ಕಾಮಾಟಿಪುರ!
ಹೀಗಂದ ತಕ್ಷಣ ನೆನಪಾಗೋದು ಕಿರಿದಾದ ಆ ಬೀದಿಗಳ ಪಕ್ಕ ನಿಂತಿರುವ ಬೆಲೆವೆಣ್ಣುಗಳು. ಸಂಜೆ ಕಳೆದು ರಾತ್ರಿಯಾಗುತ್ತಿರುವಂತೆ ಸ್ಟ್ರೀಟ್‌ಲೈಟ್ ನ ಬೆಳಕಲ್ಲಿ ದೀಪದ ಹುಳುಗಳಂತೆ ಹಲವಾರು ಹೆಣ್ಣುಗಳು ಬಂದು ನಿಲ್ಲುತ್ತಾರೆ. ಬೀಡಾ ಜಗಿಯುತ್ತಾ, ಟಾಪ್ ಅನ್ನು ತುಸುವೇ ಕೆಳ ಜಗ್ಗಿ ಗಿರಾಕಿಯನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುತ್ತಾರೆ. ಇಲ್ಲಿರುವವರೆಲ್ಲ ನಮ್ಮ ರಾಜ್ಯವೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬದುಕು ಕಟ್ಟಿಕೊಳ್ಳಲು ಅಂತ ಮುಂಬೈಗೆ ಬಂದವರು, ಪಕ್ಕದ ನೇಪಾಳ, ಭೂತಾನ್‌ಗಳಿಂದ ಬಂದವರೂ ಇದ್ದಾರೆ. ಬಡತನದ ಕಾರಣಕ್ಕೆ ಈ ವೃತ್ತಿಗಿಳಿದವರು, ಅಕ್ರಮವಾಗಿ ಯಾರಿಂದಲೋ ಇಲ್ಲಿಗೆ ಸಾಗಿಸಲ್ಪಟ್ಟವರು ಹೀಗೆ ಇಲ್ಲಿರುವ ಒಬ್ಬೊಬ್ಬ ಹೆಣ್ಣುಮಗಳದ್ದು ಒಂದೊಂದು ಕಥೆ. ಸಮೀಕ್ಷೆಯ ಪ್ರಕಾರ ಇಲ್ಲಿರುವ ಹೆಚ್ಚಿನ ಹೆಣ್ಮಕ್ಕಳು ಈ ದಂಧೆಯ ಅರಿವೇ ಇಲ್ಲದೇ ಇಲ್ಲಿಗೆ ಬಂದಿದ್ದಾರೆ. ತಾವು ವೇಶ್ಯಾವಾಟಿಕೆಗೆ ನೂಕಲ್ಪಟ್ಟಿದ್ದೇವೆ ಅಂತ ಅರಿವಾಗುವಾಗ ಆಘಾತವಾಗುತ್ತದೆ. ಅವರು ಪ್ರತಿಭಟಿಸುತ್ತಾರೆ. ಆದರೆ ಅಂಥ ಪ್ರತಿಭಟನೆಗೆಲ್ಲ ಇಲ್ಲಿ ಬೆಲೆ ಇಲ್ಲ. ಇಲ್ಲಿಗೊಮ್ಮೆ ಬಂದ ಮೇಲೆ ಹೊರ ಹೋಗಿ ಸಾಮಾನ್ಯರಂತೆ ಬದುಕೋದು ಅಷ್ಟು ಸುಲಭವಲ್ಲ. ಆರಂಭದಲ್ಲಿ ಬಹಳ ಕಷ್ಟದಲ್ಲಿ ಈ ದಂಧೆಗೆ ಹೊಂದಿಕೊಳ್ಳುವ ಹೆಣ್ಣುಮಕ್ಕಳು ಕ್ರಮೇಣ ಪಳಗುತ್ತಾರೆ. ಸುಮಾರು 50 ಸಾವಿರಕ್ಕೂ ಅಧಿಕ ವೇಶ್ಯೆಯರು ಇಲ್ಲಿದ್ದಾರಂತೆ. 

ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್

 ಇದೆಲ್ಲ ಹಳೆ ಕಥೆ. ಆದರೆ ಈಗ ಲಾಕ್‌ಡೌನ್‌ ದಿನಗಳಲ್ಲಿ ಈ ಜಾಗಗಳನ್ನೆಲ್ಲ ಸೀಲ್‌ ಮಾಡಿದ್ದಾರೆ. ಯಾರೂ ಕಾಮಾಟಿಪುರ ಪ್ರವೇಶಿಸುವ ಹಾಗಿಲ್ಲ. ಸಾಮಾನ್ಯ ದಿನಗಳಲ್ಲಿ ಕಮಾಟಿಪುರದ 11ನೇ ಲೇನ್‌ ಸಂಜೆಯಾಗುತ್ತಿದ್ದ ಹಾಗೆ ಗಿಜಿಗುಡಲಾರಂಭಿಸುತ್ತದೆ. ಸಮಾಜದ ನಾನಾ ವರ್ಗದ ಗಂಡಸರು ಸಾವಿರಾರು ಸುಂದರಿಯರ ನಡುವೆ ಆ ರಾತ್ರಿಗೆ ಬೇಕಾದ ಹೆಣ್ಣಿಗಾಗಿ ಹುಡುಕಾಡುತ್ತಾರೆ. ರೇಟುಗಳ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಹೊಯ್ ಕೈ ಆಗೋದು, ಅಶ್ಲೀಲವಾದ ಜಗಳಗಳು ಎಲ್ಲ ಇಲ್ಲಿ ಸಾಮಾನ್ಯ. ಆದರೆ ಕಳೆದ ಮಾರ್ಚ್ 25ರ ಬಳಿಕ ಈ ಲೇನ್‌ ಗೆ ಪ್ರವೇಶ ನಿಷೇಧಿಸಿದ್ದಾರೆ. ರಸ್ತೆಗಳು ಸ್ತಬ್ಧವಾಗಿವೆ. ಆದರೂ ಸಂಜೆ ಬಿಸಿಲು ಆರುತ್ತಿರುವಂತೆ ಇಲ್ಲಿಯ ಚಿಕ್ಕ ಗೂಡುಗಳಂಥಾ ಮನೆಗಳಿಂದ ಹೆಣ್ಣುಮಕ್ಕಳು ಹೊರಬಂದು ಸುಮ್ಮನೆ ಕೂತಿರುತ್ತಾರೆ. ಗಿರಾಕಿಗಳಿಲ್ಲ ಅಂತ ಗೊತ್ತು. ಆದರೂ ಆ ಕತ್ತಲ ಗೂಡಿನಲ್ಲಿ ಕಳೆಯೋದಕ್ಕಿಂತ ಹೊರಬಂದು ಗಾಳಿಯನ್ನಾದರೂ ಕುಡಿಯೋಣ ಅನ್ನೋದು ಅವರ ಇಂಗಿತ. ಮೂರ್ನಾಲ್ಕು ಮಹಡಿಗಳ ಈ ಬಿಲ್ಡಿಂಗ್‌ನಲ್ಲಿ ಅನೇಕ ಚಿಕ್ಕ ಚಿಕ್ಕ ರೂಂಗಳು. ಅವುಗಳಲ್ಲಿ ಒಂದೊಂದು ಕುಟುಂಬ ವಾಸ ಮಾಡುತ್ತದೆ. ವೇಶ್ಯಾವಾಟಿಕೆ ಮಾಡುವವರ ಜೊತೆಗೆ ಅವರ ಮಕ್ಕಳೂ ಇರುತ್ತಾರೆ. ರಾತ್ರಿಯೆಲ್ಲ ದುಡಿದು ಹಗಲು ಮಲಗೋದು ಇವರಿಗೆ ಅಭ್ಯಾಸ. ಆದರೆ ಈಗಿನ ಸ್ಥಿತಿಯಲ್ಲಿ ಹಗಲೂ ನಿದ್ದೆ ಬರಲ್ಲ. ರಾತ್ರಿಯೂ ಜಾಗರಣೆ. 

ಕಳೆದ ಹಲವು ದಿನಗಳಿಂದ ಒಂದು ಪೈಸೆ ದುಡಿಮೆಯೂ ಇಲ್ಲದೇ ಇಲ್ಲಿಯವರ ಕಥೆ ದೇವರಿಗೇ ಪ್ರೀತಿ ಅನ್ನುವ ಹಾಗಾಗಿದೆ. ಕೆಲವು ಸಂಘ ಸಂಸ್ಥೆಗಳು ನೀಡುವ ಆಹಾರ, ಮುನ್ಸಿಪಾಲಿಟಿಯಿಂದ ಸಿಗುವ ಅತ್ಯಲ್ಪ ಆಹಾರ ಪದಾರ್ಥ ಇವರಿಗೆ ಎಲ್ಲಿಗೂ ಸಾಕಾಗೋದಿಲ್ಲ. ಇಲ್ಲಿರುವ ಹೆಣ್ಣುಮಕ್ಕಳು ತಾವು ದುಡಿದದ್ದರಲ್ಲಿ ಪಿಂಪ್ಗಳಿಗೆ ಹಣ ನೀಡಿ, ಊರಿಗೂ ಹಣ ಕಳಿಸಬೇಕಿರುವುದರಿಂದ ಕೈಯಲ್ಲಿ ಹಣ ಉಳಿಯುವುದು ಕಡಿಮೆ. ಹಾಗೇನಾದರೂ ಕಿಂಚಿತ್‌ ಹಣವಿದ್ದರೂ ಅದು ಬಟ್ಟೆ ಬರೆಗಳಿಗೆ, ಮೇಕಪ್ ಸಾಮಗ್ರಿಗೆ ಬೇಕಾಗುತ್ತದೆ. ಕೈಯಲ್ಲಿ ತುಸು ಕಾಸಿದ್ದಾಗ ಖರ್ಚಿಗೆ ಹಲವು ದಾರಿಗಳೂ ಇರುತ್ತದೆ. ಈ ಲಾಕ್‌ಡೌನ್‌ ನ ಅಂದಾಜೇ ಇಲ್ಲಿರುವ ಯಾರಿಗೂ ಇರದ ಕಾರಣ ಹೆಚ್ಚಿನವರು ಉಳಿತಾಯ ಮಾಡಿಯೇ ಇಲ್ಲ. ಅಲ್ಪಸ್ವಲ್ಪ ಹಣವಿದ್ದರೂ ಅದು ಈಗಾಗಲೇ ಖರ್ಚಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿರುವ ಹೆಚ್ಚಿನವರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಇದೆ. ಐಚ್‌ಐವಿ ಯಂಥಾ ಗಂಭೀರ ಹಿನ್ನೆಲೆ ಇರುವವರೂ ಇಲ್ಲಿದ್ದಾರೆ. ಮೆಡಿಸಿನ್ಗೆ ಇವರ ಬಳಿ ಹಣವಿಲ್ಲ. 

