Asianet Suvarna News Asianet Suvarna News

ಅಸ್ತಿಯಿಂದ ಆಸ್ತಿಯಾಗುವ ಆಪ್ತರು; ಚಿತಾಭಸ್ಮದಿಂದ ವಜ್ರ ತೆಗೆವ ಕಲೆ

ನಮಗೆ ಅತ್ಯಂತ ಆಪ್ತರನ್ನು ಶಾಶ್ವತವಾಗಿರಿಸಿಕೊಳ್ಳುವ ಬಯಕೆ. ಅದಕ್ಕೇ ಅವರು ಸಾವಿಗೀಡಾದ ಬಳಿಕ ಅವರನ್ನು ಮಮ್ಮಿಯಾಗಿಸುತ್ತೇವೆ, ಅವರ ವಸ್ತುಗಳನ್ನು ಜೊತೆಗಿಟ್ಟು ನೋಡಿ ಸಮಾಧಾನ ಹೊಂದುತ್ತೇವೆ, ಅವರ ಫೋಟೋವನ್ನು ಸದಾ ವ್ಯಾಲೆಟ್‌ನಲ್ಲಿಟ್ಟುಕೊಂಡು ಜೋಪಾನ ಮಾಡುತ್ತೇವೆ. ಈಗ ಇದೇ ಹಾದಿಯಲ್ಲಿನ ಮತ್ತೊಂದು ಯತ್ನ ಮರಣ ಹೊಂದಿದವರ ಬೂದಿಯಿಂದ ವಜ್ರದ ಹರಳು ತಯಾರಿಸುವುದು.

Turn Your Loved Ones Cremated Ashes Into Diamonds
Author
Bangalore, First Published Feb 6, 2020, 2:53 PM IST

ಹತ್ತಿರದವರು ಕಣ್ಮರೆಯಾದಾಗ ಹೊಳೆವ ನಕ್ಷತ್ರಗಳನ್ನು ನೋಡಿ ಅವರು ನಕ್ಷತ್ರವಾಗಿದ್ದಾರೆ ಎಂದು ನಂಬುತ್ತೇವೆ. ಈ ನಂಬಿಕೆ ಸುಳ್ಳಾಗಬಹುದು, ಆದರೆ, ಹಾಗೆ ದೂರಾದವರು ಹೊಳೆವ ನಕ್ಷತ್ರದಂಥ ಹರಳಾಗಿ ನಮ್ಮ ಜೊತೆ ಇರಲು ಸಾಧ್ಯವಿದೆ ಎಂದ್ರೆ ನಂಬ್ತೀರಾ? ನೀವು ಅಪ್ಪಟ ವಜ್ರ ಎಂದು ಇಷ್ಟ ಪಟ್ಟ ಆ ವ್ಯಕ್ತಿ ನಿಜಕ್ಕೂ ವಜ್ರವಾಗಬಹುದು, ಆದರೆ, ಸಾವಿನ ಬಳಿಕ!
 
ಹೌದು, ನಮಗೆ ಅತ್ಯಂತ ಆಪ್ತರನ್ನು ಶಾಶ್ವತವಾಗಿರಿಸಿಕೊಳ್ಳುವ ಬಯಕೆ. ಅದಕ್ಕೇ ಅವರು ಸಾವಿಗೀಡಾದ ಬಳಿಕ ಅವರನ್ನು ಮಮ್ಮಿಯಾಗಿಸುತ್ತೇವೆ, ಅವರ ವಸ್ತುಗಳನ್ನು ಜೊತೆಗಿಟ್ಟು ನೋಡಿ ಸಮಾಧಾನ ಹೊಂದುತ್ತೇವೆ, ಅವರ ಫೋಟೋವನ್ನು ಸದಾ ವ್ಯಾಲೆಟ್‌ನಲ್ಲಿಟ್ಟುಕೊಂಡು ಜೋಪಾನ ಮಾಡುತ್ತೇವೆ, ಅವರ ಅಂಗಾಂಗಗಳನ್ನು ದಾನ ಮಾಡಿ ಹಾಗೆ ಜೀವ ಪಡೆದ ವ್ಯಕ್ತಿಯನ್ನು ನೋಡಿ, ಅವರೇ ಹುಟ್ಟಿಬಂದರೇನೋ ಎಂಬಷ್ಟು ಸಂಭ್ರಮ ಪಡುತ್ತೇವೆ, ಮಗುವಾಗಿ ಹುಟ್ಟಲಿ ಎಂದು ಆಶಿಸುತ್ತೇವೆ... ಆದರೆ, ಇವೆಲ್ಲದಕ್ಕಿಂತ ವಿಭಿನ್ನವಾಗಿ ಅವರನ್ನು ನಮ್ಮೊಂದಿಗಿರಿಸಿಕೊಳ್ಳುವ ಮತ್ತೊಂದು ತಂತ್ರವಿದೆ ಗೊತ್ತಾ? 

