ಮಾತಿನಷ್ಟೇ ಮೌನಕ್ಕೂ ಅರ್ಥವಿದೆ.ಅದ್ರಲ್ಲೂ ಸಂಬಂಧದಲ್ಲಿ ಮೌನದ ಮಹತ್ವ ಅರಿತುಕೊಳ್ಳೋದು ತುಂಬಾನೇ ಮುಖ್ಯ. ಪತಿ ಸದಾ ನನ್ನೊಂದಿಗೆ ಮಾತ್ರ ಮಾತನಾಡಬೇಕು ಎಂದು ಪತ್ನಿ ನಿರೀಕ್ಷಿಸೋದು ತಪ್ಪು, ನನಗಿಷ್ಟ ಬಂದಾಗಲೆಲ್ಲ ನಾನು ಮಾತಾಡುತ್ತೇನೆ,ಅವಳೂ ಮಾತಾಡಬೇಕು ಎಂದು ಪತಿ ಬಯಸೋದು ತಪ್ಪು. ದಾಂಪತ್ಯದಲ್ಲಿ ಮಾತಿನಷ್ಟೇ ಮೌನಕ್ಕೂ ಸ್ಥಾನ ನೀಡೋದು ಅಗತ್ಯ. ಆಫೀಸ್‍ನಿಂದ ಮನೆಗೆ ಹಿಂತಿರುಗಿದ ತಕ್ಷಣ ಪತಿ ಮೌನವಾಗಿದ್ರೆ ಅದರ ಹಿಂದಿನ ಕಾರಣವನ್ನು ಗ್ರಹಿಸುವ ಜ್ಞಾನ ಪತ್ನಿಗಿರಬೇಕು. ಹಾಗೆಯೇ ತಿಂಗಳ ಅತಿಥಿಯಾದ ಆ ದಿನಗಳಲ್ಲಿ ಮೂಡ್ ಸರಿಯಿಲ್ಲದೆ ಮೌನಕ್ಕೆ ಮೊರೆ ಹೋಗಿರುವ ಪತ್ನಿಯನ್ನು ಅರ್ಥ ಮಾಡಿಕೊಳ್ಳುವ ಕಾಮನ್‍ಸೆನ್ಸ್ ಪತಿಗಿರಬೇಕು. ಆದ್ರೆ ಮೌನ ಯಾವ ಸಂದರ್ಭದಲ್ಲಿರಬೇಕು, ಎಷ್ಟಿರಬೇಕು ಎಂಬ ಅರಿವು ದಂಪತಿಗಳಿಬ್ಬರಿಗೂ ಇದ್ರೆ ಮಾತ್ರ ಆ ಸಂಬಂಧದಲ್ಲಿ ನೆಮ್ಮದಿ ನೆಲೆಸಲು, ಬಾಂಧವ್ಯ ಗಟ್ಟಿಗೊಳ್ಳಲು ಸಾಧ್ಯ. ಅದ್ರಲ್ಲೂ ಕೆಲವು ವಿಧದ ಮೌನಗಳು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಆದಕಾರಣ ಸಂಬಂಧ ಕೆಡಿಸುವ ಮೌನಗಳ ಬಗ್ಗೆ ಒಂಚೂರು ತಿಳಿವಳಿಕೆ ಹೊಂದಿರೋದು ಒಳ್ಳೆಯದು.

ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ

ಸೇಡಿನ ಮೌನ
ಪತಿ-ಪತ್ನಿ ಎಂದ ಮೇಲೆ ಅಲ್ಲಿ ಜಗಳ, ಮುನಿಸು ಎಲ್ಲವೂ ಕಾಮನ್. ಜಗಳದ ನಡುವೆ ಪತ್ನಿ ‘ನಿಮ್ಮನ್ನು ಮದುವೆಯಾಗಿ ತಪ್ಪು ಮಾಡಿದೆ’ ಎಂಬ ಮಾತನ್ನು ಸಿಟ್ಟಿನ ಭರದಲ್ಲಿ ಆಡಿರುತ್ತಾಳೆ. ಪತಿಯ ಇಗೋವನ್ನು ಹರ್ಟ್ ಮಾಡಲು ಇಷ್ಟು ಸಾಕಲ್ಲವೆ? ಇದನ್ನೇ ನೆಪ ಮಾಡಿಕೊಂಡು ಮೌನದ ಮೊರೆ ಹೋಗುತ್ತಾನೆ. ಇನ್ನು ಪತ್ನಿ ಕೂಡ ಒಂದೆರಡು ಬಾರಿ ಮಾತನಾಡಿಸಿ ಸುಮ್ಮನಾಗುತ್ತಾಳೆ. ಈ ಮೌನ ಒಂದೆರಡು ದಿನ ಮುಂದುವರಿದ್ರೆ ಓಕೆ, ಆದ್ರೆ ವಾರ ಕಳೆದ್ರೂ ಮಾತಿನ ರೂಪ ಪಡೆದಿಲ್ಲವೆಂದ್ರೆ ಸಂಬಂಧದಲ್ಲೊಂದು ಬಿರುಕು ಮೂಡುವ ಮುನ್ಸೂಚನೆ. ಇಂಥ ಸೈಲೆಂಟ್ ಟ್ರೇಟ್‍ಮೆಂಟ್‍ನಿಂದ ಸಂಗಾತಿಗೆ ಬುದ್ಧಿ ಬರುತ್ತೆ ಅಥವಾ ಅವರು ಇನ್ನಷ್ಟು ಹತ್ತಿರವಾಗುತ್ತಾರೆ ಅನ್ನೋದು ತಪ್ಪು ಕಲ್ಪನೆ. ವ್ಯಕ್ತಿ ಅಥವಾ ಪರಿಸ್ಥಿತಿಯನ್ನು ನಿರ್ಲಕ್ಷಿಸೋದ್ರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದಾಗೋದೇ ಹೆಚ್ಚು. ನೀವು ಮೌನಕ್ಕೆ ಶರಣಾಗೋದ್ರಿಂದ ನಿಮ್ಮ ಸಂಗಾತಿ ತಲೆಯಲ್ಲಿ ಗೊಂದಲ, ನಕಾರಾತ್ಮಕ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೆ, ನಿಮ್ಮ ಮೌನ ಸಂಗಾತಿಗೆ ಮಾತ್ರವಲ್ಲ, ನಿಮಗೂ ನೋವು ನೀಡುತ್ತೆ. ಏನೇ ಗೊಂದಲ, ತಪ್ಪು ಕಲ್ಪನೆಗಳಿದ್ರೆ ಮಾತಿನ ಮೂಲಕ ಸರಿಪಡಿಸಿಕೊಳ್ಳಬೇಕೇ ಹೊರತು ಮೌನದ ಮೊರೆ ಹೋದ್ರೆ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚುತ್ತೆ.

5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿ ನಿವೃತ್ತಿಯಾದ ವೇಶ್ಯೆ!

ಹೇಳಲು ಏನೂ ಉಳಿದಿಲ್ಲ
ಇಬ್ಬರ ನಡುವೆ ಮಾತನಾಡಲು ಏನೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಅಂದ್ರೆ ಸಂಬಂಧಕ್ಕದು ರೆಡ್ ಅಲರ್ಟ್. ಇಬ್ಬರ ನಡುವೆ ಆಕರ್ಷಣೆ, ಕಮೀಟ್‍ಮೆಂಟ್ ಕಡಿಮೆಯಾದಾಗ ಮಾತ್ರ ಇಂಥ ಸ್ಥಿತಿ ನಿರ್ಮಾಣವಾಗುತ್ತೆ. ಇಬ್ಬರೂ ಆಫೀಸ್‍ನಿಂದ ಸಂಜೆ ಮನೆಗೆ ಹಿಂತಿರುಗಿದ ಬಳಿಕ ಕೂತು ಮಾತನಾಡಲು, ಹಂಚಿಕೊಳ್ಳಲು ವಿಷಯವೇ ಇಲ್ಲವೆಂದ್ರೆ ನಿಮ್ಮಿಬ್ಬರ ನಡುವೆ ನಂಬಿಕೆ, ಆತ್ಮೀಯತೆ ಕಡಿಮೆಯಾಗಿದೆ ಎಂದೇ ಅರ್ಥ. ಈ ಸ್ಥಿತಿ ಒಮ್ಮೆಗೆ ನಿರ್ಮಾಣವಾಗೋದಿಲ್ಲ, ಬದಲಿಗೆ ನಿಧಾನವಾಗಿ ಇಬ್ಬರ ನಡುವಿನ ಸಂವಹನ ತಗ್ಗುತ್ತ ಬಂದು ಒಂದು ಹಂತದಲ್ಲಿ ಸಂಪೂರ್ಣ ನಿಂತು ಬಿಡುತ್ತೆ. ಹೀಗಾಗಿ ಹಂಚಿಕೊಳ್ಳಲು ಏನೂ ಇಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಮೂಡುವ ಮುನ್ನ ಎಚ್ಚೆತ್ತುಕೊಳ್ಳೋದು ಅಗತ್ಯ. ಆಫೀಸ್‍ನಲ್ಲಿ ಬಾಸ್‍ನೊಂದಿಗಾದ ಮಾತುಕತೆ, ರಸ್ತೆಯಲ್ಲಿ ಸಿಕ್ಕ ಅಜ್ಜಿ ಹೀಗೆ ಯಾವ ವಿಷಯವಾದ್ರೂ ಸರಿ ಸಂಗಾತಿಯೊಡನೆ ಮಾತನಾಡಿ. ನಿಮ್ಮ ಮಾತು ಅದೆಷ್ಟೇ ನಾನ್‍ಸೆನ್ಸ್ ಅಥವಾ ಸಿಲ್ಲಿ ಅನ್ನಿಸಿದ್ರೂ ಪರ್ವಾಗಿಲ್ಲ. ಸಂಬಂಧದಲ್ಲಿ ಮಾತೇ ಎಲ್ಲ ಎಂಬುದು ನೆನಪಿರಲಿ.

