ಬೆಂಗಳೂರು (ಏ.17): ಜಗತ್ತಿನ ಬೃಹತ್ ನಗರಗಳಿಗೆ ಹಾಗೂ ಭಾರತದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಕೊರೋನಾ ನಿಯಂತ್ರಣದಲ್ಲಿ ಬೆಂಗಳೂರು ಈಗಲೂ ಉತ್ತಮ ಸ್ಥಾನದಲ್ಲಿದೆ ಎಂಬ ಸಂಗತಿ ನಗರದ ಜನರಿಗೆ ನೆಮ್ಮದಿ ತರಿಸಿದೆ. 

ಬೆಂಗಳೂರಿನಲ್ಲಿ ಇಲ್ಲಿಯವರಿಗೆ 76 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ 36 ಮಂದಿ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ಸುಮಾರು ಬೆಂಗಳೂರಿನಷ್ಟೇ ಇರುವ ಇಟಲಿ ಹಾಗೂ, ಉದ್ಯಾನ ನಗರಿಗಿಂತಲೂ ಚಿಕ್ಕದಿರುವ ಸಿಂಗಾಪುರಕ್ಕೆ ಹೋಲಿಸಿದರೆ ಈ ಸಂಖ್ಯೆಗಳು ಕರುನಾಡ ರಾಜಧಾನಿಯಲ್ಲಿ ಬಹಳ ಕಡಿಮೆ ಇದೆ.

ಕೊರೋನಾ ವಾರಿಯರ್ಸ್‌ ಅಂತರಾಳದ ಮಾತು: 'ಒಂದೇ ಮನ್ಯಾಗಿದ್ರೂ ಅಪರಿಚಿತರಂತೆ ಇರ್ತೇನ್ರಿ'

ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿರುವ ಕೊರೋನಾ ಸೋಂಕು ದಿನೇ ದಿನೇ ಅದೆಷ್ಟು ವೇಗದಲ್ಲಿ ಹರಡುತ್ತಿದೆ ಎಂಬುದಕ್ಕೆ ಇದೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಗುರುವಾರದ ಹೊತ್ತಿಗೆ ವಿಶ್ವದಾದ್ಯಂತ 21 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿದೆ. ಈ ಪೈಕಿ ಮೊದಲ ಪ್ರಕರಣ ದಾಖಲಾದಾಗಿನಿಂದ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ತಲುಪಲು 93 ದಿನಗಳನ್ನು ತೆಗೆದುಕೊಂಡಿದ್ದರೆ, ನಂತರದ 10 ಲಕ್ಷದ ಗಡಿದಾಟಲು ಕೇವಲ 13 ದಿನಗಳನ್ನು ತೆಗೆದುಕೊಂಡಿದೆ.

ಒಟ್ಟು 21 ಲಕ್ಷ ಸೋಂಕಿತರ ಪೈಕಿ ಅಮೆರಿಕ ಮತ್ತು ಐರೋಪ್ಯ ದೇಶಗಳ ಪಾಲು ಶೇ.80ರಷ್ಟಿದೆ. ಅಂದರೆ 13 ಲಕ್ಷಕ್ಕೂ ಹೆಚ್ಚು ಜನ ಈ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ವಿಶ್ವದಲ್ಲಿ ಮೊದಲ ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು 2019ರ ನ.17ರಂದು ಚೀನಾದಲ್ಲಿ. ಸೋಂಕಿತರ ಸಂಖ್ಯೆ 1 ಲಕ್ಷದ ಗಡಿದಾಟಿದ್ದು ಮಾ.5ಕ್ಕೆ, 10 ಲಕ್ಷದ ಗಡಿದಾಟಿದ್ದು ಏ.2ಕ್ಕೆ ಮತ್ತು 20 ಲಕ್ಷದ ಗಡಿದಾಟಿದ್ದು ಏ.15ಕ್ಕೆ.

ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

ಇನ್ನು ಕೊರೋನಾದಿಂದ ಮೊದಲ ಸಾವು ಸಂಭವಿಸಿದ್ದು 2020ರ ಜ.9ರಂದು ಚೀನಾದಲ್ಲಿ. ಸಾವಿನ ಸಂಖ್ಯೆ 10000ದ ಗಡಿದಾಡಿದ್ದು ಮಾ.19ಕ್ಕೆ, ಸಾವಿನ ಸಂಖ್ಯೆ 50000ದ ಗಡಿದಾಟಿದ್ದು ಏ.2ಕ್ಕೆ, 1 ಲಕ್ಷದ ಗಡಿದಾಟಿದ್ದು ಏ.10ಕ್ಕೆ.

ಈ ನಡುವೆ ಸೋಂಕಿತರ ಸಂಖ್ಯೆ 7 ಲಕ್ಷಕ್ಕೆ ಸಮೀಪಿಸುತ್ತಿರುವ ಹೊತ್ತಿನಲ್ಲೇ, ಅಮೆರಿಕ ಸೋಂಕು ತಗಲಬಹುದಾದ ಗರಿಷ್ಠ ಮಟ್ಟವನ್ನು ದಾಟಿದೆ. ಇದು ಶುಭ ಸುದ್ದಿ. ಹೀಗಾಗಿ ಶೀಘ್ರವೇ ಕೆಲವು ರಾಜ್ಯಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ಹೇರಲಾಗಿರುವ ನಿರ್ಬಂಧವನ್ನು ಮೇ 1ಕ್ಕೆ ತೆರವುಗೊಳಿಸಲು ನಿರ್ಧರಿಸಲಾಗಿದೆ. 