ಹೌದು, ಅದೇ ಸತ್ತವರ ಬೂದಿಯನ್ನು ವಜ್ರದ ಹರಳಾಗಿಸಿ ಆಭರಣ ಮಾಡಿಸಿಕೊಳ್ಳುವುದು!

ತಾಯಿ ಪ್ರೀತಿ ಸಿಗದಿದ್ದರೆ ಮಗಳ ವ್ಯಕ್ತಿತ್ವಕ್ಕೆ ಕುತ್ತು...

ಏನು? ಬೂದಿಯಿಂದ ವಜ್ರ ತೆಗೆಯಬಹುದಾ? ಖಂಡಿತಾ ತೆಗೆಯಬಹುದು ಎನ್ನುತ್ತಿವೆ ಈ ಐದು ಕಂಪನಿಗಳು. ಸ್ವಿಟ್ಜರ್ಲೆಂಡ್‌ನ ಅಲ್ಗೋರ್‌ಡಂಜಾ, ಟೆಕ್ಸಾಸ್‌ನ ಎಟರ್ನೇವಾ, ಅಮೆರಿಕದ ಇಲಿನೋಸ್‌ನಲ್ಲಿರುವ ಲೈಫ್‌ಜೆಮ್, ಬ್ರಿಟನ್‌ನ ಹಾರ್ಟ್ ಇನ್ ಡೈಮಂಡ್, ಹಾಗೂ ಸ್ವಿಸ್‌ನಲ್ಲಿರುವ ಮತ್ತೊಂದು ಕಂಪನಿ ಲೊನೈಟ್ ಕಂಪನಿಗಳು ಜನರ ಜೀವನದಲ್ಲಿ ವಿಶೇಷ ಪಾತ್ರ ವಹಿಸಿದ್ದವರನ್ನು ಬೆಲೆ ಬಾಳುವ ವಜ್ರವಾಗಿ ಪರಿವರ್ತಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. 

ಇದು ಹೇಗಪ್ಪಾ ಸಾಧ್ಯ?
ಸಾಮಾನ್ಯವಾಗಿ ಲ್ಯಾಬ್‌ನಲ್ಲಿ ವಜ್ರ ತಯಾರಿಸುವಾಗ ಕಾರ್ಬನ್ ಹಾಗೂ ಕಾರ್ಬನ್ ವೇಪರ್ ಡೆಪಪಾಸಿಶನ್ ಮೆಶಿನ್ ಬಳಸಲಾಗುತ್ತದೆ. ಇದರಿಂದ ಒಂದೇ ಸಮಯಕ್ಕೆ ಹಲವಾರು ವಜ್ರದ ಹರಳುಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ಹೀಗೆಯೇ ಸತ್ತವರನ್ನು ಸುಟ್ಟ ಬೂದಿಯಿಂದ ವಜ್ರ ತಯಾರಿಸಬೇಕೆಂದರೆ, ಅದರಲ್ಲಿರುವ ಕಾರ್ಬನ್‌ನ್ನು ತೆಗೆಯಲಾಗುತ್ತದೆ. ಇದಕ್ಕಾಗಿ ಹೈ ಪ್ರೆಶರ್ ಹೈ ಟೆಂಪರೇಚರ್ ಮೆಶಿನ್ ಬಳಸಲಾಗುತ್ತದೆ. ಇವುಗಳ ಮೂಲಕ ಒಮ್ಮೆಗೆ ಒಂದು ವಜ್ರದ ಹರಳನ್ನು ಮಾತ್ರ ತೆಗೆಯಬಹುದು. 

ಮೊದಲ ಮಗುವಿನ ತವಕ, ತಲ್ಲಣಗಳಿಗೆ ಕಾಳಜಿಯೇ ಮದ್ದು...

