ಮತ್ತೊಮ್ಮೆ ನಿಮ್ಮಿಬ್ಬರ ನಡುವೆ ಪ್ರೀತಿಯನ್ನೆಳೆದು ತನ್ನಿ...
ಪ್ರೀತಿ ಬದುಕಿನ ವೇಗಕ್ಕೆ ಕೆಲ ವರ್ಷಗಳಲ್ಲಿ ಆವಿಯಾದಂತೆನಿಸಬಹುದು. ಆದರೆ, ಆ ಪ್ರೀತಿಯು ಮತ್ತೆ ಮೋಡ ಕಟ್ಟಿ ಮಳೆ ಸುರಿಸುವಂತೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ನೀವು ಸ್ವಲ್ಪ ಹೆಚ್ಚಿನ ಪ್ರಯತ್ನ ಹಾಕಬೇಕಷ್ಟೇ.
ಪ್ರೀತಿಯಲ್ಲಿ ಬೀಳುವುದು, ಅದರಿಂದ ಹೊರ ಬೀಳುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರಂಭದಲ್ಲಿ ಎಲ್ಲವೂ ರೊಮ್ಯಾಂಟಿಕ್ ಆಗಿ, ಎಕ್ಸೈಟಿಂಗ್ ಆಗಿ ಕಾಣುತ್ತದೆ. ಬರಬರುತ್ತಾ ಪ್ರೀತಿಯ ಆಕರ್ಷಣೆಯಿಂದ ಹೊರಗುಳಿದು, ಕೆಲಸದಲ್ಲಿ ಬ್ಯುಸಿಯಾಗುತ್ತಾರೆ. ಕಡೆಕಡೆಗೆ ಪಾರ್ಟ್ನರ್‌ಗೆ ಸಮಯ ಕೂಡಾ ನೀಡಲಾಗುವುದಿಲ್ಲ. ಹಾಗಂಥ ಅಲ್ಲಿ ಪ್ರೀತಿ ಇರುವುದೇ ಇಲ್ಲವೆಂದಲ್ಲ. ಆದರೆ, ಅದು ಮುಂಚಿನಂತೆ ನವಿರಾದ ಭಾವಗಳನ್ನು ಪ್ರತಿದಿನವೂ ಹೊತ್ತು ತರುತ್ತಿರುವುದಿಲ್ಲ ಅಷ್ಟೇ. ಇಷ್ಟಾದ ಮಾತ್ರಕ್ಕೆ ಪ್ರೀತಿಸಲ್ಪಡುವುದು, ಭಾವನಾತ್ಮಕವಾಗಿ ಹೆಚ್ಚು ಕನೆಕ್ಟ್ ಆಗಿರುವುದನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಅದಿಕ್ಕೇ ಪ್ರೀತಿಯನ್ನು ಜೀವನಕ್ಕೆ ಮತ್ತೆ ಎಳೆ ತರಬೇಕೆಂದರೆ ಸ್ವಲ್ಪ ಪ್ರಯತ್ನ ಹಾಕಿದರೆ ಸಾಕು. ಆ ಪ್ರಯತ್ನಗಳೇನಾಗಿರಬೇಕು ನೋಡೋಣ...
ಹೆಚ್ಚು ಸಂವಹನ
ನಿಮ್ಮ ಪಾರ್ಟ್ನರ್‌ನಿಂದ ಭಾವನಾತ್ಮಕವಾಗಿ ಬಹಳ ದೂರ ಬಂದಿದ್ದೀರಿ ಎಂದು ನಿಮಗನಿಸುತ್ತಿದ್ದರೆ ಮತ್ತೆ ಹತ್ತಿರಾಗುವ ಮೊದಲ ದಾರಿಯೇ ಮಾತುಕತೆ. ನಿಮ್ಮ ಸಮಸ್ಯೆಗಳು, ಯೋಚನೆಗಳು, ಕನಸು ಇತ್ಯಾದಿ ಎಲ್ಲವನ್ನೂ ಪಾರ್ಟ್ನರ್ ಜೊತೆ ಹಂಚಿಕೊಳ್ಳುವುದರಿಂದ ನೀವೂ ನಿರಾಳಾಗುತ್ತೀರಿ ಅಷ್ಟೇ ಅಲ್ಲ, ನಿಮ್ಮ ಪಾರ್ಟ್ನರ್‌ಗೆ ಕೂಡಾ ನಿಮ್ಮೊಂದಿಗೆ ಕನೆಕ್ಟೆಡ್ ಫೀಲಿಂಗ್ ಬರತೊಡಗುತ್ತದೆ. ನಿಧಾನವಾಗಿ ಅವರೂ ತಮ್ಮ ಮನಸ್ಸನ್ನು ನಿಮ್ಮೆದುರು ತೆರೆದಿಡಲಾರಂಭಿಸುತ್ತಾರೆ.
