ನಿಜ. ಆದರೆ ಮಗು ಒಂದು ದಿನಕ್ಕೆ ಜವಾಬ್ದಾರಿಯುತ ಆಗಿಬಿಡುವುದಿಲ್ಲ, ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಯಾವುದೋ ಸ್ವತಂತ್ರ ವ್ಯಕ್ತಿತ್ವ ಬಂದು ಬಿಡುವುದಿಲ್ಲ ಅಥವಾ ಇಂತಿಷ್ಟುವರ್ಷ ಇಂತಿಷ್ಟುತಿಂಗಳು ಇಂತಿಷ್ಟುದಿನಕ್ಕೆ ತಿಳುವಳಿಕೆ ಎನ್ನುವುದು ಆವರಿಸಿಕೊಳ್ಳುವುದಿಲ್ಲ. ಅದಕ್ಕೆ ನಿರಂತರ ಕಲಿಕೆ ಬೇಕು, ಪ್ರತಿ ದಿನದ ಪ್ರತಿ ನಿಮಿಷದ ಕಲಿಕೆಯೂ ಮುಖ್ಯವಾಗಿ ಬಿಡುತ್ತದೆ.

ಉತ್ತಮ ಪೇರೆಂಟಿಂಗ್‌ ಅಥವಾ ಪೋಷಣೆ ಎನ್ನುವುದು ಒಂದು ಕಲೆ. ನಾವು ಬೆಳಗ್ಗೆಯಿಂದ ರಾತ್ರಿಯ ತನಕ ಮಕ್ಕಳೊಂದಿಗೆ ಎಷ್ಟೆಲ್ಲ ಮಾತನಾಡುತ್ತೇವಲ್ಲ, ನಿಮಗೆ ಗೊತ್ತಾ ಹಾಗೆ ಮಾಡುವಾಗೆಲ್ಲ ಅದು ಬರಿಯ ಮಾತಾಗಿರುವುದಿಲ್ಲ, ಅವರೊಳಗೆ ವ್ಯಕ್ತಿತ್ವದ, ಯೋಚನೆಯ ಬೀಜವನ್ನು ಬಿತ್ತುತ್ತಿರುತ್ತೇವೆ. ಅವೇ ಮುಂದೆ ಬಲಿತು ಬೆಳೆದು ಹೆಮ್ಮರವಾಗಿ ಬಿಡುತ್ತದೆ. ಮಕ್ಕಳಿಗಾಗಿ ಎಷ್ಟನ್ನೆಲ್ಲ ಮಾಡುವ ನಾವು ಇಷ್ಟುಚಿಕ್ಕ ಆದರೆ ಅಷ್ಟೇ ಮುಖ್ಯವಾದ ವಿಷಯದ ಅರಿವು ನಮಗೆ ಇರುವುದಿಲ್ಲ ಅಥವಾ ಮರೆತೇ ಬಿಡುತ್ತೇವೆ. ಹಾಗಾದರೆ ಮಕ್ಕಳೊಂದಿಗೆ ಹೇಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಬೇಕು? ಮಾತುಗಳ ಸಣ್ಣ ಸಣ್ಣ ಸೂಕ್ಮತೆಗಳು ಆದರೆ ಅದು ಬೀರುವ ಪರಿಣಾಮ ಮಾತ್ರ ದೊಡ್ಡದಿರುತ್ತದೆ.

ನಾವು ಹೇಳಬಹುದಾದ ವಿಷಯದ ಹೇಳಬೇಕಾದ ರೀತಿಯನ್ನು ಬದಲಾಯಿಸಿಕೊಂಡರೆ ಮಗುವಿನ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮವನ್ನು ಬೀರಬಹುದು. ಅದು ಹೇಗೆ? ಇದಕ್ಕಾಗಿಯೇ ವರ್ಕ್ಶಾಪ್‌ಗಳು ನಡೆಯುತ್ತವೆ, ಹಲವು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಿಬಿಟಿ ತರಬೇತಿಗಳು ನಡೆಯುತ್ತವೆ. ಇಲ್ಲಿ ಇಲ್ಲಿ ಕೆಲವು ಸರಳ ಸುಲಭ ಎಲ್ಲಾ ಪಾಲಕರಿಗೂ ಅನುಸರಿಸಲು ಸಾಧ್ಯವಿರುವಂತಹ ಕೆಲವು ಸೂಕ್ಷ್ಮ ಸಲಹೆ ಸೂಚನೆಗಳಿವೆ. ನೆನಪಿನಲ್ಲಿರಬೇಕಾದ್ದು ಏನೆಂದರೆ ಪ್ರತಿಯೊಂದು ಮಗುವೂ ಭಿನ್ನ, ಮತ್ತು ಮಗುವಿನೊಂದಿಗೆ ಮಾತಾಡುವ ನಡೆದುಕೊಳ್ಳುವ ರೀತಿ ಮಗುವಿನ ವಯಸ್ಸು, ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಆಧರಿಸಿರುತ್ತದೆ.

ಹರೆಯದ ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಯಾಗಿಸಲು ಕೆಲ ಟಿಪ್ಸ್ 

1. ಬೇಡ ಎನ್ನುವ ಪದ ಬೇಡ:

ರಾಹುಲ್‌ ಮತ್ತು ಸಿದ್ಧಾಂತ ಪಾರ್ಕ್ನಲ್ಲಿ ಹತ್ತಲಿಕ್ಕಾಗಿಯೇ ಲಭ್ಯವಿರುವ ಗಡಿಯಾರದ ತುದಿಯಲ್ಲಿರುತ್ತಾರೆ. ಹೆಚ್ಚು ಎನ್ನುವಷ್ಟುಜೋರಾಗಿ ಗಾಳಿ ಬೀಸುತ್ತದೆ. ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತು ಮಾತನಾಡುತ್ತಿರುವ ರಾಹುಲ್‌ ಅಮ್ಮ, ‘ರಾಹುಲ್‌ ಗಟ್ಟಿಯಾಗಿ ಹಿಡಿದಿಕೊ’ ಅಂದರೆ ಸಿದ್ಧಾಂತ ಅಮ್ಮ, ‘ಬೀಳಬೇಡ’ ಎನ್ನುತ್ತಾಳೆ. ಪರಿಣಾಮ? ರಾಹುಲ್‌ ಅಲ್ಲಿಯೇ ಬಿಗಿಯಾಗಿ ಹಿಡಿಕೊಂಡು ಇರುತ್ತಾನೆ ಮತ್ತು ಸಿದ್ಧಾಂತ ಬೀಳುತ್ತಾನೆ. ಯಾಕೆ, ರಾಹುಲನಿಗೆ ಸ್ಪಷ್ಟಸಂದೇಶ ಸಿಕ್ಕಿದೆ ಮೆದುಳು ಸರಿಯಾಗಿ ಗ್ರಹಿಸಿದೆ. ಸಿದ್ಧಾಂತನಿಗೆ ಬೀಳು ಎನ್ನುವ ಸಂದೇಶ ಸಿಕ್ಕಿ ಮತ್ತೆ ಅವನ ಮೆದುಳು ಅದನ್ನು ಬೇಡ ಎಂದು ಗ್ರಹಿಸಬೇಕು. ಸಂದೇಶ ಸ್ಪಷ್ಟಇಲ್ಲ ಅದನ್ನು ಕಿವಿಯಿಂದ ರವಾನಿಸಿ ಮೆದುಳು ಗೃಹಿಸಿ ದೇಹ ಅನುಸರಿಸುವಷ್ಟರಲ್ಲಿ ಅವನು ಬಿದ್ದಿದ್ದಾನೆ.

ನಾವು ಮಕ್ಕಳಿಗೆ ದಿನ ಪ್ರತಿದಿನದಲ್ಲಿ ಒಂದಿಷ್ಟನ್ನು ಬೇಡ ಎಂದು ಹೇಳಲೇ ಬೇಕಾಗುತ್ತದೆ. ಅಲ್ಲಿ ಓಡಬೇಡ, ಇಲ್ಲಿ ಹಾರಬೇಡ, ಕುಣಿಯಬೇಡ, ಹತ್ತಬೇಡ ಇತ್ಯಾದಿ. ಬೇಡ ಬೇಡ ಎನ್ನುವುದು ನಕಾರಾತ್ಮಕ ಸಂದೇಶವಾಗಿ ಮಗುವೊಂದನ್ನು ತಲುಪುತ್ತದೆ. ಆದಷ್ಟುಮಾತನಾಡುವಾಗ ಈ ಬೇಡ ಎನ್ನುವ ಪದವನ್ನು ಕಡಿಮೆ ಬಳಸಬೇಕು. ಓಡಬೇಡ ಎನ್ನುವಲ್ಲಿ

