ನನ್ನ ಹೆಸರು ಅನೂಜಾ. ಅದರ ಅರ್ಥ ಜೊತೆಯಾಗಿ ಹುಟ್ಟಿದವಳು ಅಂತಲೇ. ಅದ್ಕೇ ತಕ್ಕ ಹಾಗೆ ನನಗೊಬ್ಬಳು ತುಂಬಾ ಪ್ರೀತಿಯ ಅಕ್ಕ ಇದ್ದಳು. ನಂಗೆ ಫಸ್ಟ್‌ ಸಲ ಪೀರಿಯೆಡ್ಸ್ ಆದಾಗ, ನಾನು ಓಡಿಹೋದದ್ದು ಅಮ್ಮನತ್ರ ಅಲ್ಲ. ನನ್ನ ಅಕ್ಕನತ್ರ. ಅಕ್ಕ ನಂಗೆ ಎಲ್ಲವೂ ಆಗಿದ್ಳು.  ಅಮ್ಮ ಅಫೀಸ್‌ ಮುಗಿಸಿ ಬರ್ತಾ ಇದ್ದಿದ್ದೇ ತಡವಾಗಿ. ಹೀಗಾಗಿ ನಾನು ಮತ್ತು ಅಕ್ಕ ಜೊತೆಯಾಗಿ ಇಡೀ ದಿನ ಆಡ್ತಾ ಇದ್ದೆವು. ಅವಳೇನೂ ನಂಗಿಂತ ತುಂಬಾ ದೊಡ್ಡವಳೇನೂ ಅಲ್ಲ. ಆದ್ರೂ ನಂಗೆ ಊಟ ಮಾಡಿಸ್ತಿದ್ಳು. ನಾನು ಹೇಳೋ ಕತೆಗಳನ್ನೆಲ್ಲ ಕೇಳ್ತಿದ್ಳು. ಅವಳೂ ಹೇಳ್ತಿದ್ಳು. 

ಒಂದು ದಿನ ಸಂಜೆ ನಾನು ಕಾಲೇಜು ಮುಗಿಸಿ ಬಳಲಿ ಸುಸ್ತಾಗಿ ಮನೆಗೆ ಬಂದೆ. ತುಂಬಾ ಸುಸ್ತಾಗಿತ್ತು, ನಿದ್ದೆ ಬರ್ತಿತ್ತು. ಹಾಗೇ ಬಿದ್ದುಕೊಂಡಿದ್ದೆ. ಊಟಾನೂ ಮಾಡಿರಲಿಲ್ಲ. ಅಕ್ಕ ನಂಗಾಗಿ ಬಿಸಿಬಿಸಿ ಬೋರ್ನ್‌ವಿಟಾ ಮಾಡಿಕೊಂಡು ತಗೊಂಬಂದು ನನ್ನನ್ನು ಎಬ್ಬಿಸಿದಳು. ಆದ್ರೆ ನಂಗೆ ತಡೀಲಾರದ ನಿದ್ದೆ, ಕಿರಿಕಿರಿ ಆಯ್ತು, "ಸುಮ್ನೇ ಹೋಗಾಚೆಗೆ'' ಅಂತ ಗದರಿಬಿಟ್ಟೆ, ಅಕ್ಕನಿಗೆ, ಪಾಪ ಸುಮ್ಮನೇ ಹೋದಳು.

ಮರುದಿನ ಮುಂಜಾನೆ ನಾನು ಆರು ಗಂಟೆಗೇ ಎದ್ದು ಟ್ರೇನ್‌ ಹಿಡಿದು ಕಾಲೇಜಿಗೆ ಹೋಗಬೇಕಾಗಿತ್ತು. ಹೀಗಾಗಿ ಎದ್ದು ಅಕ್ಕನ ಜೊತೆ ಏನೂ ಮಾತಾಡದೇ ಹೊರಟುಬಿಟ್ಟೆ. ಮಧ್ಯಾಹ್ನದ ಹೊತ್ತಿಗೆ ನಂಗೆ ಒಂದು ಅನ್‌ನೋನ್‌ ಫೋನ್‌ ನಂಬರ್‌ನಿಂದ ಕರೆ ಬಂತು. ಆ ಕಡೆಯಿಂದ ಮಾತಾಡಿದರ್ಯಾರೋ, "ನಿಮ್ಮ ಮನೆಗೆ ಬೆಂಕಿ ಬಿದ್ದಿದೆ, ಬೇಗ ಮನೆಗೆ ಬನ್ನಿ'' ಅಂತ ಹೇಳಿ ಕಾಲ್‌ ಕಟ್‌ ಮಾಡಿದ್ರು. ಇದ್ಯಾರೋ ತರಲೆಗಳು ಮಾಡ್ತಾ ಇರೋ ಪ್ರಾಂಕ್‌ ಕಾಲ್‌ ಅಂತ ಸುಮ್ಮನಾದೆ. ಆದರೆ ಯಾಕೋ ಆತಂಕವೆನಿಸಿ, ಅಕ್ಕನಿಗೆ ಫೋನ್‌ ಮಾಡಿದೆ. ಆಕೆ ತೆಗೆಯಲೇ ಇಲ್ಲ. ತುಂಬಾ ಭಯವಾಯಿತು. ಅಮ್ಮನಿಗೆ ಫೋನ್‌ ಮಾಡಿದೆ. ಅಮ್ಮನೂ ತೆಗೆಯಲಿಲ್ಲ. ಅಪ್ಪನೂ ತೆಗೆಯಲಿಲ್ಲ. 