ತಿನ್ನೋದಕ್ಕೆ ಹಿರಿಯರು ಮಾಡಿರೋ ರೂಲ್ಸ್ ಪಾಲಿಸಿದ್ರೆ ಆರೋಗ್ಯ ಭಾಗ್ಯ ಹೆ ...
ಸರ್ಪ್ರೈಸ್ ನೀಡಿ
ಸಂಬಂಧಗಳು ಸಮಯ ಕಳೆದಂತೆಲ್ಲ ಬೋರಿಂಗ್ ಆಗುತ್ತವೆ. ಅವುಗಳಲ್ಲಿ ಚೈತನ್ಯ ತುಂಬಲು ಆಗಾಗ ಒಂದು ಸರ್ಪ್ರೈಸ್ ನೀಡುವುದು ಅವಶ್ಯಕ. ಅವರನ್ನು ಹೊರ ಕರೆದುಕೊಂಡು ಹೋಗುವುದು, ಅವರು ನಿರೀಕ್ಷಿಸಿರದ ಉಡುಗೊರೆ ನೀಡುವುದು, ಮನೆಯನ್ನು ಡೆಕೋರೇಟ್ ಮಾಡಿ ಅವರ ಸ್ಪೆಶಲ್ ದಿನಗಳನ್ನು ಮತ್ತಷ್ಟು ಸ್ಪೆಶಲ್ ಆಗಿಸುವುದು- ಹೀಗೆ ಸರ್ಪ್ರೈಸ್‌ಗಳು ನಿಮಗೆ ಅವರೆಷ್ಟು ಮುಖ್ಯ ಎಂಬುದನನ್ನು ತೋರಿಸಿಕೊಡುತ್ತವೆ. ಆ ಮೂಲಕ ಇಬ್ಬರನ್ನೂ ಹತ್ತಿರಾಗಿಸುತ್ತವೆ.
ಪ್ರಾಮುಖ್ಯತೆ ವ್ಯಕ್ತಪಡಿಸಿ
ಎಲ್ಲ ಸಂದರ್ಭದಲ್ಲೂ ನಿಮ್ಮ ಪಾರ್ಟ್ನರ್‌ಗೆ ಪ್ರಾಮುಖ್ಯತೆ ನೀಡುವುದು ಮುಖ್ಯವಾಗುತ್ತದೆ. ಇಷ್ಟಕ್ಕೂ ಅವರು ನಿಮ್ಮ ಜೀವನವಿಡೀ ಸಾಥ್ ನೀಡುವವರು. ಹೀಗಾಗಿ, ಎಲ್ಲಿಯೂ ಅವರಿಗೆ ಪ್ರಾಮುಖ್ಯತೆ ಕಡಿಮೆ ಎನಿಸುವಂತೆ ಮಾಡಬೇಡಿ. ಅವರನ್ನು ಸೆಕೆಂಡ್ ಚಾಯ್ಸ್ ತರಾ ಟ್ರೀಟ್ ಮಾಡುವುದು ಮತ್ತಷ್ಟು ದೂರ ತಳ್ಳುತ್ತದೆ. ಇನ್ನೊಬ್ಬ ವ್ಯಕ್ತಿಯಾಗಲೀ, ಕೆಲಸವಾಗಲೀ ಅವರಿಗಿಂತ ಹೆಚ್ಚು ಎಂಬಂತೆ ಬಿಂಬಿಸಬೇಡಿ.