ನಿಧಾನವಾಗಿ ನಡಿ ಮಗು ಎನ್ನಬಹುದು. ಹತ್ತಬೇಡ ಎಂದು ಹೇಳಬೇಕಿದ್ದಲ್ಲಿ, ಮಗು ಕೆಳಗೆ ಚೆನ್ನಾಗಿದೆ ಆಡಬಹುದಲ್ಲ ಎನ್ನಬಹುದು. ಹೀಗೆ ಬೇಡ ಬೇಡ ಎನ್ನುವ ಪದಗಳು ಮಗುವಿನ ಸುಪ್ತ ಮನಸಿನಲ್ಲಿ ಬಲವಾಗಿ ಕುಳಿತು ಬಿಡುತ್ತದೆ ಮತ್ತು ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.

ಸೋಷಿಯಲ್ ಮೀಡಿಯಾ ಬಳಸಬೇಡಿರೆಂದು ಮಕ್ಕಳಿಗೆ ಬೈಯ್ಯುವ ಮುನ್ನ ಇದನ್ನು ಓದಿ!

2. ನಿರ್ದೇಶಿಸಬೇಡಿ, ವಿವರಿಸಿ

ಮಗುವಿಗೆ ಏನೇ ಹೇಳುವುದಿದ್ದರೂ ಬರಿದೇ ನಿರ್ದೇಶನ ನೀಡಬಾರದು, ಬದಲಾಗಿ ನಾವು ಯಾಕೆ ಹಾಗೆ ಹೇಳಿದ್ದು ಎನ್ನುವ ಕಾರಣವನ್ನು ಜೊತೆಗೆ ಹೇಳಲೇಬೇಕು. ಉದಾಹರಣೆಗೆ ಪ್ಲಗ್‌ ಮುಟ್ಟಬಾರದು ಎಂದು ಹೇಳುವ ಬದಲು ಅದನ್ನು ಯಾಕೆ ಮುಟ್ಟಬಾರದು ಎನ್ನಬೇಕು. ಟಿ.ವಿ. ನೋಡಿದ್ದು ಸಾಕು ಆಫ್‌ ಮಾಡಿ ಬಿಡುತ್ತೇನೆ ಎನ್ನುವ ಬದಲು ಅದರ ಕಾರಣವನ್ನು ಹೇಳಬೇಕು, ಮಗು ಟಿ.ವಿ ನೋಡಲು ನಾವು ಇಟ್ಟುಕೊಂಡ ಸಮಯ ಮುಗಿಯಿತು ಎನ್ನಬಹುದು, ಟಿ.ವಿ ಹೆಚ್ಚು ಹೊತ್ತು ನೋಡುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ ಮತ್ತು ಮೆದುಳು ಸುಸ್ತಾಗುತ್ತದೆ ಎನ್ನಬಹುದು.

ಹೀಗೆ ಹೇಳುವುದರಿಂದ ಮಗುವು ಎಲ್ಲವನ್ನೂ ಅರ್ಥ ಮಾಡಿಕೊಂಡು ತಿಳಿದುಕೊಂಡು ಹಾಗೆ ನಡೆದುಕೊಳ್ಳುತ್ತದೆ ಅಂತ ಅಲ್ಲ. ಆದರೆ ಮಗುವಿಗೆ ತನ್ನನ್ನು ಯಾರೋ ನಿಯಂತ್ರಿಸುತ್ತಾರೆ ಎನ್ನುವ ಭಾವವು ಮಗುವಿನ ಮಾನಸಿಕ ಬೆಳವಣಿಗೆವನ್ನು ಕುಗ್ಗಿಸುತ್ತದೆ. ಕಾರಣ ವಿವರಿಸಿದಾಗ ಮಗುವಿಗೆ ಹಾಗೆ ಭಾಸವಾಗುವುದಿಲ್ಲ. ಇನ್ನೊಂದು ಎಂದರೆ ಮಗು ಎಲ್ಲವನ್ನು ತಾರ್ಕಿಕವಾಗಿ ನೋಡಲು ಯೋಚಿಸಲು ಕಲಿತುಕೊಳ್ಳುತ್ತದೆ.