ಮತ್ತೊಮ್ಮೆ ನಿಮ್ಮಿಬ್ಬರ ನಡುವೆ ಪ್ರೀತಿಯನ್ನೆಳೆದು ತನ್ನಿ... 
ಸ್ವಲ್ಪ ಹೊತ್ತಿನ ನಂತರ ಅಪ್ಪನೇ ಫೋನ್‌ ಮಾಡಿದ್ರು. ಪುಟ್ಟಾ, ಬೇಗ ಮನೆಗೆ ಬಾ ಅಂತ ಅಂದರು. ಏನೋ ಅನಾಹುತವಾಗಿದೆ ಅಂತ ಖಚಿತವಾಯಿತು. ಧಾವಿಸಿ ಹೋಗಿ ನೋಡಿದೆ. ಮನೆಯ ಸುತ್ತ ಜನ ಸೇರಿದ್ದರು. ಅಪ್ಪ ಅಮ್ಮ ಇಲ್ಲದ ಹೊತ್ತಿನಲ್ಲಿ ಗ್ಯಾಸ್‌ ಸಿಲಿಂಡರ್‌ ಬ್ಲಾಸ್ಟ್‌ ಆಗಿತ್ತು. ಅಕ್ಕ ತೀರಿಕೊಂಡಿದ್ದಳು. "ಸುಮ್ನೆ ಹೋಗಾಚೆಗೆ'' ಅಂತ ನಾನು ಹೇಳಿದ್ದೇ ಆಕೆಯ ಜೊತೆಗೆ ನಾನು ಆಡಿದ ಕೊನೆಯ ಮಾತು ಆಗಿತ್ತು. ಇದೆಲ್ಲ ನಡೆದ ಐದು ವರ್ಷಗಳಾಗಿವೆ. ಅಕ್ಕ ಇನ್ನೂ ನೆನಪಿಗೆ ಬರತ್ತಲೇ ಇದ್ದಾಳೆ. ತುಂಬಾ ಗಿಲ್ಟ್‌ ಕಾಡುತ್ತದೆ. ಅಕ್ಕನ ಜೊತೆಗೆ ಕೊನೆಯ ಬಾರಿಗಾದರೂ ನಾಲ್ಕು ಪ್ರೀತಿಯ ಮಾತನ್ನಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಬಾರಿ ಹಳಹಳಿಸಿದ್ದೇನೆ. ಬಹುಶಃ ಈ ಕೊರಗು ನಂಗೆ ಜೀವಮಾನ ಪೂರ್ತಿ ಉಳಿಯುತ್ತದೆ ಅನಿಸುತ್ತೆ.
----

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್ 
ಈ ಮಾತುಗಳನ್ನು ಫೇಸ್‌ಬುಕ್‌ನ ಹ್ಯೂಮನ್ಸ್ ಆಫ್ ಬಾಂಬೇ ಪುಟದಲ್ಲಿ ಯಾರೋ ಒಬ್ಬರು ಬರೆದುಕೊಂಡಿದ್ದಾರೆ. ಯಾರು ಹೇಳಿದ್ದಾರೆ ಎಂಬುದು ಮುಖ್ಯವಲ್ಲ. ಇದು ನಮ್ಮೆಲ್ಲರ ಬಾಳಿಗೂ ಅನ್ವಯಿಸುವ ಮಾತು ಅನಿಸಿತು. ಪ್ರತಿದಿನ ನಮ್ಮ ಕುಟುಂಬದವರ ಜೊತೆ ಮಾತಾಡುತ್ತೇವೆ. ಅದರಲ್ಲಿ ಅಕ್ಕರೆಯ ಮಾತಿಗಿಂತಲೂ ದಿನಚರಿಯ ಮಾತು, ಸಿಟ್ಟಿನ ಮಾತೇ ಹೆಚ್ಚಾಗಿರುತ್ತದೆ. ಫ್ರೆಂಡ್ಸ್ ಜೊತೆ ಎಷ್ಟೋ ದಿನ ಮಾತೇ ಆಡುವುದಿಲ್ಲ. ಅವರಲ್ಲಿ ಯಾರಾದರೊಬ್ಬರನ್ನು ನೆನಪಿಸಿಕೊಂಡರೆ, ಅವರೊಡನೆ ನಾವಾಡಿದ ಕೊನೆಯ ಮಾತು ಯಾವುದು ಎಂಬುದು ನೆನಪೇ ಆಗುವುದಿಲ್ಲ. ಇದೇ ನಾವು ಅವರೊಂದಿಗೆ ಆಡುವ ಕೊನೆಯ ಮಾತು ಎಂದು ಗೊತ್ತಿದ್ದರೆ, ಅವರಿಗೆ ಇಷ್ಟವಾದ ಮಾತುಗಳನ್ನೇ ಆಡುತ್ತೇವೆ ಅಲ್ಲವೇ? ಹಾಗಾದರೆ ನಾವು ಮಾಡಬೇಕಾದ್ದೇನು? ನಾವು ಆಡುವ ಎಲ್ಲ ಮಾತುಗಳನ್ನೂ ಇದೇ ನಮ್ಮ ಅಥವಾ ಅವರ ಕೊನೆಯ ಮುಖಾಮುಖಿಯ ಮಾತು ಎಂದೇ ಭಾವಿಸಿ ಆಡುವುದು. ಆಗ ಮಾತಿಗೊಂದು ಅಕ್ಕರೆ, ಮಮತೆ, ಪ್ರೀತಿ ತಾನಾಗಿ ಉಂಟಾಗುತ್ತದಲ್ಲವೇ?

#Feelfree: ಸೆಕ್ಸ್ ವೇಳೆ ತುಂಬಾ ಚೀರಾಡ್ತಾಳೆ!