸಿನ ರೂಪದಲ್ಲಿ ಸಂಗಾತಿ ನಿಮ್ಮನ್ನು ವಂಚಿಸಿದಂತೆ ಕಾಡಬಹುದು. ಇನ್ನೊಂದು ಕಾರಣ ಅನುಮಾನ. ಹೌದು, ನಿಮಗೆ ನಿಮ್ಮ ಸಂಗಾತಿಯ ವರ್ತನೆಯಿಂದ ಅವರ ಮೇಲೆ ಅನುಮಾನ ಮೂಡಲು ಪ್ರಾರಂಭವಾಗಿದ್ದರೂ ಇಂಥ ಕನಸು ಬೀಳುತ್ತೆ. ಸಂಗಾತಿಗೆ ಬೇರೆಯವರೊಂದಿಗೆ ಸಂಬಂಧವಿರೋದು ಅಥವಾ ಬೇರೆಯವರೆಡೆಗೆ ಆಕರ್ಷಣೆಯಿರುವ ಬಗ್ಗೆ ನಿಮಗೇನಾದ್ರೂ ಸಾಕ್ಷಿ ಸಿಕ್ಕಿದ್ರೆ ಅಥವಾ ಅವರು ರೆಡ್‍ಹ್ಯಾಂಡ್ ಹಾಕಿ ನಿಮ್ಮ ಕೈಲಿ ಸಿಕ್ಕಿ ಬಿದ್ದಿದ್ರೆ ಅವರ ಮೇಲೆ ನೀವಿಟ್ಟಿರುವ ನಂಬಿಕೆ ತಗ್ಗುತ್ತೆ. ಇದ್ರಿಂದ ಅವರು ನಿಮ್ಮಿಂದ ದೂರವಾಗುತ್ತಿರುವ ಕನಸು ಬೀಳೋದು ಸಹಜ. ಇನ್ನು ನಿಮ್ಮ ಮೇಲೆ ನಿಮಗೇ ನಂಬಿಕೆ ತಗ್ಗಿದಾಗ ಅಥವಾ ನಿಮ್ಮ ಸಂಗಾತಿಗೆ ನೀವು ಸರಿಯಾದ ಜೋಡಿಯಲ್ಲ ಎಂಬ ಭಾವನೆ ಮೂಡಿದಾಗ ಇಂಥ ಕನಸು ಬೀಳೋದು ಸಹಜ.

ದಾಂಪತ್ಯದಲ್ಲಿ ಮಾತೇ ಬಂಗಾರ, ಮೌನವೇ ಬೆಳ್ಳಿ! 

ಸಂಗಾತಿಗೆ ನೀವು ವಂಚನೆ ಮಾಡಿದಂತಹ ಕನಸು
ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಮೂಡಿದ್ರೆ ನೀವು ಅವರಿಗೆ ವಂಚಿಸುತ್ತಿರುವ ಕನಸು ಬೀಳುವ ಸಾಧ್ಯತೆಯಿದೆ. ನಿಮ್ಮ ಎಕ್ಸ್ ಜೊತೆಗಿನ ಸಂಬಂಧದೊಂದಿಗೆ ಈಗಿನ ಸಂಬಂಧವನ್ನು ತಳುಕು ಹಾಕಿಕೊಂಡು ನೋಡಿದಾಗ ಏನೋ ಮಿಸ್ ಆಗುತ್ತಿದೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಿದಾಗ ಕೂಡ ಇಂಥ ಕನಸು ಬೀಳುತ್ತೆ. ಪತಿ ಅಥವಾ ಪತ್ನಿಯೊಂದಿಗೆ ಸಂಬಂಧದ ಕುರಿತು ನಿಮಗೆ ನಿಮ್ಮದೇ ಆದ ಕಲ್ಪನೆಗಳಿರಬಹುದು, ಬಯಕೆಗಳಿರಬಹುದು. ಅವು ಈಡೇರದಿದ್ದಾಗ ಕೂಡ ಇಂಥ ಕನಸು ಬೀಳುತ್ತೆ. ಸಂಗಾತಿಯೆಡೆಗಿನ ಆಕರ್ಷಣೆ, ಸೆಳೆತ ತಗ್ಗುತ್ತಿದ್ರೆ, ಅವರೊಂದಿಗೆ ಜಾಸ್ತಿ ಸಮಯ ಕಳೆಯಲು ಮನಸ್ಸು ಹಿಂದೇಟು ಹಾಕುತ್ತಿದ್ರೆ ಅಂಥ ಸಮಯದಲ್ಲಿ ನೀವು ಅವರಿಂದ ದೂರವಾಗುತ್ತಿರುವ ಸೂಚನೆ ಕನಸಿನ ರೂಪದಲ್ಲಿ ಬರಬಹುದು. ನಿಮಗೆ ಬೇರೆ ವ್ಯಕ್ತಿಯೆಡೆಗೆ ಆಕರ್ಷಣೆ ಹೆಚ್ಚುತ್ತಿದ್ರೆ, ಅವರೊಂದಿಗೆ ಸಮಯ ಕಳೆಯಲು, ಮಾತನಾಡಲು ಮನಸ್ಸು ಹಪಾಹಪಿಸುತ್ತಿದ್ರೆ ನಿಮ್ಮ ಸಂಗಾತಿಗೆ ವಂಚನೆ ಮಾಡಿದಂತಹ ಕನಸು ಬೀಳಬಹುದು. ಕನಸು ನಮ್ಮ ಸುಪ್ತ ಮನಸ್ಸಿನಲ್ಲಿ ಅಡಗಿರುವ ಎಷ್ಟೋ ಭಾವನೆಗಳಿಗೆ ಮೂರ್ತ ರೂಪ ನೀಡುತ್ತದೆ. ಕೆಲವೊಮ್ಮೆ ನಿಮ್ಮ ಸದ್ಯದ ಪರಿಸ್ಥಿತಿಯೊಂದಿಗೆ ಸಂಬಂಧ ಹೊಂದಿರದ ಕನಸುಗಳು ಕೂಡ ಬೀಳಬಹುದು. ಕನಸು ಕಾಲ್ಪನಿಕ, ಅದ್ರಲ್ಲಿ ಕಾಣಿಸೋದು ಎಲ್ಲವೂ ವಾಸ್ತವವಲ್ಲ. ಸಂಗಾತಿಯೊಂದಿಗಿನ ಸಂಬಂಧದ ಬಗ್ಗೆ ನಿಮಗೆ ವಿಶ್ವಾಸ, ನಂಬಿಕೆ ದೃಢವಾಗಿದ್ದಾಗ ಇಂಥ ಕನಸುಗಳಿಗೆ ಡೋಂಟ್ ಕೇರ್ ಎನ್ನುತ್ತ ಮುಂದೆ ಸಾಗಿ. 

Why we see the dream of cheating the partner
 

Follow Us:
Download App:
  • android
  • ios