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹಾಗಿದ್ರೆ ಇದನ್ನೊಮ್ಮೆ ಓದಿ 

3. ಸ್ಥಿರವಾಗಿರಿ

ಮಕ್ಕಳೊಂದಿಗೆ ಬಿಗಿಯಾಗಿರಬೇಕೆ ಅಥವಾ ಸಲಿಗೆಯಿಂದ ಇರಬೇಕೆ.. ಇದು ಎಲ್ಲಾ ಪಾಲಕರಿಗೂ ಕಾಡುವ ಪ್ರಶ್ನೆ. ಆದರೆ ಬಿಗುವಾಗಿಯೂ ಇರದೇ, ಸಲಿಗೆ ಸದರವಾಗಿಯೂ ಇರದೇ ಮೃದುವಾಗಿ ಆದರೆ ಸ್ಥಿರವಾಗಿರಬೇಕು. ಮನೆಯಲ್ಲಿ ಅಥವಾ ಮಗುವಿನ ಬಗೆಗೆ ಒಂದಷ್ಟುನಿಯಮಗಳು ಅಂತ ಎಲ್ಲಾ ಮನೆಯಲ್ಲೂ ಇರುತ್ತದೆ. ಒಂದು ನಿಯಮ ಅಂತ ಮಾಡಿದ ಮೇಲೆ (ಮುಖ್ಯ ಕಾರಣಗಳ ಹೊರತಾಗಿ) ಅದನ್ನು ಮುರಿಯಬಾರದು. ಉದಾಹರಣೆಗೆ ಚಾಕಲೇಟ್‌ಅನ್ನು ಊಟವಾದ ನಂತರದಲ್ಲಿ ಕೊಡುವುದು ಎಂದಿದ್ದರೆ ಅದನ್ನು ಮುರಿಯಬಾರದು. ಟಿ.ವಿ. ಗೆ ಅಥವಾ ಮೊಬೈಲ್‌ಗೆ ಮನೆಯಲ್ಲಿ ಇಂತಿಷ್ಟುಸಮಯ ಅಂತ ನಿಗದಿ ಮಾಡಿದ್ದರೆ ಪಾಲಕರು ಅದನ್ನು ಕಾರ್ಯಗತ ಮಾಡುವಲ್ಲಿ ಹಿಂದೆ ಬೀಳಬಾರದು. ಮಗು ಅಳುತ್ತದೆ, ಹಠ ಮಾಡುತ್ತದೆ ಅಂತಹ ಸಮಯದಲ್ಲಿ ನಮ್ಮನ್ನು ಮೆತ್ತಗಾಗಿಸಲು ತನ್ನ ಕಾರ್ಯ ಸಾಧನೆಗೆ ಬಳಸುತ್ತಿದೆಯಾದರೆ ಬೈಯದೆ, ಕಿರುಚಿ ಕೂಗಾಡದೆ ಸಣ್ಣ ಮಟ್ಟಿಗಿನ ಇಗ್ನೋರ್‌ ಮಾಡಬೇಕು. (ಕೆಲವು ನಿಮಿಷಗಳವರೆಗೆ ಮಾತ್ರ) ಮತ್ತು ಬಿಗಿಯಾಗಿ ಇರುವುದಕ್ಕೂ ಸ್ಥಿರವಾಗಿ ಇರುವುದಕ್ಕೂ ವ್ಯತ್ಯಾಸ ಪಾಲಕರಿಗೆ ಗೊತ್ತಿರಬೇಕು.