ಇಲ್ಲಿ ಕಂಪನಿಗಳಿಗಿರುವ ಸವಾಲೆಂದರೆ ಬೂದಿಯಿಂದ ಕಾರ್ಬನ್ನನ್ನು ಬೇರ್ಪಡಿಸುವುದು. ಹೀಗೆ ಸುಟ್ಟ ಶವದ ಬೂದಿಯಲ್ಲಿ ಶೇ 1ರಿಂದ ಶೇ.4ರಷ್ಟು ಕಾರ್ಬನ್ ಸಿಗಬಹುದು. ಶವದ ಕೂದಲನ್ನು ಕೂಡಾ ಬಳಸಬಹುದು. ಈ ಬೂದಿಯನ್ನು 2700 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ, ಅಧಿಕ ಒತ್ತಡಕ್ಕೆ ಒಳಗಾಗಿಸಿ, ಆಮ್ಲಜನಕ ರಹಿತ ವಾತಾವರಣದಲ್ಲಿ ಅದರಿಂದ ಕಾರ್ಬನ್ ಬೇರ್ಪಡಿಸಲಾಗುತ್ತದೆ. ಇದು ಅತಿ ಘನ ಸ್ಥಿತಿಯಲ್ಲಿ ಸಿಗುತ್ತದೆ. ಸಾಮಾನ್ಯವಾಗಿ ಒಂದು ಕಪ್ ಬೂದಿಯಿಂದ ಒಂದು ಸಣ್ಣ ವಜ್ರದ ಹರಳನ್ನು ತೆಗೆಯಲಾಗುತ್ತದೆ. 

ಬೂದಿಯಲ್ಲಿ ಬೋರಾನ್ ಹೆಚ್ಚಿದ್ದಷ್ಟೂ ವಜ್ರ ಹೆಚ್ಚು ನೀಲಿವರ್ಣದಿಂದ  ಕೂಡಿರುತ್ತದೆ. ಇದನ್ನು ನಂತರ ಸರಿಯಾದ  ಆಕಾರದಲ್ಲಿ ಕತ್ತರಿಸಿ, ಎಂದಿಗೂ ಹಾಳಾಗದ ಸುಂದರ ರೂಪಕ್ಕೆ ತರಲಾಗುತ್ತದೆ. ಇದಕ್ಕೆ ಪಾಲಿಶ್  ಮಾಡಲಾಗುತ್ತದೆ. ಬೇಕೆಂದರೆ ಬಣ್ಣವನ್ನೂ ಸೇರಿಸುತ್ತಾರೆ. ಇದನ್ನು ನೀವು ಇಷ್ಟ ಪಟ್ಟಂತೆ ಆಭರಣದ ರೂಪಕ್ಕಾದರೂ  ತರುತ್ತಾರೆ, ಬೇಡವೆಂದರೆ ಶೋಪೀಸ್ ಆಗಿಯೂ ರೆಡಿ  ಮಾಡುತ್ತಾರೆ. ಈ ವಿಧಾನದಲ್ಲಿ ವಜ್ರ ಪಡೆಯಲು ಸುಮಾರು 4,474 ಅಮೆರಿಕನ್ ಡಾಲರ್ ವೆಚ್ಚ ಮಾಡಬೇಕು. ಅಂದರೆ ಸುಮಾರು ಮೂರೂವರೆ ಲಕ್ಷ ರೂಪಾಯಿಗಳು. ಜೊತೆಗೆ 25 ಕ್ಯಾರೆಟ್ ವಜ್ರವಾಗಿ ಪರಿವರ್ತನೆಯಾಗಲು 7ರಿಂದ 10 ತಿಂಗಳು ಬೇಕಾಗಬಹುದು. 

ಇದೀಗ ನಿಮ್ಮ ಪ್ರೀತಿಪಾತ್ರರು ಉಂಗುರವಾಗಿಯೋ, ಸುಂದರವಾದ ಸರದ ಹರಳಾಗಿಯೋ ನಿಮ್ಮ ಜೊತೆಯೇ ಸದಾ ಇರಲು ಸಿದ್ಧರಾಗಿ ಕೈ ಸೇರುತ್ತಾರೆ. 

ಹಣ ಹೆಚ್ಚಿದ್ದರೆ, ದೂರವಾದ ಬಹಳಷ್ಟು ಸ್ನೇಹಿತರು, ಕುಟುಂಬದವರನ್ನೆಲ್ಲ ವಜ್ರವಾಗಿಸಿ ಒಂದೇ ಸರದಲ್ಲೋ, ಬಳೆಯಲ್ಲೋ ಪೋಣಿಸಿಕೊಂಡು ಜೊತೆಗಿರಿಸಿಕೊಳ್ಳಬಹುದು. ಅಂದ ಹಾಗೆ ನಿಮ್ಮ ಪರಮ ಪ್ರೀತಿಯ ನಾಯಿ, ಬೆಕ್ಕು ಇತರೆ ಸಾಕು ಪ್ರಾಣಿಗಳನ್ನು ಕೂಡಾ ವಜ್ರವಾಗಿಸುವುದು ಸಾಧ್ಯ. ಹೀಗೆ ಮೃತರ ಚಿತಾಭಸ್ಮದಿಂದ ತಯಾರಿಸುವ ಈ ವಜ್ರಗಳನ್ನು 'ಸ್ಪಿರಿಟ್ ಪೀಸಸ್' ಎನ್ನಬಹುದಲ್ಲವೇ?

Follow Us:
Download App:
  • android
  • ios