ಸೋಷಿಯಲ್ ಮೀಡಿಯಾದಲ್ಲೇ ದಿನ ಕಳೆಯುವ ಜನ ನೀವಾ?

ಎಲ್ಲದಕ್ಕೂ ಹೂಂಗುಟ್ಟಿ ಸುಮ್ಮನಾಗೋದು
ಹೆಂಡ್ತಿ ಏನೇ ಹೇಳಿದ್ರೂ ಗಂಡ ಹೂಂಗುಟ್ಟಿ ಸುಮ್ಮನಾದ್ರೆ ಅಥವಾ ಗಂಡನ ಮಾತಿಗೆ ಹೆಂಡ್ತಿ ಹಾಗೇ ಮಾಡಿದ್ರೆ ಮಾತು ಮುಂದುವರಿಯದೆ ಕೊನೆಯಾಗುತ್ತೆ. ಅದೊಂದು ಔಪಚಾರಿಕ ಮಾತುಕತೆಯಾಗಿಯೇ ಉಳಿಯುತ್ತೆ. ಕಾದಾಡಿ ಕಾದಾಡಿ ಸಾಕಾಗಿದೆ, ಈ ಜಗಳವೂ ಬೇಡ ಏನೂ ಬೇಡ ಎಲ್ಲದಕ್ಕೂ ಓಕೆ ಎಂದು ಸುಮ್ಮನಿದ್ದು ಬಿಡೋಣ ಎಂಬ ತೀರ್ಮಾನಕ್ಕೆ ಕೆಲವರು ಬಂದುಬಿಡುತ್ತಾರೆ. ಆದ್ರೆ ಈ ರೀತಿ ಮಾಡೋದ್ರಿಂದ ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳು ಸಂಗಾತಿಗೆ ತಿಳಿಯೋದಿಲ್ಲ. ಇಬ್ಬರ ನಡುವೆ ಸಂವಹನ ಸಮರ್ಪಕವಾಗಿ ನಡೆಯೋದಿಲ್ಲ. ಇದ್ರಿಂದ ಇಬ್ಬರ ನಡುವಿನ ವೈಮನಸ್ಸು ಇನ್ನಷ್ಟು ಹೆಚ್ಚಿ ರಿಪೇರಿ ಮಾಡಲಾಗದಷ್ಟು ದೊಡ್ಡ ಕಂದಕ ಸೃಷ್ಟಿಯಾಗಬಹುದು.

ಡೋಂಟ್ ಕೇರ್ ಪ್ರವೃತ್ತಿ
ಸಂಗಾತಿ ಮೆಸೇಜ್‍ಗೆ ರಿಪ್ಲೈ ಮಾಡದಿರೋದು, ಕಾಲ್ ಮಾಡಿದ್ರೆ ಕಟ್ ಮಾಡೋದು ಮುಂತಾದ ಡೋಂಟ್ ಕೇರ್ ಪ್ರವೃತ್ತಿಗಳು ಸಂಬಂಧದ ಅಂತ್ಯಕ್ಕೆ ನಾಂದಿ ಹಾಡಬಲ್ಲವು. ಸಂಗಾತಿಯ ವಾಟ್ಸ್‍ಆಪ್ ಮೆಸೇಜ್ ನೋಡಿದ ಬಳಿಕವೂ ನಿಮಗೆ ರಿಪ್ಲೈ ಮಾಡ್ಬೇಕು ಎಂಬ ಭಾವನೆ ಮೂಡದಿದ್ರೆ ನಿಮ್ಮ ಈ ಮೌನ ಅವರ ಮನಸ್ಸಿನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಬಹುದು. ಆ ಬಿರುಗಾಳಿಗೆ ನಿಮ್ಮಿಬ್ಬರ ಪ್ರೀತಿಯ ಸೌಧವನ್ನು ಕೆಡುವ ಸಾಮಥ್ರ್ಯವಿದೆ ಎಂಬುದನ್ನು ಮರೆಯಬೇಡಿ. ಮಾತು ಬೆಳ್ಳಿ, ಮೌನ ಬಂಗಾರ ಎಂಬುದೇನೂ ನಿಜ. ಆದ್ರೆ ಸಂಬಂಧದ ವಿಷಯದಲ್ಲಿ ಮೌನ ಅತಿಯಾದ್ರೆ ವಿಷವಾಗಿ ಪರಿವರ್ತನೆಯಾಗಬಲ್ಲದು ಎಂಬುದನ್ನು ಮರೆಯಬಾರದು.