ಲಾಕ್‌ಡೌನ್: ಶೌಚಾಲಯ, ಸ್ಮಶಾನದಲ್ಲಿ ದಿನ ಕಳೆದ ಯುವಕ 

ಪರಿಸ್ಥಿತಿ ಹೀಗೇ ಮುಂದೆಹೋದರೆ ನಾವೆಲ್ಲ ಸತ್ತು ಹೋಗೋದು ಗ್ಯಾರೆಂಟಿ ಅಂತ ಲೈಂಗಿಕ ಕಾರ್ಯಕರ್ತೆಯೊಬ್ಬರು ನೊಂದು ನುಡಿಯುತ್ತಾರೆ. ನಲವತ್ತರ ಹರೆಯದ ಈಕೆಗೆ ಡಯಾಬಿಟೀಸ್ ಇದೆ. ಮಾಮೂಲಿ ದಿನಗಳಲ್ಲಿ ದಿನಕ್ಕೆ ನಾಲ್ಕು ನೂರು ರುಪಾಯಿಗಳಿಂದ ಆರುನೂರು ರು.ವರೆಗೆ ದುಡಿಯುವ ಈಕೆಗೆ ವಾರಕ್ಕೆ ಡಯಾಬಿಟೀಸ್‌ ಔಷಧಕ್ಕೇ ನಾಲ್ಕುನೂರು ರು,ಗಳಷ್ಟು ಹಣ ಬೇಕಾಗುತ್ತದೆ. ಈಗ ಕೈ ಖಾಲಿ, ಊರಿಗಾದ್ರೂ ಹೋಗ್ತೀನಿ ಅಂದ್ರೆ ಅದು ಸಾಧ್ಯವಿಲ್ಲದ ಮಾತು. ನನ್ನ ಹತ್ರ ಇರುವ ಹಣದಲ್ಲಿ ಇನ್ನೊಂದೈದು ದಿನ ಔಷಧ ತರಬಹುದು. ಆಮೇಲೆ ಇಲ್ಲ. ನನಗೇನಾದ್ರೂ ಆಗಿ ನಾನು ಸತ್ತರೆ ಅನ್ನುವ ಭಯ ಇಲ್ಲ. ಆದರೆ ಆಮೇಲೆ ನನ್ನ ಇಬ್ಬರು ಮಕ್ಕಳಿಗೆ ಯಾರೂ ಆಸರೆ ಇರೋದಿಲ್ವಲ್ಲಾ ಅನ್ನೋದನ್ನು ನೆನಸಿಕೊಂಡರೆ ಸಂಕಟವಾಗುತ್ತೆ ಅಂತ ಆಕೆ ಕಣ್ಣೀರು ಮಿಡಿಯುತ್ತಾರೆ. 

ಕೊರೋನಾ ಸೋಂಕು: ಸಿಂಗಾಪುರ್, ಇಟಲಿಗಿಂತ ಬೆಂಗಳೂರೇ ಉತ್ತಮ!

ದಿನಗಳು ಹಿಂದಿನಂತಾಗಲಿ. ಇಂಥಾ ಬಡಪಾಯಿಗಳೂ ಹೊಟ್ಟೆ ತುಂಬ ಊಟ, ಸಾಕಷ್ಟು ಔಷಧಿ ಪಡೆಯುವಂತಾಗಲಿ ಅಂತ ಹಾರೈಸೋದಷ್ಟೇ ನಮಗೆ ಉಳಿದಿರೋದು.