4. ಆಯ್ಕೆಗಳನ್ನು ನೀಡಿ, ಅಪ್ಪಣೆಗಳನ್ನಲ್ಲ

ಸೀದಾ ಮಗುವಿಗೆ ಅಪ್ಪಣೆಗಳನ್ನು ನೀಡುವ ಬದಲು ಮಗುವಿನ ವಯಸ್ಸಿಗನುಗುಣವಾಗಿ ಆಯ್ಕೆಗಳನ್ನು ನೀಡಬೇಕು. ಅದು ಮಾಡು, ಇದೇ ತೆಗೆದುಕೊ ಎನ್ನುವ ಬದಲು ಮಗುವಿನ ಅಭಿಪ್ರಾಯವನ್ನು ಕೇಳಬೇಕು. ನಿಜ, ಎಲ್ಲಾ ಆಯ್ಕೆಗಳನ್ನು ಮಗುವಿಗೆ ನೀಡಲಾಗುವುದಿಲ್ಲ. ನಮ್ಮ ಪರಿಮಿತಿಯಲ್ಲಿ ಹೆಚ್ಚು ಹೆಚ್ಚು ಆಯ್ಕೆಗಳನ್ನು ನೀಡುತ್ತಾ ಹೋಗಬೇಕು. ಬಟ್ಟೆಅಂಗಡಿಯಲ್ಲಿ ಬಟ್ಟೆತೆಗೆದುಕೊಳ್ಳಬೇಕು ಎಂದುಕೊಳ್ಳಿ ಅಳತೆ, ಬೆಲೆ, ಮಟ್ಟಎಲ್ಲವನ್ನೂ ನೋಡಿ ಆಯ್ದ ಮೂರು ನಾಲ್ಕು ಬಟ್ಟೆಗಳಲ್ಲಿ ಮಗುವಿನ ಆಯ್ಕೆಗೆ ಬಿಡಬಹುದು. ವಯಸ್ಸಿಗನುಗುಣವಾಗಿ ಹೆಚ್ಚು ಹೆಚ್ಚು ಆಯ್ಕೆ ನಿರ್ಧಾರಗಳನ್ನು ಮಗುವಿಗೆ ಬಿಡುತ್ತಾ ಅಗತ್ಯವಿದ್ದಲ್ಲಿ ಸಲಹೆ ಸೂಚನೆ ಸಹಾಯ ಒದಗಿಸಬೇಕು. ಮಗುವಿಗೆ ಹೀಗೆ ಮಾಡಿದಾಗ ಹೆಚ್ಚು ಅನುಭವ ಧಕ್ಕುತ್ತದೆ. ಮಗು ಪ್ರಾಯೋಗಿಕವಾಗಿ ಹೆಚ್ಚು ಕಲಿಯುತ್ತಾ ಹೋಗುತ್ತದೆ.

5. ಹೀಯಾಳಿಸಬೇಡಿ, ಪ್ರೋತ್ಸಾಹಿಸಿ

ಹೆಚ್ಚಾಗಿ ನಾವು ಕೇಳುತ್ತಿರುತ್ತೇವೆ, ಪಾಲಕರು ಸಾಮಾನ್ಯವಾಗಿ ‘ಐ ಟೋಲ್ಡ್‌ ಯೂ ಸೋ.. ನಾನು ಹೇಳಿರಲಿಲ್ಲವಾ’ ಎಂದು ಚುಚ್ಚಿ ಚುಚ್ಚಿ ಹೇಳುತ್ತಾ ಇರುತ್ತಾರೆ. ಮಗುವಿಗೆ ತಿಳಿಯಲಿ ಎಂದು ಹೇಳುವ ಮಾತುಗಳು ಅವರ ಆತ್ಮವಿಶ್ವಾಸವನ್ನೇ ಘಾಸಿಗೊಳಿಸಿರುತ್ತದೆ. ಮಗುವನ್ನು ಯಾವ ಕಾರಣಕ್ಕೂ ಹೀಯಾಳಿಸಬಾರದು. ಅಗತ್ಯವಿದ್ದಲ್ಲಿ ನೇರವಾಗಿ ಒಂದೆರಡು ಮಾತು ಬೈದರೂ ನಡೆದೀತು, ಆದರೆ ಹಂಗಿಸುವಿಕೆ ಮತ್ತು ಹೀಯಾಳಿಕೆಗಳು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಅವರಲ್ಲಿ ಕೀಳರಿಮೆಯನ್ನು ತುಂಬುತ್ತದೆ. ಉದಾಹರಣೆಗೆ ಮಗು ಒಂದು ಗ್ಲಾಸ್‌ ಒಡೆಯಿತು ಅಂದುಕೊಳ್ಳಿ, ತಕ್ಷಣ ನಾನು ಹೇಳಲಿಲ್ಲವೇ, ನಿನಗೆ ಎಚ್ಚರಿಕೆಯಿಲ್ಲ. ನೀನು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ ಎಂದು ಇಂತಹ ಮಾತುಗಳನ್ನು ಪೋಷಕರು ಆಡುತ್ತಿರುತ್ತಾರೆ, ಖಂಡಿತ ಸಲ್ಲ. ನೆನಪಿರಲಿ, ಒಡೆದು ಹೋದ ಗ್ಲಾಸನ್ನು ದುಡ್ಡು ಕೊಟ್ಟು ತರಬಹುದು. ಆದರೆ ಆತ್ಮವಿಶ್ವಾಸ ಯಾವ ದುಡ್ಡಿಗೂ ಸಿಗಲಾರದು.

6. ಮಕ್ಕಳ ಮುಂದೆ ಜಗಳ ಬೇಡ, ಚರ್ಚೆ ನಡೆಯಲಿ

ಮಕ್ಕಳ ಎದುರು ಜಗಳ ಕೂಡದು ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೆ ಸಿಟ್ಟು ನೆತ್ತಿಗೆ ಏರಿದಾಗ, ಭ್ರಮೆ ಕವಿದಾಗ ಮನಸು ಅಂಕೆ ತಪ್ಪಿದಾಗ ಮಾತು ಹಿಡಿತ ತಪ್ಪುತ್ತದೆ. ಆಡಬಾರದ ಮಾತುಗಳನ್ನು ಆಡಿಬಿಟ್ಟಿರುತ್ತೇವೆ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಅದು ಮಗುವನ್ನು ಘಾಸಿಗೊಳಿಸಿಬಿಟ್ಟಿರುತ್ತದೆ. ಹೀಗಾಗಿ ಜಗಳಗಳನ್ನು ಇಬ್ಬರೇ ಕುಳಿತು ಪರಿಹರಿಸಿಕೊಳ್ಳಬೇಕು. ಅಮ್ಮನನ್ನು ಹೀಯಾಳಿಸುವ ಅಪ್ಪನನ್ನು ಮಗು ಪ್ರೀತಿಸಲಾರದು, ಅಪ್ಪನ ಬಗೆಗೆ ದೂರನ್ನೇ ಹೇಳುತ್ತಿದ್ದರೆ ಮಗು ಇಬ್ಬರನ್ನೂ ಗೌರವಿಸಲಾರದು. ಜಗಳ ಬೇಡ ಎಂದ ಮಾತ್ರಕ್ಕೆ ಚರ್ಚೆ ಮಾಡಬಾರದು ಅಂತಲ್ಲ. ಅಗತ್ಯವಾಗಿ ಚರ್ಚೆ ನಡೆಯಬೇಕು ಅದೂ ಮಕ್ಕಳ ಎದುರಿಗೆ. ಸಾಧ್ಯವಿದ್ದಲ್ಲೆಲ್ಲ ಮಕ್ಕಳನ್ನೂ ಭಾಗಿಯಾಗಿಸಬೇಕು. ಉದಾಹರಣೆಗೆ ವೀಕೆಂಡ್‌ ಎಲ್ಲಿಗೆ ಹೋಗಬೇಕು, ಮನೆಗೆ ತರುವ ವಸ್ತುಗಳ ಬಗೆಗೆ, ಅಥವಾ ಸಾಮಾನ್ಯ ವಿಷಯಗಳ ಬಗೆಗೆ ಅಗತ್ಯವಾಗಿ ಮಗುವನ್ನೂ ಭಾಗಿಯಾಗಿಸಿಕೊಳ್ಳಬೇಕು. ಚರ್ಚೆಯಲ್ಲಿ ಪಾಲ್ಗೊಂಡಾಗ ಮಗುವಿಗಿನ ಯೋಚನಾ ಶಕ್ತಿ ಬೆಳೆಯುತ್ತ ಹೋಗುತ್ತದೆ, ಬೇರೆ ಬೇರೆ ಕೋನಗಳಿಂದ ಯೋಚಿಸುವುದನ್ನು ಮಗು ಕಲಿಯುತ್ತದೆ.

ಕಷ್ಟವೇನಿಲ್ಲ, ಸ್ವಲ್ಪ ಸಹನೆ ವಿವೇಚನೆ ಶ್ರದ್ಧೆ ಅಷ್ಟೇ ಬೇಕಿರುವುದು. ಪ್ರಯತ್ನಿಸಿ, ಪರಿಣಾಮ ಖಂಡಿತ ಒಳ್ಳೆಯದಿರುತ್ತದೆ.