2 ದಿನಗಳ ಬಳಿಕ ಸೋಂಕಿನ ಪ್ರಮಾಣ ಇಳಿಕೆ

ಸತತವಾಗಿ 2 ದಿನ 1000ಕ್ಕಿಂತ ಹೆಚ್ಚು ಹೊಸ ಸೋಂಕಿತರು ಪತ್ತೆಯಾಗಿದ್ದ ಭಾರತದಲ್ಲಿ, ಗುರುವಾರ ಹೊಸ ಸೋಂಕಿನ ಪ್ರಮಾಣದಲ್ಲಿ ಅಲ್ಪ ಇಳಿಕೆಯಾಗಿದೆ. ಗುರುವಾರ ದೇಶಾದ್ಯಂತ 715 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12955ಕ್ಕೆ ಏರಿದೆ. ಇದೇ ವೇಳೆ ಗುರುವಾರ ದೇಶಾದ್ಯಂತ 19 ಜನ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 436ಕ್ಕೆ ತಲುಪಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ತಿಳಿಸಿದೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ದಾಖಲೆಗಳ ಅನ್ವಯ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 826 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 12759ಕ್ಕೆ ತಲುಪಿದೆ. ಇನ್ನು ಸಾವಿನ ಸಂಖ್ಯೆ 420ಕ್ಕೆ ಏರಿದೆ.

15 ಲಕ್ಷ ಜನರ ಧಾರಾವಿ ಸ್ಲಂನಲ್ಲಿ ಕೊರೋನಾ

ಮುಂಬೈ: ಏಷ್ಯಾದ ಅತೀ ದೊಡ್ಡ ಕೊಳಗೇರಿ ಮುಂಬೈನ ಧಾರಾವಿಯಲ್ಲಿ ಗುರುವಾರ ಮತ್ತೆ 26 ಮಂದಿಗೆ ಕೊರೋನಾ ವೈರಸ್‌ ಸೋಂಕು ಖಚಿತ ಪಟ್ಟಿದೆ. ಆ ಮೂಲಕ ಅಲ್ಲಿ ಒಟ್ಟು ಪೀಡಿತರ ಸಂಖ್ಯೆ 71ಕ್ಕೇರಿದೆ. ಲಕ್ಷ್ಮೇ ಚೌಲ್‌ ಪ್ರದೇಶದ 58 ವರ್ಷದ ವ್ಯಕ್ತಿ ಗುರುವಾರ ಸೊಂಕಿಗೆ ಒಬ್ಬ ಬಲಿಯಾಗಿದ್ದು, ಆ ಮೂಲಕ ಸತ್ತವರ ಸಂಖ್ಯೆ 9ಕ್ಕೇರಿದೆ. ಪ್ರತೀ ಚದರ ಕಿ.ಮಿಗೆ 7.80 ಲಕ್ಷ ಜನಸಾಂಸದ್ರತೆ ಇರುವ ಇಲ್ಲಿನ ಪೀಡಿತರ ಸಂಖ್ಯೆ ಆತಂಕ ಹೆಚ್ಚಿಸಿದೆ. ಒಟ್ಟು 2.1 ಚದರ ಕಿ.ಮಿ ವಿಸ್ತೀರ್ಣ ಇರುವ ಈ ಸ್ಲಂನಲ್ಲಿ 15 ಲಕ್ಷ ಮಂದಿ ವಾಸಿಸುತ್ತಿದ್ದಾರೆ.

ಕೊರೋನಾದಿಂದ ಗುಣ ಆಗಿದ್ದ 141 ಮಂದಿಗೆ ಮತ್ತೆ ಸೋಂಕು!

ಸೋಲ್‌: ಕೊರೋನಾಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ 141 ಮಂದಿಗೆ ಮತ್ತೆ ಸೋಂಕು ವ್ಯಾಪಿಸಿದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಈ ಘಟನೆಯು ದಕ್ಷಿಣ ಕೊರಿಯಾ ಅಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊರಿಯಾ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಇದಕ್ಕಾಗಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದಾರೆ.

5 ಜನಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ

ನವದೆಹಲಿ: ಕೊರೋನಾ ವ್ಯಾಪಕವಾಗುವುದನ್ನು ತಡೆಯಲು ವಿಸ್ತರಿಸುವ ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಜಾರಿ ಮಾಡಲು ಕೇಂದ್ರ ಗೃಹ ಇಲಾಖೆ ಕೆಲವೊಂದು ನಿಯಮಾವಳಿಗಳನ್ನು ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಐದಕ್ಕಿಂತ ಹೆಚ್ಚು ಮಂದಿ ಸೇರುವುದು ಸೇರಿ ಹಲವು ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್‌ ಸಂಬಂಧ ನಡೆಸುತ್ತಿರುವ ದೈನಂದಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಯಾ ಶ್ರೀವತ್ಸ ಈ ನಿಯಮಾವಳಿಗಳನ್ನು ಬಿಡುಗಡೆ ಮಾಡಿದರು. ಅಲ್ಲದೇ ದೇಶದ 325 ಜಿಲ್ಲೆಗಳಲ್ಲಿ ಈ ವರೆಗೆ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಗೃಹ ಇಲಾಖೆಯ ಹೊಸ ನಿಯಮಾವಳಿಗಳು

  • ಸಾರ್ವಜನಿಕ, ಕಚೇರಿ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ
  • ಸಾಮಾಜಿಕ ಅಂತರ ಕಡ್ಡಾಯ ಪಾಲನೆ
  • 5ಕ್ಕಿಂತ ಹೆಚ್ಚು ಮಂದಿ ಸೇರುವುದು ನಿಷಿದ್ಧ
  • ಕರ್ತವ್ಯ ಸ್ಥಳದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಕಡ್ಡಾಯ
  • ತಂಬಾಕು, ಗುಟ್ಕಾ, ಮದ್ಯ ಮಾರಾಟ ನಿಷೇಧ