ಅವರ ಖಾಸಗಿ ಸಮಯ ಕಸಿಯಬೇಡಿ
ಪ್ರತಿ ಸಂಬಂಧದಲ್ಲೂ ಪರಸ್ಪರ ಅವರದೇ ಆದ ಖಾಸಗಿ ಸ್ಪೇಸ್ ನೀಡಬೇಕು. ಇದು ನೀವು ಅವರಲ್ಲಿಟ್ಟಿರುವ ನಂಬಿಕೆ ಹಾಗೂ ಆತ್ಮವಿಶ್ವಾಸವನ್ನು ತೋರಿಸುತ್ತದೆ. ನಿಮ್ಮ ಪಾರ್ಟ್ನರ್‌ನ ಎಲ್ಲವನ್ನೂ ಚೆಕ್ ಮಾಡುವುದು, ಪ್ರತಿ ಕ್ಷಣವೂ ಅವರೇನು ಮಾಡುತ್ತಿದ್ದಾರೆ, ಯಾರಿಗೆ ಮೆಸೇಜ್ ಮಾಡುತ್ತಿದ್ದಾರೆ, ಯಾರ ಬಳಿ ಫೋನ್‌ನಲ್ಲಿ ಮಾತಾಡುತ್ತಿದ್ದಾರೆ- ಹೀಗೆ ಸ್ಟ್ಯಾಕ್ ಮಾಡುತ್ತಿರುವುದು ಒಳ್ಳೆಯದಲ್ಲ. ನೀವು ಅವರಿಗೆ ಸ್ಪೇಸ್ ನೀಡಿದರೆ ಅವರು ನಿಮ್ಮನ್ನು ಗೌರವಿಸಲಾರಂಭಿಸುತ್ತಾರೆ.
ಪ್ರಯತ್ನಕ್ಕೆ ಶ್ಲಾಘಿಸಿ
ನಿಮ್ಮನ್ನು ಖುಷಿಪಡಿಸಲು ಅಥವಾ ಸಂಬಂಧವನ್ನು ಮೇಲೆತ್ತಲು ನಿಮ್ಮ ಪಾರ್ಟ್ನರ್ ತೋರಿಸುವ ಪ್ರಯತ್ನಗಳಿಗೆ ಮೆಚ್ಚುಗೆ ಸೂಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಬ್ಬರೂ ಒಬ್ಬರ ಪ್ರಯ್ತನವನ್ನು ಮತ್ತೊಬ್ಬರು ಗುರುತಿಸಿ ಮೆಚ್ಚುವುದು ಸಂಬಂಧದಲ್ಲಿ ಮುಖ್ಯವಾಗುತ್ತದೆ.
ಎಲ್ಲಿಂದಲೋ ಬಂದವರ ಸುಖ ದುಃಖ;ನೀವು ಎಲ್ಲಿಯವರು?
ಅಭಿಪ್ರಾಯಗಳನ್ನು ಗೌರವಿಸಿ
ಕೆಲವೊಮ್ಮೆ ನೀವು ಸಂಗಾತಿಯ ಅಭಿಪ್ರಾಯವನ್ನು ಒಪ್ಪದಿರಬಹುದು. ಆದರೆ, ಅದು ಅವರ ವೈಯಕ್ತಿಕ ಅಭಿಪ್ರಾಯವಾದ ಕಾರಣ ಅದು ನಿಮಗೆ ಬೇಕೆಂದಂತೆ ಬದಲಾಗದು. ಬದಲಿಗೆ, ನೀವು ಅವರ ಅಭಿಪ್ರಾಯವನ್ನು ಗೌರವಿಸಿ. ಭಿನ್ನಾಭಿಪ್ರಾಯಗಳು ಇಬ್ಬರ ನಡುವೆ ಕಂದರ ಸೃಷ್ಟಿಸಬೇಕಿಲ್ಲ. ನೀವದನ್ನು ಗೌರವಿಸುತ್ತಲೇ ನಿಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಬಹುದು.